ರೋಷದಲಿ ಕುದಿದನು ರುಧಿರವ
ಶಲ್ಯ ಭೂಪತಿಯನ್ನು ಕರ್ಣ ಸಾರಥ್ಯ ವಹಿಸುವಂತೆ ಒಡಂಬಡಿಸಲು ತನ್ನಿಂದ ಸಾಧ್ಯವಾದುದಕ್ಕೆ ಭೀಷ್ಮರಿಗೆ ಅಮಿತಾನಂದವಾಗಿತ್ತು. ಎದೆಯ ನೋವು ಮರೆತು ಹೋಗಿ ರಾತ್ರಿ ಚೆನ್ನಾಗಿ ನಿದ್ದೆ ಬಂದಿತ್ತು. ಯುದ್ಧ ಹದಿನೇಳನೆಯ ದಿನವನ್ನು ಪ್ರವೇಶಿಸಿದೆ. ಇಂದು ಹಸ್ತಿನಾವತಿಯ ಮುಂದಿನ ಸಂರಕ್ಷಕ ಕರ್ಣನೋ, ಅರ್ಜುನನೋ ಎಂಬುದು ಇತ್ಯರ್ಥವಾಗುತ್ತದೆ. ಇಂದು ರಾತ್ರಿಯಾಗುವಾಗ ಕರ್ಣಾರ್ಜುನರಲ್ಲಿ ಒಬ್ಬನಿರುವುದಿಲ್ಲವೆಂದು ಅವರ ಮನಸ್ಸು ಹೇಳತೊಡಗಿತು. ಇಬ್ಬರಲ್ಲಿ ಯಾರೇ ಸತ್ತರೂ ಮತ್ತೆ ಯುದ್ಧದಲ್ಲಿ ಆಸಕ್ತಿಯಿರುವುದಿಲ್ಲ. ಅಲ್ಲಿಗೆ ವಸ್ತುಶಃ ಯುದ್ಧ ನಿಂತಂತೆಯೇ. ಯೋಚಿಸುತ್ತಿರುವಂತೆ ಮನಸ್ಸಿನ ಪ್ರಫುಲ್ಲತೆ ಮಾಯವಾಯಿತು. ಈವರೆಗೆ ಮರೆಯಾದಂತಿದ್ದ ಎದೆಯ ನೋವು ಮತ್ತೆ ಕಾಣಿಸಿಕೊಂಡಿತು. ಒಮ್ಮೆ ಈ ಬಾಣ ಅದಾಗಿಯೇ ಬಿದ್ದು ಹೋಗಬಾರದೆ? ಹಸ್ತಿನಾವತಿಯ ಸಂರಕ್ಷಕ ಆತ್ಮಹತ್ಯೆ ಮಾಡಿಕೊಂಡ ಎಂಬ ಲೋಕಾಪವಾದ ಬಾರದಿದ್ದರೆ ಸಾಕಪ್ಪಾ ಎಂದು ಅವರು ಅಲವತ್ತುಕೊಂಡರು.
ಶಿಖಂಡಿಯ ಬಾಣದಿಂದಾಗಿ ಮಂಚದಲ್ಲಿ ಪವಡಿಸಿ ಏಳು ದಿನಗಳಾಗಿದ್ದವು. ಏಳಲಾಗದೆ ಅದೇ ಸ್ಥತಿಯಲ್ಲಿ ಮಲಗಿ ಮಲಗಿ ಮೈಯಿಡೀ ಜಡ್ಡುಗಟ್ಟಿತ್ತು. ಪ್ರತೀಹಾರಿಗಳು ಯಾವುದಕ್ಕೂ ಅಸಹ್ಯ ಪಡದೆ ಸೇವೆಗೈಯ್ಯುತ್ತಿರುವುದೊಂದೇ ಸಮಾಧಾನ. ದ್ರವಾಹಾರ ಮತ್ತು ಹಣ್ಣುಹಂಪಲು ಬಿಟ್ಟರೆ ಬೇರೇನೂ ಬೇಕೆನಿಸುವುದಿಲ್ಲ. ವೈದ್ಯರು ರಾಜಸೇವೆ ಮಾಡುತ್ತಿದ್ದಾರೆ. ಆದರೆ ಪ್ರಯೋಜನವೇನಿಲ್ಲವೆನ್ನುವುದು ಅವರಿಗೆ ಅಂದೇ ಗೊತ್ತಾಗಿತ್ತು. ಸಾವು ಯಾವ ಕ್ಷಣದಲ್ಲೂ ಸಂಭವಿಸಬಹುದು. ಹಾಗಂತ ಶುಶ್ರೂಷೆ ನಿಲ್ಲಿಸುವಂತಿಲ್ಲ. ದುರ್ಯೋಧನನ ಮನಃಶಾಂತಿಗಾದರೂ ಇದು ಮುಂದುವರೆಯಬೇಕು. ವಿನಾ ದೈನ್ಯೇನ ಜೀವಿತಂ; ಅನಾಯಾಸೇನ ಮರಣಂ. ಎಲ್ಲರೂ ಬಯಸುವುದು ಇದನ್ನೇ. ಜೀವಿತದ ಕೊನೆಯ ದಿನಗಳಲ್ಲಿ ಎಲ್ಲರಿಗೂ ಹೊರೆಯಾಗುತ್ತಿದ್ದೇನೆ ಎಂಬ ಭಾವ ಎದೆ ನೋವಿಗಿಂತಲೂ ಹೆಚ್ಚಾಗಿ ಕಾಡತೊಡಗಿತು.
ಬೆಳಗಿನ ದ್ರವಾಹಾರ ಮುಗಿಸುವಷ್ಟರಲ್ಲಿ ಕರ್ಣನ ಆಗಮನವಾಯಿತು. ಇಷ್ಟು ಹೊತ್ತಿಗೆ ಈವರೆಗೆ ಹೀಗೆ ಯಾರೂ ಬಂದಿರಲಿಲ್ಲ. ಭೀಷ್ಮರಿಗೆ ಆಶ್ಚರ್ಯವಾಯಿತು. ಈಗ ಇವನ್ಯಾಕೆ ಬಂದ? ಏನನ್ನು ಹೇಳಬೇಕೆಂದಿದ್ದಾನೆ ಇವ?
ಕರ್ಣನ ಮುಖದಲ್ಲಿ ಎಂದಿನ ಉತ್ಸಾಹವಿರಲಿಲ್ಲ. ಬಂದವನೇ ವಿಷಯವನ್ನು ನೇರವಾಗಿ ಪ್ರಸ್ತಾಪಿಸಿದ. “ತಾತಾ, ನಿಮಗೊಂದು ಕೃತಜ್ಞತೆ ಹೇಳಿ ಹೋಗೋಣವೆಂದು ಬಂದೆ. ನಿನ್ನೆ ಹೇಳಲಾಗಲಿಲ್ಲ. ಇಂದು ಕರ್ಣನ ಬಾಳಲ್ಲಿ ಅತ್ಯಂತ ನಿರ್ಣಾಯಕ ದಿನ. ಸೂತ ಸುತನ ಸೂತನಾಗಿ ಕ್ಷತ್ರಿಯ ಭೂಪತಿಯೊಬ್ಬ ಕುರುಕ್ಷೇತ್ರದಲ್ಲಿ ರಥ ಓಡಿಸಿದನೆನ್ನುವುದು ಸಮಸ್ತ ಆರ್ಯಾವರ್ತಕ್ಕೆ ಎಂಥ ಸಂದೇಶವನ್ನು ನೀಡಲಿದೆ ಎನ್ನುವುದನ್ನು ನೆನೆದು ಪುಳಕಿತನಾಗಿದ್ದೇನೆ. ಶಲ್ಯ ಭೂಪತಿಯನ್ನು ಸಾರಥ್ಯಕ್ಕೆ ಒಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲವೆಂದುಕೊಂಡಿದ್ದೆ. ನಿಮ್ಮ ಮಾತಿಗೆ ಹೇಗೆ ಬೆಲೆಕೊಟ್ಟ! ನೀವು ಮಹಾನ್ ವ್ಯಕ್ತಿ ತಾತಾ”.
ಕರ್ಣನ ಮಾತಿನಿಂದ ಭೀಷ್ಮರ ಮುಖದಲ್ಲಿ ಮಂದಹಾಸ ಜಿನುಗಿತು. ಮಗೂ, ಶಲ್ಯ ಭೂಪತಿ ನನ್ನ ಮಾನ ಉಳಿಸಿದ. ಒಂದು ವೇಳೆ ಕರ್ಣನ ಸಾರಥ್ಯ ಮಾಡುವುದಿಲ್ಲವೆಂದು ಅವನು ಹೇಳುತ್ತಿದ್ದರೆ ನಾನು ಏನು ಮಾಡಲು ಸಾಧ್ಯವಿತ್ತು? ಶಲ್ಯನೇನೋ ಒಪ್ಪಿದ. ಹಿರಿಯರ ಮಾತಿಗೆ ಮನ್ನಣೆ ಕೊಡಬೇಕೆಂಬ ಸಂಸ್ಕಾರಯುಕ್ತ ನಡವಳಿಕೆ ಅದು. ಆದರೆ ನಮ್ಮ ದುರ್ಯೋಧನನನ್ನು ನೋಡು. ನನ್ನ ಒಂದೇ ಒಂದು ಮಾತನ್ನಾದರೂ ಕೇಳಿದನಾ? ಅವನಲ್ಲಿ ಶಲ್ಯ ಭೂಪತಿಯಷ್ಟು ಸಂಸ್ಕಾರವಿರುತ್ತಿದ್ದರೆ ಈ ಯುದ್ಧವೇ ನಡೆಯುತ್ತಿರಲಿಲ್ಲ. ಹೋಗಲಿ ಬಿಡು. ಈಗ ಇವನ್ನೆಲ್ಲಾ ಮಾತಾಡಿ ಪ್ರಯೋಜನವೇನಿಲ್ಲ. ಆದರೆ ನಿನ್ನನ್ನು ಒಂದು ಪ್ರಶ್ನೆ ಕೇಳಬೇಕೆಂದಿದ್ದೇನೆ. ಶಲ್ಯ ಭೂಪತಿ ನಿನ್ನ ಸಾರಥ್ಯವನ್ನು ಒಪ್ಪಿಕೊಳ್ಳದಿರುತ್ತಿದ್ದರೆ ನೀನೇನು ಮಾಡುತ್ತಿದ್ದೆ ಮಗೂ?”
ನಿರಾಶೆಯ ಸ್ವರದಲ್ಲಿ ಕರ್ಣನೆಂದ: “ಬೇರೇನು ಮಾಡಲು ಸಾಧ್ಯವಿತ್ತು ತಾತಾ? ಅನ್ಯ ಸಾರಥಿಯನ್ನು ನಾನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಿತ್ತು. ಶಲ್ಯಭೂಪತಿ ನಿರಾಕರಿಸುತ್ತಿದ್ದರೆ ಇಂದಿನ ಯುದ್ಧದ ಫಲಿತಾಂಶವನ್ನು ಕೇಳುವ ಅಗತ್ಯವೇ ಉದ್ಭವಿಸುತ್ತಿರಲಿಲ್ಲ”. ಕರ್ಣನ ದನಿಯಲ್ಲೀಗ ಉತ್ಸಾಹ ಉಕ್ಕಿತು. “ಈಗ ನೋಡಿ ತಾತಾ ನೀವಿಂದು ಕರ್ಣನ ವಿಜಯದ ವಾರ್ತೆಯನ್ನು ಕೇಳುತ್ತೀರಿ. ನನಗೀಗ ಹೊಸ ಬಲ ಬಂದಂತಾಗಿದೆ. ಆ ಅರ್ಜುನನ ಕತೆ ಮುಗಿಸಿಯೇ ನಾನು ಮತ್ತೆ ನಿಮ್ಮನ್ನು ನೋಡುವುದು”.
ಭೀಷ್ಮರಿಗೆ ಕರ್ಣನ ಬಗ್ಗೆ ಕನಿಕರ ಉಕ್ಕಿತು. ಜೀವನದಲ್ಲಿ ಇವನಿಗೆ ಇಂತಹ ಸಂಭ್ರಮದ ಕ್ಷಣಗಳು ಹೆಚ್ಚು ದೊರೆತಿರಲಾರವು. ಶಲ್ಯ ಭೂಪತಿ ಸಹಕರಿಸಿದರೆ ಇವನಿಂದು ಅರ್ಜುನನನ್ನು ಕೊಲ್ಲುವ ಸಾಧ್ಯತೆಗಳಿವೆ. ಆಗ ತಾನಿವನ ಮೂಲವನ್ನು ದುರ್ಯೋಧನನಿಗೆ ಹೇಳಬೇಕಾಗುತ್ತದೆ. ಕರ್ಣನಿಗೆ ಹಸ್ತಿನಾವತಿಯ ಸಿಂಹಾಸನವನ್ನೇರುವ ಸೌಭಾಗ್ಯ ದೊರೆಯುತ್ತದೆ. ಬದಲಾಗಿ ಇಂದಿನ ಯುದ್ಧದಲ್ಲಿ ಕರ್ಣನೇ ಸತ್ತು ಹೋದರೆ ಯುಧಿಷ್ಠರ ಸಿಂಹಾಸನವೇರುತ್ತಾರೆ. ಏನೇ ಆದರೂ ದುರ್ಯೋಧನನಿಗೆ ಸಿಂಹಾಸನಾಧೀಶ್ವರನಾಗುವ ಭಾಗ್ಯವಿಲ್ಲ!
ಸಾಂತ್ವನದ ಸ್ವರದಲ್ಲಿ ಭೀಷ್ಮರೆಂದರು: “ಮಗೂ ನಿನ್ನ ಆಶಯ ಈಡೇರಲಿ. ಜೀವನದಲ್ಲಿ ನಿನಗೂ ಆನಂದ ಪಡುವ ಕಾಲ ಬರಲಿ ಎಂದು ಹಾರೈಸುವವ ನಾನು. ಆದರೆ ಮಗೂ, ಅರ್ಜುನನನ್ನು ಅಷ್ಟು ಸುಲಭದಲ್ಲಿ ಕೊಲ್ಲಲು ಸಾಧ್ಯವೆ? ಪ್ರಾಮಾಣಿಕವಾಗಿ ಹೇಳು”.
ಕರ್ಣನೆಂದ: “ಯುದ್ಧವೆಂದ ಮೇಲೆ ನಾನು ಸೋಲಿಗೂ ಸಿದ್ಧನಾಗಿಯೇ ಇರಬೇಕಾಗುತ್ತದೆ. ಇಂದು ನಾನು ಸೋತರೆ ಅದು ಬರಿಯ ಸೋಲಲ್ಲ, ಸಾವು. ಸೋತ ಕರ್ಣನನ್ನು ನೀವು ಜೀವಸಹಿತ ಕಾಣಲಾರಿರಿ ತಾತಾ. ಎಲ್ಲಾ ಸಿದ್ಧತೆ ಮಾಡಿಕೊಂಡು ನಿಮಗೊಂದು ಮಾತು ಹೇಳಿ ಹೋಗೋಣವೆಂದೇ ಬಂದೆ”.
ಕರ್ಣನ ವಾಸ್ತವಿಕ ಮನೋಧರ್ಮ ಭೀಷ್ಮರಿಗಿಷ್ಟವಾಯಿತು. ಆಪ್ಯಾಯ ಮಾನತೆಯಿಂದ ಅವರು ಪ್ರಶ್ನಿಸಿದರು. “ಹೇಳು ಮಗೂ, ಏನದು?”
ಕರ್ಣ ಭೀಷ್ಮರತ್ತ ಬಾಗಿ ಮೆಲುದನಿಯಲ್ಲಿ ಹೇಳಿದ: “ತಾತಾ, ಹುಟ್ಟಿನಲ್ಲಿ ಯಾವ ಸಂತೋಷವನ್ನೂ ಪಡೆಯಲಾಗದವ ನಾನು. ಈಗ ಸಾವಿನಲ್ಲಿ ಸಂತೋಷ ಪಡಲಿದ್ದೇನೆ. ಪರಮ ಮಿತ್ರನಿಗಾಗಿ ಪ್ರಾಣ ಸಮರ್ಪಣದ ಮಹೋನ್ನತ ಸಂತೋಷವದು. ನಾನು ಸತ್ತ ಮೇಲೆ ದುರ್ಯೋಧನ ಬದುಕಿ ಉಳಿಯಲಾರ. ಹುಟ್ಟಿದಾಗ ನದಿಗೆಸೆಯಲ್ಪಟ್ಟ ಈ ದೇಹ ಪ್ರಾಣ ಹೋದ ಮೇಲೆ ಅನಾಥ ಶವವಾಗಿ ನರಿ ನಾಯಿ ಹದ್ದುಗಳ ಪಾಲಾಗಬಾರದು. ನನ್ನ ಶವಸಂಸ್ಕಾರ ಸರಿ ಯಾಗಿರಬೇಕು ತಾತಾ. ದಯವಿಟ್ಟು ಈ ದೇಹಕ್ಕೆ ಆ ಪಾಂಡವರು ಕೊಳ್ಳಿಯಿಡದಂತೆ ನೋಡಿ ಕೊಳ್ಳಿ. ಇದುವೇ ನನ್ನ ಕೊನೆಯಾಸೆ”.
ಭೀಷ್ಮರಿಗೆ ಪರಮಾಶ್ಚರ್ಯವಾಯಿತು. ಕರ್ಣನ ಮುಖದಲ್ಲಿ ಸಂತೋಷವಿರುವುದನ್ನು ಅವರು ಗಮನಿಸಿದರು. ಅದು ಸಲಹಿದ ಒಡೆಯ ದುರ್ಯೋಧನನಿಗಾಗಿ ಪ್ರಾಣತ್ಯಾಗ ಮಾಡುವ ಧನ್ಯತೆಯ ಭಾವ. ಈವರೆಗೆ ವಿಜಯದ ಬಗ್ಗೆ ಕನವರಿಸಿದ ಕರ್ಣ ಇದ್ದಕ್ಕಿದ್ದ ಹಾಗೆ ಸಾವಿಗೆ ಮುಟ್ಟಿದ್ದಾನೆ! ಏನಾಗಿದೆ ಇವನಿಗೆ? ಕದನಕ್ಕೆ ಮೊದಲೇ ಆತ್ಮ ವಿಶ್ವಾಸ ಕಳಕೊಂಡರೆ ಇವ ಏನನ್ನು ಸಾಧಿಸಿಯಾನು?
ಆತಂಕದಿಂದ ಭೀಷ್ಮರು ಪ್ರಶ್ನಿಸಿದರು: “ಇದೇನು ಮಗೂ ಇದ್ದಕ್ಕಿದ್ದ ಹಾಗೆ ನಿನ್ನ ಮನೋಭಾವ ಹೀಗೆ ಬದಲಾಯಿತು? ನಿನಗೆ ಶಲ್ಯಭೂಪತಿ ಸಾರಥಿಯಾಗಿ ಸಿಕ್ಕಿದ ಮೇಲೂ ವಿಜಯದ ಭರವಸೆಯಿಲ್ಲವೆ?”
ಕರ್ಣ ವಿಷಾದದ ನಗೆ ನಕ್ಕ: “ಇದು ವಿಜಯಕ್ಕಾಗಿ ನನ್ನದೊಂದು ಪ್ರಯತ್ನ ಮಾತ್ರ ತಾತಾ. ನಿಜ ಹೇಳಬೇಕೆಂದರೆ ನನಗೆ ವಿಜಯದ ಭರವಸೆಯೇನಿಲ್ಲ. ನಿಮ್ಮಿಂದ, ಗುರುದ್ರೋಣರಿಂದ ಸಾಧಿಸಲಾಗದ್ದನ್ನು ನಾನು ಸಾಧಿಸುತ್ತೇನೆಂದರೆ ಅದು ಹಮ್ಮು ಮಾತ್ರ. ಆದರೂ ದುರ್ಯೋಧನನಿಗಾಗಿ ಒಂದು ಫಲಾಪೇಕ್ಷಯಿಲ್ಲದ ಪ್ರಯತ್ನ ಮಾಡುತ್ತಿದ್ದೇನೆ”
ಭೀಷ್ಮರಿಗೆ ಹೇಗಿದಕ್ಕೆ ಪ್ರತಿಕ್ರಿಯಿಸಬೇಕೆಂದು ಹೊಳೆಯಲಿಲ್ಲ. ಮಾತು ಎಲ್ಲೋ ಹಾದಿ ಬಿಟ್ಟಿದೆಯೆಂದೆನಿಸಿ ಅವರೆಂದರು: “ಮಗೂ, ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಆದರೆ ಪಾಂಡವರು ನಿನ್ನ ಶವಸಂಸ್ಕಾರ ಮಾಡಬಾರದೆಂದು ಹೇಳಿದ್ದೀಯಲ್ಲಾ? ಏಕೆಂದು ಕೇಳಬಹುದೆ?”
ಕರ್ಣ ನಿರ್ವಿಕಾರ ಚಿತ್ತನಾಗಿ ಹೇಳಿದ: “ತಾತಾ, ಈ ಕ್ಷಣದಲ್ಲೂ ನಾನ್ಯಾರೆಂಬುದು ಪಾಂಡವರಿಗೆ ತಿಳಿದಿಲ್ಲ. ನಾನು ಸತ್ತ ಮೇಲೆ ಕುಂತಿದೇವಿ ರಹಸ್ಯ ಬಯಲು ಮಾಡದಿರಲಾರಳು. ಆಗ ಪಾಂಡವರು ನನ್ನ ಅಂತ್ಯಸಂಸ್ಕಾರವನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ನನಗೆ ಪಾಂಡವರನ್ನು ನನ್ನ ಸಹೋದರರೆಂದು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಅಮ್ಮ ಹೇಳಿದಳೆಂದು ಪಾಂಡವರು ನನ್ನನ್ನು ಅಣ್ಣನೆಂದು ಗೌರವಿಸುವುದುಂಟೆ? ಲೋಕ ಸಂಪ್ರೀತಿಗಾಗಿ, ಒಲ್ಲದ ಕಾರ್ಯವನ್ನು ಅವರಿಂದ ಮಾಡಿಸಲು ನನ್ನ ಮನಸ್ಸು ಒಡಂಬಡುವುದಿಲ್ಲ. ನನ್ನ ಮಗನಿದ್ದಾನೆ, ವೃಷಕೇತು. ಚಿಕ್ಕವನೆಂದು ಅವನನ್ನು ನಾನು ಯುದ್ಧರಂಗ ಪ್ರವೇಶಿಸಲು ಬಿಟ್ಟಿಲ್ಲ. ಅಲ್ಲದೆ ತಾತಾ, ಈ ಮಹಾ ಯುದ್ಧದಲ್ಲಿ ಕೌರವಪಾಂಡವರೆಲ್ಲರೂ ಸತ್ತು ಹೋದರೆ ಒಬ್ಬನಾದರೂ ಕೊಳ್ಳಿ ಇಡುವವ ಬೇಕಲ್ಲಾ? ಅವನಿಂದಲೇ ನನ್ನ ಅಂತ್ಯಸಂಸ್ಕಾರ ಮಾಡಿಸಬೇಕು ತಾತಾ”.
ಈ ಮಾತಿಗೆ ಏನು ಹೇಳಬೇಕೆಂದು ಭೀಷ್ಮರಿಗೆ ತೋಚಲಿಲ್ಲ. ಅವರು ಅಂತರ್ಮುಖಿಯಾಗಿ ಯೋಚಿಸತೊಡಗಿದರು. ಯಾರು ಮೊದಲು ಸಾಯುತ್ತಾರೆಂದು ಯಾರಿಗೆ ಗೊತ್ತು? ಕರ್ಣ ಬದುಕುಳಿದು ಅವನಿಗಿಂತ ಮೊದಲೇ ನಾನು ಸತ್ತು ಹೋದರೆ ನನ್ನ ಅಂತ್ಯಸಂಸ್ಕಾರ ಮಾಡುವವರು ಯಾರು? ಇಷ್ಟಕ್ಕೂ ಸರಿಯಾಗಿ ಬಾಳಿ ಬದುಕಲು ಸಾಧ್ಯವಾಗದ ನಾನಾಗಲೀ, ಕರ್ಣನಾಗಲೀ ಸತ್ತ ಬಳಿಕ ಈ ಶರೀರಕ್ಕೆ ಸಂಪ್ರದಾಯ ಸಮ್ಮತ ಕ್ರಮದಲ್ಲಿ ಸಂಸ್ಕಾರವಾಗ ಬೇಕೆಂದು ಯಾಕೆ ಬಯಸಬೇಕು? ಉಸಿರು ನಿಂತ ಹಾಳು ದೇಹಕ್ಕೆ ಏನಾದರೇನು?
ಆದರೆ ಈ ಕರ್ಣ ಒಂದು ಒಳ್ಳೆಯ ಕೆಲಸ ಮಾಡಿದ್ದಾನೆ. ಮಗ ವೃಷಕೇತು ಯುದ್ಧರಂಗಕ್ಕೆ ಇಳಿಯದಂತೆ ನೋಡಿಕೊಂಡಿದ್ದಾನೆ. ಅಭಿಮನ್ಯು ಹೋದರೇನಂತೆ? ಸಮಸ್ತ ಕೌರವರು ಮತ್ತು ಪಾಂಡವರು ನಾಶವಾದರೇನಂತೆ? ಒಬ್ಬ ವೃಷಕೇತು ಇರುತ್ತಾನೆ. ಅವನೊಬ್ಬ ಸಾಕು ಕುರು ಸಾಮ್ರಾಜ್ಯದ ರಕ್ಷಣೆಗೆ. ಕರ್ಣನ ಕೃತ್ಯ ಸ್ವಾರ್ಥದಂತೆ ಗೋಚರಿಸಬಹುದು. ಆದರೆ ಕರ್ಣ ತುಂಬಾ ಯೋಚಿಸಿದ್ದಾನೆ. ಮುಂದಾಲೋಚನೆಯಿಂದ ಕುರು ಸಾಮ್ರಾಜ್ಯಕ್ಕೊಬ್ಬ ಸಂರಕ್ಷಕನನ್ನು ಕೊಟ್ಟಿದ್ದಾನೆ. ಇದುವೇ ಇವನ ಮಹಾನ್ ಸಾಧನೆ.
ಅಭಿಮಾನಪೂರಿತ ಸ್ವರದಲ್ಲಿ ಭೀಷ್ಮರೆಂದರು: “ಮಗೂ, ನೀನಿನ್ನು ಯಾವುದರ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ನಿನ್ನಿಚ್ಚೆಯನ್ನು ನೆರವೇರಿಸುತ್ತೇನೆ. ನಿಶ್ಚಿಂತೆಯಿಂದ ನಿನ್ನ ಉದ್ದೇಶ ಸಾಧನೆಗಾಗಿ ಹೋರಾಡು. ಕುರು ಸಾಮ್ರಾಜ್ಯದ ಸಂರಕ್ಷಕನೆಂದು ಇತಿಹಾಸದಲ್ಲಿ ನೀನು ದಾಖಲಾಗುತ್ತೀಯೇ”.
ಕರ್ಣ ತನ್ನ ಹಣೆಯನ್ನು ಭೀಷ್ಮರ ಪಾದಗಳಿಗೆ ಚಾಚಿದ. ಅವನ ಕಣ್ಣಿನಿಂದುರುಳಿದ ಹನಿಗಳು ಅವರನ್ನು ವಿಚಲಿತರನ್ನಾಗಿ ಮಾಡಿದವು. ಕೈ ಸನ್ನೆಯಿಂದ ಕರ್ಣನನ್ನು ಬಳಿಗೆ ಕರೆದ ಭೀಷ್ಮರು ತಲೆ ಬಗ್ಗಿಸಲು ಸೂಚಿಸಿದರು. ಕರ್ಣನ ತಲೆಯನ್ನು ನೇವರಿಸಿ ಕೈಯನ್ನು ಪ್ರೀತಿಯಿಂದ ಅದುಮಿದರು. ಕರ್ಣ ಕಣ್ಣೊರೆಸಿಕೊಂಡ. ಪ್ರವೇಶದ್ವಾರದ ಹೊರಗೆ ಹೆಜ್ಜೆಯಿಡುವ ಮೊದಲು ತಿರುಗಿ ತಿರುಗಿ ಭೀಷ್ಮರನ್ನು ನೋಡಿದ. ಅವರನ್ನು ಕಣ್ತುಂಬಾ ದಿಟ್ಟಿಸಿ ನಿಟ್ಟುಸಿರೊಂದನ್ನು ಚೆಲ್ಲಿ ನಿಧಾನವಾಗಿ ದೂರ ನಡೆದ. ವಿಶ್ವದ ಸಮಸ್ತ ಬಂಧನಗಳಿಂದ ಕಳಚಿಕೊಳ್ಳುವವನಂತೆ.
ನಡು ಮಧ್ಯಾಹ್ನದ ಹೊತ್ತಿಗೆ ಯಾರೋ ದುಡು ದುಡು ಓಡಿ ಬರುವ ಸದ್ದು ಕೇಳಿ ಅರೆಮಂಪರಿನಲ್ಲಿದ್ದ ಅವರಿಗೆಚ್ಚರವಾಯಿತು. ಬಂದ ವ್ಯಕ್ತಿ ಅವರ ಪಾದಕ್ಕೆ ಬಿದ್ದು ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ದುರ್ಯೋಧನ! ಅವನ ಇಡೀ ಶರೀರ ಭಯದಿಂದ ಕಂಪಿಸುತ್ತಿತ್ತು. ಯಾವುದೋ ಭೀಕರ ಘಟನೆಗೆ ಸಾಕ್ಷಿಯಾದಂತೆ ಅವನ ಕಣ್ಣುಗಳಲ್ಲಿ ಭೀತಿ ತುಂಬಿತ್ತು. ಮೃತ್ಯು ಅಟ್ಟಿಸಿಕೊಂಡು ಬರುತ್ತಿರುವಂತೆ ಅವನ ಮುಖದಲ್ಲಿ ಭಯ ಮತ್ತು ಭೀಭತ್ಸಭಾವಗಳು ಹೆಪ್ಪುಗಟ್ಟಿದ್ದವು.
ಅವನನ್ನು ಸಂತೈಸುವಂತೆ ಭೀಷ್ಮರೆಂದರು: “ಕುಳಿತುಕೋ ಮಗು. ಏನೋ ಕೆಟ್ಟದನ್ನು ನೋಡಿದ್ದಿ ಮತ್ತು ಕೆಟ್ಟ ವಾರ್ತೆ ತಂದಿದ್ದಿ ಎಂದು ನನಗರ್ಥವಾಗಿದೆ. ಬೆಳಿಗ್ಗೆ ಕರ್ಣ ಬಂದಿದ್ದ. ಈಗ ನಿನ್ನನ್ನು ಯಾವುದೋ ಭೀತಿ ಇಲ್ಲಿಯವರೆಗೆ ಅಟ್ಟಿಸಿಕೊಂಡು ಬಂದಿದೆ. ಹೇಳಿ ಬಿಡು ಮಗೂ, ಈ ಹೊತ್ತಿನಲ್ಲಿ ಎಂದೂ ಬಾರದವ ಇಂದೇಕೆ ಬಂದೆ?”
ದುರ್ಯೋಧನನಿಗೆ ಹೇಗೆ ಆರಂಭಿಸಬೇಕೆಂದೇ ತೋಚಲಿಲ್ಲ. ಭೀತಿಗೆ ಮಾತಿನ ರೂಪ ನೀಡಲು ಅವನು ಹೆಣಗುತ್ತಿದ್ದ. ಬಿಡದಿಯ ಸುತ್ತ ಒಂದು ಸಲ ಕಣ್ಣು ಹಾಯಿಸಿದ. ಅಲ್ಲಿಟ್ಟಿದ್ದ ನೀರನ್ನು ಗಟ ಗಟನೆ ಕುಡಿದು ಉದ್ವೇಗದ ಸ್ವರದಲ್ಲಿ ಹೇಳಿದ: “ತಾತಾ, ದುಶ್ಯಾಸನನ ಮಾತು ಕೇಳಿ ರಾತ್ರಿ ಯುದ್ಧವನ್ನು ಮಾಡಬಾರದಿತ್ತು ಎಂದು ನನಗೆ ಈಗ ಅನ್ನಿಸುತ್ತಿದೆ. ಆ ಯುದ್ಧ ನಡೆಯದಿರುತ್ತಿದ್ದರೆ ಇಂದಿನ ಬೀಭತ್ಸ ಘಟನೆ ನಡೆಯುತ್ತಿರಲಿಲ್ಲ” ಉದ್ವೇಗ ಹೆಚ್ಚಾಗಿ, ಮಾತಾಡಲಾಗದೆ ದುರ್ಯೋಧನ ನಿಲ್ಲಿಸಿದ.
ಭೀಷ್ಮರು ಯೋಚಿಸತೊಡಗಿದರು. ದುರ್ಯೋಧನನೇ ಬೀಭತ್ಸವೆಂದು ಹೇಳಬೇಕಾದರೆ ಏನಾಗಿ ಹೋಗಿದೆಯೊ? ಕುರು ಸಾಮ್ರಾಜ್ಯವನ್ನು ಆಳಬೇಕಾದ ಮುಂದಿನ ಪೀಳಿಗೆಯ ಒಂದೊಂದೇ ನಕ್ಷತ್ರಗಳು ಕಳಚಿ ಬೀಳುತ್ತಿವೆ. ಇನ್ನು ಸಾವು ಸಮೀಪಿಸಿದ ಹಿರಿಯರು ಸ್ವಲ್ಪ ಬೇಗನೆ ಸತ್ತರೇನಂತೆ? ಆದರೆ ಇವನಿಗೆ ಬಾಯಿಬಿಟ್ಟು ಹೇಳಲು ಕಷ್ಟವಾಗುತ್ತಿರುವ ಆ ಘಟನೆ ಯಾವುದದು?
“ಮಗೂ, ಕುರುಕ್ಷೇತ್ರವನ್ನು ಧರ್ಮ ಕ್ಷೇತ್ರವೆಂದು ಗೌರವಿಸಿ ನಾವು ಯುದ್ಧ ಆರಂಭಿಸಿದೆವು. ಧರ್ಮವನ್ನು ಉಳಿಸಲು ಯಾರು ಪ್ರಯತ್ನಪಟ್ಟರು ಹೇಳು? ರಾತ್ರಿಯ ಯುದ್ಧವನ್ನಷ್ಟೇ ಅಧರ್ಮವೆಂದು ಪ್ರತ್ಯೇಕಿಸಬೇಡ. ದ್ರೌಪದೀ ಸ್ವಯಂವರದ ಬಳಿಕ ಪಾಂಡವರಿಗೆ ಇಂದ್ರಪ್ರಸ್ಥವನ್ನು ಬಿಟ್ಟುಕೊಟ್ಟಾಗ ಕುರು ಸಾಮ್ರಾಜ್ಯದಲ್ಲಿ ಅವರು ಭಾಗೀದಾರರು ಎಂದಾಗಲಿಲ್ಲವೆ? ಪಾಂಡವರ ವನವಾಸ, ಅಜ್ಞಾತವಾಸಗಳ ಬಳಿಕ ನೀನು ಬೀಜಕ್ಷೇತ್ರ ನ್ಯಾಯದಿಂದ ಪಾಂಡವರಿಗೆ ಭೂಮಿ ದಕ್ಕದಂತೆ ಮಾಡಿದೆ. ಈ ಮಹಾಯುದ್ಧಕ್ಕೂ ಕಾರಣನಾದೆ. ಈಗ ಅನ್ಯರ ಮೇಲೆ ಅಪವಾದ ಹೊರಿಸಿ ಏನು ಪ್ರಯೋಜನವಿದೆ? ಅದಿರಲಿ, ಈಗೇನು ನಡೆಯಿತು ಎಂಬುದನ್ನು ಹೇಳು. ಧರ್ಮಾಧರ್ಮಗಳ ಮಾತು ಬೇಡ”.
ದುರ್ಯೋಧನ ಸ್ಥಮಿತಕ್ಕೆ ಬಂದು ಹೇಳಿದ: “ತಾತಾ, ಇಂದು ಬೆಳಿಗ್ಗಿನಿಂದ ಭೀಮ ರಣಾಂಗಣದಲ್ಲಿ ದುಶ್ಯಾಸನನನ್ನು ಹುಡುಕುತ್ತಿದ್ದ. ರಾತ್ರಿ ಯುದ್ಧಕ್ಕೆ ಅವನೇ ಪ್ರೇರಕನೆಂಬುದನ್ನು ಗೂಢಚರರಿಂದ ತಿಳಿದು, ಘಟೋತ್ಕಚನ ಮರಣಕ್ಕೆ ಪ್ರತೀಕಾರವೆಸಗುವುದು ಅವನ ಉದ್ದೇಶವಾಗಿತ್ತು. ಯುದ್ಧರಂಗದಲ್ಲಿ ದುಶ್ಯಾಸನನಿಗೆ ಅರ್ಜುನ ಎದುರಾದ. ಅವರೊಳಗೆ ನಡೆದ ಯುದ್ಧ ದುಶ್ಯಾಸನನ ಸೋಲಿನಲ್ಲಿ ಪರಿಸಮಾಪ್ತವಾಯಿತು. ಆಗ ಅರ್ಜುನ “ಯಜ್ಞಸಂಭವೆ ದ್ರೌಪದಿಯ ಅಂಬರವೆಳೆದಂತೆಲ್ಲ ಸಮರ. ನಿನ್ನನ್ನು ನಾನು ಕೊಲ್ಲುವುದಿಲ್ಲ. ಅಣ್ಣ ಭೀಮ ಸೇನನಿಂದ ಹತ ನಾಗುವವರೆಗೆ ಬದುಕಿಕೋ” ಎಂದು ತಾತ್ಕಾಲಿಕ ಜೀವದಾನ ಮಾಡಿದ. ಭೀಮನ ಹೆಸರೆತ್ತಿದೊಡನೆ ಬಿಳಿಚಿ ಹೋದ ದುಶ್ಯಾಸನ ಯುದ್ಧರಂಗದಿಂದ ಪಲಾಯನ ಮಾಡತೊಡಗಿದ. ಆಗ ಅವನು ಅದೆಲ್ಲಿದ್ದನೋ ಆ ಭೀಮ? ಓಡಿ ಹೋಗುತ್ತಿರುವ ದುಶ್ಯಾಸನನ ಬೆನ್ನಟ್ಟಿ ನೆಲಕ್ಕೆ ಕೆಡವಿಕೊಂಡ. ದುಶ್ಯಾಸನ ಪ್ರಾಣ ಭೀತಿಯಿಂದ ವಿಕಾರವಾಗಿ ಕಿರಿಚತೊಡಗಿದ”.
ಗಂಟಲು ಕಟ್ಟಿದಂತಾಗಿ ದುರ್ಯೋಧನ ಮಾತು ನಿಲ್ಲಿಸಿದ. ಭೀಷ್ಮರು ಅಂತರ್ಮುಖಿಯಾದರು. ನೆಲಕ್ಕೆ ಕೆಡವಿಕೊಂಡ ಮೇಲೆ ಭೀಮ ಬಿಡುತ್ತಾನೆಯೆ? ದುಶ್ಯಾಸನನ ಕತೆ ಮುಗಿದು ಹೋಗಿದೆ. ಮೊದಲ ಬಾರಿಗೆ ಅವ ಮೊನ್ನೆ ಬಿಡದಿಗೆ ಬಂದಿದ್ದ. ರಾತ್ರಿ ಯುದ್ಧದ ಕಲ್ಪನೆ ಅವನ ಮನಸ್ಸಿನ ಕೂಸು. ಉದ್ದೇಶ ಮಾತ್ರ ಈಡೇರಲಿಲ್ಲ. ಪಾಂಡವರೈವರಲ್ಲಿ ಒಬ್ಬನನ್ನೂ ಕೊಲ್ಲಲಾಗಲಿಲ್ಲ. ಕುರು ಸಾಮ್ರಾಜ್ಯದ ಸಂರಕ್ಷಕನಾಗಬೇಕಿದ್ದ ಘಟೋತ್ಕಚ ಸತ್ತ. ಅದಕ್ಕೆ ಭೀಮ ಸೇಡು ತೀರಿಸಿಕೊಂಡ ಎಂದು ಇವನು ಸಾಧಿಸ ಹೊರಟಿದ್ದಾನೆ. ಇವನನ್ನು ಕಾಡುತ್ತಿರುವುದೇನು? ಮರಣ ಭಯವೇ ಅಥವಾ ಪಾಪ ಭೀತಿಯೇ?
ಭೀಷ್ಮರು ದುಶ್ಯಾಸನನನ್ನು ನೆನಪಿಸಿಕೊಂಡರು. ಅವನು ದೊಡ್ಡ ವೀರನೇನಲ್ಲ. ಆದರೆ ಅವನನ್ನು ಕಂಡರೆ ಹಸ್ತಿನಾವತಿ ನಡುಗುತ್ತಿತ್ತು. ದೊಡ್ಡ ಮೀಸೆಯ, ದೊಡ್ಡ ಕಣ್ಣಿನ, ವಿಶಾಲ ಹಣೆಯ ದೈತ್ಯದೇಹಿ ಅವನು. ಮೂಗಿನ ಮೇಲ್ತುದಿಯಿಂದ ಆರಂಭಿಸಿ ಹಣೆಯುದ್ದಕ್ಕೂ ಅವನು ಕುಂಕುಮದ ನಾಮ ಹಾಕಿ ಕೈಯಲ್ಲಿ ಖಡ್ಗ ಹಿಡಿದು ಹೊರಟನೆಂದರೆ ಕಾಳಿಗೆ ಕೋಣನನ್ನು ಬಲಿ ಕೊಡಲು ಹೊರಟ ಅರ್ಚಕನಂತೆ ಕಾಣುತ್ತಿದ್ದ. ದುರ್ಯೋಧನನ ತಮ್ಮನಾಗಿ ಅವನು ಯಾವುದೇ ದುಷ್ಕೃತ್ಯ ಮಾಡಿದ್ದರೂ ದಕ್ಕಿ ಹೋಗುತ್ತಿತ್ತು. ಆದರೆ ಅವನು ಪೀಠದ ದುರುಪಯೋಗವನ್ನು ಎಂದೂ ಮಾಡಲಿಲ್ಲ.
ದುರ್ಯೋಧನನ ಆಪ್ತ ವಲಯದಲ್ಲಿ ಕರ್ಣ, ಶಕುನಿ ಮತ್ತು ಜಯದ್ರಥರೊಡನೆ ಅವನೂ ಒಬ್ಬನಾಗಿದ್ದ. ಅಂಧನೃಪತಿ ಧೃತರಾಷ್ಟ್ರನಿಗೆ ರಾಜ್ಯವಾಳುವುದಕ್ಕಿಂತ ಅಂತಃಪುರದಲ್ಲಿ ಕಾಲಕಳೆಯುವುದು ಇಷ್ಟದ ವಿಷಯವಾಗಿತ್ತು. ದುರ್ಯೋಧನ ಅಪ್ಪನ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದ. ದುಶ್ಯಾಸನ ಎಂದೂ ಸ್ವಯಂ ನಿರ್ಣಯ ತೆಗೆದುಕೊಂಡವನಲ್ಲ. ರಾಜ್ಯಸಭೆಯಲ್ಲಿ ಸಲಹೆಗಳನ್ನು ಮಂಡಿಸಿದವನಲ್ಲ. ಹೊಳೆದರಲ್ಲವೇ ಮಂಡಿಸುವುದು? ಅಣ್ಣ ಹೇಳಿದ್ದನ್ನು ಒಂದಿಷ್ಟೂ ತಪ್ಪದೆ ಅನುಷ್ಠಾನಕ್ಕೆ ತಂದು ಬಿಡುವುದಷ್ಟೇ ತನ್ನ ಜೀವನದ ಉದ್ದೇಶವೆಂದು ತಿಳಿದುಕೊಂಡಿದ್ದವನು ಅವನು. ಮೊದಲ ಬಾರಿಗೆ ರಾತ್ರಿ ಯುದ್ಧದ ಸಲಹೆಯನ್ನು ಸ್ವತಂತ್ರವಾಗಿ ಮಂಡಿಸಿದ. ಅದುವೇ ಅವನ ದುರಂತಕ್ಕೆ ಕಾರಣವೆಂದು ದುರ್ಯೋಧನ ಸಾಧಿಸಲು ಯತ್ನಿಸುತ್ತಿದ್ದಾನೆ!
ದುರ್ಯೋಧನ ತನ್ನನ್ನು ಸಾವರಿಸಿಕೊಂಡು ಮಾತು ಮುಂದುವರಿಸಿದ “ಹೇಗೆ ಹೇಳ ಬೇಕೆಂದೇ ತೋಚುತ್ತಿಲ್ಲ ತಾತಾ. ಬಿದ್ದಿದ್ದ ದುಶ್ಯಾಸನನ ಊರು ಪ್ರದೇಶದ ಇಕ್ಕೆಲಗಳಲ್ಲಿ ಕಾಲುಚಾಚಿ ಭೀಮ ಕೂತ. ಮೊದಲೇ ಪ್ರಾಣಭೀತಿಯಿಂದ ಆರ್ತನಾದಗೈಯುತ್ತಿದ್ದ ದುಶ್ಯಾಸನ ಇವನ ಗಜಭಾರಕ್ಕೆ ನಲುಗಿ ಹೋದ. ಮರಣಾಕ್ರಂದನಗೈಯುತ್ತಿದ್ದ ದುಶ್ಯಾಸನನ ಉದರವನ್ನು ಭೀಮ ಬಗಿದ. ಛಿಲ್ಲೆಂದು ಚಿಮ್ಮಮಿದ ರಕ್ತವನ್ನು ಬೊಗಸೆಯೊಡ್ಡಿ ಕುಡಿದ. ಆಮೇಲೆ ನಾಲ್ಕು ದಿಕ್ಕುಗಳಿಗೆ ಎರಚಿದ. “ನಿನ್ನ ಆತ್ಮಕ್ಕೆ ಶಾಂತಿ ನೀಡುತ್ತಿದ್ದೇನೆ ಮಗನೇ’ ಎಂದು ಆಕಾಶದತ್ತ ನೋಡಿ ನುಡಿದ. ದುಶ್ಯಾಸನನ ಕರುಳನ್ನು ಎಳೆದು ಎಳೆದು ತೆಗೆದ. ಆಗ ‘ಇದು ನೀನು ದ್ರೌಪದಿಯ ಸೀರೆ ಎಳೆದುದಕ್ಕೆ ಸನ್ಮಾನ’ ಎನ್ನುತ್ತಿದ್ದ. ಎಳೆದು ತೆಗೆದ ಕರುಳನ್ನು ಹಾಗೇ ಕೈಯಲ್ಲಿ ಹಿಡಿದು ಕೊಂಡು ‘ನನ್ನರಸೀ ಬಾ, ನಿನಗಾಗಿ ಮಾಡಿದ ಪ್ರತಿಜ್ಞೆಯನ್ನು ಈಡೇರಿಸಿದ್ದೇನೆ. ನಿನ್ನ ತುರುಬನ್ನು ಕಟ್ಟಿಕೋ, ಇದೋ ಅಲಂಕಾರಕ್ಕೆ ಹೂವನ್ನು ತರುತ್ತಿದ್ದೇನೆ’ ಎನ್ನುತ್ತಾ ಅವನ ಬಿಡದಿಯತ್ತ ನಡೆದು ಹೋದ. ತಾತಾ, ಎಂತಹ ಬೀಭತ್ಸ ದೃಶ್ಯವದು?”
ದುರ್ಯೋಧನ ಕಂಪಿಸುತ್ತಿದ್ದ. ಭೀಷ್ಮರು ಆ ದೃಶ್ಯವನ್ನು ಕಲ್ಪಿಸಿಕೊಂಡರು. ನಾಗರಿಕ ಮನುಷ್ಯ ಮಾನವ ರಕ್ತ ಕುಡಿಯುವುದಿಲ್ಲ. ಭೀಮ ಕುಡಿದಿದ್ದಾನೆ? ಅದು ದುಶ್ಯಾಸನನ ಬಗ್ಗೆ ಅವನ ಆಕ್ರರೋಶದ ಕಟ್ಟೆಯೊಡೆದದ್ದರ ಪರಿಣಾಮ. ಮಾನವನನ್ನು ಮೃಗವಾಗದಂತೆ ತಡೆಯುವುದು ಅವನ ವಿವೇಕ. ಭಾವನೆಗಳು ವಿವೇಕದ ಮೇಲೆ ವಿಜಯ ಸಾಧಿಸಿದಾಗ ಅನಾಹುತಗಳು ಸಂಭವಿಸುತ್ತವೆ. ರಜಸ್ವಲೆಯಾಗಿದ್ದ ದ್ರೌಪದಿಯನ್ನು ದುಶ್ಯಾಸನ ಮಾನವೀಯ ಅನುಕಂಪದಿಂದ ಕಾಣಬೇಕಿತ್ತು. ಅಣ್ಣನಾಜ್ಞೆಯ ಮುಂದೆ ಅವನಿಗೆ ಅಸಹಾಯ ಹೆಣ್ಣೊಬ್ಬಳ ದೈಹಿಕ ಸ್ಥತಿಯಾಗಲೀ, ಮಾನವಾಗಲೀ ಮುಖ್ಯವಾಗಲಿಲ್ಲ. ದುರ್ಯೋಧನ ಮತ್ತವನ ಬಳಗದ ಮರಣ ಶಾಸನ ರೂಪುಗೊಂಡದ್ದು ಅಂದು. ಅಸಹಾಯ ಸ್ಥತಿಯಲ್ಲಿ ಧರೆಗುರುಳಿ ಮರ್ಛಿತನಾಗಿದ್ದ ಅಭಿಮನ್ಯುವನ್ನು ದುಶ್ಯಾಸನನ ಮಗ ಕೊಂದ. ದುಶ್ಯಾಸನ ಜೀವನದಲ್ಲಿ ಮೊದಲ ಬಾರಿಗೆ ಬುದ್ಧಿವಂತಿಕೆ ತೋರ ಹೊರಟು ರಾತ್ರಿಯುದ್ಧದಲ್ಲಿ ಘಟೋತ್ಕಚನ ಸಾವಿಗೆ ಕಾರಣನಾದ. ಅವನು ವಿವೇಕವನ್ನು ಅಣ್ಣನಿಗೆ ಅಡವಿಡದಿರುತ್ತಿದ್ದರೆ ದ್ರೌಪದೀ ವಸ್ತ್ರಾಪಹರಣ ಪ್ರಸಂಗ ಸಂಭವಿಸುತ್ತಿರಲಿಲ್ಲ. ಭೀಮ ಅಂದು ಪ್ರತಿಜ್ಞಾಬದ್ಧನಾಗಿ ಇಂದು ಹೀಗೆ ಪ್ರತೀಕಾರವೆಸಗುತ್ತಿರಲಿಲ್ಲ. ದುಶ್ಯಾಸನ ತನ್ನ ಮರಣಶಾಸನಕ್ಕೆ ತಾನೇ ರುಜು ಹಾಕಿಕೊಂಡ ಅವಿವೇಕಿ!
ಭೀಷ್ಮರೆಂದರು: “ದುರ್ಯೋಧನಾ, ನಿಮ್ಮೆಲ್ಲರ ಕಣ್ಣೆದುರು ಘೋರ ಘಟನೆಯೊಂದು ಸಂಭವಿಸುತ್ತಿರುವಾಗ ನಿಮ್ಮಿಂದ ಏನನ್ನೂ ಮಾಡಲಾಗಲಿಲ್ಲ. ಇದು ಪ್ರಕೃತಿ ನಿಯಮ ಮಗೂ. ನಾವು ಮಾಡುವ ಅಕೃತ್ಯಗಳಿಗೆ ನಮ್ಮ ಜೀವಿತದ ಅವಧಿಯಲ್ಲೇ ನಾವು ಪ್ರತಿಫಲ ಉಣ್ಣಬೇಕಾಗುತ್ತದೆ. ಈಗ ನೋಡು, ನಾವೆಲ್ಲರೂ ಎಂತಹ ಮಾನಸಿಕ ಕ್ಷೋಭೆಯನ್ನು ಅನುಭವಿಸಬೇಕಾಗಿದೆ! ಈಗಾಗಲೇ ಯುದ್ಧದಲ್ಲಿ ಮಡಿದವರು ಭಾಗ್ಯವಂತರು. ಸಾಯಲೂ ಆಗದೆ, ಬದುಕಲೂ ಆಗದೆ ನಾವು ಏನೇನು ಘೋರ ವಾರ್ತೆಗಳನ್ನು ಕೇಳಬೇಕೊ?”
ದುರ್ಯೋಧನ ಕೇಳಿದ: “ಆದರೆ ತಾತಾ, ದುಶ್ಯಾಸನ ಏನು ಪಾಪ ಮಾಡಿದ್ದಾನೆ? ನನ್ನ ಆಜ್ಞೆಗಳನ್ನು ಪಾಲಿಸಬೇಕಾದದ್ದು ಅವನ ಧರ್ಮವಲ್ಲವೆ?”
ಭೀಷ್ಮರು ದೃಢವಾದ ಸ್ವರದಲ್ಲೆಂದರು: “ತಮ್ಮನಾಗಿ ಅವನು ನಿನ್ನ ಆಜ್ಞೆಗಳನ್ನು ಪಾಲಿಸ ಬೇಕಾಗಿದ್ದುದನ್ನು ನೀನು ಧರ್ಮವೆಂದು ಭಾವಿಸುತ್ತಿರುವೆ. ನಿನ್ನ ಆಜ್ಞೆಗಳನ್ನು ಅವನೇಕೆ ಧರ್ಮಾ ಧರ್ಮಗಳ ವಿವೇಚನೆಗೆ ಒಡ್ಡಲಿಲ್ಲ? ಅವನು ನಿನ್ನ ತಪ್ಪುಗಳನ್ನು ಒಮ್ಮೆಯೂ ಪ್ರಶ್ನಿಸಲಿಲ್ಲ. ಧರ್ಮಬಾಹಿರ ಕೃತ್ಯವೊಂದು ಸಂಭವಿಸುವಾಗ ಸುಮ್ಮನಿರುವವರಿಗೆ ಪಾಪದಲ್ಲಿ ಪಾಲು ಸಂದಾಯವಾಗುತ್ತದೆ. ತಪ್ಪು ಕೃತ್ಯಗಳನ್ನು ಖಂಡಿಸದಿರುವವರು ಮಹಾಪಾಪಿಗಳು. ದುಶ್ಯಾಸನ ನ್ಯಾಯ ಧರ್ಮಗಳ ವಿವೇಚನೆ ಮಾಡದೆ ಕೇವಲ ಅಣ್ಣನಾಜ್ಞೆಯೆಂದು ಏನನ್ನು ಮಾಡಿದನೋ, ಅಂತಹ ದುಷ್ಕೃತ್ಯವನ್ನು ಈವರೆಗೆ ಆರ್ಯಾವರ್ತದಲ್ಲಿ ಬೇರಾರೂ ಮಾಡಿಲ್ಲ. ಆಗ ನಾವೆಲ್ಲಾ ಮೂಕ ಪ್ರೇಕ್ಷಕರಾಗಿ ಕುಳಿತೆವಲ್ಲಾ, ಅದಕ್ಕೆ ನನಗೆ ಈ ಸ್ಥತಿ ಒದಗಿದೆ. ಯಾವ ನೆಲೆಗಟ್ಟಿನಿಂದ ನೋಡಿದರೂ ದುಶ್ಯಾಸನ ಪರಮಪಾಪಿ. ಆದರೆ ಮಗೂ, ಇಲ್ಲಿಯವರೆಗೆ ನಡೆದ, ಮುಂದೆ ನಡೆಯಬಹುದಾದ ಸಮಸ್ತ ಅನಾಹುತಗಳಿಗೆ ಕಾರಣನು ನೀನೇ. ಅದನ್ನು ಒಪ್ಪಿಕೋ. ರಾತ್ರಿ ಯುದ್ಧದಲ್ಲಿ ಘಟೋತ್ಕಚ ಮಡಿದ ಕಾರಣದಿಂದಾಗಿ ಭೀಮ ದುಶ್ಯಾಸನನ್ನು ಕೊಂದ ಎಂದು ಯಾರ ಸಂತೃಪ್ತಿಗಾಗಿ ವಾದಿಸುತ್ತಿರುವೆ?”
ದುರ್ಯೋಧನ ಪಾಪ ಪ್ರಜ್ಞೆಯಿಂದ ಬಿಳಿಚಿ ಹೋದ. ಅವನ ಕೈ ಕಾಲುಗಳು ಥರಗುಟ್ಟ ತೊಡಗಿದವು. ಅವನನ್ನು ಬಳಿಗೆ ಕರೆದು ಕೈ ಹಿಡಿದುಕೊಂಡು ಭೀಷ್ಮರೆಂದರು. ಮಗೂ, ನಿನಗೆ ನಿನ್ನ ಪಾಪಗಳ ಅರಿವಾಗದಿರುತ್ತಿದ್ದರೆ ಹೀಗೆ ನೀನು ಈ ಮಧ್ಯಾಹ್ನ ನನ್ನಲ್ಲಿಗೆ ಓಡಿ ಬರುತ್ತಿರಲಿಲ್ಲ. ಕಾಲಚಕ್ರ ಹಿಂದಕ್ಕೆ ಉರುಳುವುದಿಲ್ಲ ಮಗೂ. ಅಲ್ಲಿ ಕುರುಕ್ಷೇತ್ರದಲ್ಲಿ ನಿನ್ನ ವಿಜಯಕ್ಕಾಗಿ ಕರ್ಣ ಒಬ್ಬಂಟಿಯಾಗಿ ಹೋರಾಡುತ್ತಿದ್ದಾನೆ. ಹೋಗು. ಅವನಲ್ಲಿ ನೈತಿಕ ಸ್ಥೈರ್ಯ ತುಂಬು. ಬರುವುದನ್ನು ಒಟ್ಟಾಗಿ ಎದುರಿಸೋಣ”.
ದುರ್ಯೋಧನ ಮತ್ತಷ್ಟು ನೀರು ಕುಡಿದು ಹೊರಟು ಹೋದ. ಭೀಷ್ಮರು ಯೋಚನಾ ಮಗ್ನರಾದರು. ಅಭಿಮನ್ಯು, ಘಟೋತ್ಕಚ, ದ್ರೋಣರು, ದುಶ್ಯಾಸನ. ಮುಂದಿನ ಸರದಿ ಯಾರದು? ಎದೆಗೆ ಚುಚ್ಚಿರುವ ಈ ಬಾಣ ಇಂದೇ ಬಿದ್ದು ಹೋದರೆ ತನ್ನದು. ಕೊನೆಗೂ ಆ ಶಿಖಂಡಿಯಿಂದ ಸಾಯುವಂತಾಯಿತಲ್ಲಾ? ಆಗ ಮೊಳಗತೊಡಗಿದವು ಆ ಮಾತುಗಳು: “……..ಗಂಡೂ ಅಲ್ಲದ ಹೆಣ್ಣೂ ಅಲ್ಲದ ಜೀವಿಯಾಗಿ ನಿನ್ನನ್ನು ಕೊಲ್ಲುತ್ತೇನೆ!”
*****
ಮುಂದುವರೆಯುವುದು