ಕುಣಿಯುತ ಬಂತೈ
ಕೆನೆಯುತ ಬಂತೈ
ಐದೂರ್ಷದ ಬಯಕೆ
ಅಪರೂಪದ ನೆನಪು
ಹಲ್ಗಿಂಜುವ ರೂಪು
ಕೈ ಒಡ್ಡಿತು ಜನಕೆ.
ಏನಬ್ಬರ ಏನುಬ್ಬರ
ಸಿಹಿ ಸ್ವರ್ಗದ ಸಾರ!
ಮೈದುಂಬಿದ ಬಾಯ್ದುಂಬಿದ
ಬೊಜ್ಜಿನ ಪರಿವಾರ.
‘ಪ್ರಜೆಯೇ ಪ್ರಭುವು
ಪ್ರಜೆಯೇ ಎಲ್ಲವು
ಇಡುವೆವು ನಾವು
ಮೂಳೆಗಳಾ ಲೆಕ್ಕ
ಕೈ ಹಿಡಿದರೆ ನೀವು
ಬಾಳಾಯಿತು ರೊಕ್ಕ’
ಎನ್ನುತ ಬಂತೈ
ಬರ್ರನೆ ಬಂತೈ
ಮಿಂಚನ ಮಾತು
ತುಂಬುತ ಬಂತೈ
ಉಕ್ಕಿನ ಚಕ್ರದ
ಕನಸಿನ ಕಾರು
ಎದೆಯನು ಮೆಟ್ಟಿ
ಹರಿಯುವ ಜೋರು.
ಉಳಿಯಿತು ಕಡಗೆ
ರಸ್ತೆಯ ಬದಿಗೆ
ಓಟಿನ ಬೇಟೆ
ಗೋಡೆಯ ಬರಹ
ಬಾಯ್ಕಟ್ಟುವ ಭ್ರಮೆ
ಭೂತದ ತರಹ.
*****