ಕಛೇರಿ ಎದುರು ಹೆದ್ದಾರಿ ಪಕ್ಕದಲಿ
ಇತಿಹಾಸವಿದ್ದ ಮಾಮರವೊಂದು
ಬೆಳೆದಿತ್ತು ಆಗಸದೆತ್ತರ;
ಚಳಿ ಮಳೆ ಗಾಳಿಗಲುಗದೇ
ಸಹಸ್ರಾರು ಜೀವಿಗಳಿಗದು
ನೀಡಿತ್ತು ಆಶ್ರಯ,
ಹೊರಹಾಕಿದ ಪ್ರಾಣವಾಯುವಿನ
ತೂಕ ಅದೆಷ್ಟೋ?
ಇದ್ದಕ್ಕಿದ್ದ ಹಾಗೆ
ಕನಸಿನಲಿ ಎಲ್ಲೋ ಏಟು ಬಿದ್ದ ಹಾಗೆ
ನಾಲ್ಕಾರು ಕಾವುಗಳ ಏಟು
ಏಟುಗಳಿಂದ ಕಟ ಕಟ
ನೋವಿನ ದನಿ ಹೊಮ್ಮುತ್ತಿತ್ತು
ಪ್ರತಿ ಏಟಿಗೂ
ಕಾವು ಪುಟಿಯುತ್ತಿತ್ತು
ಮಾಮರವು
ನರಳುತಿತ್ತು ನಲಗುತಿತ್ತು
ಕಣ್ಣೀರು ಸುರಿಸುತ್ತಿತ್ತು
ಆ ನೋವಿನಲಿ
ಎನ್ನನ್ನುಳಿಸಿ ಕಾಪಾಡಿರೋ
ಎಂದು ದನಿ ಉಕ್ಕುತಿತ್ತು
ಆ ದನಿಯ ಪ್ರತಿಧ್ವನಿ
ಕಛೇರಿ ಸೌಧಕ್ಕೆ ಅಪ್ಪಳಿಸುತಿತ್ತು
ಆದರೇನು?
ಕಿವಿಯಿಲ್ಲದಾ ಕಣ್ಣಿಲ್ಲದಾ
ಕುರುಡು ಕಾಂಚಾಣದಾ
ಕುರ್ಚಿಗಳಿಗೆ ಈ ಆಕ್ರಂದನ ಕೇಳಿಸದಾಯಿತು
ಆ ದನಿಯ ನೋವಿನ ಹಾಡು
ಗಾಳಿಯಲಿ ಲೀನವಾಗುವುದಷ್ಟೇ.
*****
೧೧-೦೫-೨೦೦೩
ಮಣ್ಣಿನವಾಸನೆ ವಾರಪತ್ರಿಕೆಯಲ್ಲಿ ಪ್ರಕಟ