ಹಿಂದೆ ಒಂದು ಕಾಲದಲ್ಲಿ ನಮ್ಮ ಬ್ರಹ್ಮಾಂಡದಲ್ಲಿ
ಅಣುಗಳೆಲ್ಲ ಒಂದುಗೂಡಿ ಬಂಧಗೊಳ್ಳುತಿರಲು, ಅಲ್ಲಿ
ಒತ್ತಡಕ್ಕೆ ಸಿಲುಕಿಕೊಂಡ ಬಳಿಕ ಸೂಕ್ತ ಸಮಯದಲ್ಲಿ
ಮಹಾಸ್ಫೋಟದಿಂದ ಶಕ್ತಿ ಛಿದ್ರಗೊಂಡು ಚಲಿಸುವಲ್ಲಿ
ಸೂರ್ಯನೊಂದು ಶಕ್ತಿಯಾಗಿ, ಅಷ್ಟಗ್ರಹವು ಸುತ್ತ ತಿರುಗಿ
ಸೌರವ್ಯೂಹ ಸೃಷ್ಟಿಯಾಗಿ ಸೂರ್ಯ ಅದರ ಕೇಂದ್ರವಾಗಿ
ಎಲ್ಲೂ ನಿಲ್ಲದಂತೆ ಮುಂದೆ ಚಲಿಸತೊಡಗಿತು;
ಚಲನೆಯಲ್ಲಿ ತನ್ನತನವು ಮೂಡತೊಡಗಿತು!
ನಮ್ಮ ಗ್ರಹವು ಅಂದಿನಿಂದ ದುಂಡುದುಂಡು ರೂಪ ತಳೆದು
ಉರಿವ ಬೆಂಕಿಗೋಲವಾಗಿ, ಆವಿಯಾಗಿ ಮಳೆಯು ಸುರಿದು
ತಣ್ಣಗಾಗುತಿರಲು ಬೆಟ್ಟ-ಗುಡ್ಡ ಮೂಡಿ ಭೂಮಿಯಾಗಿ
ಗಾಳಿ, ಮಳೆಯ ರಭಸದಲ್ಲಿ ಕಲ್ಲು ಮಣ್ಣು ಸೃಷ್ಟಿಯಾಗಿ
ಭಾರಿ ಭಾರಿ ಹಳ್ಳದಲ್ಲಿ ಜೀವಜಲವು ಉಳಿದುಕೊಂಡು
ಭೂಮಿಯಲ್ಲಿ ಸಾಗರಗಳು ಎಂಬುದಾಗಿ ಹೆಸರುಗೊಂಡು
ಒಲುಮೆಯಿಂದ ಜೀವಜಲದಿ ಜೀವಿ ಹುಟ್ಟಿತು;
ನೆಲದ ಮೇಲೆ ಗರಿಕೆ ಮೊಳೆತು ಹಸುರು ಮೂಡಿತು!
ಹಸುರಿನಲ್ಲಿ ಉಸಿರು ಹುಟ್ಟಿ ನೆಲದ ಜೀವಿ ಜನುಮ ತಳೆದು
ಹಸುರ ನಡುವೆ ಜೀವ ಜಂತು ಕಸುವಿನಿಂದ ಉಳಿದು ಬೆಳೆದು
ದೈತ್ಯಜೀವಿ ಸೃಷ್ಟಿಯಾಗಿ ಹಲವು ಕಾಲ ಬದುಕಿ ಮೆರೆದು
ಪ್ರಕೃತಿ ವೈಪರೀತ್ಯದಿಂದ ಕೆಲವು ಕಾಲದಲ್ಲಿ ಅಳಿದು
ಮತ್ತೆ ಸೃಷ್ಟಿಕ್ರಿಯೆಯು ಜರುಗಿ ಇಷ್ಟದಂತೆ ಬೆಳಕು ಚೆಲ್ಲಿ
ವಿಶ್ವದಲ್ಲಿ ಅಲ್ಲಿ ಇಲ್ಲಿ ಬಳಿಕ ಕೆಲವು ಕಾಲದಲ್ಲಿ
ಮಂಗನಿಂದ ಮನುಜ ಜೀವಿ ಜನುಮ ತಾಳಿತು;
ಚೆಂದದಿಂದ ಬದುಕಲೆಂದು ಮನವ ಮಾಡಿತು!
ಆದಿಕಾಲದಲ್ಲಿ ಮನುಜ ಪ್ರಾಣಿಯಂತೆ ಅಡವಿಯಲ್ಲಿ
ಭೀತಿಯಲ್ಲಿ ಬದುಕುತಿದ್ದ ಎಲ್ಲ ಪ್ರಾಣಿ ನಡುವಿನಲ್ಲಿ
ಆಶ್ರಯಕ್ಕೆ ಮರದ ಪೊಟರೆ, ಕಲ್ಲು ಗುಹೆಯ ಮೊರೆಯ ಹೊಕ್ಕು
ರಕ್ಷಣೆಯನು ಮಾಡಿಕೊಂಡು ಕಂಡುಕೊಂಡ ಉಳಿವ ದಿಕ್ಕು
ಹಸಿದ ಹೊತ್ತಿನಲ್ಲಿ ಹಸಿಯ ಮಾಂಸವನ್ನು ಅಗಿದು ಉಂಡು
ಸಂತತಿಯನು ಬೆಳೆಸಲೆಂದು ಒಂದುಗೂಡಿ ಹೆಣ್ಣು ಗಂಡು
ಸೃಷ್ಟಿಕಾರ್ಯದಲ್ಲಿ ತಾನು ತೊಡಗಿಕೊಂಡನು;
ವಿಶಿಷ್ಟಜೀವಿ ತಾನು ಎಂದು ಅರಿವುಗೊಂಡನು!
ಬೆಂಕಿಯನ್ನು ಕಂಡುಕೊಂಡು ಆಯುಧವನು ಬಳಸಿಕೊಂಡು
ಸೂರ್ಯ ಚಂದ್ರರನ್ನು ತನ್ನ ದೇವರೆಂದು ಅಂದುಕೊಂಡು
ಗುಡುಗು, ಸಿಡಿಲು, ಗಾಳಿ, ಮಳೆಯು ಶಕ್ತಿಯೆಂದು ನಂಬಿಕೊಂಡು
ತಿಳಿದುದನು ಅರಿತುಕೊಂಡು ಅರಿಯದುದಕೆ ಹೊಂದಿಕೊಂಡು
ಯೋಚನೆಯನು ಮಾಡತೊಡಗಿ ಸಂವಹನಕೆ ಮಾತು ಕಲಿತು
ತೋಚಿದಂತೆ ಲೆಕ್ಕ ಹಾಕಿ ಚಿಂತನೆಯಲಿ ಮಿಂದು ಬಲಿತು
ಪ್ರಾಣಿಗಿಂತ ಭಿನ್ನವೆಂದು ಅರಿತುಕೊಂಡನು;
ಮನುಜಜೀವಿ ಶ್ರೇಷ್ಠ ಎಂದು ತಿಳಿದುಕೊಂಡನು!
ಜಾತಿ ಧರ್ಮ ಭೇದವಿಲ್ಲ ಮೇಲು ಕೀಳು ಎಂಬುದಿಲ್ಲ
ಗಂಡು ಹೆಣ್ಣು ಎರಡು ಜಾತಿ ಹೊರತುಪಡಿಸಿ ಬೇರೇನಿಲ್ಲ
ರಾಮ್, ರಹೀಮ್, ಏಸು, ಬುದ್ಧ ಅವನಿಗಂದು ಗೊತ್ತೇ ಇಲ್ಲ
ಗುಡಿಗಳಿಲ್ಲ ಮೂರ್ತಿಯಿಲ್ಲ ತನ್ನದೆಂಬ ಸ್ವಾರ್ಥವಿಲ್ಲ
ಧೂರ್ತತನವು ಮನದಲಿಲ್ಲ ಕೀರ್ತಿಶನಿಯು ಅವನಿಗಿಲ್ಲ
ತನ್ನ ಬದುಕಿನುಳಿವು ಹೊರತು ಬೇರೆ ಕಡೆಗೆ ಗಮನವಿಲ್ಲ
ಕಾಡಿನಲ್ಲಿ ಹುಟ್ಟಿ ಬೆಳೆದ ಆದಿಮಾನವ;
ಆಗುತಿದ್ದ ಜಗದ ಮೊದಲ ವಿಶ್ವಮಾನವ!
ಗಂಡು ತಾನು ಬೇಟೆಯಾಡಿ ಬದುಕುತಿರಲು, ಹೆಣ್ಣು ತಾನು
ಸಂತತಿಯನು ಬೆಳೆಸಿ ಉಳಿಸಿ, ಕಲಿತು ಬೇಸಾಯವನ್ನು
ದವಸ ಧಾನ್ಯವನ್ನು ಬೆಳೆದು, ಪತಿಗೆ ಹೆಗಲುಕೊಟ್ಟು ದುಡಿದು
ನಾಗರಿಕತೆ ಹೆಸರಿನಲ್ಲಿ ನಿಂತು ನದಿಯ ಬಯಲಿನಲ್ಲಿ
ಬೇಗ ಬೇಗ ಬೆಳೆಯತೊಡಗಿ, ಆಸೆಯೆಂಬ ಅಮಲಿನಲ್ಲಿ
ವೃತ್ತಿಯಾಧಾರದಲ್ಲಿ ಜಾತಿಯನ್ನು ಹುಟ್ಟುಹಾಕಿ
ಮತ್ತೆ ಬುದ್ಧಿವಂತಿಕೆಯಲಿ ಕಪಟ ಮಾಡಿ ಕಟ್ಟಿಹಾಕಿ
ದುಡಿಯುವವರ ಬೆವರಿನಿಂದ ತಾನು ಸುಖವ ಪಡಲು ಬಯಸಿ
ಬಡಿಗೆ ಹಿಡಿದು ಬೆದರಿಸುತ್ತ ಎದುರು ನುಡಿಯದಂತೆ ಇರಿಸಿ
ವಿದ್ಯೆ ಕಲಿಯಲಾಗದಂತೆ ತುಳಿದುಬಿಟ್ಟನು;
ದಡ್ಡತನಕೆ ದೂಡಿ ತಾನು ಬೆಳೆದುಬಿಟ್ಟನು!
ಕಾಡು ಕಡಿದು ನಾಡು ಕಟ್ಟಿ ಕೆರೆಯ ನುಂಗಿ ನೀರು ಕುಡಿದು
ನೋಡುನೋಡುತಿರಲು ಎದುರು ಕೈಗೆ ಎಟುಕದಂತೆ ಬೆಳೆದು
ದಾನವತೆಯ ಕ್ರೌರ್ಯದಿಂದ ಮಾನವತೆಯ ಮಣ್ಣು ಮಾಡಿ
ಹೀನತನವ ಮೆರೆಯುತವನು ದೀನರನ್ನು ಕೆಳಗೆ ದೂಡಿ
ಧೂರ್ತತನವ ಗಳಿಸಿಕೊಂಡು ಸ್ವಾರ್ಥವನ್ನು ಬೆಳೆಸಿಕೊಂಡು
ಕೀರ್ತಿಶನಿಯ ಬೆನ್ನುಬಿದ್ದು ಅರ್ಥವೇ ಪ್ರಧಾನವೆಂದು
ಮನುಜಕುಲದ ಮಾನವತೆಯ ತೊರೆದುಬಿಟ್ಟನು;
ಜನರ ಹಿತವ ಲೋಕಹಿತವ ಮರೆತುಬಿಟ್ಟನು!
ನೆಲವ ಅಗೆದು ರಂದ್ರ ಕೊರೆದು ನೆಲದ ಜಲವ ಮೇಲೆ ಸೆಳೆದು
ನೆಲವ ನಾಶಮಾಡುವಂಥ ಕೊಳೆಯ ಸುರಿದು ಬೆಳೆಯ ಬೆಳೆದು
ಭೂಮಿ ಅಗೆದು ಖನಿಜ ತೆಗೆದು ಚಂದ್ರನೆಡೆಗೆ ನೆಗೆದು, ನಡೆದು
ನೆರೆಹೊರೆಯನು ಅರಿತುಕೊಳದೆ ಕಾಲುಕೆರೆದು ಜಗಳ ತೆಗೆದು
ಭೂಮಿಯೊಡಲು ಬರಿದು ಮಾಡಿ ಬೇರೆ ಗ್ರಹದ ಕಡೆಗೆ ನೋಡಿ
ಅಂಗಳದಲಿ ಆಟವಾಡಿ ಮಂಗಳನಲಿ ಮನೆಯಮಾಡಿ
ನೆಲೆಯನೂರಿ ಬದುಕಲೆಂಬ ಕನಸು ಕಂಡನು;
ತಲೆಯ ತುಂಬ ಕನಸು ತುಂಬಿ ಮರುಳುಗೊಂಡನು!
ಪ್ರಕೃತಿಯಲ್ಲಿ ಹುಟ್ಟಿದಂಥ ಕೋಟಿಕೋಟಿ ಜೀವದಲ್ಲಿ
ಸುಕೃತದಿಂದ ಜನಿಸಿದಂಥ ಮನುಜನೆಂಬ ಜೀವಿಯಲ್ಲಿ
ಪ್ರಕೃತಿ ನಾಶ ಮಾಡುವಂಥ ಹೀನಗುಣವು ಮನೆಯ ಮಾಡಿ
ವಿಕೃತಮನದಿ ನ್ಯಾಯ ನೀತಿ ಧರ್ಮವನ್ನು ಮರೆಗೆ ದೂಡಿ
ಮಾನಿನಿಯರ ಮಧುರ ಮನಕೆ ಹೀನತೆಯಲಿ ದ್ರೋಹ ಬಗೆದು
ಮಾನವ ಮಹನೀಯನೆಂಬ ಮಾತುಗಳಿಗೆ ಮಸಿಯ ಬಳಿದು
ಮೋಸ, ಕಪಟ ಅರಿಯದಿದ್ದ ಆದಿಮಾನವ;
ಮೋಸಗೊಳಿಸಿ ಆಗಿಬಿಟ್ಟ ಭೋಗಮಾನವ !!
*****