೧
ಭೂಮಿ ಬಿರುಕು ಬಿಟ್ಟಿತು
ನಾಡಿನ ನರಗುಂದದಲ್ಲಿ ನಾಡಿ ಮಿಡಿತ ಕೇಳಿ
ಹೂತು ಹೋದ ಹೆಣಗಳೆಲ್ಲ
ಬರಡು ನೆಲದ ಕಣಗಳೆಲ್ಲ
ಪುಟಪುಟಿದು ಸೆಟೆದವು, ಬೀಸಿ ಜೀವಗಾಳಿ.
ನೆಲದೊಳಗೆ ಭೋರ್ಗರೆತ, ಸುಳಿಸುತ್ತುವ ಸೆಳೆತ
ಸಿಟ್ಟಿನ ಸುಳಿ ಸಿಂಬೆ ಸುತ್ತಿ
ಕುದಿ ಕುದಿಯುವ ರಕ್ತವೆಲ್ಲ
ಕೈಯಾಗಿ ಕಿಡಿಯಿತು ಬಿಗಿದ ಮುಷ್ಟಿ ಎದ್ದಿತು
ನೋವೆ ನೆರೆದು ನಿಂತಂತೆ
ನೆಲದ ಒಡಲು ಗುಡುಗು ಸಿಡಿಲು
ಸೀಳಿ ಸೃಷ್ಟಿಯಾಗುತ್ತಿರುವ ಸಾಲು ಸಾಲು ಕೈಗಳು
ಬುಸುಗುಟ್ಟುವ ಹೆಡೆಗಳು
ಜೊತೆ ಜೊತೆಯಲ್ಲಿ ಸೆಟೆದು ನಿಂತ
ಅರೆಬೆತ್ತಲ ನಡುಗತ್ತಲ
ಭಯ ಬದುಕಿನ ಮೈಗಳು
ಹುಟ್ಟಿಕೊಂಡವೆಲ್ಲೆಲ್ಲೂ ಕಾದ ಕೆಂಡ ಕಿಡಿಗಳು
ಮೂಳೆಯೊಳಗೆ ಮನಸ ಹರಿಸಿ
ಕಾಲಿನಲ್ಲಿ ಕನಸು ನೆಲೆಸಿ
ಶೋಷಣೆಯ ಸಜ್ಜೆ ಮೇಲೆ ಹೆಜ್ಜೆಯಿಟ್ಟು ರೈತರು
೨
ಕೆದರಿದ ಕಿಡಿ ಕೂದಲು, ಉಬ್ಬಿ ಹೋದ ಕಾಲು
ಗರಬಡಿದ ಬಾಗಿಲಿಗೆ ಝಾಡಿಸಿ ಒದ್ದು
ನಗರವೆಲ್ಲ ಮೈ ಕೊಡವಿ ನಿಟ್ಟು ಬಿದ್ದು ಎದ್ದು
ಹೃದಯವಾಗಿ ನಿಂತಿತು, ಹಾರವಾಗಿ ಹರಿಯಿತು
ತೇಗುತ್ತಿದ್ದ ಟಾರು ರಸ್ತೆ ತೆಪ್ಪಗಾಯಿತು
“ಸೌಧ”ದತ್ತ ಸಾಗಲು ತೆಪ್ಪವಾಯಿತು.
೩
“ನಿಧಿ” ನೆಲೆಯೂರಿದ ವಿಧಾನ ಸೌಧ
ಸರ್ಪಕಾವಲಿನ ಶ್ರೀ ಕುರುಡ
ನೆಲದ ಒಡೆಯರು ನಮ್ಮ ರೈತರು
ಕೊಚ್ಚಿ ಬಂದರು ರೊಚ್ಚೆದ್ದವರು
ವಿಧಾನ ಸೌಧದ ಹೊಟ್ಟೆಯ ಒದ್ದು
ಕಲ್ಲು ಕಲ್ಲಿಗೂ ಕ್ರಾಂತಿಯ ಸದ್ದು
ಎದೆಯುಬ್ಬಿಸಿ ಒಳ ನುಗ್ಗಿದರು
ಅತ್ತಿಂದಿತ್ತ ಹಾರುವ ಬಾವಲಿ
ಕಣ್ಣಿಗೆ ಬಡಿಯುವ ಕಳ್ಳಾಟ
ದಿಗಿಲು ಹುಟ್ಟಿಸುವ ದುರ್ನಾತ
ಕಿಡಿಕಾರುವ ಕಣ್ ಬೆಳಕನು ಬಿಟ್ಟು
ಎದೆ ಮನೆ ಬಾಗಿಲು ಭೇದಿಸಿ ಹೊಕ್ಕು
ಒಳಗೆಲ್ಲಾ ಹುಡುಕಾಡಿದರು
ಹೃದಯವ ಕಾಣಲು ಹುಡುಕಿದರು
ಮೂಲೆ ಮೂಲೆಯ ತಡಕಿದರು
ಕತ್ತಲು ಕವಿದರು ಸಿಗಲಿಲ್ಲ.
ಹೃದಯವೆ ಅಲ್ಲಿ ಇರಲಿಲ್ಲ
*****