ಹೊಟ್ಟೆಗಂತೂ ಕೂಳು ಇಲ್ಲ
ಬಟ್ಟೆಯಂತೂ ಸಿಕ್ಕಲಿಲ್ಲ
ಬಾಳಿಗಂತೂ ಬಾಯಿಯಿಲ್ಲ
ನಮ್ಮ ನೋವು ಮೀಟಲಿಲ್ಲ.
ನಮ್ಮ ಜೀವ ನಮಗೆ ಬಿಡಿ
ಬದುಕಲಿಷ್ಟು ಕಾಲ ಕೊಡಿ.
ಮುಖದ ತುಂಬ ಜೇಡ ಬಲೆ
ನಡೆವ ಬೀದಿ ನಮ್ಮ ನೆಲೆ
ಬಯಲ ಜೈಲಿನಲ್ಲಿ ಬಾಳು
ಗೋಳೆ ನಮ್ಮ ದಿನದ ಕೂಳು.
ನಮ್ಮ ಜೀವ ನಮಗೆ ಬಿಡಿ
ಬದುಕಲಿಷ್ಟು ಕಾಲ ಕೊಡಿ.
ಕೂತ ಕುರ್ಚಿ ಕಾಲು ನಾವು
ಕೀರ್ತಿ ಸೌಧ ಕಂಬ ನಾವು
ನಿಮಗೆ ಮೆಟ್ಟಲಾದೆವು
ಬೊಜ್ಜು ಬಿಟ್ಟ ಪೀಠಮದ
ಹೆಜ್ಜೆ ಹೆಜ್ಜೆ ಗೆಜ್ಜೆ ನಾದ
ನಿಮಗೆ ರಂಗವಾದೆವು.
ಬೆನ್ನ ಮೇಲೆ ನಿಮ್ಮ ಬೂಟು
ಎದೆಗೆ ಗುರಿ ನಿಮ್ಮ ಗುಂಡು
ನಮ್ಮ ನೆತ್ತರಿಂದ ನಿಮಗೆ
ಹೊಟ್ಟೆ ತುಂಬಿತು
ನಮ್ಮ ಕಣ್ಣ ನೀರು ನಿಮಗೆ
ಸ್ನಾನವಾಯಿತು.
ಬೇಡ ನಿಮ್ಮ ಮೊಸಳೆ ಮಾತು
ಕೋಟಿ ಕೋಟಿ ಲೆಕ್ಕವು
ಕಾಲ ಕೆಳಗೆ ನಮ್ಮ ಬಾಳು
ನಿಮಗೆ ಕೀರ್ತಿ ಕಳಶವು.
ನಮಗೆ ನೀವು ನೋಯಬೇಡಿ
ನಮಗೆ ಜೀವ ಸವೆಸಬೇಡಿ
ನಮ್ಮ ನೋವು ನಮಗೆ ಕೊಡಿ
ನಮ್ಮ ಜೀವ ನಮಗೆ ಬಿಡಿ.
*****