ಪಾಪ ಮತ್ತು ಪ್ರಾಯಶ್ಚಿತ್ತದ ಸುತ್ತ – ಎಸ್ ಟಿ. ಕೋಲೆರಿಡ್ಜ್ ನ The Rime of the Ancient Mariner

ಪಾಪ ಮತ್ತು ಪ್ರಾಯಶ್ಚಿತ್ತದ ಸುತ್ತ – ಎಸ್ ಟಿ. ಕೋಲೆರಿಡ್ಜ್ ನ The Rime of the Ancient Mariner

ದಿನನಿತ್ಯದ ಬದುಕಿನಲ್ಲಿ ಇಂದಿಗೂ ಕೆಲವು ವಿಚಾರಗಳು “ಇದಂಮಿತ್ತಂ” ಎಂದು ನಿರ್ಣಯಿಸಲಾಗದ ಗೊಂದಲಕ್ಕೆ ನಮ್ಮನ್ನು ನೂಕುತ್ತವೆ. ವೈಜ್ಞಾನಿಕ ಯುಗದಲ್ಲಿಯೂ ಕಾಡುವ ಕೆಲವು ಅಗೋಚರ ಅನುಭವಗಳು ಪ್ರತಿಯೊಬ್ಬ ವ್ಯಕ್ತಿಗೂ ಸರ್ವೇಸಾಮಾನ್ಯ. ಪಾಪಕರ್ಮಗಳು ಮತ್ತು ಪ್ರಾಯಶ್ಚಿತ್ತ ಎಂಬ ವಿಚಾರಗಳು ಅದಕ್ಕೆ ಪುಷ್ಟಿಕೊಡುವ ಹಲವಾರು ಪೌರಾಣಿಕ ಕಥೆಗಳು, ವೇದಗಳಲ್ಲಿಯ ಉದಾಹರಣೆಗಳು, ಪುರಾಣ ಕಥನಗಳು ಅನಾದಿ ಭಾರತೀಯ ಸಾಹಿತ್ಯದಲ್ಲಿ ಪುಂಖಾನುಪುಂಖವಾಗಿ ಹರಿದುಬಂದಿವೆ. ಇದು ಬರಿಯ ಭಾರತೀಯ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರೀಕ ರೋಮನ್ ಹಾಗೂ ಆಂಗ್ಲ ಸಾಹಿತ್ಯವು ಇಂತಹ ಸಂಗತಿಗಳಿಂದ ಹೊರತಾಗಿಲ್ಲ. ಹಿಂದೂ ಧರ್ಮದಂತೆ ಕ್ರೈಸ್ತ ಧರ್ಮವೂ ವ್ಯಕ್ತಿಗತ ದೋಷಗಳನ್ನು ನಿವಾರಿಸಿ, ಉದಾತ್ತ ಜಗತ್ತನ್ನು ಸೃಷ್ಟಿಸುವ ಕೈಂಕರ್ಯಕ್ಕೆ ಒತ್ತು ಕೊಟ್ಟಿದೆ. ಧರ್ಮ ಯಾವುದೇ ಇರಲಿ ಧರ್ಮ ಸಿದ್ಧಾಂತಗಳು ಮಾನವ ಕುಲಕೋಟಿಯ ಉದ್ದಾರಕ್ಕಾಗೇ ಹುಟ್ಟಿರುವಂತಹವು.

ಪಾಪ ಮತ್ತು ಪ್ರಾಯಶ್ಚಿತ್ತದ ವಿಚಾರಗಳನ್ನು ವೈಭವೀಕರಿಸಿ, ಬದುಕಿನ ನಿರ್ದಿಷ್ಟತೆಯನ್ನು ನೈತಿಕ ನೆಲೆಗಟ್ಟಿನ ಮೇಲೆ ನಿರೂಪಿಸುವ ಕೃತಿ S.T.Coleridgeನ “The Rime of Ancient Mariner” ಇದೊಂದು ಕಥನ ಗೀತೆ. ಏಳು ಭಾಗಗಳಲ್ಲಿ ನಿರೂಪಿತವಾದ ಈ ಕೃತಿ ಮುಖ್ಯವಾಗಿ ಅತಿಮಾನುಷ ಸಂಗತಿಗಳ ಕುರಿತು ಹೇಳುತ್ತದೆಯಾದರೂ ಅಗಾಧ ಸಾಗರ ಹಾಗೂ ನೈಸರ್ಗಿಕ ವರ್ಣನೆಗಳಿಂದ ಕವನ ಕಳೆಕಟ್ಟಿದೆ. ಸೂಕ್ಷ್ಮವಾಗಿ ನಿಸರ್ಗದ ಮೇಲೆ ಜೀವಜಗತ್ತಿನ ಮೇಲೆ ಮಾನವನ ಅನಾಚಾರ ಶೋಷಣೆಯನ್ನು ವಿರೋಧಿಸುವ ದ್ವನಿಯೂ ಇದೆ.

ಆತನೊಬ್ಬ ಪುರಾತನ ನಾವಿಕ. ಮದುವೆಯ ಭರ್ಜರಿ ಔತಣಕೂಟಕ್ಕೆ ಹೊರಟ ಆ ಮೂವರಲ್ಲಿ ಒಬ್ಬನನ್ನು ತಡೆಹಿಡಿದ ಆ ಹಳೆಯ ನಾವಿಕ ತನ್ನ ಕಥೆಯನ್ನು ಹೇಳತೊಡಗುತ್ತಾನೆ. ಆ ಅತಿಥಿಯೋ ಇತನ ಕಥೆಯನ್ನು ೩ ವರ್ಷದ ಮಗುವಿನಂತೆ ಆಲಿಸುತ್ತಾನೆ. ಬಿಳಿಗಡ್ಡದ, ಹೊಳೆವ ಕಂಗಳ ನಾವಿಕನ ವ್ಯಕ್ತಿತ್ವ ಆ ಅತಿಥಿಯನ್ನು ಆಕರ್ಷಿಸುತ್ತದೆ.

ಹಡಗು ಮಂಜುಗಡ್ಡೆಯ ನಾಡನ್ನು ಪ್ರವೇಶಿಸಿದೆ. ಬಿರುಗಾಳಿಗೆ ದಾರಿತಪ್ಪಿದ ಹಡಗು ದಕ್ಷಿಣ ಧ್ರುವದತ್ತ ಸಾಗುತ್ತದೆ. ನಾವಿಕ ಮತ್ತವನ ಸಹ ನಾವಿಕರು ಕಂಗಾಲಾಗಿದ್ದಾರೆ. ಸುತ್ತಮುತ್ತಲೂ ಮಂಜುಗಡ್ಡೆ ಬಿಟ್ಟರೆ ಬೇರೆನೂ ಕಣ್ಣಿಗೆ ಗೋಚರಿಸುತ್ತಿಲ್ಲ. ಕರ್ಕಶ ಸದ್ದು ಬಿಟ್ಟರೆ ಬೇರೆ ಜೀವಜಗತ್ತಿನ ಹೇಳ ಹೆಸರಿಲ್ಲ. ಅದೊಂದು ನಿರ್ಜನ ಜಗತ್ತು. ಅದೇ ಆಗ ಶುಭದ ಸಂಕೇತವಾದ ಹಕ್ಕಿ ಅಲ್ಬಟ್ರಾಸ್ ಬಿಳಿಯ ಮಂಜಿನ ಪೊರೆಯ ನಡುವಿನಿಂದ ತೂರಿ, ಸಂಭ್ರಮ ಸಂತೋಷದಿಂದ ಆತಿಥ್ಯ ಪಡೆಯಲು ಅವರತ್ತ ಬಂದಿದೆ. ಆದರೆ ಅತಿಥಿಯಾಗಿ ಬಂದ ಪಕ್ಷಿಯನ್ನು ನಿಷ್ಕರುಣಿಯಾದ ನಾವಿಕ ಗುಂಡಿಟ್ಟು ಕೊಲ್ಲುತ್ತಾನೆ. ಇದೇ ಆತನ ದುರ್ದೆಸೆಗೆ ಕಾರಣವಾಗುತ್ತದೆ. ಎಲ್ಲಾ ಧರ್ಮಗಳಲ್ಲೂ ನಿಷೇದಿತವಾದ ಅತಿಥಿ ಹತ್ಯೆ ಖಂಡನೀಯ. ನಿರುಪ್ರದ್ರವಿಯಾದ ಹಕ್ಕಿಯನ್ನು ನಾವಿಕ ಕೊಲ್ಲಲು ಕಾರಣವೇನು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮನುಷ್ಯನಿಗೆ ತಾನು ಜೀವ ಸಂಕುಲದ ಶ್ರೇಷ್ಟನೆಂಬ ಗರ್ವ, ತಾನು ನಿಸರ್ಗದ ಮೇಲೆ ನಡೆಸಿದ ಅತ್ಯಾಚಾರಗಳನ್ನೆಲ್ಲ ಉಳಿದ ಪ್ರಾಣಿಗಳು ಸಹಿಸಬೇಕೆಂಬ ಇರಾದೆ. ದಮನಕಾರಿ ಪ್ರವೃತ್ತಿಗೆ ದ್ಯೋತಕವಾಗುತ್ತಾನೆ ಆತ.

ಆತನ ಸಹನಾವಿಕರು ಅವನನ್ನು ಆಕ್ಷೇಪಿಸುತ್ತಾರೆ, ದೂಷಿಸುತ್ತಾರೆ. ತಂಪು ಗಾಳಿ ಮುಂದುವರೆದಂತೆ ಹಡಗು ಪೆಸಿಪಿಕ್ ಸಾಗರವನ್ನು ಪ್ರವೇಶಿಸುತ್ತದೆ. ಉತ್ತರ ದಿಕ್ಕಿನಲ್ಲಿ ಚಲಿಸಲಾರಂಭಿಸುವ ಹಡಗು ಒಮ್ಮೆಲೆ ಸ್ತಬ್ಧ ಚಲನೆಯಲ್ಲಿ ನಿಲ್ಲುತ್ತದೆ. ಎಲ್ಲಿಯೂ ತೊಟ್ಟು ನೀರಿಗೂ ಬರ ಚಿತ್ರಿತ ಹಡಗು, ಚಿತ್ರತ ಸಾಗರದಂತೆ ಎಲ್ಲವೂ ಬರಡು ಬರಡು. ಈಗ ಆತನ ಸಹ ನಾವಿಕರು ಆತನನ್ನು ಹೀಗೆಳೆಯಲಾರಂಭಿಸುತ್ತಾರೆ. ಆತನ ಪಾಪಕ್ಕೆ ದ್ಯೋತಕವಾಗಿ ಸತ್ತ ಅಲ್ಬಾಟ್ರಾಸ್‌ನನ್ನು ಎನ್ಸಿಯಂಟ್ ಮ್ಯಾರಿನರ್‌ನ ಕುತ್ತಿಗೆಗೆ ನೇತು ಹಾಕುತ್ತಾರೆ. ಎಲ್ಲ ರೀತಿಯಿಂದಲೂ ಕಷ್ಟಕಾರ್ಪಣ್ಯಗಳು ಆತನನ್ನು ಮುಕುರಿಕೊಳ್ಳುತ್ತವೆ. ಪ್ರತಿನಾವಿಕನ ನಾಲಿಗೆಯ ಪಸೆ ಆರಿ ನೀರಿಗಾಗಿ ಪರಿತಪಿಸುತ್ತಾರೆ. ಕ್ರಮೇಣ ಅತನ ಎಲ್ಲ ನಾವಿಕರು ಸತ್ತು ಮಲಗುತ್ತಾರೆ. ಏಕಾಂಗಿತನ ಆತನನ್ನು ಕಾಡತೊಡಗುತ್ತದೆ. ದುಃಖ ತೀವ್ರಗೊಳಿಸುತ್ತದೆ. ಅತಿಥಿಯನ್ನು ಅಪಮಾನಿಸಿ ಹತ್ಯೆಗೈದ ಆತ ತನ್ನವರಿಂದ ದೂರವಾಗುತ್ತಾನೆ. ರಾತ್ರಿ ಕಪ್ಪಿಟ್ಟಿದೆ. ಚಂದ್ರನ ಬೆಳಕು ಕಳೆಗುಂದಿದೆ. ಆ ಹೊತ್ತಿನವರೆಗೂ ತನ್ನ ಶ್ರೇಷ್ಟತೆಯನ್ನೆ ಮೆರೆದ ನಾವಿಕನಿಗೆ ಆಗಸದಲ್ಲಿ ತಮ್ಮ ತಮ್ಮ ನೆಲೆಯಲ್ಲಿ ಸುರಕ್ಷಿತವಾಗಿರುವ ನಕ್ಷತ್ರಗಳುಗೋಚರಿಸುತ್ತವೆ. ದೇವನ ಸೃಷ್ಟಿಯ ಸೌಂದರ್ಯದಲ್ಲಿ ತನಗರಿವಿಲ್ಲದೇ ಆತ ತಲ್ಲೀನನಾಗುತ್ತಾನೆ. ಬೆಳದಿಂಗಳ ಮೋಹಕತೆಯಲ್ಲಿ ಸಾಗರ ಜೀವಿಗಳ ಬಗ್ಗೆ ಯಾವಾಗ ಆತನಲ್ಲಿ ಅನುಕಂಪ ಮೆಚ್ಚುಗೆ ಮೂಡಿತೋ ಆ ಕ್ಷಣವೇ ಆತನ ಕುತ್ತಿಗೆಗೆ ತೂಗಿ ಬಿದ್ದ ಹಕ್ಕಿಯ ಕಳೇಬರ ತಾನೇತಾನಾಗಿ ಕಳಚಿಬೀಳುತ್ತದೆ. ನಿಸರ್ಗದ ಸೌಂದರ್ಯಕ್ಕೆ ಆತನ ಕಣ್ಣು ತೆರೆದುಕೊಳ್ಳುತ್ತದೆ. ಆತ ಪಾರ್ಥಿಸಲು ಯೋಗ್ಯನಾಗುತ್ತಾನೆ. ನಾವಿಕ ಶುದ್ಧ ಮಳೆಹನಿಯಿಂದ ಪವಿತ್ರನಾಗುತ್ತಾನೆ. ದಿವ್ಯ ಚೇತನಗಳು ಆತನ ಹಡಗಿನ ದಾರಿಯನ್ನು ಸುಗಮಗೊಳಿಸುತ್ತವೆ ಅದೇ ಗುಡ್ಡ, ದೀಪಸ್ತಂಭಗಳು ಪುನಃ ಗೋಚರಿಸಲಾರಂಭಿಸುತ್ತವೆ. ಪಾಪಕ್ಕೆ ಪ್ರಾಯಶ್ಚಿತ್ತಗಳಿಸಿಕೊಂಡ ಆತ ಪರಿಶುದ್ಧ ಮನುಷ್ಯನಾಗುತ್ತಾನೆ. ಒಣಗಿದ ತುಟಿ, ಗಂಟಲು ತೇವಗೊಳ್ಳುತ್ತದೆ. ಆದರೆ ಪಾಪಾತ್ಮಗಳಾದ ಆತನ ಸಹಚರರಿಗೆ ಶಾಪವಿಮೋಚನೆಯಾಗುವುದಿಲ್ಲ. ಆದರೂ ನಾವಿಕ ತನ್ನ ಕಥೆಯನ್ನು ಸಜ್ಜನ ವ್ಯಕ್ತಿಯಲ್ಲಿ ನಿವೇದಿಸಿದಾಗಲೇ ಆತನಿಗೆ ಪೂರ್ಣ ಪ್ರಾಯಶ್ಚಿತ್ತ. ಹಾಗಾಗಿ ಆತ ಖಂಡ ಖಂಡ ಅಲೆಯುತ್ತಾನೆ. ಈ ಕಥೆಯನ್ನು ಕೇಳಿದ ಮದುವೆಗೆ ಬಂದ ಅತಿಥಿ ಪುನೀತನಾಗುತ್ತಾನೆ.

ಇದೊಂದು ಅರ್ಥಪೂರ್ಣ ಶ್ರೀಮಂತ ಕಾವ್ಯ. ಸಾಧನೆಯ ಕಥನ. ಕಾರಣ ಮತ್ತು ಪರಿಣಾಮಗಳ ತಾತ್ವಿಕ ಹಿನ್ನೆಲೆಯಲ್ಲಿ ಕ್ಷಮೆ ಸಿಗುವ ತನಕ ಕೆಟ್ಟ ಕೃತ್ಯಗಳು ಅದರ ಕೆಟ್ಟ ಪರಿಣಾಮಗಳ ಸ್ವೀಕರಿಸಲೇಬೇಕು. ನಾವಿಕ ತನ್ನ ಸ್ವಂತ ಅನುಭವದಿಂದ ಪಾಠ ಕಲಿಯುತ್ತಾನೆ. ಆತ ಪಾಪಕೃತ್ಯವೆಸಗುತ್ತಾನೆ ಆದರೆ ಆತನ ನೋವು ಕಾರ್ಪಣ್ಯಗಳು ಪಶ್ಚಾತ್ತಾಪ ಅವನಲ್ಲಿ ಪರಿಶುದ್ದತೆಯನ್ನು ಒಡಮೂಡಿಸುತ್ತದೆ.

ರೋಮ್ಯಾಂಟಿಕ ಕವಿಗಳಲ್ಲಿ ಪ್ರಮುಖನಾದ S.T.Coleridge ೧೯ನೇ ಶತಮಾನದ ಪ್ರಮುಖ ಕವಿಗಳಲ್ಲಿ ಒಬ್ಬ. ಆತನ ವೈಯಕ್ತಿಕ ಬದುಕು ಪ್ರಕ್ಷುಬ್ಧವಾಗಿತ್ತು ಆತನ ಪ್ರಸಿದ್ಧ ಕೃತಿಗಳು, Wordsworth ಜೊತೆಗೂಡಿ ಪ್ರಕಟಿಸಿದLirical Ballads ಇಂಗ್ಲೀಷ ರೊಮ್ಯಾಂಟಿಕ ಕಾಲದ ಪ್ರಾರಂಭದ ಮುಕುಟಮಣಿಯಾದ ಕೃತಿ. Ancient Mariner, Kubla Khanಇತ್ಯಾದಿ ಕವನಗಳು Biographia Literaria ಎಂಬ ವಿಮರ್ಶಾ ಕೃತಿಗಳನ್ನು ಜಗತ್ತಿಗೆ ನೀಡಿದ ಆತ ೧೭೭೨ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿ ೧೮೩೪ರಲ್ಲಿ ತೀರಿಕೊಂಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post `ನಾನು’ ಹೋದರೆ…
Next post ಗೋಡೆಯ ಬರಹ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…