ಪ್ರೀತಿ ಮತ್ತು ಕ್ರಾಂತಿ
ಬಂಡಿಯ ಎರಡು ಚಕ್ರ
ಅಗಲಿ ಮುಂದೆ ಸಾಗಲಿ
ಸೇರಲಿ ನಿಜದ ತೀರ ||
ಬುದ್ಧ ಕಂಡ ಕನಸನು ಹೊತ್ತು
ಬಸವನು ಬಳಸಿದ ಸರಕನು ಹೊತ್ತು
ಅಂಬೇಡ್ಕರರ ಹೆದ್ದಾರಿಯಲಿ
ಸಾಗಲಿ ಬಂಡಿ ಸಾಗಲಿ;
ಸಾಗಲಿ ಬಂಡಿ ಸಾಗಲಿ
ನಿಜದ ತೀರ ಸೇರಲಿ ||೧||
ಸಮತೆಯ ಬೆಳಕನು ಹಾದಿಗೆ ಹರಿಸಿ
ಭ್ರಾತೃತ್ವದ ಬಾವುಟವನು ಏರಿಸಿ
ಕಾರ್ಲ್ ಮಾರ್ಕ್ಸ್‌ನ ಕೈಮರ ನಂಬಿ
ಸಾಗಲಿ ಬಂಡಿ ಸಾಗಲಿ;
ಸಾಗಲಿ ಬಂಡಿ ಸಾಗಲಿ
ಕನಸಿನ ತೀರ ಸೇರಲಿ ||೨||
ಇಲ್ಲಿ ಯಾವುದೂ ಅಸಾಧ್ಯವಲ್ಲ
ಅಮಾವಾಸ್ಯೆಯೂ ಅಂತಿಮವಲ್ಲ
ಹಿಡಿದ ಗ್ರಹಣವು ಬಿಡಲೇಬೇಕು
ನಾಳೆಯು ನಮ್ಮದೆ ಇದೆ ನಿಜ ಬೆಳಕು;
ಹರಿದಿದೆ ಈ ಕಡೆ ಬಂಡಿ
ನಿಲ್ಲದು ಕನಸಿನ ಬಂಡಿ ||೩||
*****