[ಮೈಸೂರು ವಿಶ್ವವಿದ್ಯಾನಿಲಯದ ಬೆಳ್ಳಿಯ ಹಬ್ಬದ ಕವಿಸಮ್ಮೇಳನದಲ್ಲಿ ಓದಿದ್ದು]
ಓಂ, ಸಹ ನಾವವತು ; ಸಹ ನೌ ಭುನಕ್ತು;
ಸಹ ವೀರ್‍ಯಂ ಕರವಾವಹೈ ;
ತೇಜಸ್ವಿನಾವಧೀತಮಸ್ತು ;
ಮಾ ವಿದ್ವಿಷಾವಹೈ.
ಓಂ ಶಾಂತಿಃ ಶಾಂತಿಃ ಶಾಂತಿಃ
೧
ಮೊತ್ತಮೊದಲೇ, ಬೆಳಕಾಗಲೆಂದಾಗ, ಬೆಳಕಾಯ್ತು ; ಬೆಳಕು ಚೆಲುವಾಯ್ತು;
ಕಿಡಿ ಸಿಡಿದು ಮಿನುಗಿದುವು ಜ್ಯೋತಿಗಳ್ ; ಮೂಡಿದರು ಸೂರ್ಯ ಚಂದಿರರು
ಲೋಕಚಕ್ಷುಗಳೆನಿಸಿ, ಸತ್ಯ ಧರ್ಮಗಳಂತೆ, ಕ್ಷಮೆ ದಯೆಗಳಂತೆ.
ಹಸುರ ಸೊಬಗಂ ತೊಟ್ಟು, ಹಾಡುತ್ತ, ಬಾನ್‌ಬಯಲೊಳಾಟವಾಡುತ್ತ,
ಸೌಂದರ್‍ಯದಿಂ ತೀವಿ, ಭೂದೇವಿ ಬೆಳಗಿದಳು, ಜೀವ ಪರಮಾತ್ಮರಿಂ ತೊಳಗಿ.
ಆ ದಿವ್ಯ ದರ್ಶನಂ ಕಣ್ಮುಂದೆ ನೋಡಿದರ್
ದಿವಿಜರುಂ, ಋಷಿಗಳುಂ ; ನಲಿದು ಕುಣಿದಾಡಿದರ್ ;
ಪಾಟಮಂ ಪಾಡಿದರ್-
ಓಂ, ತತ್ಸವಿತುರ್ ವರೇಣಿಯಂ
ಭರ್ಗೋ ದೇವಸ್ಯ ಧೀಮಹಿ,
ಧಿಯೋ ಯೋ ನಃ ಪ್ರಚೋದಯಾತ್.
ಮತ್ತಮವರಿಂತೆಂದು ಬೇಡಿದರ್-
ಹಿರಣ್ಮಯೇನ ಪಾತ್ರೇಣ
ಸತ್ಯಸ್ಯಾಪಿಹಿತಂ ಮುಖಂ ;
ತತ್ ತ್ವಂ ಪೂಷನ್ ಅಪಾವೃಣು
ಸತ್ಯಧರ್ಮಾಯ ದೃಷ್ಟಯೇ.
ಇನ್ನು ಮೊಂದಂ ಬಯಸಿ ಪೂಟಮಂ ಪೂಡಿದರ್-
ಅಸತೋ ಮಾ ಸದ್ಗಮಯ,
ತಮಸೋ ಮಾ ಜ್ಯೋತಿರ್‌ಗಮಯ,
ಮೃತ್ಯೋರ್ ಮಾ ಅಮೃತಂ ಗಮಯ,
ಇಂದಿಂಗಮೆಮಗದುವೆ ದರ್ಶನಂ, ಬಯಸಿದುದೆ ಆ ಅಮೃತಪುತ್ರರ್.
ಬ್ರಹ್ಮ ಮೀ ವಿಶ್ವಂ ; ಬ್ರಹ್ಮಮುಂ ಪೂರ್‍ಣಮೆನೆ ಏನ್ ಚೆಲುವೊ ನಮ್ಮ ಬಾಳ್ ಚೆಲುವು,
ಏನ್ ನಲಿವೊ ನಮ್ಮ ನಲಿವಾತ್ಮನಾನಂದಂ!
೨
ಆನಂದನರಿಯದರ್,
ಆತ್ಮವನೆ ಒಲ್ಲದರ್,
ಬಾನ ಗಡಿಯಲಿ ಗಿಡಿದ ಕತ್ತಲೆಯ ಗುಹೆಯೊಳಡಗಿರ್‍ದರಾ ಅಸುರರ್
ಕೇಳ್ದರಾ ಪಾಟಮಂ ಪಲ್ಮೊರೆದು, ಕಣ್ಣಿರಿಯೆ ಕಂಡರಾ ಬಿಡುಗಣ್ಣ ಬೆಳಕನ್,
ಪೊಳೆದು ಪೊಳೆಯಿಸುತಿರ್ಪ ಬಿಳಿಯ ಬಾನ್‌ಬೆಳಕನ್.
ಮೆಲ್ಲಮೆಲ್ಲನೆ ನುಸುಳಿ ದೇವರಾವರಣದಲಿ, ಆಳ ತೋಟದಲಿ,
ತೆಕ್ಕೆ ತೆಕ್ಕೆಯೊಳೆದ್ದು ಹೊರಬಿದ್ದು, ಕಾರಿರುಳ ಮೊತ್ತಂಗಳಾಗಿ,
ಪೊಗೆಯಾಗಿ, ನೊಣೆವ ಪಡಿನೆಳಲಾಗಿ, ನಂಜಾಗಿ, ಕಣ್ಣ ಮಂಜಾಗಿ,
ಮುತ್ತಿ ಮರುಳ್ಗೊಳಿಸಿದರ್ ಸಂಶಯಂಗಳನೊತ್ತಿ, ಪಾಪಮಂ ಬಿತ್ತಿ,
ಅಲ್ಲದುದನಹುದೆಂದು, ಅಹುದನಲ್ಲೆಂದು,
ಇಲ್ಲದುದನಿಹುದೆಂದು, ಇಹುದನಿಲ್ಲೆಂದು,
ನಲ್ಲದಂ ಪೊಲೆಯೆಂದು, ಪೊಲೆ ನಲ್ಲದೆಂದು,
ತಿರಿಸಿದರ್ ಮಾಯಾವಿಗಳ್ ಬಾಳ್ವ ಮಕ್ಕಳಂ ಸಾವ ಸಂಸಾರ ಸುತ್ತಿ.
ಪಲ ಪೆಸರ್, ಪುರುಳೊಂದು,
ಪಲ ತೆರನ್, ನೆರೆನೊಂದು-
ಅಹಿ, ವೃತ್ರ, ಮಾರ, ಕಲಿ, ಅಹ್ರಿಮನ್, ಸೈತಾನ್!
೩
ಅಂದು ಮೊದಲಾದುದೇ ದೇವಾಸುರಂ!
ಎಂದು ಕೊನೆಗಾಣ್ಬುದೋ ದೇವಾಸುರಂ!
ಪಸುಳೆವೋಲ್ ನಿಲ್ವಾಳ ನಿಲವು!
ಏನ್ ಚೆಲ್ಲು ಚೆಲ್ವು!
ಓ ಪಂಪ, ನೀನ್ ತುಂಬಿ ತೊರೆದೊಱತೆ ಪರಿವುದಿನ್ನುಂ.
ಸಾವಿರಂ ಸಂದುವುದು ಪರಿವುದಿನ್ನುಂ.
ಅದನೆ ಬಸವಣ್ಣನ್,
ಅದನೆ ಕುವರವ್ಯಾಸನ್
ಇನ್ನೊಮ್ಮೆ ಸಾರಿದರ್ ತಮ್ಮ ಕಣ್ಣಿನ್ ಕಂಡು
ಪೊಸಪೊಸತು ಪರಿಯಿನ್,
ಆಳ ಬಾಳನ್ ಕಡೆವ ಶಿವಕಲೆಯ ಕೃಪೆಯಿನ್ :
ಅದು ಶಿವಂ, ಸತ್ಯಮದು, ಸುಂದರಂ.
ಗುರು ಪಂಪ, ಓ ತಂದೆ ಪಂಪಾ,
ತೆಂಕನಾಡನ್ ಮರೆಯಲಾರದೆಲೆ ಜೀವಾ,
ಮರೆಯದಿರು, ಪರಸು, ಪರಸೆಮ್ಮನ್.
ಪಳೆಯ ಕರ್ನಾಟಕಂ ಮತ್ತೊರ್‍ಮೆ ಕಟ್ಟುಗೆ!
ಎಳೆಯ ಕರ್ನಾಟಕಂ ಪೊಸಪುಟ್ಟು ಪುಟ್ಟುಗೆ!
ಪಿರಿಯತನಮನ್ ಮರೆತ ಕಿರುಮಕ್ಕಳನ್ ಪರಸು,
ಪರಸು ನೀನೆಮ್ಮನ್.
*****
೧೯೪೧