ಮನೆಯಲ್ಲಿ ಅವಳಿಲ್ಲ
ನನಗೆ ಮನೆಗೆ ಹೋಗಂಗಾಗುವುದಿಲ್ಲ
ಏನೇ ತಿಂದರೂ ರುಚಿಸುವುದಿಲ್ಲ
ಯಾಕೋ ಯಾವುದೂ ಮನಸ್ಸಿಗೆ ನಾಟಲ್ಲ
ಎಲ್ಲೂ ನಿಲ್ಲಂಗಾಗುವುದಿಲ್ಲ
ಹುಚ್ಚುನ ಹಾಗೆ ಸುತ್ತಿ, ಸುತ್ತಿ ಬರಿ ಕಾಲು ನೋವು ಬಂತಲ್ಲ ;
ಏನೂ ಆಗಲಿಲ್ಲ.
ಯಾವುದೇ ನೋಡು
ಏನೇ ಮಾಡು ಸ್ವಾರಸ್ಯವೇ ಅನಿಸೋಲ್ಲ
ಬದಲಿಗೆ ಹೊಟ್ಟೆ ಉರಿ ಹೆಚ್ಚಿತಲ್ಲ.
ಮನೆಯನ್ನು ಹೊಕ್ಕರೆ
ಕಣ್ಣನು ಕಟ್ಟಿ ನಡು ಕಾಡಿನಲ್ಲಿ ಒಗೆದಂತಾಗುವುದಲ್ಲ
ಕೈಯಾಕದೊಂದಾಗಿ, ಸಿಕ್ಕೋದು ಇನ್ನೊಂದಾಗಿ
ರಕ್ತವೆಲ್ಲಾ ತಲೆಗೆ ನುಗ್ಗಿ
ಕುಟ್ಟಿ ಕುಟ್ಟಿ ಪುಡಿ ಪುಡಿ ಮಾಡಿ
ಕಾಲಲ್ಲಿ ಹೊಸಗಿ
ನನ್ನ ತಲೆ ನಾನೇ ಕಿತ್ತು ಕೊಳ್ಳ ಬೇಕೆಂತೆನಿಸುವುದಲ್ಲ.
ನೀನೆಲ್ಲಿಗೆ ಹೋಗಿ ಬಾ ಯಾವಾಗಲಾದರೂ ಬಾ
ಯಾವುದ್ಯಾವುದಕ್ಕೂ ಕೊರತೆ ಇರುತ್ತಿರಲಿಲ್ಲ
ಕೇಳಿದ್ದು ಬರುತಿತ್ತು
ರಾಜೋಪಚಾರ ನಡಿತಿತ್ತು
ಈಗ ಅವಳಿಲ್ಲದಿರಲು
ನನಗೆ ಏಕಾ ಏಕಿ ಮೇಲಿನವರು
ಮಂತ್ರಿ ಪದವಿ ಬಿಡಬೇಕೆಂದು ಆಜ್ಞೆ ಮಾಡಿದಂತಾಗಿ
ಬದುಕೆ ಬಣ ಬಣಗುಟ್ಟುವುದಲ್ಲ.
ಅವಳಿದ್ದಿದ್ದರೆ ಈ ಮನೆ ಹೇಗಿರುತಿತ್ತು
ಯಾವುದು ಎಲ್ಲೋ ಅಲ್ಲಿ
ಯಾವುದು ಯಾವಾಗ ಆಗ
ಎಲ್ಲವೂ ಇರುತಿತ್ತು ನಿಯಮಬದ್ಧ
ನೋಡೋಕೆ ಇರುತಿತ್ತು ಮನೆಯಷ್ಟು ಚೆಂದ!-
ಈಗ ನೋಡಿದರೆ
ಮಾಲಿಯಿಲ್ಲದ ತೋಟದಂತಾಗಿ
ಮುಖ ಹಾಕಿ ನಿಲ್ಲದಂತಾಗಿದೆಯಲ್ಲ.
*****