ಉತ್ತರಣ – ೧೪

ಉತ್ತರಣ – ೧೪

ಅಮರನಾದ ಅಚಲ

ಹೈದರಾಬಾದಿನಲ್ಲಿ ಎಲ್ಲರೂ ಅನುರಾಧಳಲ್ಲೇ ಇಳಿದುಕೊಂಡಿದ್ದರು. ಪೂರ್ಣಿಮಾ ಎರಡು ದಿನಗಳಿಗೊಮ್ಮೆ ಬಂದು ಹೋಗುತ್ತಿದ್ದಳು.

ರಾಮಕೃಷ್ಣಯ್ಯ ಸುಶೀಲಮ್ಮ ಇಬ್ಬರೂ ಈ ಲೋಕದ ಸಂಪರ್ಕಗಳನ್ನೆಲ್ಲಾ ಕಳಚಿಕೊಂಡಂತೆ ಇದ್ದರು. ಮಗನಿಲ್ಲದ ಲೋಕದಲ್ಲಿ ಅವರಿಗುಳಿದುದಾದರೂ ಏನು? ಬರೇ ಶೂನ್ಯ. ಯಾರಿಂದಲೂ ತುಂಬಲಾಗದ ಸೊನ್ನೆ!

ಯಾರಿಗೇನಾದರೂ, ಕಾಲನ ಕೆಲಸಕ್ಕೆ ಕೊನೆಯಿಲ್ಲ. ಉರುಳುವ ಚಕ್ರಕ್ಕೆ ತಡೆಯಿಲ್ಲ.

ಜನವರಿ ತಿಂಗಳ ಪುಟ ತಿರುಗಿಸಬೇಕಾದರೇ ರಾಮಕೃಷ್ಣಯ್ಯ ಸುಶೀಲಮ್ಮನಿಗೆ ಭಾರತ ಸರಕಾರದ ಕರೆಯೋಲೆ ಬಂದಿತ್ತು. ಅಚಲನಿಗೆ ಮರಣೋತ್ತರ ಪದ್ಮಶ್ರೀ ಬಿರುದು ಕೊಡುವುದೆಂದು ನಿಶ್ಚಯವಾಗಿತ್ತು. ಅದನ್ನು ಸ್ವೀಕರಿಸಲು ತಂದೆ ತಾಯಿಗೆ ಕರೆ! ವಿಧಿಯ ಆಟ ವಿಚಿತ್ರ!

ಅಚಲನ ವಿಂಗ್ ಕಮಾಂಡರ್ ಮನೋಹರ್ ಪ್ರತ್ಯೇಕವಾಗಿ ಕಾಗದ ಬರೆದಿದ್ದರು.

“ಅಚಲ ಸತ್ತು ಅವನ ಹಿಂದೆ ನಿರ್ಮಿಸಿ ಹೋದ ಶೂನ್ಯ ಹೆತ್ತ ನಿಮಗೆ ಹೇಗೋ ಹಾಗೇ ನನಗೂ ಆಗಿದೆ. ನಾನಿಂದು ಜೀವಿಸಿರೋದು ಅವನಿಂದಾಗಿ, ನನಗಾಗಿ ಅವನು ಜೀವತೆತ್ತ ಅವನನ್ನು ನಾನಾಗಲೀ ನನ್ನ ಮನೆಯವರಾಗಲೀ ಎಂದಿಗೂ ಮರೆಯಲಿಕ್ಕಿಲ್ಲ. ಅಮ್ಮಾ, ನನ್ನ ಒಂದೇ ಒಂದು ಬೇಡಿಕೆ. ನಾನೇ ಅಚಲನೆಂದು ತಿಳಿದು ನೀವಿಬ್ಬರೂ ಡಿಲ್ಲಿಗೆ ಖಂಡಿತಾ ಬರಬೇಕು. ನನಗೆ ನಿಮ್ಮ ಅಚಲನ ಸ್ಥಾನ ತುಂಬುವ ಯೋಗ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೂ, ನಾನೂ ನಿಮ್ಮ ಒಬ್ಬ ಮಗನೆಂದು ತಿಳಿಯಲು ಅಡ್ಡಿಯಿಲ್ಲವಲ್ಲ? ನೀವು ತಪ್ಪದೇ ಬರಬೇಕು. ನೀವಿಲ್ಲಿ ಬಂದಾಗ ಅಚಲ ಹೇಗೆ ನಮ್ಮಲ್ಲಿ ಒಬ್ಬನಾಗಿ ಇನ್ನೂ ಬದುಕಿದ್ದಾನೆಂದು ನೀವೇ ತಿಳಿಯುತ್ತೀರಿ. ನಿಮ್ಮನ್ನು ನೋಡಲೆಂದು ಅಚಲನ ಜತೆಗಿದ್ದ ನಾವು ಮೂವತ್ತು ಮಂದಿ ಡಿಲ್ಲಿಗೆ ಬಂದು ನಿಮಗಾಗಿ ಕಾಯುತ್ತಿರುತ್ತೇವೆ. ನಮ್ಮನ್ನು ನಿರಾಸೆಗೊಳಿಸಬೇಡಿ.

ಮನೋಹರ್‌ನ ಈ ಕಾಗದ ಆ ಹೆತ್ತಕರುಳಿನ ಮಮತೆಯನ್ನು ಹೊಡೆದೆಬ್ಬಿಸಿತೆನ್ನಬಹುದು. ಅನುರಾಧ ಪೂರ್ಣಿಮರು ಅವರನ್ನು ಒತ್ತಾಯಿಸಿ ಹೊರಡಿಸಿದರು. ಇಬ್ಬರೇ ಹೋಗುವುದಲ್ಲ ಎಂದು ಜತೆಗೆ ಅನುರಾಧ ಶಂಕರರೂ, ಹೊರಟರು. ಅನುರಾಧಳ ಮಗ ಅನಿರುದ್ಧ ಚಿಕ್ಕಮ್ಮರ ಜತೆಗೆ ಉಳಿದ.

ಮನೋಹರನಿಗೆ ತಿಳಿಸಿ ನಾಲ್ವರೂ ೨೪ರಂದೇ ವಿಮಾನದಲ್ಲಿ ಹೊರಟರು. ವಿಮಾನ ನಿಲ್ದಾಣದಲ್ಲೇ ಮನೋಹರ್ ಅವರನ್ನು ಎದುರುಗೊಂಡರು. ಸ್ವತಃ ತಂದೆ ತಾಯಿಯೇ ಬಂದಂತೆ ಮನೋಹರ್‌ ಅವರನ್ನು ಆದರಿಸಿದಾಗ ಆ ಪ್ರೀತಿಗೆ ಸುಶೀಲಮ್ಮ ರಾಮಕೃಷ್ಣಯ್ಯರ ಹೃದಯಬಾಗಿತು. ಅಚಲನ ಸುದ್ದಿ ತೆಗೆದಾಗಲೆಲ್ಲಾ ಮನೋಹರ್‌ನ ಗಂಟಲು ಕಟ್ಟಿ ಬರುತ್ತಿತ್ತು. ಅವರೆಲ್ಲರನ್ನೂ ತಮ್ಮ ಮನೆಗೆ ಒತ್ತಾಯದಿಂದ ಕರೆದೊಯ್ದ ಮನೋಹರ್.

ಮನೋಹರನ ಮನೆಯಲ್ಲಿ ಎದುರಿನ ಹಾಲಿನಲ್ಲಿಯೇ ಅಚಲನ ದೊಡ್ಡದಾದ ಭಾವಚಿತ್ರವನ್ನಿಟ್ಟಿದ್ದರು. ಮನೋಹರನ ಹೆಂಡತಿ ತುಂಬಿದ ಗರ್ಭಿಣಿ. ತನ್ನೆಲ್ಲಾ ಭಾರ ಮರೆತು ಇವರೆಲ್ಲರನ್ನೂ ಸತ್ಕರಿಸಿದಳು. ಅವಳು ಸುಶೀಲಮ್ಮ ರಾಮಕೃಷ್ಣಯ್ಯನವರ ಹತ್ತಿರ ಕುಳಿತುಕೊಂಡು ಕಣ್ಣೀರು ತುಂಬಿ, “ಅಮ್ಮ, ನಿಮ್ಮ ಮಗ ನಿಮ್ಮ ಮಡಿಲು ಬರಿದು ಮಾಡಿದ್ದಾರೆ ನಿಜ. ಆ ನೋವು ಯಾವ ತಾಯಿಗೂ ಬೇಡ! ಅವರು ಮಾಡಿದ ಉಪಕಾರದಿಂದ ನನ್ನ ಇಡೀ ಸಂಸಾರವೇ ಉಳಿದಿದೆ. ನನಗೆ ಮಗನಾಗಲಿ ಮಗಳಾಗಲಿ, ನಾನು ಇಡುವ ಹೆಸರು ಅಚಲನೆಂದೇ. ನನ್ನ ಪಾಲಿಗೆ ಅವರೊಂದು ದೇವರು. ನಾನು ಅವರನ್ನು ನೋಡಿದ್ದಾದರೂ ಒಮ್ಮೆಯೇ. ಇವರ ಜೊತೆಗೆ ಒಮ್ಮೆ ಮನೆಗೆ ಬಂದಿದ್ದರು. ಆ ಒಂದು ದಿನವನ್ನು ನಾನೆಂದೂ ನನ್ನ ಮನದಿಂದ ಅಳಿಸಲಾರೆ. ಯಾವಾಗಿನಿಂದಲೋ ಅರಿತಂತೆ ಬಾಭಿ ಎಂದು ಬಾಯಿ ತುಂಬಾ ಕರೆಯುತ್ತಾ ಮಾತಾಡಿ, ನಗಿಸಿ ಇನ್ನು ಮಗುವನ್ನು ನೋಡಲು ಬರುವುದಾಗಿ ಹೇಳಿ ಹೋದವರು, ಈ ರೀತಿ, ನನ್ನ ಗಂಡನ ಜೀವ ಉಳಿಸಲು ಹೋಗಿ ತಾನು ಸಾವನ್ನಪ್ಪುವರೆಂದು ಯಾರು ಊಹಿಸಿದ್ದರು? ನನಗೆ ಅಣ್ಣ ತಮ್ಮಂದಿರು ಯಾರೂ ಇಲ್ಲ. ಆದರೆ ಅಚಲ ನನ್ನ ಅಣ್ಣನೇ ಇರಬೇಕು.” ಎಂದು ಬಿಕ್ಕುತ್ತಾ ನುಡಿದಾಗ ಸುಶೀಲಮ್ಮ ಅವಳ ತಲೆನೇವರಿಸುತ್ತಾ ಯೋಚಿಸುತ್ತಾರೆ. “ಅಚಲ ಎಲ್ಲಿ ಸತ್ತು ಹೋಗಿದ್ದಾನೆ! ಇವರೆಲ್ಲರ ಬಾಯಲ್ಲಿ ನಲಿದಾಡುತ್ತಿದ್ದಾನೆ.

ನಾಲ್ಕು ಐದು ವರುಷದ ಅವಧಿಯಲ್ಲಿ ಎಷ್ಟು ಜನರ ಒಲವು ಗಳಿಸಿದ್ದಾನೆ ನನ್ನ ಅಚಲ! ನನ್ನ ಮಡಿಲು ಬರಿದಾಗಿದೆ ನಿಜ. ಆದರೆ ಇಲ್ಲಿ ಈ ಮಗುವಿನ ಮಾಂಗಲ್ಯ ಉಳಿದಿದೆ. ಆ ಹೊಟ್ಟೆಯೊಳಗಿನ ಮಗುವಿನ ತಂದೆ ಉಳಿದಿದ್ದಾನೆ. ನನ್ನ ಮಗನಿಂದಾಗಿಯೇ ಅಲ್ಲವೇ ಇವರೆಲ್ಲಾ ಇಂದು ನೆಮ್ಮದಿಯಿಂದಿರೋದು? ಅಚಲ ಸತ್ತಿಲ್ಲ. ಇಲ್ಲೆಲ್ಲಾ ಬದುಕಿದ್ದಾನೆ. ಊರಲ್ಲಿ ನಾವು ಮಾತ್ರ ಅವನನ್ನು ಸಾಯಿಸಿದ್ದೇವೆ! ಸುಶೀಲಮ್ಮನ ಹೃದಯಕ್ಕೆ ಈ ಭಾವನೆ ಏನೋ ಒಂದು ರೀತಿಯ ಸಮಾಧಾನ ಕೊಡುತ್ತದೆ. ಅಚಲ ಸತ್ತ ದಿನದಿಂದ ಮರೆಯಾಗಿದ್ದ ಸಮಾಧಾನದ ಭಾವನೆಯೊಂದು ಮನದೊಳಗೆ ಇಣುಕುತ್ತದೆ. ಅಚಲ ಸತ್ತಂದಿನಿಂದ ಮೌನ ತಾಳಿದ್ದ ರಾಮಕೃಷ್ಣಯ್ಯನವರ ನಾಲಗೆಯಲ್ಲಿ ಶಕ್ತಿ ಸಂಚಯವಾಗುತ್ತದೆ.

ಮನೋಹರನ ತಾಯಿ ಮಾತ್ರ ಇವರಿಬ್ಬರನ್ನು ನೋಡಿ ದುಃಖ ತಡೆಯಲಾಗದೇ ಒಳಗೋಡಿದ್ದರು. ಅವರಿಗೆ ಈ ತಂದೆ ತಾಯಿಯನ್ನು ಎದುರಿಸಲೇ ಧೈರ್ಯ ಮೂಡಲಿಲ್ಲ. ನನ್ನ ಮಗನ ಪ್ರಾಣ ಉಳಿಸಲಿಕ್ಕಿಂದೇ ಆ ತಾಯಿ ಆಚಲನನ್ನು ಹೊತ್ತು ಹೆತ್ತು ಸಾಕಿದ್ದಿರಬೇಕು. ಎಷ್ಟೊಂದು ದೊಡ್ಡ ಋಣವಿದೆ ನನಗೆ ಅವರಲ್ಲಿ. ಯಾವ ರೀತಿಯಲ್ಲಿ ಅದನ್ನು ತಾನು ತೀರಿಸಬಲ್ಲೆ? ಎಂಬ ಯೋಚನೆ ಅವರನ್ನು ಇರಿಯುತ್ತಿತ್ತು. ಕೊನೆಗೆ ಸುಶೀಲಮ್ಮನೇ ಅವರ ಹತ್ತಿರ ಹೋಗಿ ಕುಳಿತಾಗ ಅವರಿಗೆ ಒತ್ತರಿಸುವ ದುಃಖವನ್ನು ತಡೆಯಲು ಆಗಿರಲಿಲ್ಲ.

ಸುಶೀಲಮ್ಮನೇ, “ನೀವು ಏನೂ ಬೇಜಾರು ಮಾಡಿಕೊಳ್ಳಬೇಡಿ. ನೀವೇನೂ ನನ್ನಿಂದ ಮಗನನ್ನು ಕಿತ್ತುಕೊಂಡಿಲ್ಲ. ದೇವರು ನಮ್ಮಿಬ್ಬರ ಒಡಲೂ ಬರಿದು ಮಾಡಲಿಲ್ಲ. ಅದೇ ದೊಡ್ಡದು. ನಿಮಗಾದರೂ ಮಗ ಉಳಿದನಲ್ಲ? ಆದರೆ ಆತ ನಿಮ್ಮೊಬ್ಬರದ್ದೇ ಮಗನಲ್ಲ, ನನ್ನ ಮಗನೂ ಆಗಿದ್ದಾನೆ ಈಗ, ಅಚಲನ ಛಾಯೆ ನಿಮ್ಮ ಮಗನ ಮುಖದ ಮೇಲೆಲ್ಲಾ ಇದೆ. ವರುಷಕ್ಕೊಮ್ಮೆಯಾದರೂ ಅವನನ್ನು ನನ್ನ ಬಳಿ ಕಳುಹಿಸಿಕೊಡಿ. ನಿಮ್ಮ ಮಗನ ಮೇಲೆ ನನಗೂ ಸ್ವಲ್ಪ ಹಕ್ಕು ಕೊಡಿ!”

“ಛಿ ಛಿ! ಏನು ಹೇಳುತ್ತೀರಿ ನೀವು! ಅವನು ನಿಮ್ಮದೇ ಮಗನೆಂದು ತಿಳಿಯಿರಿ, ನಿಮಗೆ ನೋಡಬೇಕೆನಿಸಿದಾಗ ಕರೆಸಿಕೊಳ್ಳಿರಿ. ಅವನೂ ಅಷ್ಟೇ. ಅಚಲನನ್ನು ಎಣಿಸಿದಾಗಲೆಲ್ಲಾ ಈಗಲೂ ಕಣ್ಣೀರಿಳಿಸುತ್ತಾನೆ. ಈ ವಾಯುದಳದಲ್ಲಿ ಈ ತನಕ ಈ ಸಾವಿರ ಸಾವು ನೋಡಿದವನಾದರೂ ಅಚಲನ ಸಾವು ಅವನ ಹೃದಯವನ್ನೇ ಕಲಕಿದೆ. ಅವನೆಂದೂ ಅದನ್ನು ಮರೆಯಲಾರ!”

ಮನೋಹರ್ ಮರುದಿನದ ರಿಪಬ್ಲಿಕ್ ದಿನದ ಆಚರಣೆಯಲ್ಲಿಗೂ ಅವರನ್ನು ತಾನೇ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅಚಲನನ್ನು ಹೊಗಳಿ ಅವನಿಗೆ ಮರಣೋತ್ತರ ಪದ್ಮಶ್ರೀ ಪದವಿಯನ್ನು ರಾಷ್ಟ್ರಪತಿಯವರು ನೀಡಿದಾಗ ಆ ತಂದೆ ತಾಯಿಯ ಕಣ್ಣಿನಿಂದ ಗಂಗಾನದಿಯೇ ಉಕ್ಕಿ ಹರಿಯುತ್ತದೆ. ಅಚಲ ಸತ್ತಿಲ್ಲ, ಅಮರನಾದ ಎನ್ನುವ ಭಾವನೆಯಿಂದ ಅವರ ಹೃದಯವಿಡೀ ತುಂಬಿ, ಸಾವೆಲ್ಲಾ ಸಾಮಾನ್ಯರಿಗೆ, ಅಚಲ ಸಾಮಾನ್ಯನಲ್ಲ. ಅವನು ಸಾವನ್ನು ದಾಟಿ ಮುಂದೆ ಹೋಗಿದ್ದಾನೆ ಎಂದು ಆ ತಂದೆ ತಾಯಿಯ ಹೃದಯ ಚೇತರಿಸಿಕೊಂಡು ಇಷ್ಟು ದಿನದ ದಳ್ಳುರಿಯನ್ನು ತಂಪಾಗಿಸುತ್ತದೆ.

ಅಲ್ಲಿಂದ ಮನೋಹರ ಅವರೆಲ್ಲರನ್ನೂ ಆಫೀಸರ್‌ರವರ ಮೆಸ್ಸಿಗೆ ಕರೆದುಕೊಂಡು ಹೋಗುತ್ತಾನೆ. ಅಚಲನ ಜತೆಗಿದ್ದವರೆಲ್ಲರೂ ಆ ತಂದೆ ತಾಯಿಯನ್ನು ನೋಡಲು ಕಾತರರಾಗಿ ಕಾಯುತ್ತಿದ್ದರು. ಅವರಿಗೆಲ್ಲಾ ಚೇತನವಾಗಿದ್ದ ಅಚಲನ ಹೆತ್ತವರ ದರ್ಶನಕ್ಕಾಗಿ ಎಲ್ಲರೂ ಡಿಲ್ಲಿಗೆ ಬಂದಿದ್ದರು. ಅವರೆಲ್ಲರನ್ನು ನಕ್ಕು ನಗಿಸಿ ವಾಯುದಳದಲ್ಲಿ ಅವರ ಮೊದಲಿನ ದಿನಗಳನ್ನು ರಸಮಯವನ್ನಾಗಿ ಮಾಡಿ ಅವರೆಲ್ಲರಲ್ಲೂ ಜೀವಕಳೆ ತುಂಬಿದ್ದ ಅಚಲ, ಅಚಲನ ಸಾವಿನಿಂದ ಆ ಚೇತನ ಮಾಸಿತ್ತು.

ಸುಶೀಲಮ್ಮ, ರಾಮಕೃಷ್ಣಯ್ಯನವರು ಮೂಕರಾಗಿ ಎಲ್ಲರನ್ನೂ ನೋಡಿದರು. ಎಲ್ಲರ ಮುಖದಲ್ಲೂ ಅಚಲನ ಇರವನ್ನು ಗುರುತಿಸಿದರು. ಅವರೆಲ್ಲರೂ ಭಕ್ತಿ ಭಾವದಿಂದ ಈ ಮುದಿ ಜೋಡಿಗೆ ತಲೆಬಾಗಿದರು. ರಾಮಕೃಷ್ಣಯ್ಯನವರು ಅವರೆಲ್ಲರ ಪ್ರೀತಿ ತುಂಬಿ ಹರಿಯೋ ದೃಷ್ಟಿ ನೋಡಿ ಮೈ ಮರೆತರು. ಒಳ್ಳೆಯತನಕ್ಕೆ ಯಾವಾಗಲೂ ಮರಣವಿಲ್ಲ. ಅದು ಮರಣದ ನಂತರವೂ ಜೀವಂತವಾಗಿ ಮುಂದೆ ಸಾಗುತ್ತದೆ ಎಂಬ ಭಾವನೆಯೊಂದಿಗೆ ಹೆಂಡತಿಯ ಮುಖ ನೋಡಿದಾಗ ಅಲ್ಲೂ ಅದೇ ಭಾವನೆ ಮೂಡಿ ಇಷ್ಟು ದಿನವೂ ಮುದುಡಿದ್ದ ಸುಶೀಲಮ್ಮನವರ ಮುಖ ಸ್ವಲ್ಪ ಸ್ವಲ್ಪವಾಗಿ ಅರಳುತ್ತಿರುವುದನ್ನು ಕಾಣುತ್ತಾರೆ ರಾಮಕೃಷ್ಣಯ್ಯ!

ತುಂಬಿ ಬರುತ್ತಿರುವ ಕಣ್ಣೀರನ್ನು ತಡೆಯಲು ಪ್ರಯತ್ನಿಸುತ್ತಾ ಅನುರಾಧ, ತದೇಕಚಿತ್ತಳಾಗಿ ತನ್ನ ತಂದೆ ತಾಯಿಯನ್ನು ದೃಷ್ಟಿಸುತ್ತಾಳೆ. ಅವರ ಮುಖದಲ್ಲಿ ಆಗುತ್ತಿರುವ ಬದಲಾವಣೆಗಳು ಅವಳ ಹೃದಯದ ಭಾರವನ್ನು ಸ್ವಲ್ಪ ಸ್ವಲ್ಪವಾಗಿಯೇ ಕಳಚಿಕೊಳ್ಳುತ್ತದೆ. ಜತೆಗೆ ಮನಸ್ಸು ನುಡಿಯುತ್ತದೆ, ಸೋಲು ಬಂದಾಗ ಸೋಲದೇ ಅದನ್ನು ಸ್ವೀಕರಿಸಿ ಅದರ ಜತೆಗೆ ಬಾಳಲು ಕಲಿತರೆ ಸೋಲು ಸೋಲಾಗಿ ಉಳಿಯೋದಿಲ್ಲ. ಎಲ್ಲಾ ಮೆಟ್ಟಿ ನಿಲ್ಲುವ ಸ್ಥಿತಪ್ರಜ್ಞತೆ ಬೆಳೆಯುತ್ತದೆ.

ರಾಮಕೃಷ್ಣಯ್ಯ ಸುಶೀಲಮ್ಮನವರು ಮಗನಿಗೆ ಸಿಕ್ಕ ಬಿರುದನ್ನು ಹೊತ್ತು ಹಿಂತಿರುಗುವಾಗ ಸಂಪೂರ್ಣ ಬದಲಾದ ಮನುಷ್ಯರೇ ಆಗಿದ್ದರು. ಸತ್ತರೂ ಜೀವಂತ ಉಳಿದ ಮಗನನ್ನು ಎಣಿಸುವಾಗ ಅವನನ್ನು ಹೊತ್ತು ಹೆತ್ತು ಸಾಕಿದುದಕ್ಕೆ ಸಾರ್ಥಕತೆ ಅನುಭವಿಸಿದ್ದರು. ಅಚಲ ಎಂದಿಗೂ ಅಚಲನಾಗಿದ್ದಾನೆ, ಅಮರನಾಗಿದ್ದಾನೆ ಎನ್ನುವ ಭಾವನೆಯೇ ಅವರಲ್ಲಿ ಜೀವ ಸಿಂಚನವಾಗಿ ಹರಿದಿತ್ತು.

ಡಿಲ್ಲಿ ಬಿಡುವಾಗ ಅವರು ಮನೋಹರನೊಡನೆ “ಮಗೂ, ನಿನ್ನ ಮಗ ಹುಟ್ಟಿದ ಮೇಲೆ ಹೆಂಡತಿ, ತಾಯಿ ಮಗುವನ್ನು ಕರೆದುಕೊಂಡು ನೀನು ಬೆಂಗಳೂರಿಗೆ ಖಂಡಿತಾ ಬರಬೇಕು” ಎನ್ನುವ ಮಾತನ್ನು ಹತ್ತಾರು ಸಲ ಹೇಳಿದ್ದರು. ಅವನಲ್ಲಿ ಅವನ ಕುಟುಂಬದಲ್ಲಿ ಬೆಸೆದ ಸಂಬಂಧ, ಸಖ್ಯ, ರಕ್ತ ಸಂಬಂಧಕ್ಕಿಂತಲೂ ಮೇಲಿನದ್ದಾಗಿತ್ತು.

ಹೈದರಾಬಾದಿಗೆ ಹಿಂತಿರುಗಿದವರೇ ಸುಶೀಲಮ್ಮ, “ಅನು, ಇನ್ನು ನಾವು ಬೆಂಗಳೂರಿಗೆ ಹೋಗುತ್ತೇವೆ. ಅಚಲ ಬದುಕುಳಿದ, ನಕ್ಕು ನಗಿಸಿದ, ಗಲಾಟೆ ಎಬ್ಬಿಸಿದ ಮನೆಯನ್ನು ಮುಚ್ಚಿರಬಾರದು. ಅವನ ನಗು ಅಲ್ಲಿ ಪ್ರತಿಧ್ವನಿಸಬೇಕು. ಹಾಗಾಗಲು ಅಲ್ಲಿ ಏನಾದರೂ ಮಾಡಬೇಕು. ಅಚಲ ಅವನ ಜತೆಗಾರರ ಮಧ್ಯೆ ಹೇಗೆ ಬದುಕುಳಿದಿದ್ದಾನೋ ಹಾಗೆ ನಮ್ಮ ಮಧ್ಯೆಯೂ ಬದುಕುಳಿಯಬೇಕು. ಆ ಮನೆಯಲ್ಲಿ ಅವನಿರವು ಶಾಶ್ವತವಾಗಿ ಗೋಚರವಾಗಬೇಕು. ಅಲ್ಲಿ ಏನಾದರೂ ನಾಲ್ಕು ಜನರಿಗೆ ಉಪಕಾರವಾಗುವ ಕೆಲಸ ಪ್ರಾರಂಭಿಸಬೇಕು. ಇಷ್ಟು ದಿನ ನಾನೂ ಕಣ್ಣು ಮುಚ್ಚಿ ಕುಳಿತ್ತಿದ್ದೆ. ನನ್ನೊಳಗಿನ ಅಚಲನನ್ನು ಮಾತ್ರ ನಾನು ನೋಡಿದೆ. ಅವನು ಎಲ್ಲೆಲ್ಲೂ ಇದ್ದಾನೆಂದು ನನಗೆ ತಿಳಿಯಲೇ ಇಲ್ಲ! ಎಂಥಾ ಹುಚ್ಚಿಯಾಗಿದ್ದೆ ನಾನು.”

ತಾಯಿಯ ಪರಿವರ್ತನೆ ಅನುಪಮಾಳಿಗೆ ಇಷ್ಟವಾದರೂ ಇಬ್ಬರೇ ನಿರುಪಮಾಳ ಜತೆ ಆ ಮನೆಯಲ್ಲಿ ಹೇಗಿರೋದು ಎನ್ನುವ ಸಂಶಯ ಕಾಡುತ್ತದೆ. ನಿರುಪಮಾ ನಾಳೆ ಮದುವೆಯಾಗಿ ಹೋದರೆ ಅಲ್ಲಿ ಅವರಿಬ್ಬರೇ ಆಗುತ್ತಾರೆ.

ಆದರೆ ಸುಶೀಲಮ್ಮ ಒಮ್ಮೆ ಮನಸ್ಸು ಗಟ್ಟಿಮಾಡಿ ನಿರ್ಧರಿಸಿದರೆಂದರೆ, ಅವರದ್ದೂ ದೃಢ ನಿರ್ಧಾರ.

ತಂದೆ, ತಾಯಿ, ನಿರುಪಮಾ ಹೊರಟು ನಿಂತಾಗ ಅನುಪಮಾ ಪೂರ್ಣಿಮಾ ಬಿಕ್ಕಿ ಬಿಕ್ಕಿ ಅಳುತ್ತಾರೆ. ಅನುರಾಧಳ ಮಗ ಅನಿರುದ್ಧನಿಗೆ ಅಜ್ಜಿ ಅಜ್ಜ ಹೋಗುವುದು ಸ್ವಲ್ಪವೂ ಇಷ್ಟವಿರಲಿಲ್ಲ.

ಬೆಂಗಳೂರಿಗೆ ಹಿಂತಿರುಗಿದವರೇ ಸುಶೀಲಮ್ಮ ಮಾಡಿದ ಮೊದಲ ಕೆಲಸ, ಮನೆ ಸ್ವಚ್ಛಮಾಡಿ ಅಚಲನ ಕೋಣೆಯನ್ನು ಒಪ್ಪವಾಗಿರಿಸಿದ್ದು, ಹೃದಯಕ್ಕೆ ಒಂದು ಘಳಿಗೆ ವಿಪರೀತ ನೋವೆನಿಸಿದರೂ ಧೈರ್ಯ ತುಂಬಿಸಿಕೊಂಡ ಸುಶೀಲಮ್ಮ ರಾಮಕೃಷ್ಣಯ್ಯನವರೊಡನೆ,

“ಅಲ್ಲೆಲ್ಲಾ ನೋಡಿಬಂದ ಮೇಲೆ ನಿರುಪಮಾಳಿಗೂ ಯಾವುದಾದರೂ ಸೇನಾಪಡೆಯಲ್ಲಿರುವ ಹುಡುಗನನ್ನೇ ಹುಡುಕಬೇಕೆಂದಾಗುತ್ತದೆ. ನಮ್ಮ ಅಚ್ಚುವಿಗೆ ಆಯುಷ್ಯ ಕಮ್ಮಿಯಾಗಿತ್ತೆಂದರೆ ಎಲ್ಲರೂ ಹಾಗಿರೋದಿಲ್ಲಲ್ಲ? ಮನೋಹರ್‌ಗೇ ಬರೆದು ಕೇಳೋಣ. ಅಚಲನಂಥಾ ಒಳ್ಳೇ ಹುಡುಗನಿದ್ದರೆ ಅದೇ ಮಾಡೋಣ.”

ಎಣಿಸಿದ ಹಾಗೇ ಮನೋಹರ್‌ಗೆ ಕಾಗದವೂ ಹೋಯಿತು. ಹದಿನೈದು ದಿನದೊಳಗೆ ಮನೋಹರನ ಉತ್ತರ ಬಂದಾಗ ಸುಶೀಲಮ್ಮನ ಸಂತಸಕ್ಕೆ ಎಣೆಯಿರಲಿಲ್ಲ. ಮನೋಹರ್ ಬರೆದಿದ್ದ.

“ಅಮ್ಮ, ನೀವು ಅವತ್ತು ಬಂದಾಗಲೇ ನಾನು ಹೇಳಬೇಕೆಂದಿದ್ದೆ. ಆದರೆ ಏಕೋ ತಡೆದೆ. ನೀವು ಡಿಲ್ಲಿಗೆ ಬಂದಾಗ ನಿಮ್ಮನ್ನು ಎದುರುಗೊಳ್ಳಲು ನನ್ನ ಜತೆಗೆ ಬಂದ ಇನ್ನೊಬ್ಬನನ್ನು ನೀವು ಮರೆತಿರಲಿಕ್ಕಿಲ್ಲವೆಂದು ತಿಳಿಯುವೆ. ಅವನ ಹೆಸರು ಸಿದ್ಧಾರ್ಥ. ಅವನು ಅಚಲನ ಜತೆಗೇ ಇದ್ದವ ಮಾತ್ರವಲ್ಲದೆ ಅಚಲನಿಗೆ ತುಂಬಾ ಹತ್ತಿರದವನೂ ಆಗಿದ್ದ, ಧೈರ್ಯದಲ್ಲಿ ನಡತೆಯಲ್ಲಿ ಅಚಲನಷ್ಟೇ ತೂಕದವನು. ಅಚಲನೊಮ್ಮೆ ನನ್ನೊಡನೆ ಹೇಳಿದ್ದ. ‘ಮನೋಹರ್, ಈ ಸಿದ್ಧಾರ್ಥನಿಗೇ ನನ್ನ ತಂಗಿಯನ್ನು ಮದುವೆ ಮಾಡಿಸಬೇಕೆಂಬ ಮಹತ್ತರ ಆಸೆ ನನ್ನದು. ಆದರೆ ನನ್ನ ಅಪ್ಪ ಅಮ್ಮ ಇದಕ್ಕೊಪ್ಪುವರೋ ಇಲ್ಲವೋ ಗೊತ್ತಿಲ್ಲ. ನಾನು ವಾಯುದಳಕ್ಕೆ ಸೇರಿದ್ದೇ ಅವರಿಗೊಂದು ಭ್ರಮನಿರಸನವಾದ ಹಾಗಾಗಿದೆ. ನಾನೇ ಈತನನ್ನು ತೋರಿಸಿ ಇವನಿಗೆ ನಿರುಪಮಾಳನ್ನು ಮದುವೆ ಮಾಡಿ ಕೊಡಿ ಅಂದರೆ ಅವರಿಗೆ ಇಷ್ಟವಾಗಲಿಕ್ಕಿಲ್ಲವೇನೋ? ಆದರೆ ನಾನೇನಾದರೂ ಹುಡುಗ ಆರಿಸುವುದಾದರೆ ನನ್ನ ಮೊದಲ ಆಯ್ಕೆ ಈ ಸಿದ್ದಾರ್ಥನೇ. ಅವನೊಬ್ಬ ಉತ್ತಮ ಹುಡುಗ!’ ಆದರೆ ಏನೇನೋ ನಡೆಯಿತು. ಅಚಲನ ಆಸೆ ಅವನೊಡನೇ ಮಣ್ಣಾಯಿತು ಎಂದು ನಾನು ಅದನ್ನು ಮರೆತೇ ಬಿಟ್ಟಿದ್ದೆ. ನೀವು ಬಂದಾಗಲೂ ಸುಮ್ಮನಿದ್ದೆ ಒಬ್ಬನನ್ನು ಕಳಕೊಂಡ ನೀವು ಇದಕ್ಕೆ ಒಪ್ಪುವುದು ಅಸಾಧ್ಯವೆಂದು ನನಗೆ ಅನಿಸಿತ್ತು. ಈಗ ನಿಮ್ಮ ಕಾಗದ ಬಂದ ಕೂಡಲೇ ನನಗೆ ಅಚಲನ ಮಾತೇ ನೆನಪಾಗಿ ಕೂಡಲೇ ನಿಮಗೆ ತಿಳಿಸುವಂತೆ ಪ್ರೇರೇಪಿಸಿತು. ಅವನೂ ನಿಮ್ಮ ಕಡೆಯವನೇ, ನಿಮಗೆ ಒಪ್ಪಿಗೆಯಿದ್ದರೆ ಅವನೊಡನೆ ಎಲ್ಲಾ ವಿಚಾರಿಸಿ ತಿಳಿಸುವೆ. ಎಲ್ಲಾ ಸರಿಯಾದರೆ ಅವನೂ ನಾನೂ ಒಟ್ಟಿಗೆ ಬಂದು ಕೆಲಸ ಮುಗಿಸಿ ಹಿಂದೆ ಬರುತ್ತೇನೆ. ಈ ಸಂಬಂಧಕ್ಕೆ ಜಾತಿ ಮತ ಅಡ್ಡಗೋಡೆಯಾಗಲಾರದೆಂದು ಎಣಿಸುವೆ. ಅವನೊಂದು ಉತ್ತಮ ಆಯ್ಕೆ. ಇಷ್ಟು ಮಾತ್ರ ನಾನು ಹೇಳಬಲ್ಲೆ. ನಿಮ್ಮ ಅಭಿಪ್ರಾಯ ಕೂಡಲೇ ತಿಳಿಸಿ.”

ಕಾಗದ ಓದಿದ ಸುಶೀಲಮ್ಮ, ರಾಮಕೃಷ್ಣಯ್ಯನವರು ನಿರುಪಮಾಳೊಡನೆ ತಮ್ಮ ಯೋಚನೆಯನ್ನು ತಿಳಿಸಿ, “ಮಗೂ, ನಿನಗೆ ವಾಯುದಳದ ವಿಚಾರವೆಲ್ಲಾ ತಿಳಿದಿದೆ. ಅಷ್ಟಾದರೂ ನಮ್ಮ ಮನಸ್ಸಿಗೆ ನೀನು ಯಾರಾದರೂ ಅಚಲನಂಥವರನ್ನೇ ಮದುವೆಯಾಗಬೇಕಂತ ಆಸೆ. ಈ ಕಾಗದ ಓದು. ನಿನಗೆ ಒಪ್ಪಿಗೆಯೆಂದಾದರೆ ತಿಳಿಸು. ಒತ್ತಾಯವೇನಿಲ್ಲ.”

ತಂದೆ ತಾಯಿಯ ಮಾತಿಗೆ ನಿರುಪಮಾ “ಅಪ್ಪಾ, ನಿಮ್ಮ ಯೋಚನೆ ಏನೇ ಇರಲಿ, ನನಗದು ಒಪ್ಪಿಗೆ, ಅದರಲ್ಲೂ ಅಚ್ಚಣ್ಣನಂಥ ಹುಡುಗನಾದರೆ ಯಾರಿಗೆ ಇಷ್ಟವಾಗೋದಿಲ್ಲ?” ಎಂದು ಹೇಳಿ ತಲೆ ತಗ್ಗಿಸುತ್ತಾಳೆ.

ಎಲ್ಲರ ಒಪ್ಪಿಗೆಯೊಡನೆ ಮದುವೆ ನಿಶ್ಚಯವಾಗುತ್ತದೆ. ಎಲ್ಲರ ಜತೆಗೆ ಆನಂದನೂ ಸಂಸಾರ ಸಮೇತ ಬಂದಿಳಿಯುತ್ತಾನೆ. ಯಾವ ತಂಟೆ ತಕರಾರಿಲ್ಲದೇ ಮದುವೆ ನಡೆದಾಗ ಯಾರ ಮನದಲ್ಲೂ ಅಪಶಕುನದ ಸುಳಿಗಾಳಿ ಬೀಸಲಿಲ್ಲ. ಅವರ ಜಾತಕದ ಮೇಳಾಮೇಳಿಯೂ ಭವ್ಯವಾಗಿದೆಯೆಂದು ತಿಳಿದಾಗ ಎಲ್ಲರೂ ಸಂತಸದಿಂದಲೇ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮನೋಹರ ಕೂಡಾ ಸಂಸಾರ ಸಮೇತನಾಗಿ ಬಂದು ಮದುವೆಯಲ್ಲಿ ಮನೆಯವರಂತೇ ಓಡಿಯಾಡಿದ. ಆನಂದನಲ್ಲೂ ಬದಲಾವಣೆ ಗೋಚರಿಸಿತ್ತು.

ಪ್ರೇರಣಾಳೂ ನಿರುಪಮಾಳ ಮದುವೆಯಲ್ಲಿ ಜಿಂಕೆಯಂತೆ ಓಡಾಡಿದಳು. ಅವಳನ್ನು ನೋಡಿದ ಮನೋಹರ್ ಸೀದಾ ಅವಳ ಬಳಿಗೆ ಹೋಗಿ “I know who you are! you are the real inspiration to others” ಎಂದಾಗ ಗಲಿಬಿಲಿಗೊಂಡು “ಏನು? ಇದರರ್ಥ ಏನು?” ಎಂದು ಹೆಬ್ಬಾವಿನಂತೆ ಬುಸುಗುಟ್ಟಿದ್ದಳು. ಅಷ್ಟರಲ್ಲೇ ಅಲ್ಲಿಗೆ ಬಂದ ಅನುರಾಧ ನಗುತ್ತಾ

“ಪ್ರೇರಣಾ, ಗಲಾಟೆ ಮಾಡಬೇಡ ಹುಡುಗೀ, ಇವರು ನಮ್ಮ ಅಚಲನ ಅತೀ ಸಮೀಪದ ಗೆಳೆಯ. ಅವರಿಗೆಲ್ಲಾ ಗೊತ್ತು. ಅಚ್ಚು ಅವರಿಗೆ ನಿನ್ನ Photo ಕೂಡಾ ತೋರಿಸಿದ್ದನಂತೆ. ಏನೂ ಆಶ್ಚರ್ಯ ಪಡಬೇಡ.”

ಈ ಮಾತಿನಿಂದ ಪ್ರೇರಣಾಳ ಮುಖ ಒಂದು ಕ್ಷಣ ಮೋಡ ಮುಸುಕಿದಂತಾದರೂ, ಕೂಡಲೇ ಮೊದಲಿನಂತಾಯಿತು. ಗಟ್ಟಿಯಾಗಿ ನಗುತ್ತಾ, “ಸಾರಿ, ನನಗೆ ಗೊತ್ತಾಗಲಿಲ್ಲ. ಯಾರಪ್ಪಾ ಇಷ್ಟು ಸಲಿಗೆ ತೆಗೆದುಕೊಳ್ಳುವುದು ಎಂದು ಸಿಟ್ಟು ಬಂತು, ಅಷ್ಟೇ. I am sorry.

“ಸಾರಿ ಗೀರಿ ಏನೂ ಬೇಡ, ನಿರುಪಮಾಳ ಮದುವೆ ಮುಗಿಸಿ ಹೋಗುವ ಮೊದಲು ನೀನೂ ಊಟ ಹಾಕಿಸಿಬಿಡು. ಇಲ್ಲಿಯ ಊಟದ ರುಚಿ ಇನ್ನೂ ಇನ್ನೂ ಇಂಥಾದ್ದೇ ಊಟ ಬೇಕೆನಿಸುವಂತೆ ಮಾಡ್ತಿದೆ. ನಿನಗೂ ನಮ್ಮದೇ ಹುಡುಗ ಬೇಕಾದರೆ ಹೇಳು, ಹುಡುಕಿಕೊಡುತ್ತೇನೆ.”

ಮನೋಹರನ ಮಾತಿಗೆ ಪ್ರೇರಣಾ ಕಿಲಕಿಲ ನಗುತ್ತಾಳೆ. ಪ್ರಶಾಂತವಾದ ನಗುವದು. ಸಿಹಿ ನೀರ ಚಿಲುಮೆಯಂತೆ. ಎಂಥಾ ಸುಂದರ ಜೀವನದಿಂದ ಅಚಲ ನಿರ್ಗಮಿಸಿದ ಎನ್ನುವ ಭಾವನೆ ಒಂದು ಕ್ಷಣ ಮನೋಹರನ ಮನದಲ್ಲಿ ನೋವೆಬ್ಬಿಸುತ್ತದೆ.

ಅನುರಾಧಳ ಮಾತು ಆ ನೋವನ್ನು ಓಡಿಸುತ್ತದೆ. “ನೀವೇನೂ ಹುಡುಕಬೇಕಾಗಿಲ್ಲ. ಅವಳು ಈಗಾಗಲೆ ನಿಮ್ಮ ಕಡೆಯ ಹುಡುಗನ ಬಲೆಗೇ ಬಿದ್ದಿದ್ದಾಳೆ. ಇದೊಂದು ಸಂತೋಷದಾಯಕ ಅಚ್ಚರಿ, ಅವಳ ಹುಡುಗನೂ ಸೇನಾಪಡೆಯವನೇ, ಆರ್ಮಿಯಲ್ಲಿ ಮೇಜರ್, ಅಚಲನನ್ನು ಅವಳು ಮರೆಯಲಿಲ್ಲವಾದರೂ ತಂದೆ ತಾಯಿಯ ಮನಸ್ಸಿನ ತೃಪ್ತಿಗೆ, ನಮ್ಮೆಲ್ಲರ ಆಸೆಗೆ ಅವಳು ಮದುವೆಯಾಗಲು ಒಪ್ಪಿದ್ದಳು. ಆದರೆ ಅಚಲನ ಹಾಗೇ ಸೇನಾಪಡೆಯಲ್ಲಿರೋ ಹುಡುಗನೇ ಆಗಬೇಕಂತ ಆಸೆ ಪಟ್ಟಳು. ಇನ್ನೆರಡು ತಿಂಗಳಲ್ಲಿ ಅವಳ ಮದುವೆ. ಆಗ ಬನ್ನಿ, ಒಳ್ಳೆ ಊಟ ಹಾಕೋಣವಂತೆ”

ಮನೋಹರ ಅತೀವ ಸಂತಸದಿಂದ ಪ್ರೇರಣಾಳಿಗೆ ಶುಭಾಶಯ ಹೇಳಬೇಕಾದರೇ ಪ್ರೇರಣಾ ಅಲ್ಲಿಂದ ಮಾಯವಾಗಿದ್ದಳು.

ತಂಗಿಗೆ ಅಚಲನ ಆಯ್ಕೆ ಅತ್ಯುತ್ತಮವಾದುದಾಗಿತ್ತು. ಸಿದ್ಧಾರ್ಥನಲ್ಲಿ ಯಾವ ಕುಂದೂ ಇರಲಿಲ್ಲ. ಅವನ ತಂದೆ ತಾಯಿಯರೂ ಉತ್ತಮ ಮನುಷ್ಯರು. ಹಣದ ಆಸೆ ಅವರನ್ನೇನೂ ಕಾಡಲಿಲ್ಲ. ವರದಕ್ಷಿಣೆಯಿಲ್ಲದೇ ನಿರುಪಮಾಳ ಮದುವೆ ನಡೆಯಿತು. ಅಚಲನೇ ಉಳಿಸಿಹೋದ ಹಣದಿಂದ ಅದ್ದೂರಿಯಾಗಿಯೇ ಮದುವೆಯ ಕೆಲಸ ಮುಗಿಸಿದರು. ಆನಂದ ಊರಲ್ಲಿ ಇದ್ದಷ್ಟು ಹೊತ್ತು ತಂದೆ ತಾಯಿಯ ಬಳಿಯೇ ಕಳೆದ. ಅವನ ಮಕ್ಕಳಿಬ್ಬರೂ ಅಜ್ಜಿ ಅಜ್ಜನನ್ನು ವಿಪರೀತ ಹಚ್ಚಿಕೊಂಡುಬಿಟ್ಟುವು, ಅನುರಾಧಾಳ ಮಗನೂ ಸಂತಸದಿಂದ ಅವರೊಡನೆ ಬೆರೆತು ಆಟವಾಡಿದ.

ಆನಂದ, ಈ ಸಲ ತಂದೆ ತಾಯಿಯ ಹತ್ತಿರಕ್ಕೆ ಸರಿಯುತ್ತಿದ್ದ ಹಾಗಿತ್ತು. ತಂಗಿಯ ಮದುವೆಯ ಖರ್ಚಿಗೆಂದು ತಾನಾಗಿಯೇ ಹತ್ತು ಸಾವಿರ ರೂಪಾಯಿ ತಂದು ತಾಯಿಯ ಕೈಯಲ್ಲಿರಿಸಿದಾಗ ಸುಶೀಲಮ್ಮ ನಯವಾಗಿಯೇ ಅದನ್ನು ನಿರಾಕರಿಸಿದ್ದರು.

“ಆನಂದ, ಈಗ ಈ ಹಣದ ಅಗತ್ಯವಿಲ್ಲ. ಅಚಲ ಹೇಳಿದ ಮಾತಿನಂತೆ ನಡೆದಿದ್ದಾನೆ. ಸತ್ತರೂ ನಿರುಪಮಾಳ ಮದುವೆಗೆ ಬೇಕಾದ ಹಣ ಕೂಡಿಸಿ ಕೊಟ್ಟೇ ಹೋಗಿದ್ದಾನೆ. ಅದರ ಭಾರ ನಮ್ಮ ಯಾರ ಮೇಲೂ ಹಾಕಿಲ್ಲ.”

ತಾಯಿಯ ಮಾತು ಕೇಳಿದ ಆನಂದ ತಾಯಿಯ ಕಾಲಬಳಿ ಕುಸಿದು ಕುಳಿತು, ಚಿಕ್ಕಮಗುವಿನಂತೆ ತಾಯಿಯ ಮಡಿಲಲ್ಲಿ ಮುಖವಿರಿಸಿ ಬಿಕ್ಕಳಿಸಿದ್ದ.

ನಾಲಗೆ ಮಾಡದ ಕಾರ್ಯವನ್ನು ಕಣ್ಣೀರು ಮಾಡಿತ್ತು. ಕಡಿದು ಹೋಗಿದ್ದ ತಂತಿಗೆ ಬೆಸುಗೆ ಬಿತ್ತು. ಹಿಂದಿನ ತಪ್ಪನ್ನೆಲ್ಲಾ ಮರೆತ ಆ ತಾಯಹೃದಯ ಆನಂದನನ್ನೂ ತನ್ನ ಬಳಿಗೆ ಸೆಳೆದುಕೊಂಡಿತು. ಮಗನ ಪಶ್ಚಾತ್ತಾಪ ತುಂಬಿದ ಕಣ್ಣೀರು ತಾಯಿಯ ಹೃದಯದ ನೋವನ್ನೆಲ್ಲಾ ತೊಳೆದು ತೆಗೆಯಿತು. ಆನಂದ ಪಶ್ಚಾತ್ತಾಪದ ಒಂದು ಮಾತನ್ನೂ ಆಡದಿದ್ದರೂ ಅವನ ಕಣ್ಣೀರು ತಾಯಿಗೆ ಅರಿವಾಗುವ ಸಾವಿರ ಮಾತನ್ನು ಆಡಿ ತೋರಿಸಿತ್ತು. ಮಾತೃಹೃದಯ ಯಾವಾಗಲೂ ಕ್ಷಮಾಸಾಗರ!

ಅಗಲುವಿಕೆ ಸೇರುವಿಕೆ ವಿಧಿಯ ಆಟದ ಎರಡು ಮುಖಗಳೇ ಅಲ್ಲವೇ? ಹಾಗಿರುವಾಗ ಜೀವನದಲ್ಲಿ ಇದೆಲ್ಲಾ ಸಾಮಾನ್ಯ.

ನಿರುಪಮಾಳ ಮದುವೆಯ ಕಾರ್ಯ ಮುಗಿದು ಬಂದವರೆಲ್ಲಾ ಹೊರಟು ಹೋದರು. ಮನೋಹರನನ್ನು ಎರಡು ದಿನ ಹೆಚ್ಚಿಗೆ ನಿಲ್ಲಿಸಿಕೊಂಡ ರಾಮಕೃಷ್ಣಯ್ಯನವರು ತಮ್ಮ ಮುಂದಿನ ಯೋಚನೆ ಹಾಗೂ ಯೋಜನೆಯನ್ನು ಅವನ ಮುಂದಿಟ್ಟರು. ಆನಂದನನ್ನೂ ಜತೆಯಲ್ಲಿರಿಸಿಕೊಂಡು ಅವನಿಗೂ ತಿಳಿಯುವಂತೆ ಹೇಳಿದರು.

“ಮನೋಹರ್, ಈ ಮನೆಯಲ್ಲಿ ಈಗ ಉಳಿದಿರೋದು ನಾವಿಬ್ಬರೇ. ನಮಗೂ ಕೆಲಸವಿಲ್ಲ. ನಾವಿಲ್ಲಿ ಅಚಲನ ಹೆಸರಿನಲ್ಲಿ ಒಂದು ಸೇವಾಶ್ರಮ ಸ್ಥಾಪಿಸಬೇಕೆಂದಿದ್ದೇವೆ. ಹೆತ್ತ ಮಕ್ಕಳನ್ನು ಕಳಕೊಂಡು ಯಾರೂ ಇಲ್ಲದೇ ಒದ್ದಾಡುತ್ತಿರುವವರಿಗೆ ಒಂದು ತಂಗುದಾಣ ಇದಾಗಬೇಕು. ಲಾಭವೇನೂ ನಮಗೆ ಬೇಕಿಲ್ಲ. ನಾಲ್ಕು ಜನರಿಗೆ ಉಪಕಾರವಾದರೆ ಸರಿ, ನಮಗೇನಾದರೂ ಸಾಧ್ಯವಾದರೆ, ನಿಮಗೆಲ್ಲಾ ಉಪಯೋಗವಾಗುವ ಹಾಗೆ ಏನಾದರೂ ಮಾಡಿ ಕಳುಹಿಸುವ ಯೋಜನೆಯೂ ಇದೆ.”

ಈ ಮುದಿ ದಂಪತಿಗಳ ಮಾತು ಕೇಳಿ ಮನೋಹರ ಒಂದು ಕ್ಷಣ ಮೂಕನಾಗುತ್ತಾನೆ. ಹೃದಯದಲ್ಲಿ ಸುಡುವ ಬೆಂಕಿಯ ಉಂಡೆಯನ್ನು ಒಡಲಲ್ಲಿ ಇಟ್ಟುಕೊಂಡು ಜನಸೇವೆಗೆ ನಿಂತಿರುವ ಈ ಮಹಾನುಭಾವರ ವ್ಯಕ್ತಿತ್ವಕ್ಕೆ, ಅವರ ಸ್ಥೈರ್‍ಯಕ್ಕೆ ಮೌನವಾಗಿಯೇ ತಲೆಬಾಗುತ್ತಾನೆ. ನೋವು ನಷ್ಟ ಅನುಭವಿಸಿ ಇವರೇನೂ ಸೋತಿಲ್ಲ. ಪರಿಪಕ್ವವಾಗಿದ್ದಾರೆ. ನೋವನ್ನು ಮೆಟ್ಟಿ ಮುಂದೆ ಸಾಗುತ್ತಿದ್ದಾರೆ. ದೇವರು ಇವರಿಗೆ ಸದಾ ಈ ಶಕ್ತಿ ಕೊಡಲಿ!

ಮೌನ ಮುರಿದು ಮಾತು ಹೊರಡಿಸುತ್ತಾನೆ. “ನಿಮ್ಮಿಬ್ಬರ ವ್ಯಕ್ತಿತ್ವಕ್ಕೆ ಹೇಗೆ ಗೌರವ ಸಲ್ಲಿಸಬೇಕೆಂದೇ ನನಗೆ ತಿಳಿಯೋದಿಲ್ಲ. ಅಚಲ ಅಲ್ಲಿ ನಮ್ಮೊಡನಿದ್ದಾಗ ಯಾವಾಗಲೂ ಎದುರಿಗಿರುವ ತಲೆಯೆತ್ತಿ ನಿಂತಿರೋ ಎರಡು ಪರ್ವತಗಳನ್ನು ತೋರಿಸಿ ಹೇಳುತ್ತಿದ್ದ. ‘ಮನೋಹರ್, ನೀವು ಎಂದಾದರೂ ಈ ಪರ್ವತಕ್ಕೆ ಹೋಲಿಕೆಯಾಗಬಲ್ಲಂಥಾ ವ್ಯಕ್ತಿಗಳನ್ನು ನೋಡಿದ್ದೀರಾ? ನಾನು ನಿಮಗೆ ತೋರಿಸಬಲ್ಲೆ. ನೀವೊಮ್ಮೆ ನಮ್ಮ ಮನೆಗೆ ಬಂದು ನನ್ನ ತಂದೆ ತಾಯಿಯನ್ನು ಭೇಟಿಯಾಗಿ, ಆಗ ನಿಮಗೆ ತಟ್ಟನೇ ಹೊಳೆಯೋ ಚಿತ್ರ ಈ ಎರಡು ಪರ್ವತಗಳದ್ದು.’ ಈಗ ಅವನಿಗೆ ಉತ್ತರಿಸಲು ಅವನೇ ಇಲ್ಲ. ಆದರೆ ಅವನ ಮಾತು ಜೀವಂತವಾಗಿ ನನ್ನ ಕಿವಿಯೊಳಗಡೆಯೆಲ್ಲಾ ಪ್ರತಿಧ್ವನಿಸುತ್ತಿದೆ. ನೀವಿಬ್ಬರೂ ತುಂಬಾ ದೊಡ್ಡ ವ್ಯಕ್ತಿಗಳು.” ಎಂದು ಬಗ್ಗಿ ಅವರಿಬ್ಬರಿಗೆ ನಮಸ್ಕರಿಸುತ್ತಾನೆ. ಅವನಿಗರಿಯದಂತೆ ಅವನ ಕಣ್ಣಿನಿಂದ ಮುತ್ತಿನ ಹನಿಗಳುದುರುತ್ತವೆ.

ಅವನನ್ನು ಅನುಸರಿಸಿದ ಆನಂದನೂ ತಂದೆ ತಾಯಿಗೆ ಬಗ್ಗಿ ನಮಸ್ಕರಿಸುತ್ತಾನೆ.

ಮನೋಹರ್ ಹೋಗುವಾಗ ಸುಶೀಲಮ್ಮನೊಡನೆ ಹೇಳಲು ಮರೆಯೋದಿಲ್ಲ. “ನಾನೂ ಮುದುಕನಾದ ಮೇಲೆ ಇಲ್ಲೇ ಬರ್‍ತೇನೆ! ಒಂದು ಸೀಟು ಈಗಲೇ ರಿಸರ್‍ವ್ ಮಾಡಿಸಿಟ್ಟುಬಿಡಿ.”

ಒಂದು ವರುಷದಲ್ಲಿ ಸೇವಾಶ್ರಮ ಸಾಕಷ್ಟು ಬೆಳೆಯುತ್ತದೆ. ರಾಮಕೃಷ್ಣಯ್ಯ ಸುಶೀಲಮ್ಮನವರಿಗೆ ಈಗ ಬಿಡುವಿಲ್ಲದಷ್ಟು ಕೆಲಸ ಯಾರೂ ಇಲ್ಲದ ಮೂರು ಜನ ವೃದ್ಧರೂ ಅವರ ಜತೆಗೇ ಇರುತ್ತಿದ್ದರು. ಅವರೂ ತಮ್ಮಿಂದಾದಷ್ಟು ಇವರಿಗೆ ಸಹಾಯ ಮಾಡುತ್ತಿದ್ದರು. ಇವರು ಕೇಳದೆಯೇ ಸಾಕಷ್ಟು ಹಣ ಬರುತ್ತಿತ್ತು. ಹಾಗಾಗಿ ನಾಲ್ಕೈದು ಕೋಣೆ ಜಾಸ್ತಿ ಸೇರಿಸಿ ಯಾರೂ ಇಲ್ಲದೇ ಸಾಯಲು ತಯಾರಾಗಿ ನಿಂತವರಿಗೆ ಅದೊಂದು ತಂಗುದಾಣವನ್ನಾಗಿ ಮಾಡಿದ್ದರು.

ಅಚಲ ಸತ್ತು ಇವರನ್ನೇನೂ ದಾರಿಯಲ್ಲಿ ಹಾಕಲಿಲ್ಲ. ಅವನ ಜೀವ ವಿಮಾ ಹಣದಲ್ಲಿ ಇವರ ಜೀವನ ಸಾಗುತ್ತಿತ್ತು. ಉಳಿದ ಮಕ್ಕಳೆಲ್ಲರೂ ಅವರಷ್ಟಕ್ಕೆ ಇದ್ದುದರಿಂದ ಇವರಿಗೆ ಯಾವ ಯೋಚನೆಯೂ ಇರಲಿಲ್ಲ. ಆಗಾಗ ಮಕ್ಕಳೆಲ್ಲಾ ಬರುತ್ತಿದ್ದರು. ತಮ್ಮಿಂದಾದಷ್ಟು ಹಣ ಸಹಾಯ ಮಾಡುತ್ತಿದ್ದರು. ಸಂತಸ ತಂದು ಸುರಿಯುತ್ತಿದ್ದರು. ಆನಂದನೂ ತಿಂಗಳಿಗೊಮ್ಮೆ ತಪ್ಪದೇ ಬರುತ್ತಿದ್ದ. ತಂದೆಯ ಅಕೌಂಟಿಗೆ ಹಣ ಜಮಾ ಮಾಡಿ ಹೋಗುತ್ತಿದ್ದ.

ಅನುರಾಧ ಪ್ರತಿ ಕಾಗದದಲ್ಲಿಯೂ ತಾಯಿಗೆ ಬರೆಯುತ್ತಿದ್ದಳು. “ಈ ಪ್ರಾಯದಲ್ಲಿ ಹಾಯಾಗಿರೋದು ಬಿಟ್ಟು ಈ ದುಡಿತ ಯಾಕೆ? ಅಲ್ಲಿ ಸೇವಾಶ್ರಮ ನಡೆಯುತ್ತಿರಲಿ, ನೀವು ನಮ್ಮೊಡನಿರಿ” ಎಂದು.

ಇದಕ್ಕುತ್ತರವಾಗಿ ಸುಶೀಲಮ್ಮ ಒಮ್ಮೆ ಬರೆದರು: ‘ಅನೂ, ಈ ಲೋಕ ವಿಶಾಲ, ಇಲ್ಲಿ ಯಾರಿಗೆ ಯಾರು ಎಂದು ಹೇಳುವುದೇ ಕಷ್ಟ. ಅದು ಯಾರಿಗೂ ತಿಳಿದಿರುವುದೂ ಇಲ್ಲ. ಈಗ ನೋಡು, ಮನೋಹರನಿಲ್ಲವೇ, ಹಾಗೆ ನಾವು ಇಂದು ನಿಕೃಷ್ಟರಾಗಿ ಕಂಡ ವ್ಯಕ್ತಿಗಳು ನಾಳೆ ನಮಗೆ ಸಹಾಯಕ್ಕಾಗಬಹುದು. ನಮ್ಮಿಂದ ಉಪಕಾರ ಪಡೆದವರೇ ನಾಳೆ ತಿರುಗಿ ಎದುರು ನಿಲ್ಲಲೂಬಹುದು. ಇಂದಿನ ಎಣಿಕೆ ನಾಳಿನ ನಿಜವಲ್ಲ. ನಾವು ಎಣಿಸುವುದು ಒಂದು, ಆಗುವುದು ಇನ್ನೊಂದು. ಈಗ ನಮ್ಮ ಕಾರ್ಯ ಎಲ್ಲರಿಗೂ ಎಲ್ಲರೂ ಇದ್ದಾರೆಂದು ಸಾಧಿಸಿ ತೋರಿಸುವ ಪ್ರಯತ್ನ. ಇದರಿಂದ ನಮಗೆ ದುಡಿಮೆಯೇನೂ ಇಲ್ಲ. ಮನಸ್ಸಿಗೆ ತೃಪ್ತಿಯಿದೆ. ನೆಮ್ಮದಿಯಿದೆ. ಈ ಜೀವನದಲ್ಲಿ ನೋವು, ನಲಿವು, ಲಾಭ ನಷ್ಟ, ಕಷ್ಟ ಸುಖ ಎಷ್ಟು ಸಹಜವೋ ಅಷ್ಟೇ ಸಹಜ ಹುಟ್ಟು, ಸಾವು, ಅದರಿಂದ ಓಡಿಹೋಗುವ ಅಧೈರ್ಯ ಬೇಡವೆಂದು ಈಗ ಕಲಿತೆವು. ಇದೇ ತತ್ವದಲ್ಲಿ ನಮ್ಮ ಜೀವನದ ಕೊನೆಯಾಗಲಿ. ಈ ಜಾಗ ಬಿಟ್ಟು ಬರುವ ಇಚ್ಛೆ ನಮಗಿಬ್ಬರಿಗೂ ಇಲ್ಲ.’

ತಾಯಿಯ ಕಾಗದವನ್ನು ಓದಿ ಮುಗಿಸುವಾಗ ಅಲ್ಲಿಗೋಡಿ ಬಂದ ಅನಿರುದ್ಧ “ಅಮ್ಮಾ, ನೋಡು, ಅಲ್ಲಿ ಗಾಡಿ ತುಂಬಾ ಬೊಂಬೆ ಮಾಡ್ಕೊಂಡು ಬಂದಿದ್ದಾನೆ. ಅವನ ಹತ್ತಿರ ಒಂದು ಬೊಂಬೆ ಇದೆ. ಏನು ಮಾಡಿದರೂ ಬೀಳೋದೆ ಇಲ್ಲ. ಎದ್ದು ಎದ್ದು ನಿಲ್ಲುತ್ತದೆ. ಅದೊಂದು ನನಗೆ ಬೇಕು. ತೆಗೆಸಿ ಕೊಡಮ್ಮಾ” ಎಂದು ತಾಯಿಯನ್ನು ಹೊರಗೆಳೆದುಕೊಂಡು ಹೋಗುತ್ತಾನೆ.

ಅನುರಾಧ ಮಗನಿಗೆ ಅದನ್ನು ತೆಗಿಸಿಕೊಟ್ಟು ತಾನೇ ಅದನ್ನು ಮೇಜಿನ ಮೇಲಿಟ್ಟು ಆಚೆ ಈಚೆ ಬಗ್ಗಿಸಿ ಆಟವಾಡುತ್ತಾ ಗಟ್ಟಿಯಾಗಿ ಹಾಡಿಕೊಳ್ಳುತ್ತಾಳೆ.

‘ಆಡಿಸಿ ನೋಡು ಬೀಳಿಸಿ ನೋಡು ಉರುಳಿಹೋಗದೂ,
ಏನೇ ಬರಲಿ, ಎಂದೂ ಸೋತು ತಲೆಯಬಾಗದು,
ಎಂದಿಗೂ ನಾನು ಹೀಗೇ ಇರುವೆ ಎಂದು ನಗುವುದು.’

ಸಾವಿರ ಬಾರಿ ಕೇಳಿಸಿಕೊಂಡ ಹಾಡಾದರೂ ಅದರಲ್ಲಿ ಏನೋ ಹೊಸತನ ಗೋಚರಿಸಿ ಪುನಃ ಪುನಃ ಹಾಡಿಕೊಳ್ಳುತ್ತಾಳೆ. ಅನಿರುದ್ಧನೂ ತಾಯಿಯ ದನಿಯೊಡನೆ ತನ್ನ ದನಿ ಸೇರಿಸಲು ಹೆಣಗಾಡುತ್ತಾನೆ.

ಆ ಗೊಂಬೆಯ ಸ್ಥಾನದಲ್ಲಿ ಅವಳಿಗೆ ಅವಳ ಅಪ್ಪ ಅಮ್ಮ ಕಾಣಿಸುತ್ತಾರೆ.
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಗಿಲೆ
Next post ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…