ವ್ಯಾಸಮಠದ ಶ್ರೀವ್ಯಾಸರಾಯರು
ಹಲವು ಶಿಷ್ಯರನು ಹೊಂದಿದ್ದವರು
ದಾಸಕೂಟದ ಕನಕ ಪುರಂದರ
ದಾಸರ ಹೆಚ್ಚಿಗೆ ಮೆಚ್ಚಿದ್ದವರು
ಶಿಷ್ಯ ಸಮೂಹದ ಗೊಷ್ಠಿಯಲೊಮ್ಮೆ
ಪ್ರಶ್ನೆ ಕೇಳಿದರು ನಗೆ ಚೆಲ್ಲಿ-
’ಮೋಕ್ಷ ಹೊಂದಿ ವೈಕುಂಠಕೆ ಹೋಗುವ
ವ್ಯಕ್ತಿ ಯಾರಿಹರು ನಮ್ಮಲ್ಲಿ?’
ಸಭೆಯಲಿ ಹೆಚ್ಚಿನ ಬ್ರಾಹ್ಮಣರಿದ್ದರು
ಬೆರಳೆಣಿಕೆಯ ಜನ ಶೂದ್ರರಿದ್ದರು
ಪಂಡಿತರಿದ್ದರು ಪಾಮರರಿದ್ದರು
ಯಾರೂ ಉತ್ತರ ಕೊಡಲಿಲ್ಲ
ಗುರುಗಳ ಎದುರಲಿ
ನುಡಿಯುವ ಧೈರ್ಯವು
ತುಂಬಿದ ಸಭೆಯಲಿ ನಿಲ್ಲುವ ಸ್ಥೈರ್ಯವು
ಯಾರಿಗೂ ಇಲ್ಲದೆ ಕುಳಿತಿರೆ ಸುಮ್ಮನೆ
ವ್ಯಾಸರಾಯರೂ ಬಿಡಲಿಲ್ಲ!
ವ್ಯಾಸರು ಎಲ್ಲೆಡೆ ತಿರುಗಿ ನೋಡಿದರು
ಕನಕದಾಸನನು ಕರೆದು ಕೇಳಿದರು-
’ಕನಕನೆ ಉತ್ತರ ಕೊಡು ನೀನು’
ಕನಕನು ಎಲ್ಲರ ಒಮ್ಮೆ ನೋಡಿರಲು
ಪಂಡಿತರೆಲ್ಲರೂ ಕೊಂಕು ಬೀರಿರಲು
ಉತ್ತರ ಕೊಡುವುದು ಹಿತವೇನು?
ಬ್ರಾಹ್ಮಣ ಪಂಡಿತರೆಲ್ಲರು ಕೂಡಿ
ಒಬ್ಬರ ಮುಖವನ್ನೊಬ್ಬರು ನೋಡಿ
ಶೂದ್ರನಾದವನು ಮೋಕ್ಷದ ಬಗ್ಗೆ
ಉತ್ತರ ಕೊಡುವುದು ಸಾಧ್ಯವೆ? ಹೇಗೆ?
ಕನಕದಾಸರೆಡೆ ನಕ್ಕು ನೋಡಿದರು
’ಹೇಳಬಾರದೆ?’ ಕುಹಕವಾಡಿದರು
ಮುಸಿಮುಸಿ ನಗುತ್ತ ಮನದಲ್ಲಿ
ನುಡಿಯಲಾಗದೆ ಎದುರಲ್ಲಿ!
ಕನಕದಾಸರು ನಮಿಸಿ ವ್ಯಾಸರಿಗೆ
ನಗುತ ಹೇಳಿದರು ಅವರಿಗೆ ಹೀಗೆ-
’ಗುರುಗಳೆ, ಬಲ್ಲವರೆಲ್ಲರು ಇರುವರು
ಆದರೆ ಇವರಲಿ ಯಾರೂ ಹೋಗರು
ನಾನು ಹೋದರೆ ಹೋಗಲುಬಹುದು
ವೈಕುಂಠವನು ಸೇರಲುಬಹುದು
ತಮ್ಮ ಅನುಗ್ರಹವೆನಗಿರಲಿ
ತಪ್ಪಾಗಿದ್ದರೆ ಕ್ಷಮೆ ಇರಲಿ’
ಪಂಡಿತರೆಲ್ಲರು ಉರಿದು ಬಿದ್ದರು
ಕನಕನ ಮಾತನು ಖಂಡಿಸಿ ನುಡಿದರು
ದುರಹಂಕಾರದ ಮಾತಿದು ಎಂದರು
ಶೂದ್ರನ ಬುದ್ಧಿಯು ಲದ್ದಿಯು ಅಂದರು
ಎದ್ದು ನಿಂತು ತೋಳ್ತಟ್ಟಿದರು
ಕೋಪದಿಂದ ಬುಸುಗುಟ್ಟಿದರು
ಗುರುಗಳು ಎಲ್ಲರ ಕೂರಲು ಹೇಳಿ
ನುಡಿದರು- ’ಕೇಳಿರಿ ಸಂಯಮ ತಾಳಿ
ಕನಕನು ಹೇಳುವ ಮಾತನು ಕೇಳಿ’
ಪಂಡಿತರಿಗೆ ತಿಳಿಹೇಳಿದರು
ನಂತರ ಕನಕನ ಹತ್ತಿರ ಬಂದು
ಕೇಳಿದರವನನು- ’ಹೇಗಿದು?’ ಎಂದು
ವಿವರಿಸಿ ಹೇಳಲು ಕೇಳಿದರು!
ಗುರುಗಳೆ, ’ನಾನು’ ನನ್ನದು ಎನ್ನುವ
ಅಹಂಕಾರದಲಿ ಮುಳುಗಿದ ಮಾನವ
ಇರುವನು ಮೋಕ್ಷಕೆ ಬಲು ದೂರ
ಈ ಮಮಕಾರವ ಜಯಿಸಿದ ಒಡನೆ
ಮೋಕ್ಷವು ದೊರೆವುದು ತಂತಾನೆ
ಎಂಬುದೆನ್ನ ಮಾತಿನ ಸಾರ
ಗುರುಗಳು ಶಿಷ್ಯನ ಮಾತನು ಕೇಳಿ
ತುಂಬಿದ ಮನದಲಿ ಸಂತಸ ತಾಳಿ
ಪಂಡಿತರೆಡೆಗೆ ನೋಡಿದರು
ಪಂಡಿತರೆಲ್ಲ ಅಹಮ್ಮಿನ ನುಡಿಗೆ
ಮಾತಿನ ಮರ್ಮವ ಅರಿಯದ ಪರಿಗೆ
ನಾಚುತ ತಲೆಯನು ಬಾಗಿದರು!
*****