ತಾನಗಾನಗಳಲ್ಲಿ ತಣಿಸಿಕೊಳುವದು ಮನವ
ಹಸುರೆಲೆಗಳಲಿ ಅಡಗಿಮಡಗಿಕೊಂಡಿಹ ಕುಕಿಲೆ
ಕುಕಿಲುವದು ಋತುಪತಿಯ ಐಸಿರಿಯ ಈ ಘನವ
ಮೆದ್ದು ಮೆಲ್ಲಗೆ ಮುದದಿ ಮಾಮರದಿ ತಳಿತ ಎಲೆ
ಕಪ್ಪು ಬಣ್ಣವು ಎಂಬ ಕೊರಗು ಒಂದಿನಿತಿಲ್ಲ
ಕಸುವು ತನಗಿಲ್ಲೆಂಬ ಕಳವಳಕೆ ಎಡೆಯಿಲ್ಲ
ಇಂಚರವು ತನಗೆಂಬ ಬಿಂಕ ಒಂದಿನಿತಿಲ್ಲ
ಕೊಟಸ್ಥ ತಾಟಸ್ಥ್ಯ ಪರಪುಟ್ಟ ನಿನಗೆಲ್ಲ
ಹಿಗ್ಗಿ ಕೂಜನಗೈವ ಗಾನ ಋಷಿಯೇ ಹಾಡು
ತುಂಬಿರುವ ದುಗುಡವನು ಕಿತ್ತೆಸೆಯಲೀ ಹಾಡು
ಅಶುಭವೆಲ್ಲಕು ಕೊನೆಯು ಬರುವದೆಂಬುದನುಸುರು
ಮಂಗಲಸು ದಿವಸದಾ ಮಂಗಲವ ನೀನುಸುರು
ನಿನ್ನ ಗಾನದೊಳಿಹುದು ದಿವ್ಯ ತಮ ಮಾಧುರ್‍ಯ
ಅದಕೆ ಜೊತೆಯಾಗಿಹುದು ಗೂಢತನು ಗಾಂಭೀರ್‍ಯ
*****