ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ,
ಉತ್ತಮರು ನಿಂದೆಮಾತಿಗೆ ಸದಾ ಸಿಕ್ಕವರೆ;
ಸೌಂದರ್‍ಯದಾಭರಣ ಸಂಶಯಕೆ ಹೊರತಲ್ಲ
ನಿರ್‍ಮಲಾಕಾಶದಲೂ ಕಾಗೆ ಹಾರುವುದೇ.
ನೀನು ಯೋಗ್ಯನೆ, ನಿನ್ನ ಕುರಿತ ಆರೋಪಗಳು
ನಿನ್ನ ಮೇಲ್ಮೆಯನೆ ಹೇಳುವುವು, ಕೇಡೂ ಬಿಡದೆ
ವಿಷಕೀಟದಂತೆ ಮೊಗ್ಗನ್ನೆ ಸಾರುವುದು,
ನೀ ಮಾತ್ರ ನಿರ್‍ದಿಷ್ಟ ತಾರುಣ್ಯವನೆ ಮೆರೆವೆ.
ನಿನ್ನ ಯೌವನ ಹೊಂಚುಗಳನು ದಾಟಿರುವುದು
ಆಕ್ರಮಣಕೇ ಸಿಗದೆ, ಅಥವ ಎದುರಿಸಿ ಉಳಿದು;
ಈ ಕೀರ್‍ತಿ ತಡೆಯದು ಬೆಳೆವ ಅಸಹನೆಯನ್ನು,
ಹಾಗೆಂದೆ ನಿನ್ನ ಕೀರ್‍ತಿಯು ಕೊಡ ಮಸುಳುವುದು.
ಕೆಟ್ಟುದರ ಶಂಕೆ ಕವಿಯದೊ ನಿನ್ನ ನಡತೆಗೆ
ಆಗ ನೀನೇ ಪ್ರಭು ಹೃದಯಸಾಮ್ರಾಜ್ಯಕ್ಕೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 70
That thou art blam’d shall not be thy defect