ನನ್ನ ಪರಿಚಯ ಮಾಡಿಕೊಡುವೆ,
ಸಹನೆ ಇದ್ದರೆ ಕೇಳಿ.
ಕಾಲೇಜಿನಲ್ಲಿ ಕಲಿಯುತ್ತಿರುವ
ಬಡ ವಿದ್ಯಾರ್ಥಿ ನಾನು.
ಎಲೆಮರೆಯ ಕಾಯಿಯಂತೆ
ಬದುಕ ಬಯಸುವೆ ನಾನು.
ಕಾಲೇಜಲೆಲ್ಲೆಲ್ಲೂ ಎದ್ದುಕಾಣುವ,
ಚರ್ಚೆ, ಸಮಾರಂಭ, ಸಮ್ಮೇಳನಗಳಲ್ಲಿ
ಭಾಷಣ ಬಿಗಿಯುವ ವಾಗ್ಮಿ ನಾನಲ್ಲ.
ಚುನಾವಣೆಗಳಲ್ಲಿ ಗೆಲ್ಲುವ,
ನಾಟಕ, ಗಾಯನ, ಎನ್ಸೀಸಿ, ಸ್ಪೋರ್‍ಟ್ಸ್
ಎಲ್ಲೆಡೆ ಮಿಂಚುವ ಪ್ರತಿಭಾವಂತ ನಾನಲ್ಲ.
ಮಾತಿನಿಂದೆಲ್ಲರ ಮೋಡಿ ಮಾಡುವ,
ನವೀನ ಉಡುಪುಗಳಿಂದೆಲ್ಲರ ಸೆಳೆದು
ಕಂಡ ಬಣ್ಣದ ಚಿಟ್ಟೆಗಳ ಹಿಂದೆ ಓಡುವ
ನೀರಿನಂತೆ ಹಣವ ಸುರಿದು
ಜೀವನದ ಸುಖ ಜೇನ ಸವಿಯುವ
ಜವಾಬ್ದಾರಿರಹಿತನು ನಾನಲ್ಲ.
ಸದಾ ಕಾಲ ಓದಿ ರ್‍ಯಾಂಕ್‌ಗಳಿಸುವ
ಪುಸ್ತಕದ ಹುಳ ನಾನಲ್ಲದಿದ್ದರೂ
ಜವಾಬ್ದಾರಿಯನರಿತು ಓದುವೆ,
ನನ್ನ ಕೈಲಾದಷ್ಟೂ ಗುರು ಹಿರಿಯರ,
ದೀನ ದರಿದ್ರರ ಅನಾಥ ಅಸಹಾಯಕರ
ಸೇವೆಯಲ್ಲಿ ಕಾಲ ಕಳೆಯುವೆ.
ಪೂಜ್ಯ ತಂದೆ ತಾಯಿಯರ ಆರೈಕೆಯಲ್ಲಿ
ಪ್ರಚಾರ ರಹಿತ ಸರಳ ಜೀವನದಲ್ಲಿ
ಪರೋಪಕಾರ ಮಾಡುವುದರಲ್ಲಿ
ದೇವರ ಕಾಣಲು ಯತ್ನಿಸುವೆ.
ದ್ವೇಷಿಸುವವರನ್ನೂ ಪ್ರೀತಿಸುವೆ
ನಿಜ ಸ್ನೇಹಕೆ ಮಣಿದು ನ್ಯಾಯದಿ ನಡೆವೆ.
*****
೧೨-೦೪-೧೯೭೬