ಕೆಲವು ವರ್ಷಗಳ ಹಿಂದಿನ ಮಾತು. ನಮ್ಮ ಪ್ರಸಿದ್ಧ ಲೇಖಕರಾದ ದಿ. ಚದುರಂಗ ಅವರು ಬೆಂಗಳೂರಿನ ಸಭೆಯೊಂದರಲ್ಲಿ ಮಾತನಾಡುತ್ತ ಒಂದು ಪ್ರಸಂಗವನ್ನು ಹೇಳಿದರು : “ನಾಲ್ವಡಿ ಕೃಷ್ಣರಾಜ ಒಡೆಯರ್ ಜನಪರವಾಗಿ ಚಿಂತನೆ ಮಾಡಿದ ರಾಜರು. ಅವರು ಜನಗಳ ಜೊತೆ ಸಂಪರ್ಕ ಇರಿಸಿಕೊಳ್ಳಲು ಬಯಸಿ ಪ್ರವಾಸ ಮಾಡುತ್ತಿದ್ದರು. ಒಮ್ಮೆ ಮಂಡ್ಯ ಬಳಿ ಬರುತ್ತಿದ್ದಾಗ ವೃದ್ಧ ದಂಪತಿಗಳು ಆಡುತ್ತಿದ್ದ ಮಾತು ಕಿವಿಗೆ ಬಿತ್ತು. ವೃದ್ಧ ಗಂಡ ಹೇಳ್ತಾ ಇದ್ದ – ‘ಅಲ್ಲಿ, ಆ ಕನ್ನಂಬಾಡಿ ಹತ್ರ ಒಂದು ಅಡಗಟ್ಟಿ ಹಾಕ್ಸಿದ್ರೆ ಏಟೊಂದ್ ನೀರ್ ನಿಂತ್ಕಂಡು ನಮ್ ಜಮೀನ್ಗೆಲ್ಲ ಆಗ್ತೈತೆ. ಆರಾಜಂಗ್ ಯಾಕ್ ಇದೆಲ್ಲ ಗೊತ್ತಾಗಕಿಲ್ಲ’ – ಹೀಗೆ ಸಾಗಿತ್ತು ಆತನ ಮಾತು. ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಒಂದು ಹೊಸ ಬೆಳಕು ಕಂಡಂತಾಯ್ತು. ಸರ್ ಎಂ. ವಿಶ್ವೇಶ್ವರಯ್ಯನವರ ಜೊತೆ ಕನ್ನಂಬಾಡಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದರು. ಅಣೆಕಟ್ಟಿಗೆ ಇದು ಸರಿಯಾದ ಸ್ಥಳ ಎಂದು ವಿಶ್ವೇಶ್ವರಯ್ಯನವರು ತಾಂತ್ರಿಕ ಸಮ್ಮತಿ ನೀಡಿದರು. ನಾಲ್ವಡಿಯವರು ಕೆಲಸ ಶುರು ಮಾಡಿಸಲು ಆದೇಶಿಸಿದರು. ಕೃಷ್ಣಸಾಗರ ನಿರ್ಮಾಣದ ಹಿನ್ನೆಲೆ ಇದು.”
-ಚದುರಂಗರೊಂದಿಗೆ ಆನಂತರ ನಾನು ಮಾತಾಡಿದೆ. ನನ್ನಂಥವರಿಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಅವರು ಹಂಚಿಕೊಂಡರು. ನಾಲ್ವಡಿಯವರ ಬಗ್ಗೆ ನನಗೆ ಆಸಕ್ತಿ ಮತ್ತು ಅಭಿಮಾನ ಮೂಡಲು ಕಾರಣರಾದರು. ಕೃಷ್ಣರಾಜ ಸಾಗರದ ಕೆಲಸವು ಹಣವಿಲ್ಲದೆ ಕುಂಠಿತವಾದಾಗ ನಾಲ್ವಡಿಯವರು ತಮ್ಮ ಪತ್ನಿಯ ಒಡವೆಗಳೂ ಸೇರಿದಂತೆ ಅರಮನೆಯ ಬಂಗಾರವನ್ನೆಲ್ಲ ಮಾರಿದ ವಿಷಯ ಕೇಳಿದಾಗ ಅವರ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಯಿತು.
ನಿಧಾನವಾಗಿ ನನ್ನಲ್ಲಿ ಒಂದು ಪ್ರಶ್ನೆ ಮೂಡಿತು : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದ ಕೆಲಸಗಳ ಕೀರ್ತಿಯು ಸರ್ ಎಂ. ವಿಶ್ವೇಶ್ವರಯ್ಯನವರಿಗೆ ಸಂದಷ್ಟು ನಾಲ್ವಡಿಯವರಿಗೆ ಸಂದಿಲ್ಲವಲ್ಲವೆ? – ಈ ಪ್ರಶ್ನೆಯ ಮೂಲಕ ವಿಶ್ವೇಶ್ವರಯ್ಯನವರ ಕಾರ್ಯದಕ್ಷತೆ, ಪ್ರಾಮಾಣಿಕತೆ, ದೂರದರ್ಶಿತ್ವಗಳನ್ನು ಖಂಡಿತ ಕಡೆಗಣಿಸುತ್ತಿಲ್ಲ. ಆದರೆ ಇದೇ ಕಾರ್ಯದಕ್ಷತೆ, ಪ್ರಾಮಾಣಿಕತೆ ಮತ್ತು ದೂರದರ್ಶಿತ್ವಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಇಲ್ಲದೆ ಹೋಗಿದ್ದರೆ ಆ ಕಾಲದಲ್ಲಿ ಉತ್ತಮ ಕೆಲಸಗಳು ಸಾಧ್ಯವಾಗುತ್ತಿರಲಿಲ್ಲವೆಂಬ ಸತ್ಯವನ್ನು ನಾವು ಮನಗಾಣಬೇಕು. ರಾಜಶಾಹಿಯಲ್ಲಿ ಅಪರೂಪಕ್ಕೆ ಕಾಣಿಸುವ ಜನಮುಖಿ ರಾಜರ ಕೊಡುಗೆಯನ್ನು ಚರಿತ್ರೆಯ ಭಾಗವಾಗಿ ಪರಿಶೀಲಿಸಬೇಕು. ರಾಜಪ್ರಭುತ್ವದ ಒಳಗೇ ಪ್ರಜಾಪರ ಆಶಯಗಳಿಗೆ ಬದ್ಧವಾಗಿ ಕ್ರಿಯಾಶೀಲರಾದ ನಾಲ್ವಡಿ ಕೃಷ್ಣರಾಜ ಒಡೆಯರಂಥ ರಾಜರನ್ನು ಇತಿಮಿತಿಗಳ ನಡುವೆಯು ಶ್ಲಾಘಿಸಬೇಕು. ಯಾಕೆಂದರೆ ಇಂಥವರು ಚರಿತ್ರೆಯ ಚಲನಶೀಲತೆಯನ್ನು ಜೀವಂತವಾಗಿಟ್ಟಿದ್ದರು. ದೂರದರ್ಶಿತ್ವದಿಂದ ಸಿಂಹಾಸನವನ್ನು ಮೀರಿ ಬೆಳೆದರು; ರಾಜ್ಯವನ್ನು ಬೆಳೆಸಿದರು. ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಮಹತ್ವದ ಚಿಂತನೆ ಮತ್ತು ಕ್ರಿಯೆಗಳಿಗೆ ಕೇಂದ್ರ ಪ್ರಜ್ಞೆಯಾದರು. ಆದ್ದರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಅವರ ಆಡಳಿತಾವಧಿಯ ಕೇಂದ್ರ ಶಕ್ತಿಯಾಗಿ ಪರಿಗಣಿಸುವ ವಿಶ್ಲೇಷಣಾ ವಿಧಾನ ಸರಿಯಾದುದೆಂದು ನನ್ನ ಭಾವನೆ. ಕೇಂದ್ರ ಶಕ್ತಿ ಮತ್ತು ಕೇಂದ್ರ ಪ್ರಜ್ಞೆ ಎರಡೂ ಆಗಿದ್ದ ನಾಲ್ವಡಿಯವರಿಗೆ ಸರ್ ಎಂ. ವಿಶ್ವೇಶ್ವರಯ್ಯನವರಂತಹ ದಿವಾನರ ಪ್ರಜ್ಞಾಶಕ್ತಿಯೂ ಸೇರಿದ್ದು ಒಂದು ವಿಶೇಷವೆಂದು ಭಾವಿಸೋಣ. ನಾಲ್ವಡಿಯವರು ಸುಮಾರು ನಲವತ್ತು ವರ್ಷಗಳ ಕಾಲ ನೇರ ಆಡಳಿತ ನಡೆಸಿದ್ದು, ಈ ಅವಧಿಯಲ್ಲಿ ಒಟ್ಟು ಏಳು ಮಂದಿ ದಿವಾನರು ಅಧಿಕಾರ ನಿರ್ವಹಿಸಿದರು; ಪಿ.ಎನ್. ಕೃಷ್ಣರಾವ್ (೧೯೦೧ ರಿಂದ) ವಿ.ಪಿ. ಮಾಧವರಾವ್ (೧೯೦೬ ರಿಂದ) ಆನಂದರಾವ್ (೧೯೦೯ ರಿಂದ) ಎಂ. ವಿಶ್ವೇಶ್ವರಯ್ಯ (೧೯೧೨ ರಿಂದ) ಕಾಂತರಾಜ ಅರಸು (೧೯೧೮ ರಿಂದ) ಎ.ಆರ್. ಬ್ಯಾನರ್ಜಿ (೧೯೨೪ ರಿಂದ) ಮಿರ್ಜಾ ಇಸ್ಮಾಯಿಲ್ (೧೯೨೬ ರಿಂದ ೧೯೪೦) ಅತಿ ದೀರ್ಘ ಕಾಲ ದಿವಾನರಾಗಿ ಕೆಲಸ ಮಾಡಿದವರು ಮಿರ್ಜಾ ಇಸ್ಮಾಯಿಲ್ ಅವರೆಂಬುದನ್ನೂ ಇಲ್ಲಿ ಗಮನಿಸ ಬೇಕು. ನಾಲ್ವಡಿಯವರ ಜನಪರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಎಲ್ಲ ದಿವಾನರ ಪಾತ್ರವೂ ಇದೆಯಾದರೂ ಸಾಮಾನ್ಯವಾಗಿ ಸರ್ ಎಂ. ವಿಶ್ವೇಶ್ವರಯ್ಯ, ಕಾಂತರಾಜ ಅರಸು ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಹೆಸರುಗಳು ಹೆಚ್ಚು ಪ್ರಸ್ತಾಪಿತವಾಗುತ್ತವೆ. ಅದೇನೇ ಇರಲಿ, ಈ ಅವಧಿಯ ಜನಪರ ಕ್ರಿಯಾಯೋಜನೆಗಳ ಹಿಂದಿದ್ದ ಕೇಂದ್ರ ಶಕ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಅಂಶ ವಿವಾದಾತೀತವೆಂದು ನನ್ನ ತಿಳುವಳಿಕೆ. ಸ್ವತಃ ಸರ್ ಎಂ. ವಿಶ್ವೇಶ್ವರಯ್ಯ ನವರೇ ತಮ್ಮ “ನನ್ನ ವೃತ್ತಿ ಜೀವನದ ನೆನಪುಗಳು” ಪುಸ್ತಕದಲ್ಲಿ ನಾಲ್ವಡಿಯವರ ಕಾರ್ಯಕ್ಷಮತೆ ಮತ್ತು ಒತ್ತಾಸೆಯ ಶಕ್ತಿಯನ್ನು ನೆನೆಯುತ್ತಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮೆಲ್ಲ ಕೆಲಸಗಳಿಗೆ ಸ್ಫೂರ್ತಿ ಹಾಗೂ ಉತ್ಸಾಹ ತುಂಬಿದ ಮಾರ್ಗದರ್ಶಕರಾಗಿದ್ದರೆಂಬ ವಿವರಗಳನ್ನು ನೀಡಿದ್ದಾರೆ. (ಪುಟ ೧೦೧) ಸರ್ ಎಂ. ವಿಶ್ವೇಶ್ವರಯ್ಯನವರ ಮಾತನ್ನು ನಂಬದಿರಲು ಯಾವ ಕಾರಣಗಳೂ ಇಲ್ಲ.
ನಾಲ್ವಡಿ ಕೃಷ್ಣರಾಜ ಒಡೆಯರ್ ಹುಟ್ಟಿದ್ದು – ೧೮೮೪ನೇ ಇಸವಿ ಜೂನ್ ೪ ರಂದು. ಹನ್ನೊಂದನೇ ವಯಸ್ಸಿನಲ್ಲೇ ತಂದೆಯು ತೀರಿಕೊಂಡಿದ್ದರಿಂದ ಇವರು ೧೮೯೫ಕ್ಕೆ ಪಟ್ಟಿ ಬೇಕಾಯಿತು. ಆದರೆ ೧೯೦೧ರ ವರೆಗೆ ತಾಯಿ ಕೆಂಪನಂಜಮ್ಮಣ್ಣಿಯವರು ರಾಜಪ್ರತಿನಿಧಿ ಯಾಗಿ ದೈನಂದಿನ ಆಡಳಿತವನ್ನು ನಿರ್ವಹಿಸಿದರು. ೧೯೦೧ ರಿಂದ ನಾಲ್ವಡಿಯವರೇ ನೇರವಾಗಿ ಆಡಳಿತದ ಚುಕ್ಕಾಣಿ ಹಿಡಿದರು. ಅಲ್ಲಿಂದ ೪೦ ವರ್ಷಗಳ ಅವಧಿಯಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯವಾಗಿ ರೂಪಿಸಲು ಪ್ರಯತ್ನಿಸಿದರು. ಆನಂತರ ‘ಮಾದರಿ ಮೈಸೂರು’ ಎಂಬ ಪ್ರಶಂಸೆಯು ತಾನಾಗಿ ಬಂತು. ಜನರು ತಾವಾಗಿಯೇ ‘ಶ್ರೀ ಕೃಷ್ಣರಾಜ ಭೂಪ, ಮನೆ ಮನೆಯ ದೀಪ’ ಎಂದು ಹಾಡಿ ಹೊಗಳಿದರೆಂಬ ಪ್ರತೀತಿಯಿದೆ. ಸ್ವತಃ ಗಾಂಧೀಜಿಯವರು ನಾಲ್ವಡಿಯವರನ್ನು ‘ರಾಜರ್ಷಿ’ ಎಂದು ಕರೆದು ನುಡಿಗೌರವ ತೋರಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ ಬಹುಮುಖಿಯಾದುದು. ವಿಶೇಷವಾಗಿ ಸಾಮಾಜಿಕ ಸಮಾನತೆ ಮತ್ತು ಶೈಕ್ಷಣಿಕ ಸಮಾನತೆಗಳತ್ತ ಗಮನಹರಿಸಿದ ಅವರು ಅನೇಕ ಉತ್ತೇಜಕ ಕ್ರಮಗಳನ್ನು ಕೈಗೊಂಡರು. ಉದ್ಯೋಗದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯಗಳ ಉನ್ನತಿಗೆ ಆಸಕ್ತಿವಹಿಸಿದ ನಾಲ್ವಡಿಯವರು ಅದನ್ನು ಕಾರ್ಯರೂಪಕ್ಕೆ ಇಳಿಸಿದರು. ಒಟ್ಟಾರೆ ಬ್ರಾಹ್ಮಣೇತರರಿಗೆ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ಸಮತೋಲನವನ್ನು ಸಾಧಿಸುವುದು ಅವರ ಆಶಯವಾಗಿತ್ತು. ಆ ವೇಳೆಗೆ ಹಿಂದುಳಿದ (ಬ್ರಾಹ್ಮಣೇತರ) ವರ್ಗಗಳ ಪರವಾದ ದನಿಯೂ ದಟ್ಟವಾಗತೊಡಗಿತ್ತು. ಇದಕ್ಕೆ ಸ್ಪಂದಿಸಿದ ನಾಲ್ವಡಿಯವರು ಅಂದಿನ ಮೈಸೂರು ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಸರ್ ವೆಸ್ಲಿ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದರು. ಈ ಸಮಿತಿಯು ಬ್ರಾಹ್ಮಣೇತರರನ್ನೆಲ್ಲ ‘ಹಿಂದುಳಿದ ವರ್ಗ’ ಎಂದು ಕರೆದು ಉದ್ಯೋಗ ಮತ್ತು ವೃತ್ತಿ ಶಿಕ್ಷಣವೇ ಮುಂತಾದ ವಿಶೇಷ ಶೈಕ್ಷಣಿಕ ಸಂಸ್ಥೆಗಳಲ್ಲಿ (ಕಲಾಶಾಲೆ ಇತ್ಯಾದಿ) ಶೇ. ೫೦ ರಷ್ಟು ಮೀಸಲಾತಿಗೆ ಶಿಫಾರಸ್ಸು ಮಾಡಿತು. ಕೆಲವರ ವಿರೋಧದ ನಡುವೆಯೂ ನಾಲ್ವಡಿಯವರು ಮೀಸಲಾತಿ ತಂದರು. ಅಷ್ಟೇ ಅಲ್ಲ ‘ಹಿಂದುಳಿದ ವರ್ಗ’ಗಳಿಗೆ ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ನೀಡಿ, ಹಂತಹಂತವಾಗಿ ಶೇ. ೫೦ರ ಪ್ರಮಾಣಕ್ಕೆ ತರಲಾಯಿತು. ವಿಶೇಷವಾಗಿ ತಹಸೀಲ್ದಾರ್ ಹುದ್ದೆಗಳಿಗೂ ಮೀಸಲಾತಿ ತರಲಾಯಿತು. ಹೀಗೆ ಆಡಳಿತಾತ್ಮಕ ಅಧಿಕಾರ ಸ್ಥಾನಗಳಿಗೆ ಬ್ರಾಹ್ಮಣೇತರ ವರ್ಗಗಳು ಮೀಸಲಾತಿ ಮುಖಾಂತರ ಬರಲಾರಂಭಿಸಿದಾಗ ಸರ್ ಎಂ. ವಿಶ್ವೇಶ್ವರಯ್ಯನವರು ವಿರೋಧ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ನಡುವೆ ತಾತ್ವಿಕ ಭಿನ್ನಾಭಿಪ್ರಾಯವಿತ್ತೇ ಹೊರತು ವೈಯಕ್ತಿಕ ವೈಷಮ್ಯವಿರಲಿಲ್ಲ. ವಿಶ್ವೇಶ್ವರಯ್ಯನವರ ‘ಪ್ರತಿಭಾನಿಷ್ಠ ಪ್ರತಿಪಾದನೆ’ಯನ್ನು ನಾಲ್ವಡಿಯವರು ಒಪ್ಪಲು ಸಿದ್ಧಿವಿರಲಿಲ್ಲ. ಪ್ರತಿಭೆಯನ್ನು ಬೇರೆಯವರಲ್ಲೂ ಕಾಣಲು ಸಾಧ್ಯ; ಅವಕಾಶ ವಂಚಿತರಿಗೆ ಅಧಿಕಾರ ಸ್ಥಾನ ನೀಡಬೇಕು – ಎಂಬುದು ನಾಲ್ವಡಿ ಯವರ ನಿಲುವಾಗಿತ್ತು. ವಿಶ್ವೇಶ್ವರಯ್ಯನವರ ನಿಲುವು ನಾಲ್ವಡಿಯವರ ನಿಲುವಿಗೆ ವಿರುದ್ಧವಾಗಿತ್ತು. ಹೀಗಾಗಿ ಮೀಸಲಾತಿ ವಿಷಯಕ್ಕೆ ವಿವಾದದ ಸ್ವರೂಪ ಬಂತು.
‘ನನ್ನ ವೃತ್ತಿ ಜೀವನದ ನೆನಪುಗಳು’ ಎಂಬ ತಮ್ಮ ಪುಸ್ತಕದಲ್ಲಿ ಸ್ವತಃ ವಿಶ್ವೇಶ್ವರಯ್ಯನವರು ಈ ‘ವಿವಾದ’ವನ್ನು ಪ್ರಸ್ತಾಪಿಸಿದ್ದಾರೆ. ಅವರ ಅನಿಸಿಕೆಗಳನ್ನು ಬಿಡಿಯಾಗಿ ಇಲ್ಲಿ ಉಲ್ಲೇಖಿಸುತ್ತೇನೆ : ‘ಬ್ರಾಹ್ಮಣೇತರರು ಅತ್ಯಂತ ಹಿಂದುಳಿದಿದ್ದರು ಎಂಬುದು ನನ್ನ ಗಮನಕ್ಕೂ ಬಂದಿತ್ತು’…. ‘ಮೈಸೂರು ಸರ್ಕಾರವು ಹಿಂದುಳಿದ ವರ್ಗ ಮತ್ತು ಶೋಷಿತ ವರ್ಗಗಳ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾರ್ಥಿ ವೇತನ.. ಇತ್ಯಾದಿ ಪ್ರೋತ್ಸಾಹಕ್ಕೆ ನಾನು ಪ್ರಯತ್ನಿಸಿದ್ದೆ’…. ‘ಕಚೇರಿಗಳಿಗೆ ಆಯ್ಕೆಯ ಸಂದರ್ಭದಲ್ಲಿ ಬ್ರಾಹ್ಮಣ ಅಭ್ಯರ್ಥಿಗಳತ್ತ ಹೆಚ್ಚು ಒಲವು ಇದ್ದುದು ಸತ್ಯವಾಗಿತ್ತು’…. ‘ಬ್ರಾಹ್ಮಣ ಸಮುದಾಯ ಪ್ರಯತ್ನ ಪೂರ್ವಕವಾಗಿ ಮುಂದೆ ನಿಲ್ಲುತ್ತಿತ್ತು….. ಸ್ವಂತ ಪ್ರಯತ್ನ – ಉದ್ಯಮ ಶೀಲತೆಯಿಂದ ಮುಂದುವರೆಯುತ್ತಿದ್ದ ಸಮುದಾಯವನ್ನು ಹಿಂದಕ್ಕೆ ತಳ್ಳುವುದು ಸಮಂಜಸ ಕ್ರಮವಲ್ಲ….’ – ಹೀಗೆ ವಿಶ್ವೇಶ್ವರಯ್ಯನವರ ವಾದಸರಣಿ ಮುಂದುವರೆಯುತ್ತದೆ. ಬ್ರಾಹ್ಮಣೇತರ ಸ್ಥಿತಿಗತಿಯ ಅರಿವಿದ್ದರೂ ಮೀಸಲಾತಿಯ ಪರವಾಗಿ ನಿಲುವು ತಾಳದೆ, ಮೀಸಲಾತಿಯಿಂದ ‘ಬ್ರಾಹ್ಮಣ ಸಮುದಾಯವನ್ನು ಹಿಂದಕ್ಕೆ ತಳ್ಳುವುದು ಸಮಂಜಸ ಕ್ರಮವಲ್ಲ’ ಎಂದು ಪ್ರತಿಪಾದಿಸುತ್ತಾರೆ. ಹೀಗಾಗಿ ವಿಶ್ವೇಶ್ವರಯ್ಯನವರಿಗೆ ‘ಪ್ರತಿಭಾನಿಷ್ಠತೆ’ಯೊಂದೇ ತಮ್ಮ ವಾದದ ಏಕೈಕ ಅಂಶವಾಗಿರಲಿಲ್ಲವೆಂದು ಸ್ಪಷ್ಟವಾಗಿರುತ್ತದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದು ಬ್ರಾಹ್ಮಣ ಸಮುದಾಯವನ್ನು ಹಿಂದಕ್ಕೆ ತಳ್ಳುವ ಕ್ರಮವೆಂಬ ಅಂಶವೂ ಅವರ ನಿಲುವಿನ ಒಂದು ಭಾಗವಾಗಿದೆ. ಒಟ್ಟಿನಲ್ಲಿ ಭಿನ್ನಾಭಿಪ್ರಾಯದ ಕಾರಣದಿಂದ ದಿವಾನಗಿರಿಗೆ ರಾಜೀನಾಮೆ ಕೊಡುವಷ್ಟು ವಿಶ್ವೇಶ್ವರಯ್ಯನವರು ‘ಮುಂದುವರೆದರು’! ಆದರೆ ರಾಜೀನಾಮೆಯನ್ನು ತಕ್ಷಣ ಒಪ್ಪಿಕೊಳ್ಳದೆ ನಾಲ್ವಡಿಯವರು ‘ಹಿಂದುಳಿದರು’!
ಸನತ್ ಕುಮಾರ್ ಬೆಳಗಲಿಯವರು ಈ ರಾಜೀನಾಮೆ ಪ್ರಸಂಗವನ್ನು ತಮ್ಮ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಕಿರುಕೃತಿಯಲ್ಲಿ ಹೀಗೆ ಸಂಕ್ಷೇಪಿಸಿದ್ದಾರೆ : “ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಿಲ್ಲರ್ ಆಯೋಗದ ವರದಿಯ ಸಂಬಂಧದಲ್ಲಿ ವಿಶ್ವೇಶ್ವರಯ್ಯನವರು ಪದೇ ಪದೆ ಬರೆಯುತ್ತಿದ್ದ ಪತ್ರಗಳಿಂದ ಮಹಾರಾಜರಿಗೆ ರೋಸಿಹೋಯಿತು. ಕೊನೆಗೆ ಬೇಸತ್ತು ಕೃಷ್ಣರಾಜರು ‘ನನ್ನ ವಿವರಣೆಗಳು ನಿಮ್ಮನ್ನು ತೃಪ್ತಿಗೊಳಿಸದಿದ್ದರೆ ಇನ್ನುಳಿದಿರುವುದು ಒಂದೇ ಮಾರ್ಗ. ನೀವು ರಾಜೀನಾಮೆ ಸಲ್ಲಿಸುವುದು, ನಾನು ಅಂಗೀಕರಿಸುವುದು’ – ಎಂದು ಸ್ಪಷ್ಟವಾಗಿ ತಿಳಿಸಿದರು. ವಿಶ್ವೇಶ್ವರಯ್ಯನವರ ರಾಜೀನಾಮೆಯನ್ನು ಮಹಾರಾಜರು ಒಮ್ಮೆಲೇ ಸ್ವೀಕರಿಸಲಿಲ್ಲ. ಹೊಸ ಉದ್ಯಮಗಳು ಸ್ಥಿರವಾಗಿ ನಿಲ್ಲುವವರೆಗೆ ನಿಮ್ಮ ಸೇವೆ ಅಗತ್ಯ ಎಂದು ಮಹಾರಾಜರು ಹೇಳಿದರು. ಕೊನೆಗೆ ಮೋಕ್ಷಗುಂಡಂ ಮತ್ತೆ ಒತ್ತಾಯಿಸಿದಾಗ ೧೯೧೮ರ ಡಿಸೆಂಬರ್ ೯ ರಂದು ಕೃಷ್ಣರಾಜರು ರಾಜೀನಾಮೆ ಸ್ವೀಕರಿಸಿದರು” (ಪುಟ-೨೬).
ವಿಶ್ವೇಶ್ವರಯ್ಯನವರೂ ತಮ್ಮ ನೆನಪುಗಳ ಪುಸ್ತಕದಲ್ಲಿ ರಾಜೀನಾಮೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಆದರೆ ನಾಲ್ವಡಿಯವರೇ ರಾಜೀನಾಮೆಯನ್ನು ಕೇಳಿದ್ದರೆಂದು ಹೇಳಿಲ್ಲ. ಹಿಡಿದ ಕೆಲಸಗಳು ಒಂದು ಹಂತಕ್ಕೆ ಬರುವವರೆಗೆ ಮುಂದುವರೆಯಲು ಕೇಳಿದ್ದಾಗಿ ತಿಳಿಸಿದ್ದಾರೆ. ಸ್ವಲ್ಪ ದಿನಗಳ ನಂತರ ರಾಜೀನಾಮೆ ಅಂಗೀಕೃತವಾಯಿತೆಂದು ಬರೆದಿದ್ದಾರೆ. ಅದೇನೇ ಇರಲಿ, ಮೀಸಲಾತಿಯ ವಿಷಯವನ್ನು ವಿವಾದಗೊಳಿಸಿದ ಅಂಶ ಇಂದಿನ ಪೀಳಿಗೆಯವರೆಗೂ ಬೆಳೆದು ಬಂದು ಇತಿಹಾಸವಾಗಿದೆ. ಅಂದಿನ ವಾಗ್ವಾದಗಳೇ ಇಂದೂ ನಡೆಯುತ್ತಿವೆ. ಎಂಥ ವಿಪರ್ಯಾಸ!
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ ವರ್ಗಗಳಿಗೆ (ಬ್ರಾಹ್ಮಣೇತರರಿಗೆ) ಮೀಸಲಾತಿ ತಂದರೆಂಬ ಒಂದೇ ಕಾರಣಕ್ಕೆ ಮಾನ್ಯರೆಂದು ತಿಳಿಯಬಾರದು. ಅವರಿಗೆ ಸಮಾಜ ಬದಲಾವಣೆಯ ಸಮಗ್ರ ದೃಷ್ಟಿಕೋನವಿತ್ತು. ಸಾಮಾಜಿಕ ನ್ಯಾಯದ ಜೊತೆಗೆ ಶೈಕ್ಷಣಿಕ ವಿಕಾಸಕ್ಕೆ ಅವರು ಹೆಚ್ಚು ಒತ್ತುಕೊಟ್ಟರು. ಮೊದಲು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮೊದಲ ಬಾರಿ ಬಜೆಟ್‌ನಲ್ಲಿ ಒಂದು ಲಕ್ಷ ರೂಪಾಯಿ ಒದಗಿಸಿದರು. ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಶ್ರಮಜೀವಿ ಪೋಷಕರಿಗೆ ಪ್ರೋತ್ಸಾಹ ಧನವನ್ನು ನೀಡಿದರು. ಮೈಸೂರಿನಲ್ಲಿ ದಲಿತ ವಿದ್ಯಾರ್ಥಿಗಳಿಗಾಗಿ ಬೋರ್ಡಿಂಗ್ ಶಾಲೆ ಸ್ಥಾಪಿಸಿದರು. ಆನಂತರ ತುಮಕೂರಿನಲ್ಲೂ ದಲಿತರ ಬೋರ್ಡಿಂಗ್ ಶಾಲೆ ಪ್ರಾರಂಭಿಸಿದರು. ಎಲ್ಲ ಜಾತಿ ಮತ್ತು ಧರ್ಮಗಳಿಗೆ ಸೇರಿದವರು ಶಿಕ್ಷಣ ಪಡೆಯಬೇಕೆಂದು ಪ್ರತಿಪಾದಿಸುತ್ತ ಬಂದರು. ೧೯೧೩ ಏಪ್ರಿಲ್ ೧೧ ರಂದು ವಾಣಿವಿಲಾಸ ಉರ್ದುಶಾಲೆಯನ್ನು ಉದ್ಘಾಟಿಸಿದ ನಾಲ್ವಡಿಯವರು ‘ಶಿಕ್ಷಣ ಸೌಲಭ್ಯದಿಂದ ಯಾವುದೇ ಸಮುದಾಯ ವಂಚಿತವಾಗಬಾರದು. ವಿದ್ಯೆ ಯಾರೊಬ್ಬರ ಗುತ್ತಿಗೆಯಾಗಬಾರದು’ ಎಂದು ಘೋಷಿಸಿದರು. ಇದು ಶೈಕ್ಷಣಿಕ ಸಮಾನತೆಯ ಮಾತಾಗಿತ್ತು. ೧೯೧೨ರಲ್ಲಿ ನಾಲ್ವಡಿಯವರು ವಯಸ್ಕರಿಗಾಗಿ ಸುಮಾರು ೭,೦೦೦ ರಾತ್ರಿ ಶಾಲೆಗಳನ್ನು ಪ್ರಾರಂಭಿಸಿದರು. ಪ್ರಾಥಮಿಕ ಶಿಕ್ಷಣದ ಜೊತೆಗೆ ನಾಡಜನರಿಗೆ ಉನ್ನತ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ವಿಶ್ವವಿದ್ಯಾಲಯ ಸ್ಥಾಪನೆಗೆ ಒತ್ತಾಸೆಯಾಗಿ ನಿಂತರು. ಇವರ ಆಶಯದಂತೆ ವಿಶ್ವೇಶ್ವರಯ್ಯನವರು ದಿವಾನ ಸ್ಥಾನದಿಂದ ನಡೆಸಿದ ಪ್ರಯತ್ನ ಫಲ ನೀಡಿತು. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.
ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಬೇಕೆಂಬ ನಿರ್ಣಯವನ್ನು ನಾಲ್ವಡಿಯವರು ಸ್ಥಾಪಿಸಿದ್ದ ‘ಸಂಪದಭ್ಯುದಯ ಸಮಾಜ’ದ ಸಭೆಯಲ್ಲಿ ೧೯೧೪ರಲ್ಲಿ ತೆಗೆದುಕೊಳ್ಳಲಾಯಿತು. ಇದರ ಫಲವಾಗಿ ೧೯೧೫ ಮೇ ೫ ರಂದು ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಯಿತು. ಈಗ ಇರುವ ಕೃಷ್ಣರಾಜ ಪರಿಷನ್ಮಂದಿರದ ನಿರ್ಮಾಣಕ್ಕೆ ನಾಲ್ವಡಿಯವರು ಐದು ಸಾವಿರ ರೂಪಾಯಿಗಳ ಪ್ರಥಮ ದೇಣಿಗೆ ನೀಡಿದ್ದರು. ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದಾಗ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಿದರು.
ನಮ್ಮ ಸಮಾಜವು ಅನುಸರಿಸುತ್ತಿದ್ದ ಲಿಂಗಭೇದ ನೀತಿಯ ಬಗ್ಗೆ ನಾಲ್ವಡಿಯವರಿಗೆ ಅಸಮಾಧಾನವಿತ್ತು. ಮಹಿಳೆಯರ ಬಗ್ಗೆ ಇರುವ ತಾರತಮ್ಯವನ್ನು ನಿವಾರಿಸಲು ಕಾಯಿದೆ ತರಬೇಕೆಂದು ನಿರ್ಧರಿಸಿ ೧೯೩೧ರಲ್ಲೇ ಸಮಿತಿಯೊಂದನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ತಮ್ಮ ತಾಯಿಯ ಹೆಸರಲ್ಲಿ ಶಾಲೆಯನ್ನು ಆರಂಭಿಸಿದ ಕೀರ್ತಿಯೂ ಇವರದೇ ಆಗಿದೆ. ಈ ಶಾಲೆಯೇ ಇಂದಿನ ಮಹಾರಾಣಿ ಕಾಲೇಜ್ ಆಗಿದೆ. ಎಲ್ಲ ರೀತಿಯ ತಾರತಮ್ಯ ನೀತಿಯನ್ನು ವಿರೋಧಿಸುತ್ತಿದ್ದ ಕೃಷ್ಣರಾಜ ಒಡೆಯರ್ ಅವರು ಕೋಮುಸೌಹಾರ್ದತೆಗೂ ಹೆಸರಾದವರು. ೧೯೨೨ ಏಪ್ರಿಲ್ ೧೪ ರಂದು ಮೈಸೂರಿನ ಬಾಡಿಗಾರ್ಡ್ ಲೇನ್‌ನಲ್ಲಿ ಮಸೀದಿಯೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಈ ರಾಜ್ಯ ಯಾವುದೇ ಒಂದು ಕೋಮಿಗೆ ಸೇರಿದ್ದಲ್ಲ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಪರಸ್ಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕು’ ಎಂದು ಕರೆ ನೀಡಿದ್ದು ಅವರ ಕೋಮು ಸೌಹಾರ್ದ ನೀತಿಗೆ ಸಾಂಕೇತಿಕ ಸಾಕ್ಷಿ. ನಾಲ್ವಡಿಯವರ ಜಾತ್ಯತೀತ ಮನೋಧರ್ಮವನ್ನು ಕುರಿತು ಮಿರ್ಜಾ ಇಸ್ಮಾಯಿಲ್ ಅವರು ಹೇಳಿರುವ ಮಾತುಗಳನ್ನು ಇಲ್ಲಿ ಸ್ಮರಿಸಬಹುದು : ‘ನಾನು ಮುಸ್ಲಿಂ ಧರ್ಮದ ಅನುಯಾಯಿ. ಪ್ರಭುಗಳು ಹಿಂದೂ ಧರ್ಮವನ್ನು ನಿಷ್ಠೆಯಿಂದ ಆಚರಿಸುವವರು. ಅವರು ಒಮ್ಮೆಯೂ ನನ್ನನ್ನು ಅನ್ಯಧರ್ಮಿಯನಂತೆ ಕಂಡಿಲ್ಲ. ಅಂಥ ಭಾವನೆ ನನ್ನಲ್ಲಿ ಬಾರದಂತೆ ನೋಡಿಕೊಂಡಿದ್ದಾರೆ. ಈ ಗುಣಕ್ಕಾಗಿಯೇ ಗಾಂಧೀಜಿ, ಲಾಲಾ ಲಜಪತರಾಯ ಕೂಡ ಮಹಾರಾಜರನ್ನು ಶ್ಲಾಘಿಸಿದರು.’ (ಸನತ್ ಕುಮಾರ್ ಬೆಳಗಲಿ ಕಿರುಕೃತಿಯಲ್ಲಿ ಉಲ್ಲೇಖಿಸಿದಂತೆ).
ಕನ್ನಡವನ್ನು ಕುರಿತ ಕೃಷ್ಣರಾಜ ಒಡೆಯರ್ ಅವರ ಕಾಳಜಿ ಅನುಕರಣೀಯವಾದುದು. ಪ್ರಜಾಪ್ರತಿನಿಧಿ ಸಭೆಯ ಕಲಾಪಗಳು ಕನ್ನಡದಲ್ಲೇ ನಡೆಯಬೇಕೆಂದು ನಿರ್ಣಯ ಕೈಗೊಳ್ಳಲು ಕಾರಣವಾದರು. ಅಧಿಕಾರಿಗಳು ಕನ್ನಡವನ್ನು ಬಳಸುವಂತೆ ಪ್ರೇರೇಪಿಸಿದರು. ಮೈಸೂರು ವಿಶ್ವವಿದ್ಯಾಲಯದ ಉದ್ಘಾಟನೆಯ ಸಂದರ್ಭದಲ್ಲಿ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವೇ ಮುಖ್ಯ ವೆಂದು ಪ್ರತಿಪಾದಿಸಿದ್ದಲ್ಲದೆ ‘ಮೈಸೂರು ವಿಶ್ವವಿದ್ಯಾಲಯವು ಕನ್ನಡದ ಪೀಠವಾಗಬೇಕು’ ಎಂದು ಆಶಿಸಿದರು.
ಉದ್ಯಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ನಾಲ್ವಡಿಯವರು ಗಮನ ಕೊಟ್ಟರು. ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರು ಬ್ಯಾಂಕು, ವಾಣಿಜ್ಯೋದ್ಯಮ ಸಂಘ, ಭದ್ರಾವತಿ ಕಬ್ಬಿಣದ ಕಾರ್ಖಾನೆ, ಟಾಟಾ ವಿಜ್ಞಾನ ಮಂದಿರ, ಕೇಂದ್ರೀಯ ಔದ್ಯಮಿಕ ಕಾರ್ಯಾಗಾರ – ಹೀಗೆ ಹತ್ತಾರು ಸಂಸ್ಥೆಗಳು ಅವರ ಅವಧಿಯಲ್ಲಿ ಆರಂಭವಾದವು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದು ಸಮಾಜದ ಸಮಗ್ರವಿಕಾಸದ ಚಿಂತನೆ. ಇದರಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಲಯಗಳು ಸೇರಿದ್ದವು. ಇದರ ಫಲವಾಗಿ ೧೯೧೧ ರಲ್ಲಿ ಆರ್ಥಿಕ ಪರಿಷತ್ತನ್ನು ಸ್ಥಾಪಿಸಿದರು. ಈ ಪರಿಷತ್ತಿನಡಿಯಲ್ಲಿ ಶಿಕ್ಷಣ ಸಮಿತಿ, ಕೃಷಿ ಸಮಿತಿ ಮತ್ತು ಕೈಗಾರಿಕಾ – ವಾಣಿಜ್ಯ ಸಮಿತಿಗಳು ರೂಪುಗೊಂಡವು. ೧೯೧೨ರಲ್ಲಿ ಪ್ರತ್ಯೇಕ ಕೃಷಿ ಇಲಾಖೆಯನ್ನು ರಚಿಸಲಾಯಿತು. ಇದೇ ವರ್ಷ ಪ್ರತ್ಯೇಕ ರೈಲ್ವೆ ಇಲಾಖೆಯೂ ಆರಂಭವಾಯಿತು. ೧೯೧೩ರಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆಯನ್ನು ರೂಪಿಸಿ ಜಾರಿಗೊಳಿಸಲಾಯಿತು. ಮಹಿಳಾ ಶಿಕ್ಷಣಕ್ಕೂ ಒತ್ತುಕೊಡಲಾಯಿತು. ದಲಿತರು ಶಿಕ್ಷಣ ಪಡೆಯಲು ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸಲಾಯಿತು. ದಲಿತರಿಗೆ ಆದ್ಯತೆ ನೀಡುವ ೩೪ ಸರ್ಕಾರಿ ಹಾಗೂ ೩೧ ಅನುದಾನಿತ ಶಾಲೆಗಳನ್ನು ೧೯೦೦ ರಿಂದ ೧೯೧೦ ರೊಳಗೆ ಸ್ಥಾಪಿಸಿದ್ದಲ್ಲದೆ ದಲಿತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ೧೯೧೩ರಲ್ಲಿ ಉಚಿತ ವಸತಿ ಶಾಲೆಗಳನ್ನು ಪ್ರಾರಂಭಿಸಲಾಯಿತು. ೧೯೧೫ರಲ್ಲಿ ನಾಲ್ವಡಿಯವರು ಒಂದು ಸುತ್ತೋಲೆ ಹೊರಡಿಸಿ ‘ಸಾಮಾಜಿಕ ಅಥವಾ ಧಾರ್ಮಿಕ ನಿರ್ಬಂಧದ ಮೇಲೆ ಸಾರ್ವಜನಿಕ ಶಾಲೆಗಳಿಗೆ ಪಂಚಮರ ಪ್ರವೇಶವನ್ನು ತಡೆಯಬಾರದು. ಹಾಗೇನಾದರೂ ಮಾಡಿದರೆ ಅನುದಾನ ರದ್ದುಗೊಳಿಸಲಾಗುವುದು’ ಎಂದು ಸೂಚಿಸಿದರು. ಇದೊಂದು ಐತಿಹಾಸಿಕ ಸುತ್ತೋಲೆ. ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ನಡೆಯುವ ಅಸಮಾನತೆಯ ಅನ್ಯಾಯಕ್ಕೆ ತಡೆಹಾಕುವ ದಿಟ್ಟ ಕ್ರಮ. ೧೯೦೨ ರಲ್ಲೇ ಮಹಾರಾಣಿ ಕಾಲೇಜಿಗೆ ಹಿಂದೂ ಮಹಿಳೆಯರ ಜೊತೆಗೆ ಮುಸ್ಲಿಂ, ಕ್ರೈಸ್ತ, ಯಹೂದಿ ಸ್ತ್ರೀಯರಿಗೂ ಪ್ರವೇಶಾವಕಾಶ ಕಲ್ಪಿಸಿದ್ದು ಸಹ ಒಂದು ದಿಟ್ಟ ಕ್ರಮವಾಗಿತ್ತು.
ಹೀಗೆ, ಒಂದಲ್ಲ ಎರಡಲ್ಲ, ಸಮಗ್ರ ದೃಷ್ಟಿಯ ಸುಧಾರಣೆಗೆ ಬೇಕಾದ ಚಿಂತನೆ, ಪ್ರತಿಪಾದನೆ ಮತ್ತು ಕ್ರಿಯಾಯೋಜನೆಗಳ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ‘ಪ್ರಭು’ವಾಗಿದ್ದೂ ಪ್ರಜಾನೆಲೆಯ ಒಲವು-ನಿಲುವುಗಳಿಗೆ ನಿಷ್ಠರಾಗಿದ್ದರು. ಜನಸಾಮಾನ್ಯರ ಬದುಕನ್ನು ಹಸನು ಮಾಡುವ ಬದ್ಧತೆ ಹೊಂದಿದ್ದರು. ರಾಜಶಾಹಿ ಪರಂಪರೆಯಲ್ಲಿದ್ದೂ ಅದರಾಚೆಗೆ ನಿಲ್ಲುವ ವ್ಯಕ್ತಿತ್ವ ಹೊಂದಿದ್ದರು; ಸಿಂಹಾಸನವನ್ನು ಮೀರಿ ಬೆಳೆದ ಸಂವೇದನೆಯಿಂದ ಮನುಷ್ಯರಾದರು.
*****