ಭುಗಿಲೆದ್ದ ಬೆಂಕಿ
ಗಂಡನ ನಿವೃತ್ತಿ ಜೀವನವನ್ನು ಸಂತಸದಿಂದಲೇ ಸ್ವಾಗತಿಸಿದ್ದ ಸುಶೀಲಮ್ಮನಿಗೆ ನಡೆದ ಘಟನೆಯಿಂದಾಗಿ ತಮ್ಮ ಮುಂದಿರುವ ಇನ್ನೂ ಕೆಲವು ಜವಾಬ್ದಾರಿಗಳನ್ನು ಎಣಿಸಿ ಭಯಗೊಳ್ಳುವಂತಾಯಿತು. ಮೂರು ಮಕ್ಕಳ ವಿದ್ಯಾಭ್ಯಾಸ ಸಂಪೂರ್‍ಣ ಮಾಡಬೇಕು. ಹುಡುಗಿಯರ ಮದುವೆಯಾಗಬೇಕು! ಪೂರ್ಣಿಮಾ ಬಿ. ಕಾಂ ಎರಡನೇ ವರ್ಷದಲ್ಲಿದ್ದಾಳೆ. ನಿರುಪಮಾ ಹೈಸ್ಕೂಲಿನ ಕೊನೆಯ ವರ್ಷದಲ್ಲಿದ್ದಾಳೆ. ಇವೆರಡು ಭಾರ ತಮ್ಮ ಮೇಲೆ ಹೊರಲಾರದಂತೆ ಇದೆ. ಅಲ್ಲದೆ ಅಚಲನ ವಿದ್ಯೆ ಪೂರ್ತಿಯಾಗಬೇಕು. ಅವನಿನ್ನೂ ಪಿ.ಯು.ಸಿ. ಎರಡನೇ ವರ್ಷದಲ್ಲಿದ್ದಾನೆ. ಆನಂದ ಈ ಎಲ್ಲಾ ಜವಾಬ್ದಾರಿಗಳನ್ನು ಹೊರುವನೇ ಎನ್ನುವ ಪ್ರಶ್ನೆ ಇಬ್ಬರ ತಲೆಯಲ್ಲೂ ಬೃಹದಾಕಾರವಾಗಿ ನಿಂತಿದೆ ಈಗ.
ನಿವೃತ್ತಿ ಹೊಂದಿದ ಮೇಲೆ ಕೈ ತುಂಬಾ ಸಂಪಾದಿಸುವ ಮಗನಿರುವಾಗ ಆರಾಮವಾಗಿ ಜೀವಿಸಬಹುದೆಂಬ ಕನಸಿನ ಸೌದ ಕುಸಿದು ಬಿದ್ದಾಗ ರಾಮ ಕೃಷ್ಣಯ್ಯನವರಿಗೆ ಸ್ಪಷ್ಟವಾಗಿ ಅನಿಸಿದ ಮಾತು “ಕೆಲಸದಿಂದ ನಿವೃತ್ತಿ ಹೊಂದಿದ ಮೇಲೆಯೇ ಮನುಷ್ಯನ ನಿಜವಾದ ಜೀವನ ಪ್ರಾರಂಭವಾಗುವುದು. ಬಾಳ ಸಂಜೆಯಲ್ಲಿ ಬರುವ ತಲೆನೋವುಗಳೇ ಜೀವನದ ನಿಜವಾದ ಹೋರಾಟಗಳು! ನಿವೃತ್ತಿಯಿಂದ ಸಂಪಾದನೆಗೆ ಕೊನೆಯಷ್ಟೇ. ಆದರೆ ಜವಾಬ್ದಾರಿಗಳು ಜಾಸ್ತಿ, ಈ ಜವಾಬ್ದಾರಿಗಳನ್ನು ಕಳಚಲು ಹೋರಾಟ ಆರಂಭವಾಗುವುದು ಈಗಲೇ” ಇದನ್ನೆಲ್ಲ ಗೆಲ್ಲುವ ಬಗೆ ಹೇಗೆ ಎನ್ನುವ ಪ್ರಶ್ನೆಯೂ ಈಗ ಅವರೆದುರು ಭೂತಕಾರವಾಗಿ ನರ್ತಿಸುತ್ತಿವೆ. ಜವಾಬ್ದಾರಿಗಳಿಂದ ದೂರ ಓಡುವ ಹಾಗಿಲ್ಲ.
ಮೊನ್ನೆ ಮೊನ್ನೆಯವರೆಗೂ ರಾಮಕೃಷ್ಣಯ್ಯನವರಿಗೆ ಯಾವ ದೊಡ್ಡ ತಲೆ ಬಿಸಿಗಳೂ ಇರಲಿಲ್ಲ. ಕಾಲೇಜಲ್ಲಂತೂ ಅವರು ಎಲ್ಲರ ಪ್ರೀತಿಪಾತ್ರರಾಗಿದ್ದ ಅಧ್ಯಾಪಕ. ಅವರು ನಿವೃತ್ತಿ ಹೊಂದಿದಾಗ ಏನೋ ಕಳಕೊಂಡಂತೆ ಒದ್ದಾಡಿದವರೇ ಹೆಚ್ಚು. ಅವರ ವಿದ್ಯಾರ್ಥಿ ವೃಂದವೂ ದೊಡ್ಡದೇ. ಅದರಲ್ಲೂ ಸೋಜಿಗವೆಂದರೆ ಯಾರೂ ಅವರನ್ನು ಮರೆತಿಲ್ಲ. ಇಂದಿಗೂ ಅವರ ವಿದ್ಯಾರ್ಥಿಗಳು ಅವರ ಬಳಿ ಬಂದು ತಮ್ಮ ಏಳಿಗೆಯ ವರದಿ ಒಪ್ಪಿಸಿ ಹೋಗುವುದಿದೆ. ಹೀಗಾಗಿ ಈವರೆಗಿನ ಜೀವನದಲ್ಲಿ ಅವರಿಗೆ ದೊರೆತ ತೃಪ್ತಿ ಅಪಾರ. ಶಿಸ್ತಾಗಿಯೇ ಜೀವನ ನಡೆಸುತ್ತಿದ್ದುದರಿಂದ ಯಾವ ಅಪಕೀರ್ತಿಗೂ ಅವರು ಒಳಗಾಗಿರಲಿಲ್ಲ. ಯಾವ ಸೋಲೂ ಅನುಭವಿಸಿದವರಲ್ಲ. ಜೀವನವೆಂದೂ ಕಷ್ಟವೆನಿಸಿರಲಿಲ್ಲ.
ಮಗನ ಮದುವೆಯೇ ಅವರ ಮೊದಲು ಸೋಲು!
ಆನಂದನ ಹೆಂಡತಿ ನೋಡಲು ಲಕ್ಷಣವಾಗಿಯೇ ಇದ್ದಳು. ಹೆಸರೂ ಚಿಂತಿಲ್ಲ. ನಿರ್ಮಲಾಗ್ರೇಸ್ ಎಲ್ಲರೂ ಕರೆಯುವುದು ನಿರ್ಮಲ ಎಂದೇ. ಮನೆಯಲ್ಲಿದ್ದ ಒಂದು ದಿನದಲ್ಲಿ ತುಂಬಾ ನಯ ವಿನಯದಿಂದ ನಡೆದುಕೊಂಡಿದ್ದಳು. ಮದುವೆಯ ಮರುದಿನವೇ ಮಗ ಸೊಸೆ ಊಟಿಗೆ ಹೊರಟು ಹೋಗಿದ್ದರು. ಹಾಗಾಗಿ ಅವರನ್ನು ಸರಿಯಾಗಿ ಅರಿಯುವ ಅವಕಾಶ ಮನೆಯವರಿಗೆ ದೊರೆತಿರಲಿಲ್ಲ. ಅವರಿನ್ನು ಹಿಂತಿರುಗಿ ಬರಲು ಸುಮಾರು ಹದಿನೈದು ದಿನಗಳೇ ಆಗಬಹುದು. ಆ ಮೇಲಷ್ಟೇ ಸಂಪೂರ್‍ಣ ಪರಿಚಯವಾಗಬೇಕು. ಹೊಂದಿಕೊಳ್ಳುವವಳಾದರೆ ಸರಿ ಇಲ್ಲವಾದರೆ ನಾವೇ ಅವಳಿಗೆ ಹೊಂದಿಕೊಳ್ಳಬೇಕು.
ಯಾರು ಯಾರು ಹೇಗೆ ಹೇಗೋ? ಬರೇ ಮುಖ ಲಕ್ಷಣದಿಂದ ಜನರ ಆಳ ಅರಿಯುವುದು ಸಾಧ್ಯವಾಗಿದಿದ್ದರೆ ಲೋಕದಲ್ಲಿ ಯಾವ ತೊಂದರೆಗಳೂ ಇರುತ್ತಿರಲಿಲ್ಲ. ತೊಂದರೆಗಳು ನಾಪತ್ತೆಯಾದಲ್ಲಿ ಎಲ್ಲ ಕಡೆ ಒಳ್ಳೆಯತನವೇ ಇರುತ್ತದೆ. ಮತ್ತೆ ಆಸೆಗಳು. ತಾವು ಆಶಿಸಿದ್ದೆಲ್ಲಾ ಸಿಗೋದಿಲ್ಲವೆಂದು ರಾಮಕೃಷ್ಣಯ್ಯ ಸುಶೀಲಮ್ಮನವರಿಗೆ ಚೆನ್ನಾಗಿ ಗೊತ್ತು. ಅವರವರ ಹಣೆಯಲ್ಲಿ ಬರೆದಷ್ಟೇ ಅವರವರಿಗೆ ಸಿಗೋದು ಎನ್ನುವ ಸೋತ ವಾದಕ್ಕೂ ಒಳಗಾಗಿದ್ದುದರಿಂದ ಮಗನ ಆಯ್ಕೆಯನ್ನು ಅವರು ಯಾವ ವಿಮರ್ಶೆಯೂ ಇಲ್ಲದೇ ಸ್ವೀಕರಿಸಿದ್ದರು. ಅನುರಾಧಾಳ ಹಟವನ್ನು ಅಲ್ಲಗಳೆದು ತಮ್ಮ ಉಳಿಕೆಯಿಂದಲೇ ಅವಳ ಮದುವೆಯ ಕಾರ್ಯವನ್ನು ಮುಗಿಸಿದ್ದರು.
ರಾಮಕೃಷ್ಣಯ್ಯನವರಿಗೆ ಸ್ವ ಇಚ್ಛೆಯ ಮಗನಿಗಿಂತ ತಾನೇ ಆಯ್ದ ಹುಡುಗನ ಕೈ ಹಿಡಿದ ಮಗಳಲ್ಲೇ ತೃಪ್ತಿ. ಎಂದೂ ಹೆತ್ತವರಿಗೆ ಎದುರಾಡದ, ಅವರ ಮನಸ್ಸನ್ನು ನೋಯಿಸದ ಮುದ್ದಿನ ಮಗಳು ಅನುರಾಧ, ಸಮಾಜದ ಹುಳುಕು ಗೊತ್ತಿದ್ದರೂ, ತಂದೆ ತಾಯಿಯ ಮನಸ್ಸಿಗೆ ನೋವು ಮಾಡಿ ಅವರ ಎದುರು ಹೋರಾಡಿ ನಿಲ್ಲುವ ಎದೆಗಾರಿಕೆ ಅವಳಲ್ಲಿ ಇರಲಿಲ್ಲ.
ಮದುವೆಯಾಗಿ ಗಂಡನ ಮನೆಗೆ ಹೋದ ಮಗಳ ನೆನಪು ಬರುತ್ತಲೇ ರಾಮಕೃಷ್ಣಯ್ಯನವರ ಕಣ್ಣು ಒದ್ದೆಯಾಗಿತ್ತು. ಇನ್ನು ಎಷ್ಟಾದರೂ ಅನು ಇನ್ನೊಬ್ಬರ
ಸೊತ್ತು. ಇನ್ನೊಂದು ಮನೆಯ ಸೊಸೆ. ಆ ಮನೆ ಬೆಳಗೋ ಬೆಳಕು! ತನಗೇನಿದೆ ಅಧಿಕಾರ ಅವಳಲ್ಲಿ?” ಮಗಳೆನ್ನುವ ಪ್ರೀತಿ ಮಮಕಾರ ಮಾತ್ರ ತನ್ನದು.
ಅನುರಾಧಳ ವಿಚಾರ ಯೋಚಿಸಿದಾಗಲೆಲ್ಲಾ ರಾಮಕೃಷ್ಣಯ್ಯನವರಿಗೆ ಅನಿಸುವುದು ಅನುರಾಧಾಳಂತೆ ಆನಂದನು ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು. ಆನಂದನಿಗೆ ತನ್ನವರೆನ್ನುವ ಆಸೆ ಅಕರಾಸ್ಥೆಗಳೇ ಇಲ್ಲವೇನೋ ಎನ್ನುವ ಸಂಶಯ ಅವರನ್ನು ಯಾವಾಗಲೂ ಕಾಡುತ್ತಿತ್ತು. ಎಂದೂ ಹೆಚ್ಚಿನ ಅನುಬಂಧವನ್ನೇನೂ ಅವನು ತೋರಿಸಿಲ್ಲ. ತಾನಾಯಿತು. ತನ್ನದಾಯಿತು ಎಂಬ ರೀತಿಯವನು. ಸ್ವಾರ್ಥಿಯೆಂದೇ ಹೇಳಬಹುದಾದಂಥ ನಡವಳಿಕೆ. ಹೆತ್ತ ಎಲ್ಲಾ ಮಕ್ಕಳು ಒಂದೇ ರೀತಿ ಇರುವುದೂ ಅಸಂಭವ. ಒಬ್ಬೊಬ್ಬರದ್ದು ಒಂದೊಂದು ರೀತಿ, ವೈವಿಧ್ಯಮಯ ನಡೆವಳಿಕೆ, ಸಂಸಾರ ಎಂದು ಅದಕ್ಕೇ ಅನ್ನುವುದಿರಬೇಕು. ನವರಂಗುಗಳು ನವರಸಗಳು ಇದ್ದಾಗ ಮಾತ್ರ ಜೀವನದಲ್ಲಿ ಅರ್ಥವಿರುತ್ತೆ.
ಮದುವೆಯೆಂದು ಮನೆಯಲ್ಲಿ ಆದ ಗಜಿಬಿಜಿಯನ್ನು ಸರಿಪಡಿಸಿ ಆಗುವಷ್ಟರಲ್ಲಿಯೇ ಮಗ ಸೊಸೆ ಮಧುಚಂದ್ರದಿಂದ ಹಿಂತಿರುಗಿ ಬಂದಿದ್ದರು. ಹಿಂತಿರುಗಿದ ಎರಡನೇ ದಿನವೇ ಆನಂದ ಕೆಲಸಕ್ಕೆ ಹಾಜರಾದ, ಗಂಡ ಕೆಲಸಕ್ಕೆ ಹೋಗಲು ಶುರುಮಾಡಿದ ಮೇಲೆ ತನಗಾದರೂ ಮನೆಯಲ್ಲಿ ಏನು ಕೆಲಸವೆಂದು ನಿರ್ಮಲಾಳೂ ಕೆಲಸಕ್ಕೆ ಹೋಗಲು ಶುರು ಮಾಡಿದ್ದಳು.
ಇಬ್ಬರೂ ಬೆಳಿಗ್ಗೆ ಮನೆ ಬಿಟ್ಟರೆ ಸಂಜೆ ಒಟ್ಟಿಗೇ ಬಂದರೂ ಬಂದರು. ಇಲ್ಲದಿದ್ದರೆ ನಿರ್ಮಲಾ ಬಂದು ಎಷ್ಟೋ ಹೊತ್ತಿನ ಮೇಲೆ ಆನಂದ ಬರುತ್ತಿದ್ದ. ಅವನದ್ದು ಆಗಾಗ ಸುತ್ತಾಟದ ಕೆಲಸ ಬೇರೆ. ಒಮ್ಮೊಮ್ಮೆ ಹೊರಗೆ ಹೋದರೆ ಏಳು ಎಂಟು ದಿನವೂ ಹೊರಗಿರುತ್ತಿದ್ದ.
ಮಕ್ಕಳ ಮದುವೆಗೆ ಮುಂಚೆ ಸುಶೀಲಮ್ಮ ಯಾವಾಗಲೂ ಯೋಚಿಸುತ್ತಿದ್ದರು. ‘ಅನುರಾಧ ಮದುವೆಯಾಗಿ ಹೋದರೆ ತನಗೆ ಕಷ್ಟ. ತನ್ನ ಎಲ್ಲಾ ಕೆಲಸಗಳಲ್ಲೂ ಅವಳು ಕೈ ಹಾಕುತ್ತಾಳೆ. ಆದರೆ ಈ ಪೂರ್ಣಿಮಾ, ನಿರುಪಮಾ ಹಾಗಲ್ಲ. ಅವರಿಗೆ ಮನೆ ಕೆಲಸದಲ್ಲಿ ಆಸಕ್ತಿ ಇಲ್ಲ. ಏನು ಮಾಡಿದರೂ ಒತ್ತಾಯಕ್ಕೆ ಮಾಡಿದಂತೆ ಮಾಡಿ ಮುಗಿಸೋದು. ಆದರೆ, ಅನುರಾಧಾಳ ಹಾಗಿನ ಸೊಸೆ ಬಂದರೆ, ನನಗೆ ಅನುರಾಧಾಳಂತೇ ಸಹಾಯಕ್ಕಾದರೆ ಅನುರಾಧಾ ಮದುವೆಯಾಗಿ ಹೋದ ಕಷ್ಟಾನೇ ತಿಳಿಯಲಿಕ್ಕಿಲ್ಲ. ಸೊಸೆಯಾದರೇನು? ನನಗೆ ಮಗಳಂತೆಯೇ ಅಲ್ಲವೇ? ನಾನು ಎಂದಿಗೂ ಅತ್ತೆಯಾಗಬಾರದು, ತಾಯಿಯಾಗಿಯೇ ಉಳಿಯಬೇಕು. ಅದೆಲ್ಲಾ ಹಳೆಯ ಕಾಲಕ್ಕಾಯಿತು. ಒಮ್ಮೆ ಸೊಸೆ ಬರಲಿ. ಅತ್ತೆ-ಸೊಸೆಯ ಸಂಬಂಧವನ್ನು ಆದರ್ಶವಾಗುವಂತೆ ಮಾಡಿದರಾಯಿತು ಎಂದೂ ನಿರ್ಧರಿಸಿಕೊಂಡಿದ್ದರು.
ಆದರೆ ಮಗ ಹುಡುಗಿಯನ್ನು, ಅದೂ ಕ್ರಿಶ್ಚಿಯನ್ ಹುಡುಗಿಯನ್ನು ತಾನೇ ಆರಿಸಿದ ಸುದ್ದಿ ತಿಳಿದಾಗಲೇ ಅವರ ಯೋಚನೆಗಳೆಲ್ಲಾ ಗಾಳಿಗೆ ಚದುರಿ ಹೋಗಿತ್ತು. ಸೊಸೆಯನ್ನು ನೋಡುವ ಮೊದಲೇ ಏನೋ ಅತೃಪ್ತಿ, ಅಶಾಂತಿ ನೆಲೆಯೂರಿತ್ತು. ಎಲ್ಲದಕ್ಕಿಂತಲೂ ಅವರಿಗೆ ನೋವು ತಂದ ಸಂಗತಿ ಆಕೆಯ ಜಾತಿ. ಹಾಗಂತ ಅವರು ತುಂಬಾ ಚಿಕ್ಕ ಮನಸ್ಸಿನವರು ಖಂಡಿತಾ ಅಲ್ಲ, ದೈನಂದಿನ ವ್ಯವಹಾರಗಳಲ್ಲಿ ಅವರಿಗೆ ಜಾತಿಯೆಂಬುದೊಂದು ಸಮಸ್ಯೆಯೇ ಅನಿಸಿರಲಿಲ್ಲ. ಆದರೆ ಬರುವ ಸೊಸೆ ಕ್ರಿಶ್ಚಿಯನ್ ಅಂದಾಗ ಅವರಿಗೆ ತುಂಬಾ ನೋವೆನಿಸಿತ್ತು.
ಸುಶೀಲಮ್ಮನಿಗೆ ಮೊದಲಿನಿಂದಲೂ ಹಿಂದೂ ಧರ್ಮದ ಮೇಲೆ ವಿಪರೀತ ಅಭಿಮಾನ. ಪುರಾತನವಾದ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಅವರದ್ದು ಸಕ್ರಿಯ ಪಾತ್ರ ತಮಗೆ ಬಿಡುವು ದೊರೆತಾಗಲೆಲ್ಲಾ ರಾಮಕೃಷ್ಣ ಆಶ್ರಮದಲ್ಲಿ ನಡೆಯುವ ಆಧ್ಯಾತ್ಮಿಕ ಬೋಧನೆ ಕೇಳಲು ಹೋಗುತ್ತಿದ್ದರು. ಅಲ್ಲಿ ನಡೆಯುವ ಗೀತಾ ಪಠಣ ಕ್ಲಾಸಿಗೆಲ್ಲಾ ಹಾಜರಾಗಿ ತನ್ನ ಜ್ಞಾನ ದಾಹವನ್ನು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಗೀತೆಯ ಅಕ್ಷರ ಅಕ್ಷರದ ಅರ್ಥವನ್ನು ಗ್ರಹಿಸಿ ಅದರ ಆಧ್ಯಾತ್ಮಿಕ ಆಳವನ್ನು ಅರಿಯುವ ಪ್ರಯತ್ನವನ್ನೂ ಸದಾ ಮಾಡುತ್ತಿದ್ದರು. ರಾಮಾಯಣ, ಮಹಾಭಾರತ, ವೇದಾಂತ, ಉಪನಿಷತ್ತು ಓದಿ ಅರಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಅವುಗಳ ಮೇಲೆ ಬರೆದ ಹೆಚ್ಚಿನ ಪುಸ್ತಕಗಳನ್ನು ಓದಿದ್ದರು. ದೊಡ್ಡ ದೊಡ್ಡ ಲೇಖಕರು. ಸಂತರು ಬರೆದ ಬೇರೆ ಬೇರೆ ಟೀಕೆಟಿಪ್ಪಣಿಗಳನ್ನು ಅವಕಾಶವಾದಗಲೆಲ್ಲಾ ಓದುತ್ತಿದ್ದರು. ಹಿಂದೂ ಧರ್ಮ ಅಗಾಧವಾದುದು. ಆಳವಾದುದು. ಪರಿಪಕ್ವವಾದುದು. ಅದರ ನೂರರಲ್ಲಿ ಒಂದು ಅಂಶವಾದರೂ ತಿಳಿದುಕೊಳ್ಳುವ ಪ್ರಯತ್ನ ಮನುಷ್ಯರಾಗಿ ಹುಟ್ಟಿದ ಮೇಲೆ ಮಾಡಬೇಕು ಎನ್ನುವ ವಾದ ಅವರದ್ದು. ಮಗ ಅದರ ಅಆ, ಇಈ, ಯೇ ಗೊತ್ತಿಲ್ಲದವಳನ್ನು ಕಟ್ಟಿಕೊಂಡಿದ್ದಾನೆ. ಇದು ಅವರಿಗೆ ತುಂಬಾ ನೋವು ತಂದಿತ್ತು. ನಿರಾಶೆ ಉಂಟು ಮಾಡಿತ್ತು. ನೋವಿನಿಂದ ನಿರಾಶೆ. ನಿರಾಶೆಯಿಂದ ಅತೃಪ್ತಿಯ ಉದ್ಭವವಾಗಿತ್ತು ಅವರ ಮನದಲ್ಲಿ, ಸೊಸೆಯ ಸ್ಥಾನದಲ್ಲಿ ಅವರಿಗೆ ಓರ್‍ವ ಹಿಂದೂ ಹುಡುಗಿಯೇ ಬೇಕಿತ್ತು.
ರಾಮಕೃಷ್ಣಯ್ಯನವರದ್ದು ವಿಶಾಲವಾದ ವಿಚಾರ. “ಆಗಿಹೋಯ್ತಲ್ಲ? ಯೋಚಿಸಿ ಫಲವೇನು? ಮನಸ್ಸಿದ್ದರೆ ಅವಳು ಇನ್ನಾದರೂ ಇದನ್ನೆಲ್ಲಾ ತಿಳಿಯಬಹುದು. ಅದನ್ನೇ ದೊಡ್ಡದು ಮಾಡಿ ನಿನ್ನ ನೆಮ್ಮದಿಯನ್ನು ನೀನೇ ಕಳೆದುಕೊಳ್ಳಬೇಡ.” ಎಂದು ಹೆಂಡತಿಗೆ ಆಗಾಗ ಎಚ್ಚರಿಸುತ್ತಿದ್ದರು.
ಅಂಥಾ ಸಂದರ್ಭಗಳಲ್ಲೆಲ್ಲಾ ಸುಶೀಲಮ್ಮ ಯೋಚಿಸಿದ್ದುಂಟು. “ನಾನು ಇಷ್ಟೆಲ್ಲಾ ಓದಿ, ಅದನ್ನೆಲ್ಲಾ ಮನದಟ್ಟು ಮಾಡಿಕೊಳ್ಳುವ ಪ್ರಯತ್ನ ಮಾಡ್ತಿದ್ದರೂ, ನನ್ನಲ್ಲಿ ಈ ಅತೃಪ್ತಿಯೇಕೆ? ಬಂದುದನ್ನು ಬಂದಂತೆ, ಎದುರಿಸಿ ಸ್ವೀಕರಿಸುವ ಸ್ಥಿರತೆ ನನ್ನಲ್ಲಿನ್ನೂ ಬೆಳೆದಿಲ್ಲವೇ? ಜೀವನದಲ್ಲಿ ಸಿಗುವುದರಲ್ಲಿಯೇ ತೃಪ್ತಿ ಪಡಬೇಕೆಂದು ಗೀತೆ ಹೇಳೋದಿಲ್ಲವೇ? ನಾನೂ ಹಾಗೇ ಇರಬೇಕು. ಈ ಅತೃಪ್ತ ಭಾವನೆಗಳನ್ನು ಹೊಡೆದೋಡಿಸಬೇಕು, ಎಂದು ನಿರ್ಧಾರವನ್ನೇನೋ ಮಾಡಿಕೊಳ್ಳುತ್ತಿದ್ದರು. ಆದರೆ ಈ ಅತೃಪ್ತ ಭಾವನೆ ಯಾರನ್ನು ಬಿಟ್ಟಿದೆ? ಬೇಕೆಂದದ್ದು ಸಿಗದಾಗ ಅತೃಪ್ತಿ ತಾನಾಗಿಯೇ ಹುಟ್ಟಿಕೊಳ್ಳುತ್ತದೆ. ಅತೃಪ್ತಿ ಅಸಮಾಧಾನವನ್ನು ಮೆಟ್ಟಿ ನಿಲ್ಲುವ ದೃಢತೆ ಮಹರ್ಷಿಗಳಿಗೆ ಮಾತ್ರ.
ಸುಶೀಲಮ್ಮನವರ ವಾದಗಳೆಲ್ಲಾ ಸೊಸೆ ಬಂದ ಕೆಲವು ದಿನದಲ್ಲೇ ಮಾಯ! ಅತೃಪ್ತಿಯದೇ ಮೇಲುಗೈ. ಓದಿ ಮೈಗೂಡಿಸಿಕೊಂಡ ಯಾವ ವಾಕ್ಯಗಳೂ ಅವರ ನೆರವಿಗೆ ಬರಲು ಒಪ್ಪುತ್ತಿರಲಿಲ್ಲ. ಪುಸ್ತಕಗಳು ಹೇಳುವುದೇ ಒಂದು; ನಿಜ ಜೀವನದಲ್ಲಿ ಆಗುತ್ತಿರುವುದೇ ಇನ್ನೊಂದು ಎಂಬ ತರ್ಕಕ್ಕೂ ಅವರು ಒಳಗಾಗುತ್ತಿದ್ದರು. ಅವೆರಡರ ಹೊಂದಾಣಿಕೆ ಎಷ್ಟು ಕಷ್ಟವೆನ್ನುವ ಅನುಭವ ಅವರಿಗಾಗತೊಡಗಿತ್ತು.
ಬೆಳಿಗ್ಗೆ ಒಂಭತ್ತು ಗಂಟೆಗೆ ಮನೆ ಬಿಡುವ ಸೊಸೆಯಿಂದ ಅವರಿಗೆ ಯಾವ ಸಹಾಯವೂ ನಿರೀಕ್ಷೆಗೆ ಮೀರಿದ್ದು, ಮಗ ಸೊಸೆಗೆ ಅವರೇ ಎಲ್ಲಾ ತಯಾರಿಸಿ ಕೊಡಬೇಕು. ಸಂಜೆ ಸೊಸೆ ಬರುವಾಗ ಅವರ ಕೆಲಸವೆಲ್ಲಾ ಮುಗಿದಿರುತ್ತಿತ್ತು. ಹೊರಗಿನ ಕೆಲಸವನ್ನೆಲ್ಲಾ ಒಬ್ಬ ಹೆಣ್ಣಾಳು ಮಾಡಿ ಹೋಗುತ್ತಿದ್ದಳು. ಸಂಜೆ ಚಿಕ್ಕಮಟ್ಟ ಕೆಲಸಗಳು ಉಳಿದಿರುತ್ತಿದ್ದರೂ, ದಣಿದು ಬರುವ ಸೊಸೆಯನ್ನು ಕರೆದು ಮಾಡಲು ಹೇಳುವ ಮನಸ್ಸು ಅವರಿಗಾಗುತ್ತಿರಲಿಲ್ಲ.
ನಿರ್ಮಲಾಗೂ ಸಂಕೋಚ. ತಾನು ತಾಯಿ ಮನೆಯಲ್ಲಿ ಏನೂ ಕೆಲಸ ಮಾಡಿದವಳಲ್ಲ. ಒಂದು ತಟ್ಟೆ ಆಚೆ ಈಚೆ ಇಟ್ಟು ತನಗೆ ಅಭ್ಯಾಸವಿಲ್ಲ. ಏನಾದರೂ ಮಾಡಲು ಹೋಗಿ ಯದ್ವಾತದ್ವವಾದರೆ ಅದು ಕಷ್ಟ.
ಹೆದರಿಕೆಯಿಂದ ಅವಳಾಗಿಯೇ ಮುಂದುವರೆದು ಏನಾದರೂ ಕೆಲಸ ಮಾಡಲು ಭಯಪಡುತ್ತಿದ್ದಳು. ಅತ್ತೆ ಕರೆದು ಇದು ಮಾಡೆಂದು ಹೇಳಿದರೆ ತನಗೆ ತಿಳಿದಂತೆ ಮಾಡಲು ಅವಳು ತಯಾರೇನೋ ಇದ್ದಳು. ಯಾಕೆ ಮಾಡಬೇಕೆಂಬ ಗರ್ವವೇನೂ ಅವಳಿಗಿರಲಿಲ್ಲ. ಅತ್ತೆ ಕರೆಯುತ್ತಿರಲಿಲ್ಲ. ಸೊಸೆ ಹೋಗುತ್ತಿರಲಿಲ್ಲ. ಇಬ್ಬರ ಮಧ್ಯೆ ದೊಡ್ಡದೊಂದು ಗೋಡೆಯೇ ಎದ್ದು ನಿಂತಂತೆ ಇಬ್ಬರಿಗೂ ಬಾಸವಾಗುತ್ತಿತ್ತು.
ಪೂರ್ಣಿಮಾ, ನಿರೂಪಮಾ, ಅಕ್ಕ ಮನೆಯಲ್ಲಿದ್ದ ತನಕವೂ ಯಾವ ಯೋಚನೆಯೂ ಇಲ್ಲದೆ ಗಂಡು ಹುಡುಗರಂತೇ ಬೆಳೆದವರು. ಅಮ್ಮ ಏತಕ್ಕಾದರೂ ಕರೆದರೆ ಓದಲಿಕ್ಕಿದೆಯಮ್ಮಾ ಎಂದು ಬೆನ್ನು ತಿರುಗಿಸಿ ಹೋಗುವ ಜಾತಿ. ಓದುತ್ತಾರೋ ಬಿಡುತ್ತಾರೋ ಅದು ಅವರಿಗೆ ಗೊತ್ತು. ಕೆಲಸ ತಪ್ಪಿಸುವ ನೆವನ ಮಾತ್ರ ಅದು!
*****
ಮುಂದುವರೆಯುವುದು