ನಮ್ಮ ಮನೆಯಲೆ ಹುಟ್ಟಿ ನಮ್ಮನೆಯ ಮಗಳಾಗಿ
ಪ್ರೀತಿ ವಾತ್ಸಲ್ಯಗಳ ನಮಗೆ ಉಣಿಸಿ
ನಮ್ಮ ಸುಖದುಃಖಗಳ ನಡುವೆ ನೀನು ನಲಿದಾಡಿ
ಸಂತಸದಿ ನಗುನಗುತ ಬೆಳೆದು ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೆ ||
ಸುಳ್ಳು ತಟವಟ, ಮೋಸ ವಂಚನೆಯ ಅರಿಯದಿಹ
ಮುಗ್ಧ ಬಾಲೆಯು ನೀನು ಪಾಪದವಳು
ಜಗದ ಜಂಜಡವೆಲ್ಲ ನನಗೇಕೆ ಬೇಕೆಂಬ
ನೈರಾಶ್ಯ ಭಾವದಲಿ ಮುಗುಳಾಗಿ ಬಂದವಳು
ನೀ ನಲ್ಲವೇ ನಮ್ಮ ಮಗಳಲ್ಲವೇ ||
ಹಿಂಡು ಮಕ್ಕಳ ಜೊತೆಗೆ ದುಂಡು ಮಲ್ಲಿಗೆಯಾಗಿ
ಅವರೊಡನೆ ಆಡುತ್ತ ಅರಳಿನಿಂತೆ
ಪ್ರೀತಿ ವಾತ್ಸಲ್ಯಗಳೆ ಮೈ ತುಂಬಿ ನೀನವರ
ಮುತ್ತು ಮಳೆಗೈಯುತಲೆ ಬೆಳೆದು ನಿಂತವಳು
ನೀನಲ್ಲವೇ ನಮ್ಮ ಮಗಳಲ್ಲವೇ ||
ಬೆಳೆದಂತೆ ಕೊಡುಗನ್ನೆ ನೀನಾದರೂ ನಿನ್ನ
ಮುಗ್ಧ ಭಾವವೂ ಇನ್ನೂ ಮಾಸಲಿಲ್ಲ
ನನ್ನವರು, ಅನ್ಯರು ಎಲ್ಲರೂ ಒಂದೆಂದು
ಆತ್ಮೀಯತೆಯ ಲತೆಯ ಬೆಸೆದ ಹುಡುಗಿ
ನೀನಲ್ಲವೇ ನಮ್ಮ ಮಗಳಲ್ಲವೇ ||
ಸ್ವಾತಿ ಮಳೆ ನೀರು ಕುಡಿದು ಸ್ವಾತಿ ಮುತ್ತಾದವಳು
ಮಾತಿನಲಿ ಮುತ್ತುಗಳ ಸುರಿಸಿದಳು
ನಗೆನಗೆಯ ನಡುನಡುವೆ ಬಿಡಿಮೊಲ್ಲೆಗಳ ಕೆಡಹಿ
ಸೊಂಪಾಗಿ ಕಂಪಾಗಿ ಆಡಿ ಬೆಳೆದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||
ದುಷ್ಟ ಕಾಮುಕ ಕೂಟ ಬೇಟೆ ಬಾಣಕೆ ಸಿಲುಕಿ
ಅಸಹಾಯಕತೆಯಿಂದ ನರಳಿದವಳು
ನಿನ್ನ ಆ ಅಳು ಅಳುವು ಕಾಡು ರೋಧನವಾಗಿ
ಸೊಪ್ಪಾಗಿ ನೆಲನಪ್ಪಿ ಸತ್ತು ಹೋದವಳು
ನೀನಲ್ಲವೇ ನಮ್ಮ ಮಗಳಲ್ಲವೇ ||
ಇನ್ನೆಲ್ಲಿ ಆ ನಗುವು! ಇನ್ನೆಲ್ಲಿ ಆ ಚೆಲುವೆ |
ಮತ್ತೆಲ್ಲಿ ಆ ಮುದ್ದು ನಡೆ ನುಡಿಗಳು |
ಅವಳಿಲ್ಲದೇ ಬಾಳ್ವೆ ಬದುಕು ದುರ್ದೈವಿಗಳು
ನಾವಲ್ಲವೇ ನಮ್ಮ ಬಾಳಲ್ಲವೇ ||
ನಿನ್ನ ಕಥೆ ಮರುಹುಟ್ಟು ಬಾಳುವೆಯ
ನೀರಸ ಮೌನ ತಳೆದ ಗೆಳತಿಯರು
ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಾ ಬಾಳಲಿ
ಬೆಳಕು ಚೆಲ್ಲಿ ಸದಾ ನಮ್ಮ ಮನೆಯ ಬೆಳಕಾಗಲಿ ||
*****