ಇಂದಿನಿಂದ ನೂರು ವರ್ಷದ ನಂತರ
ನನ್ನ ಕವಿತೆಯನ್ನು ಓದುವಾತ
ನೀನು ಯಾರು..
ಹೃದಯದ ಒಲವಿನ ಲತೆಯಲ್ಲಿ
ಚಿಗುರಿರುವ ವಸಂತದ ಬೆಳಗಿನ
ಸರಳವಾದ ಸಖ್ಯವನ್ನು
ನಿನಗೆ ಮುಟ್ಟಿಸಲು ಅನುವಾದದಲ್ಲಿ
ಹೂವಿನ ಗಂಧ
ಹಕ್ಕಿಯ ಹಾಡಿನ ಛಂದ
ಇಂದಿನ ಬಣ್ಣದ ಹೊಳಪು
ನೂರು ವರ್ಷದ ನಂತರ
ನಿನಗೆ ತಲಪ ಬಹುದೆ….
ಒಮ್ಮೆ ನಿನ್ನ ಬಾಲ್ಕನಿಯ
ದಕ್ಷಿಣ ಭಾಗದ ಕಿಟಕಿಯನು ತೆರೆದು
ಉದ್ದಕ್ಕೆ ಹರಡಿರುವ
ಬಯಲನು ನಿರುಕಿಸು
ದೀರ್ಘ ಖಯಾಲಿನಲ್ಲಿ ಮುಳುಗಿ
ಜಗದ ಹೃದಯ ತಂತುವನ್ನು ಮೀಂಟಲು
ದೂರದ ಯಾವುದೋ ಸಗ್ಗದಿಂದ
ತೇಲಿ ಬರುವ ಪರಮ ಸುಖದ
ಕುರಿತು ಯೋಚಿಸು,
ನೂರು ವರ್ಷದ ನಂತರ
ತರುಣ ವಸಂತದ ದಿನದ
ಸ್ವಚ್ಛಂದ ಉತ್ಸಾಹ, ಗಲಭೆ
ಮತ್ತು
ಅರಳಿದ ಹೂವಿನ ಮತ್ತ ಕಂಪನ್ನು
ರೆಕ್ಕೆಗಳಲ್ಲಿ ಹೊತ್ತು
ಭೂಮಿಯನ್ನು ಬಣ್ಣಗೊಳಿಸಲು
ಮುನ್ನುಗ್ಗುವ ಮಲಯಾನಿಲದ
ಸುಕುಮಾರ ಸ್ಪಂದನವನ್ನು
ನೂರು ವರ್ಷದ ಮೊದಲು
ಇಂದೆ ಯೋಚಿಸು.
ಜ್ವಲಂತ ಹೃದಯದ ಹಾಡಿನಲ್ಲಿ
ತನ್ನನ್ನು ಸಂಪೂರ್ಣ ಹುದುಗಿಸಿ
ಹೂವು ಅರಳುವಂತೆ
ಕವಿ
ತನ್ನ ಮಧುರ ಪ್ರೇಮದ ಸೊತ್ತನ್ನು
ನೂರು ವರ್ಷದ ಮೊದಲ
ಒಂದು ಮುಂಜಾವಿನಲಿ
ಹಾಡಿದಂತೆ ಭ್ರಮಿಸು,
ಅದನ್ನೆ ನೂರು ವರ್ಷದ ನಂತರ
ಒಲವಿನಿಂದ ಹಾಡುವ
ಹೊಸ ಕವಿ ಯಾರು
ಅವನಿಗೆ ಹೊಸ ವಸಂತದ
ಶುಭ ಸಂದೇಶವನ್ನು
ನನ್ನ ಪರವಾಗಿ ಮುಟ್ಟಿಸು
ಎಲೆ ಕವಿಯೆ, ನನ್ನ ಹಾಡು
ನಿನ್ನ ಎದೆಯ ಬಡಿತದ ಜೊತೆಗೆ
ತುಂಬಿಯ ಗುಂಜನದಲ್ಲಿ
ಎಲೆಗಳ ಕಲರವದಲ್ಲಿ
ಅನುರಣಿಸಲಿ……
ನೂರು ವರ್ಷದ ನಂತರ!
*****
ಮೂಲ: ರವಿಂದ್ರನಾಥ ಠಾಗೋರ