ಪುಂಸ್ತ್ರೀ – ೨

ಪುಂಸ್ತ್ರೀ – ೨

ಹಸ್ತಿನೆಯನವ ಬಿಟ್ಟನೇತಕೆ

ಅವಳ ಬಗ್ಗೆ ಮೊದಲ ಸುದ್ದಿ ತಂದದ್ದು ಒಬ್ಬ ವಾರ್ತಾವಾಹಕ. ಅವನಿಗೆ ಹಸ್ತಿನಾವತಿಯಾದ್ಯಂತ ಮಾರುವೇಷದಲ್ಲಿ ಸಂಚರಿಸುತ್ತಿದ್ದ ಗೂಢಚರರು ಸುದ್ದಿಮುಟ್ಟಿಸಿದ್ದರು. ಅದು ಅವಳ ಸ್ವಯಂವರದ ಸುದ್ದಿ. ಆರ್ಯಾವರ್ತದಲ್ಲಿ ಅದೆಷ್ಟೋ ಸ್ವಯಂವರಗಳು ನಡೆಯುತ್ತಿರುತ್ತವೆ. ಇದೊಂದು ಸುದ್ದಿ ಕೇಳಿದಾಗ ಭೀಷ್ಮರಿಗೆ ಮೊದ ಮೊದಲಿಗೆ ಏನೂ ಅನ್ನಿಸಿರಲಿಲ್ಲ. ಆದರೆ ಅದೇಕೋ ಮತ್ತೆ ಅದು ಹೊಸ ಯೋಚನೆಗಳನ್ನು ಮೂಡಿಸಿ, ಬೃಹತ್ತಾದ ಒಂದು ಸಮಸ್ಯೆಯಾಗಿ ಇಲ್ಲಿಯವರೆಗೆ ಬೆಳೆದುಬಿಟ್ಟಿತು. ವಾರ್ತಾವಾಹಕ ಅಂದು ಆ ಸುದ್ದಿಯನ್ನು ತಾರದೆ ಇರುತ್ತಿದ್ದರೆ!

ಅಂದು ಭೀಷ್ಮರು ಅಧ್ಯಯನ ಕೊಠಡಿಯಲ್ಲಿ ತಾಳೆಗರಿ ಓಲೆಯ ಶ್ಲೋಕವೊಂದರಲ್ಲಿ ತಲ್ಲೀನರಾಗಿದ್ದರು. ಹೆಣ್ಣಿಗೆ ಗಂಡಿಗಿಂತ ಅಧಿಕ ಸ್ಥಾನಮಾನ ಹಿಂದೆ ಇತ್ತೆನ್ನುವ ಶ್ಲೋಕವದು. ಆರ್ಯಾವರ್ತದಲ್ಲಿ ದಸ್ಯುಗಳ ಆಳ್ವಿಕೆಯಿಂದಾಗಿ ಗಣಗಳಿದ್ದವು. ಗಣವ್ಯವಸ್ಥೆಗೂ ಮೊದಲು ಮಾತೆ ಕುಟುಂಬದ ಮುಖ್ಯಸ್ಥೆಯಾಗಿದ್ದಳು. ಆಗ ಪಿತನೆಂಬ ಪಟ್ಟವೇ ಇರಲಿಲ್ಲ. ಆರ್ಯರ ಆಕ್ರಮಣವಾಗಿ ವ್ಯವಸ್ಥೆ ಬದಲಾಯಿತು. ಪಿತ ಕುಟುಂಬದ ಯಜಮಾನನಾದ. ಸ್ತ್ರೀಯರ ಹಕ್ಕು ಗಳನ್ನು ಕಸಿದುಕೊಳ್ಳಲಾಯಿತು. ಚಂದ್ರವಂಶೀಯರಲ್ಲಿ ಹಾಗಾಗಬಾರದೆಂದು ಗುರು ಪರಶುರಾಮರು ಎಷ್ಟೋ ಬಾರಿ ಅವರಲ್ಲಿ ಹೇಳಿದ್ದರು. ಎಳವೆಯ ಹುಮ್ಮಸ್ಸಿನಲ್ಲಿ ಗುರು ವಚನಪಾಲನೆ ಒಂದು ಆದರ್ಶವೆಂಬ ಭಾವವಿತ್ತು. ಅಪ್ಪ ಶಂತನು ಚಕ್ರವರ್ತಿಯವರಿಗಾಗಿ ಸತ್ಯವತಿದೇವಿಯನ್ನು ಕೇಳಲು
ಹೋದದ್ದು, ಆಜೀವ ಬ್ರಹ್ಮಚಾರಿಯಾಗಿರುತ್ತೇನೆಂದು ವಚನ ಬದ್ಧನಾದದ್ದು – ಎಲ್ಲದಕ್ಕೂ ಪ್ರೇರಣೆ ಅದೊಂದು ಪರ್ಯಂತ ಗುರುವಾಕ್ಯ. ಚಂದ್ರವಂಶೀಯರು ಸ್ತ್ರೀಯರ ಹಕ್ಕುಗಳನ್ನು ಕಸಿದುಕೊಳ್ಳಬಾರದು ಎಂಬ ನೀತಿಬೋಧೆ.

ತಾಳೆಗರಿ ಶ್ಲೋಕ ಪಠನದಲ್ಲಿ ತಲ್ಲೀನನಾಗಿದ್ದಾಗ ವಾರ್ತಾವಾಹಕ ಕಾಣಿಸಿಕೊಂಡ. “ಆಚಾರ್ಯ ಭೀಷ್ಮರಿಗೆ ಪ್ರಣಾಮ. ಒಂದು ಸ್ವಯಂವರದ ವಾರ್ತೆ ತಂದಿದ್ದೇನೆ. ಅನುಮತಿ ಯಾದರೆ ಹೇಳಿಬಿಡುತ್ತೇನೆ.”

ಭೀಷ್ಮರಿಗೆ ಕಿರಿಕಿರಿಯಾಯಿತು. ಅಧ್ಯಯನಕಾಲದಲ್ಲಿ ಇವ ಬಂದಿದ್ದಾನೆ. ಬ್ರಹ್ಮಚಾರಿಯಾದ ತನ್ನಲ್ಲಿ ಯಾವುದೋ ಸ್ವಯಂವರದ ಸುದ್ದಿ ಹೇಳಲು ಅನುಮತಿ ಯಾಚಿಸುತ್ತಿದ್ದಾನೆ. ಯಾರು ಯಾರನ್ನು ಮದುವೆಯಾದರೆ ಹಸ್ತಿನಾವತಿಗೇನಾಬೇಕು? ಹಾಳಾದವ ಬಂದಿದ್ದಾನೆ. ಬೇಡವೆಂದು ಉಪೇಕ್ಷಿಸಿದರೆ ಅದು ಯಾವ ರಾಜಕೀಯ ಒಳಸುಳಿಗಳನ್ನು ಪಡೆದುಕೊಳ್ಳುತ್ತದೆಯೋ? ಹಸ್ತಿನಾವತಿಯ ಸಂರಕ್ಷಕ ಒಂದು ಸುದ್ದಿಯನ್ನು ಹಲವು ಆಯಾಮಗಳಿಂದ ವಿಶ್ಲೇಷಿಸಬೇಕಾಗುತ್ತದೆ. ಒಬ್ಬ ಮುತ್ಸದ್ಧಿಗೆ ಮುಖ್ಯ ಬೇಕಾದದ್ದು ತಾಳ್ಮೆ. ಅದೊಂದು ಕೆಟ್ಟು ಬಿಟ್ಟರೆ ಅನರ್ಥ ಪರಂಪರೆ ಸಂಭವಿಸಿಬಿಡುತ್ತದೆಂದುಕೊಂಡು ತಾಳ್ಮೆಯಿಂದ ಭೀಷ್ಮರು ಸಕಾರಾತ್ಮಕವಾಗಿ ತಲೆಯಾಡಿಸಿದರು.

ವಾರ್ತಾವಾಹಕನೆಂದ : “ಕಾಶೀರಾಜನ ಮೂವರು ಕುವರಿಯರು ಅಂಬೆ, ಅಂಬಿಕೆ, ಅಂಬಾಲಿಕೆ. ಅವರಿಗೆ ಸ್ವಯಂವರ ಏರ್ಪಾಡಾಗಿದೆ. ವಿಕ್ರಮವೇ ಪಣ. ಯುದ್ಧಕಣದಲ್ಲಿ ಎಲ್ಲರನ್ನೂ ಗೆಲ್ಲುವ ಅರಸುಕುವರನಿಗೆ ಮೂವರೂ ಮಾಲೆ ಹಾಕುತ್ತಾರಂತೆ.

ಭೀಷ್ಮರಿಗೆ ಕಸಿವಿಸಿಯಾಯಿತು. ಇದೆಂಥಾ ಪಣ? ಒಬ್ಬನಿಗೇ ಮೂವರನ್ನು ಕಟ್ಟಿಬಿಡಲು ಒಬ್ಬ ಅಪ್ಪನಾಗಿ ಆ ಕಾಶೀರಾಜನಿಗೆ ಅದು ಹೇಗೆ ಮನಸ್ಸು ಬರುತ್ತದೆ? ಸ್ತ್ರೀಯರ ಹಕ್ಕುಗಳ ಬಗ್ಗೆ ಚಿಂತಿಸುವ ಹೊತ್ತಲ್ಲಿ ಇಂಥದ್ದೊಂದು ವಾರ್ತೆ ಕೇಳಬೇಕಾಯಿತು. ಇದರಲ್ಲೇನೋ ಸ್ವಾರಸ್ಯ ವಿರುವಂತಿದೆಯೆಂದು ಅನ್ನಿಸಿ ಭೀಷ್ಮರು ಕೇಳಿದರು: “ಒಳ್ಳೆಯದು. ಈ ಸುದ್ದಿ ನಿನಗೆ ಮುಟ್ಟಿಸಿದವರು ಯಾರು?”

ವಿನೀತಭಾವದಿಂದ ವಾರ್ತಾವಾಹಕನೆಂದ: “ಮಲಯ ಮಂದಾರ ಛತ್ರ ಬ್ರಾಹ್ಮಣರಿಂದ ತುಂಬಿಹೋಗಿದೆ. ಅವರ ನಡುವೆ ಸೇರಿಕೊಂಡ ನಮ್ಮ ಪ್ರಚ್ಛನ್ನವೇಷಧಾರಿ ಗೂಢಚರರು ನನಗಿದನ್ನು ಹೇಳಿದರು. ಆ ಬ್ರಾಹ್ಮಣರೆಲ್ಲಾ ಸ್ವಯಂವರದ ಸಂಭ್ರಮ ನೋಡಲು ಕಾಶಿಗೆ ಹೊರಟವರಂತೆ. ಎಲ್ಲರ ಬಾಯಲ್ಲೂ ಅದೇ ಸುದ್ದಿ ಮತ್ತು ಅವಳದೇ ವರ್ಣನೆ.”

ವಾರ್ತಾವಾಹಕ ಮಾತು ನಿಲ್ಲಿಸಿದ. ಬ್ರಹ್ಮಚಾರಿ ಭೀಷ್ಮಾಚಾರ್ಯರ ಮುಂದೆ ಹೆಣ್ಣೊಬ್ಬಳ ವರ್ಣನೆ ಮಾಡುವುದು ತಪ್ಪೆಂದು ಅವನ ವಿವೇಕ ಎಚ್ಚರಿಸಿತು. ಭೀಷ್ಮರಿಗೆ ಅವನ ಭಾವ ಅರಿವಾಗಿ ಹೇಳಿದರು: “ನೀನು ಮಾತು ನಿಲ್ಲಿಸಬೇಕಾಗಿಲ್ಲ. ಆದರೆ ಅಗತ್ಯಕ್ಕಿಂತ ಹೆಚ್ಚಿನ ಮಾತು ಅಗತ್ಯವಿಲ್ಲ. ಅವಳ ವರ್ಣನೆ ಮಾಡುವುದು ಬೇಡ. ಅವಳು ಯಾರು ಎಂದಷ್ಟೇ ಹೇಳಿದರೆ ಸಾಕು.”

ವಾರ್ತಾವಾಹಕ ತಲೆಯಲುಗಿಸಿ ಮುಂದುವರಿಸಿದ: “ಅವಳು ಅಂಬೆ. ಕಾಶೀರಾಜನ ಹಿರಿಯ ಮಗಳು. ಅಸಾಧಾರಣ ಸುಂದರಿಯಂತೆ. ವೇದಾಭ್ಯಾಸ ಮಾಡಿದ್ದಾಳಂತೆ. ಹಾಗಂತ ಬ್ರಾಹ್ಮಣರು ಮಾತಾಡಿಕೊಳ್ಳುತ್ತಿದ್ದರಂತೆ.”

ಹಸ್ತಿನಾವತಿಯಲ್ಲಿ ಪ್ರವಾಸಿಗರಿಗಾಗಿ ಎಂಟು ದೊಡ್ಡ ಛತ್ರಗಳಿದ್ದವು. ಅವುಗಳಲ್ಲಿ ಅತ್ಯಂತ ದೊಡ್ಡದು ಮಲಯ ಮಂದಾರ ಛತ್ರ. ಅದರಲ್ಲಿ ಸಂಗೀತಾಭ್ಯಾಸಿಗಳಿಗೆಂದು ಕೊಠಡಿ ಯೊಂದಿತ್ತು. ಗಾನ-ನರ್ತನ ಗೋಷ್ಠಿಗಾಗಿ ದೊಡ್ಡ ಸಭಾಂಗಣವೊಂದಿತ್ತು. ಅದು ಯಾವಾಗಲೂ ಯಾತ್ರಿಗಳಿಂದ ತುಂಬಿರುತ್ತಿತ್ತು. ಅವರ ನಡುವೆ ಸಂಸ್ಕೃತ ಬಲ್ಲ ಗೂಢಚರರು ಪ್ರಚ್ಛನ್ನವೇಷಗಳಲ್ಲಿ ಸಂಚರಿಸಿ ಆರ್ಯಾವರ್ತದ ವಾರ್ತಾ ವಿಶೇಷಗಳನ್ನು ಸಂಗ್ರಹಿಸಿ ಬಿಡುತ್ತಿದ್ದರು. ತೀರ್ಥಾಟನೆಯ ನೆವದಲ್ಲಿ ಲೋಕಜ್ಞಾನ ಪಡೆಯುವ ಉದ್ದೇಶದಿಂದ ಬ್ರಾಹ್ಮಣರು ಹಿಂಡು ಹಿಂಡಾಗಿ ಆರ್ಯಾವರ್ತದಾದ್ಯಂತ ಸಂಚರಿಸುವುದನ್ನು ಭೀಷ್ಮರು ಗಮನಿಸಿದ್ದರು. ಕ್ಷತ್ರಿಯರಿಗೆ ರಾಜ್ಯದಾಹ, ವೈಶ್ಯರಿಗೆ ಧನದಾಹ ಇರುವಂತೆ, ಬ್ರಾಹ್ಮಣರಿಗೆ ಜ್ಞಾನದಾಹ ಇರುವುದನ್ನು ಅವರು ಗುರುತಿಸಿದ್ದರು. ಎಲ್ಲರಲ್ಲೂ ಜ್ಞಾನದಾಹವೇಕಿಲ್ಲವೆಂದು ಎಷ್ಟೋ ಬಾರಿ ತನ್ನೊಳಗನ್ನು ಕೇಳಿಕೊಂಡಿದ್ದರು. ಉತ್ತರ ದೊರೆತಿರಲಿಲ್ಲ. ಇಂದು ಬ್ರಾಹ್ಮಣರಿಂದ ಸುದ್ದಿಯೊಂದು ಹಸ್ತಿನಾವತಿಗೆ ಮುಟ್ಟಿದೆ. ಆದರೆ ಇದರಲ್ಲಿ ತಲೆಹಾಕಬೇಕಾದ ಪ್ರಮೇಯ ಹಸ್ತಿನಾವತಿಗಿಲ್ಲ. ಏನಿದ್ದರೂ ಅದು ಕಾಶಿಗೆ ಸಂಬಂಧಿಸಿದ ವಿಚಾರ.

ಶಂತನು ಚಕ್ರವರ್ತಿಗಳು ಆಗಾಗ ಹೇಳುತ್ತಿದ್ದ ಮಾತೊಂದು ಭೀಷ್ಮರ ನೆನಪಿನ ಪಟಲದಲ್ಲಿ ಮೂಡಿತು: “ಮಗೂ ದೇವವ್ರತಾ, ನಾವು ಚಂದ್ರವಂಶೀಯರು. ಪ್ರಖ್ಯಾತ ಸೂರ್ಯವಂಶೀ ಯರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲದವರು. ಚಂದ್ರಕಿರಣಗಳು ಪಸರಿಸುವ ಪ್ರದೇಶಗಳೆಲ್ಲವೂ ಚಂದ್ರವಂಶೀಯರಿಗೆ ಸೇರಿದ್ದು.”

ಇಷ್ಟಾಗಿಯೂ ಚಕ್ರವರ್ತಿಗಳು ವಂಶಪ್ರತಿಷ್ಟೆಗಾಗಿ ಆಕ್ರಮಣ ನಡೆಸಿ ಸಣ್ಣಪುಟ್ಟ ರಾಜ್ಯಗಳನ್ನು ಕುರು ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳಲಿಲ್ಲ. ಹಸ್ತಿನಾವತಿಯೇ ಸಮಸ್ತ ಆರ್ಯಾವರ್ತದ ಕೇಂದ್ರಸ್ಥಾನವಾಗಬೇಕೆಂದು ಭೀಷ್ಮರೂ ಬಯಸಲಿಲ್ಲ. ಆದರೂ ಒಂದು ಕ್ಷಣ ಅವರು ಯೋಚಿಸುವಂತಾಯಿತು. ವಾರ್ತಾವಾಹಕ ಇನ್ನೂ ನಿಂತೇ ಇದ್ದಾನೆ. ಹಾಗಾದರೆ ವಿಷಯ ಇಷ್ಟಕ್ಕೇ ಮುಗಿಯಲಿಲ್ಲವೆಂದಂತಾಯಿತು.

“ವಾರ್ತಾವಾಹಕಾ, ಇನ್ನೂ ಇಲ್ಲೇ ನಿಂತಿದ್ದೀಯಲ್ಲಾ? ಹೇಳಲಿಕ್ಕೇನಾದರೂ ಉಳಿದಿದೆಯೆ?”

ಅವನು ಸುತ್ತಮುತ್ತ ನೋಡಿದ. ಭೀಷ್ಮರ ಸಮೀಪಕ್ಕೆ ಬಂದು ಪಿಸುಮಾತಿನಲ್ಲಿ ಹೇಳಿದ: “ಬ್ರಾಹ್ಮಣರು ಆಡಿಕೊಳ್ಳುತ್ತಿದ್ದರು, ಆರ್ಯಾವರ್ತದ ಎಲ್ಲಾ ದೇಶಗಳಿಗೆ ಆಮಂತ್ರಣ ಹೋಗಿದೆ ಯಂತೆ; ಹಸ್ತಿನಾವತಿ ಮತ್ತು ಸೌಭಗಳನ್ನು ಹೊರತು ಪಡಿಸಿ.”

ಈಗ ಭೀಷ್ಮರು ಯೋಚಿಸುವಂತಾಯಿತು. ವಿವಾಹ ಏರ್ಪಡಿಸುವವರ ಸಂಕಷ್ಟಗಳನ್ನು ಅವರು ಕೇಳಿ ತಿಳಿದಿದ್ದರು. ಅವಸರ, ತುರ್ತು, ಒತ್ತಡಗಳಿಂದಾಗಿ ಅತ್ಯಂತ ಆಪ್ತರಿಗೆ ಆಮಂತ್ರಣ ಕಳುಹಿಸಲು ಮರೆತು ಪೇಚಿಗೆ ಸಿಲುಕುವ ಕನ್ಯಾಪಿತೃಗಳ ಬಗ್ಗೆ ಅವರಿಗೆ ಅನುಕಂಪವಿತ್ತು. ಕಾಶೀರಾಜನಿಂದ ಹಸ್ತಿನಾವತಿಗೆ ಆಮಂತ್ರಣ ಬಾರದುದರ ಬಗ್ಗೆ ಮೊದಲಿಗೆ ಅವರಿಗೇನೂ ಅನ್ನಿಸಿರಲಿಲ್ಲ. ಆರ್ಯಾವರ್ತದುದ್ದಕ್ಕೂ ಅದೆಷ್ಟೋ ರಾಜರುಗಳಿದ್ದಾರೆ. ವಿವಾಹಗಳು, ಸ್ವಯಂವರಗಳು ನಡೆಯುತ್ತಲೇ ಇರುತ್ತವೆ. ಎಲ್ಲಾ ರಾಜ್ಯಗಳಿಂದ ಹಸ್ತಿನಾವತಿಗೆ ಆಮಂತ್ರಣ ಬರುವುದಿಲ್ಲ. ಆಮಂತ್ರಣ ಬಂದ ಯಾವುದೇ ಸ್ವಯಂವರಗಳಿಗೆ ಈವರೆಗೆ ಭೀಷ್ಮರು ಹೋದವರಲ್ಲ. ಬದುಕನ್ನು ಗಂಭೀರವಾಗಿ ತೆಗೆದುಕೊಳ್ಳುವವರಿಗೆ ಎಲ್ಲಾ ವಿವಾಹಗಳಿಗೆ ಹೋಗಲು ವ್ಯವಧಾನವಿರುವುದಿಲ್ಲ. ಆದರೆ ಕಾಶೀರಾಜ ಬೇಕೆಂದೇ ಎರಡು ದೇಶಗಳನ್ನು ಹೊರಗಿಟ್ಟಿದ್ದಾನೆಂದಾಯಿತು. ಇವ ಯಾಕಾಗಿ ಹೀಗೆ ಮಾಡಿದ?

ಭೀಷ್ಮರ ಮುಖವನ್ನು ಓದಿಕೊಂಡ ಗೂಢಚರ ಪಿಸುಮಾತಿನಲ್ಲಿ ಮುಂದುವರಿಸಿದ : “ಕಾಶೀರಾಜ ಪ್ರತಾಪಸೇನನಿಗೆ ಗಂಡು ಸಂತಾನವಿಲ್ಲ. ಶೌರ್ಯವನ್ನು ಪಣವಾಗಿರಿಸಿ ಮೂವರು ಕುವರಿಯರು ಒಬ್ಬನನ್ನೇ ವರಿಸುವಂತಹ ವ್ಯವಸ್ಥೆ ಮಾಡಿದ್ದಾನೆ. ಈ ಪ್ರತಾಪಸೇನ ಏನೇನೂ ಪರಾಕ್ರಮಿಯಲ್ಲವಂತೆ. ಮಗಳಂದಿರ ವಿವಾಹಕ್ಕಿಂತ ಶೌರ್ಯವಂತ ಅಳಿಯನೊಬ್ಬನನ್ನು ಪಡೆಯುವುದು ಅವನ ಮುಖ್ಯ ಉದ್ದೇಶವಂತೆ. ಪ್ರತಾಪಸೇನನ ಬಳಿಕ ಅವನ ಬಲಿಷ್ಠ ಅಳಿಯ ಕಾಶಿಯ ರಾಜನಾಗುತ್ತಾನಂತೆ. ಹಾಗಂತ ಬ್ರಾಹ್ಮಣರು ಮಾತಾಡಿಕೊಳ್ಳುತ್ತಿದ್ದರಂತೆ.”

ವಾರ್ತಾವಾಹಕ ವಂದಿಸಿ ಹೊರನಡೆದ. ಭೀಷ್ಮರು ಓಲೆಗರಿಯನ್ನು ಕಟ್ಟಿನಲ್ಲಿಟ್ಟು ಅದನ್ನು ಜೋಪಾನವಾಗಿ ತೆಗೆದಿರಿಸಿ ಶತಪಥ ಹಾಕತೊಡಗಿದರು. ಕಾಶೀರಾಜ ಹಸ್ತಿನಾವತಿಗೆ ಯಾಕಾಗಿ ಸ್ವಯಂವರದ ಆಮಂತ್ರಣ ಕಳುಹಿಸಲಿಲ್ಲ? ಕಳುಹಿಸಿದರೂ ಹಸ್ತಿನಾವತಿಯಿಂದ ಯಾರೂ ಬರಲಾರರೆಂದೆ? ಸ್ವಯಂವರಕ್ಕೆ ಹೋಗುವುದು, ಬಿಡುವುದು ಹಸ್ತಿನಾವತಿಗೆ ಸಂಬಂಧಿಸಿದ ವಿಷಯ. ಎಲ್ಲಾ ಅರಸರಿಗೆ ಹೋಗಿರುವ ಆಮಂತ್ರಣ ಹಸ್ತಿನಾವತಿಗೆ ಬರಲಿಲ್ಲವೆಂದಾದರೆ ಅವನು ಕುರುಸಾಮ್ರಾಜ್ಯವನ್ನು ಅವಮಾನಿಸಿದಂತಾಗುತ್ತದೆ. ಅವನ ಕಲ್ಪನೆಯ ಬಲಿಷ್ಠ ಅಳಿಯ ದೊರಕುವ ಮೊದಲೇ ಹಸ್ತಿನಾವತಿಗೆ ಸಡ್ಡು ಹೊಡೆಯುತ್ತಿದ್ದಾನೆಯೆ? ನಾಳೆ ಅವನಿಗೊಬ್ಬ ಬಲಿಷ್ಠ ಅಳಿಯ ದೊರೆತರೆ ಅವನು ಹಸ್ತಿನಾವತಿಯನ್ನು ಕಾಶೀರಾಜ್ಯಕ್ಕೆ ಸೇರ್ಪಡೆಗೊಳಿಸಲು ಯತ್ನಿಸಬಹುದೆ?

ಭೀಷ್ಮರ ಶತಪಥ ಮತ್ತೆ ಮುಂದುವರಿಯಿತು. ಸೌಭದೇಶಕ್ಕೂ ಆಮಂತ್ರಣ ಹೋಗಿಲ್ಲವೆಂದು ವಾರ್ತಾವಾಹಕ ಹೇಳಿದ್ದಾನೆ. ಹಸ್ತಿನಾವತಿಯನ್ನು ಸೌಭದೊಡನಿಟ್ಟು ತೂಗಿ ನೋಡಿದನೇ ಆ ಪ್ರತಾಪಸೇನ? ಎಲ್ಲಿಯ ಸೌಭ, ಎಲ್ಲಿಯ ಹಸ್ತಿನಾವತಿ? ದೂರದಲ್ಲಿ ಸಿಂಧೂದೇಶಕ್ಕೆ ಹತ್ತಿರದಲ್ಲಿರುವ ಸೌಭವನ್ನು ಕಟ್ಟಿ ಬೆಳೆಸಿದವ ದಸ್ಯುರಾಜ ಸಾಲ್ವ. ಗುರುಗಳಾದ ಪರಶುರಾಮರು ದಸ್ಯುಗಳ ಬಗ್ಗೆ ಹೇಳುತ್ತಿದ್ದುದು ಭೀಷ್ಮರಿಗೆ ನೆನಪಾಯಿತು.

ಸಿಂಧೂ ದೇಶ ಮೂಲತಃ ದಸ್ಯುಗಳದ್ದು. ಉತ್ತರದಿಂದ ಆರ್ಯರ ಆಗಮನವಾದಾಗ ದಸ್ಯುಗಳಿಗೂ ಅವರಿಗೂ ಬಹುದೊಡ್ಡ ಹೋರಾಟ ನಡೆಯಿತು. ದಸ್ಯುಗಳು ಯುದ್ಧ ತಂತ್ರಗಳಲ್ಲಿ ಪಳಗಿದವರಲ್ಲ. ಗದೆ, ಈಟಿ, ಕತ್ತಿ, ಗುರಾಣಿ ಬಿಟ್ಟರೆ ಬೇರೆ ಆಯುಧ ಬಳಸುತ್ತಿರಲಿಲ್ಲ. ಧನುರ್ವಿದ್ಯೆಯನ್ನು ಕೇಳಿಯೂ ತಿಳಿದವರಲ್ಲ. ಆರ್ಯರು ಗೆದ್ದದ್ದೇ ಧನುರ್ವಿದ್ಯೆಯಿಂದಾಗಿ. ಸೋತ ದಸ್ಯುಗಳು ಅಪರಸಮುದ್ರ ಮಾರ್ಗವಾಗಿ ಪಲಾಯನ ಮಾಡಿದರು. ಕೆಲವರು ದಕ್ಷಿಣಕ್ಕೆ ಬಂದರು. ಉತ್ತರ ಆರ್ಯಾವರ್ತವಾಯಿತು. ಕೆಳಭಾಗ ದಕ್ಷಿಣಾಪಥವಾಯಿತು. ಇವನ್ನು ಒಟ್ಟು ಸೇರಿಸಿ ಸಮಗ್ರ ಭರತಖಂಡವನ್ನು ನಿರ್ಮಿಸುವುದು ತನ್ನ ಮಹತ್ವಾಕಾಂಕ್ಷೆ ಎಂದು ಗುರು ಪರಶುರಾಮರು ಹೇಳುತ್ತಿದ್ದರು.

ಆದರೆ ಜಗಮೊಂಡ ದಸ್ಯುಗಳಲ್ಲಿ ಕೆಲವರು ಆರ್ಯಾವರ್ತದಲ್ಲೇ ಉಳಿದುಬಿಟ್ಟರು. ಅವರಲ್ಲಿ ಆರ್ಯರ ಅಡಿಯಾಳಾಗಿದ್ದುಕೊಂಡೇ ರಾಜ್ಯಕಟ್ಟಲು ಯತ್ನಿಸಿದವರೂ ಇದ್ದರು. ಸೌಭ ದೇಶವನ್ನು ಕಟ್ಟಿದ ಸಾಲ್ವಭೂಪತಿ ಒಬ್ಬ ದಸ್ಯು. ಕ್ಷತ್ರಿಯ ಅರಸರು ಅವನನ್ನು ತಮ್ಮ ಸಮಾನನೆಂದು ಪರಿಗಣಿಸುತ್ತಿರಲಿಲ್ಲ. ಅವನನ್ನು ಅವಮಾನಿಸಲೆಂದೇ ಕಾಶೀರಾಜ ಅವನಿಗೆ ಸ್ವಯಂವರದ ಆಮಂತ್ರಣ ಕಳುಹಿಸಿರಲಿಕ್ಕಿಲ್ಲ.

ಭೀಷ್ಮರು ತಲೆಕೊಡವಿಕೊಂಡರು. ಸಾಲ್ವ ಭೂಪತಿಗೆ ಅವಮಾನ ಮಾಡುವುದರೊಂದಿಗೆ ಹಸ್ತಿನಾವತಿಗೂ ಸಡ್ಡು ಹೊಡೆದು ಬಿಟ್ಟನಲ್ಲಾ ಈ ಪ್ರತಾಪಸೇನ? ಇದನ್ನು ಸಹಿಸಿಕೊಂಡು ಸುಮ್ಮನಿರುವುದೆ? ಹಸ್ತಿನಾವತಿಗೆ ಅನ್ಯರ ರಾಜ್ಯಬೇಡ. ಆದರೆ ಕುರುಸಾಮ್ರಾಜ್ಯಕ್ಕೆ ಸಡ್ಡು ಹೊಡೆಯುವುದಾದರೆ ಆತನನ್ನು ಸುಮ್ಮನೆ ಬಿಡುವಂತಿಲ್ಲ. ಅವನಂತೆ ಸಡ್ಡು ಹೊಡೆಯುವವರು ಹೆಚ್ಚಾದರೆ ಕುರುಸಾಮ್ರಾಜ್ಯ ಎಲ್ಲಿ ಉಳಿಯುತ್ತದೆ? ಭೀಷ್ಮಾಚಾರ್ಯ ಬದುಕಿರುವಾಗಲೇ ಕುರುಸಾಮ್ರಾಜ್ಯದ ಅವಸಾನವಾಗಬಾರದು. ಬ್ರಹ್ಮಚರ್ಯ ವ್ರತಕ್ಕೆ ಅರ್ಥ ಬರಬೇಕಾದರೆ ಕುರು ಸಾಮ್ರಾಜ್ಯ ಬಲಿಷ್ಠವಾಗಿ ಉಳಿಯಬೇಕು. ಈಗೇನು ಮಾಡುವುದು?

ಭೀಷ್ಮರು ಚಿಂತಿಸತೊಡಗಿದರು. ಕಾಶೀರಾಜ ಹಸ್ತಿನಾವತಿಗೆ ಆಮಂತ್ರಣ ಕಳುಹಿಸದೆ ಇರಬೇಕಾದರೆ ಅವನಲ್ಲೇನೋ ತರ್ಕವಿರಬೇಕು. ಏನಿರಬಹುದು ಅದು? ಬ್ರಹ್ಮಚಾರಿ ಭೀಷ್ಮರಿಗೆ ಆಮಂತ್ರಣ ಕಳುಹಿಸುವುದು ಅನಗತ್ಯವೆಂದೆ? ವಿಚಿತ್ರವೀರ್ಯ ಸ್ವಯಂವರದಲ್ಲಿ ವಿಕ್ರಮವನ್ನು ಪ್ರದರ್ಶಿಸಿ ಗೆಲ್ಲಬಲ್ಲ ಶಕ್ತಿವಂತನಲ್ಲ ಎಂದುಕೊಂಡನೇ ಆ ಪ್ರತಾಪಸೇನ? ಅಥವಾ ವಿಚಿತ್ರವೀರ್ಯ ಕ್ಷತ್ರಿಯನೇ ಅಲ್ಲವೆಂದು ತೀರ್ಮಾನಿಸಿಬಿಟ್ಟನೆ?

ಭೀಷ್ಮರ ಕಳವಳ ಹೆಚ್ಚಾಯಿತು. ಕಾಶೀರಾಜ ತನ್ನನ್ನು ಶುದ್ಧ ಕ್ಷತ್ರಿಯನೆಂದು ಭಾವಿಸಿ ಕೊಂಡವನು. ಹುಟ್ಟಿನಿಂದಲೇ ಕುಲ ನಿರ್ಣಯವಾಗುತ್ತದೆಂದು ಬಲವಾಗಿ ವಾದಿಸುತ್ತಿದ್ದವನು. ಬ್ರಾಹ್ಮಣರು ಆದಿಪುರುಷನ ಶಿರದಿಂದ ಹುಟ್ಟಿದರೆ, ಕ್ಷತ್ರಿಯರು ತೋಳುಗಳಿಂದ ಜನಿಸಿದವರೆಂದು ನಂಬಿದವನು. ಅವನ ಹಾಗೆ ನಂಬಿಕೊಂಡ ಕ್ಷತ್ರಿಯರು ಎಷ್ಟೋ ಮಂದಿ ಇದ್ದಾರೆ. ಹೆಣ್ಣುಗಳೆಲ್ಲಾ ಕ್ಷತ್ರಿಯರ ಭೋಗಕ್ಕಾಗಿಯೇ ಜನಿಸಿದವರೆಂದು ಭಾವಿಸಿದವರು ಅವರು. ಆದರೂ ರಾಜತ್ವ ಕ್ಷತ್ರಿಯರಿಗೆ ಮಾತ್ರ ಮೀಸಲು ಎಂಬ ಬಗ್ಗೆ ಅವರೆಲ್ಲರಲ್ಲಿ ಸಹಮತಿಯಿತ್ತು. ವಿಚಿತ್ರ ವೀರ್ಯನ ಮಾತೆ ಸತ್ಯವತಿದೇವಿ ಮತ್ಸ್ಯಕುಲಕ್ಕೆ ಸೇರಿದವಳು. ವಿಚಿತ್ರವೀರ್ಯನನ್ನು ಮೀನುಗಾರರ ವರ್ಗಕ್ಕೆ ಸೇರಿಸಿಬಿಟ್ಟನೇ ಈತ? ಈಗೇನು ಮಾಡುವುದು?

ಭೀಷ್ಮರು ಚಿಂತೆಯಲ್ಲಿ ಕುದಿಯುತ್ತಿರುವಾಗ ಪ್ರತೀಹಾರಿ ಕಾಣಿಸಿಕೊಂಡ: “ಆಚಾರ್ಯ ಭೀಷ್ಮರಿಗೆ ಪ್ರಣಾಮಗಳು. ರಾಜಮಾತೆ ಸತ್ಯವತೀದೇವಿಯವರು ಭೇಟಿಗೆ ಅನುಮತಿ ಕೇಳುತ್ತಿದ್ದಾರೆ. ಒಳಗೆ ಬರಹೇಳಲೆ?”

ಬರಹೇಳುವಂತೆ ಭೀಷ್ಮರು ಸನ್ನೆ ಮಾಡಿದರು. ರಾಜಮಾತೆ ಸತ್ಯವತಿ ಅವಸರವಸರವಾಗಿ ಒಳ ಪ್ರವೇಶಿಸಿ ಭೀಷ್ಮರ ಅನುಮತಿಗೆ ಕಾಯದೆ ಆಸನವೊಂದರಲ್ಲಿ ಕುಳಿತುಕೊಂಡಳು. “ಮಾತೆಯವರು ಒಂದು ಮಾತು ಹೇಳಿ ಕಳುಹಿಸುತ್ತಿದ್ದರೆ ನಾನೇ ನಿಮ್ಮಲ್ಲಿಗೆ ಬಂದು ಬಿಡುತ್ತಿದ್ದೆ. ವೃಥಾ ಪಾದಾಯಾಸ ಮಾಡಿಕೊಂಡಿರಿ. ಹೇಳಿ, ಏನು ಬರೋಣವಾಯಿತು?”

ಸತ್ಯವತಿದೇವಿ ಮಾತು ಆರಂಭಿಸಿದಳು: “ಮಗೂ……” ಒಂದು ಕ್ಷಣ ಅವಳು ಮಾತು ನಿಲ್ಲಿಸಿದಳು. ಭೀಷ್ಮರಿಗೆ ಆಪ್ತವಾಗುತ್ತಿದ್ದದ್ದೇ ಆ ಕರೆ. ಹೆಚ್ಚೆಂದರೆ ಒಂದೆರಡು ವರ್ಷಕ್ಕೆ ದೊಡ್ಡವಳಾದ ಸತ್ಯವತಿ ತಾಯಿಯ ಸ್ಥಾನದಲ್ಲಿದ್ದಾಳೆ. ಅದನ್ನು ಅನುಭವಿಸುತ್ತಲೂ ಇದ್ದಾಳೆ. ಇಲ್ಲದಿದ್ದರೆ ಮಗೂ ಎಂದು ನಿರ್ಭಿಡೆಯಿಂದ ಕರೆಯಲು ಸಾಧ್ಯವಾಗುತ್ತಿರಲಿಲ್ಲ. ಅವಳು ಮಗೂ ಎಂದು ಕರೆವಾಗಲೆಲ್ಲಾ ಭೀಷ್ಮರಿಗೆ ತನ್ನ ತಾಯಿಯ ನೆನಪಾಗುತ್ತಿತ್ತು. ಎಲ್ಲಿದ್ದಾಳೋ ಪುಣ್ಯಾತ್ಗಿತ್ತಿ? ಅವಳ ಹಾಗೆ ಇವಳು ಬದುಕಿಗೆ ಬೆನ್ನು ಹಾಕಿ ನಡೆಯಲಿಲ್ಲ. ಶಂತನು ಚಕ್ರವರ್ತಿಗಳ ದೇಹಾಂತ್ಯ ವಾದ ಮೇಲೆ ಇವಳು ತನ್ನ ಸಾಕುತಂದೆ ದಾಶರಾಜನಲ್ಲಿಗೆ ಹೋಗಿ ಬಿಡಬಹುದಿತ್ತು. ಮತ್ತೆ ಮೊದಲಿನಂತೆ ಪರಾಶರ ಮಹಾಮುನಿಗಳಿಂದ ಜ್ಞಾನವನ್ನು ಮತ್ತು ಸುಖವನ್ನು ಪಡೆಯುತ್ತಾ ಸಂತೃಪ್ತ ಬದುಕನ್ನು ಸಾಗಿಸಬಹುದಿತ್ತು. ಶಂತನು ಚಕ್ರವರ್ತಿಗಳ ಕೈಹಿಡಿದ ಮೇಲೆ ಭೂತಕಾಲವನ್ನು ವರ್ತಮಾನಕ್ಕೆ ತಂದು ಬದುಕನ್ನು ಮತ್ತಷ್ಟು ಸಂಕೀರ್ಣಗೊಳಿಸಲಿಲ್ಲ. ಇವಳು ಹಸ್ತಿನಾವತಿಗೆ ಸೊಸೆಯಾಗಿ ಬರಲಿಲ್ಲ. ಮಾತೆಯಾಗಿ ಬಂದಳು.

ಭೀಷ್ಮರ ಚಿಂತನೆಗಳನ್ನು ತುಂಡರಿಸುವಂತೆ ಸತ್ಯವತೀದೇವಿ ಮಾತು ಮುಂದುವರಿಸಿದಳು: “ಮಗೂ, ನಮ್ಮ ಪ್ರಚ್ಛನ್ನವೇಷಧಾರಿ ಗೂಢಚರರು ವಾರ್ತೆಯೊಂದನ್ನು ತಂದಿದ್ದಾರೆ. ಕಾಶೀರಾಜ ಪ್ರತಾಪಸೇನ ತನ್ನ ಮೂವರು ಅರಗುವರಿಯರಿಗೆ ಸ್ವಯಂವರ ಏರ್ಪಡಿಸಿದ್ದಾನಂತೆ. ಶೌರ್ಯವೇ ಪಣವಂತೆ. ಬೇಕೆಂದೇ ಹಸ್ತಿನಾವತಿಗೆ ಆಮಂತ್ರಣ ಕಳುಹಿಸಿಲ್ಲವಂತೆ. ನನ್ನ ಹೊಟ್ಟೆ ಉರಿಯುತ್ತಿದೆ ಮಗೂ. ವಿಚಿತ್ರವೀರ್ಯ ಹಸ್ತಿನಾವತಿಯ ಸಿಂಹಾಸನಾಧೀಶ್ವರನಲ್ಲವೇ? ವಿವಾಹಯೋಗ್ಯ ತರುಣ ನಲ್ಲವೆ? ಹಾಗಿದ್ದೂ ಇವನಿಗೆ ಸ್ವಯಂವರದ ಆಮಂತ್ರಣ ಬರಲಿಲ್ಲವೆಂದರೆ ಅದಕ್ಕೇನರ್ಥ? ಇವನನ್ನು ನಪುಂಸಕನೆಂದು ಭಾವಿಸಿದನೇ ಆ ಕಾಶೀರಾಜ? ಅವನೀಗ ಆರಂಭಿಸಿದ್ದಾನೆ. ಇನ್ನು ಮುಂದೆ ಸ್ವಯಂವರ ನಡೆಸುವ ರಾಜ ಮಹಾರಾಜರುಗಳು ಪ್ರತಾಪಸೇನನ ಮೇಲ್ಪಂಕ್ತಿ ಅನುಸರಿಸಿಬಿಡುತ್ತಾರೆ. ವಿಚಿತ್ರವೀರ್ಯನಿಗೆ ಹೆಣ್ಣೇ ಸಿಗುವುದಿಲ್ಲ.”

ರಾಜಮಾತೆ ಸತ್ಯವತಿ ಕಣ್ಣೀರು ಒರೆಸಿಕೊಂಡಳು: “ಇನ್ನೂ ಒಂದು ಸೂಕ್ಷ್ಮ ವಿಚಾರ ಇಲ್ಲಿದೆ ಮಗೂ. ಕಾಶೀರಾಜ ನಮ್ಮ ಸಾಮಂತನಲ್ಲದಿರಬಹುದು. ಆದರೆ ನಮ್ಮದು ಚಕ್ರಾಧಿಪತ್ಯ. ಅದಕ್ಕಾದರೂ ಗೌರವ ಕೊಡಬೇಡವಿತ್ತೇ ಅವನು? ಶಂತನು ಚಕ್ರವರ್ತಿಗಳ ಬಳಿಕ ಕುರುಚಕ್ರಾಧಿಪತ್ಯ ಅಳಿಸಿಹೋಯಿತೆಂದು ಆತ ಭಾವಿಸಿದನೇ? ಕುರುಚಕ್ರಾಧಿಪತ್ಯಕ್ಕೆ ಸಾಮ್ರಾಜ್ಯ ವಿಸ್ತರಣೆಯ ದಾಹವಿಲ್ಲವೆನ್ನುವುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಅದಕ್ಕೆ ಸಂದ ಸನ್ಮಾನ ಇದು. ಮಗೂ, ಚಕ್ರಾಧಿಪತ್ಯ ಶಿಥಿಲಗೊಳ್ಳುತ್ತಿದೆ. ಈ ಸಿಂಹಾಸನಕ್ಕೆ ನಿನ್ನ ರಕ್ಷಣೆಯಿದೆಯೆಂದಲ್ಲವೇ ನಾನು ನಿನ್ನ ತಂದೆಯ ಕೈ ಹಿಡಿದದ್ದು? ಹೇಳು ಮಗೂ, ಈಗೇನು ಮಾಡುತ್ತೀಯಾ?”

ಭೀಷ್ಮರು ಬಾಯ್ದೆರೆದರು: “ಆಗಿನಿಂದ ಅದನ್ನೇ ನಾನು ಯೋಚಿಸುತ್ತಿರುವುದು. ಪ್ರತಾಪ ಸೇನ ನಮಗೆ ಸಾಮಂತನಲ್ಲ. ಭಾವನಾತ್ಮಕವಾಗಿ ನಾವು ಚಂದ್ರವಂಶೀಯರೆಂದು ಹೇಳಿಕೊಂಡರೂ ಕುರುಕ್ಷೇತ್ರ, ಇಂದ್ರಪ್ರಸ್ಥ ಮತ್ತು ಹಸ್ತಿನಾವತಿ – ಇವಿಷ್ಟು ಪ್ರದೇಶ ಮಾತ್ರ ನಮ್ಮ ಸಾಮ್ರಾಜ್ಯದಲ್ಲಿರುವುದು. ಪ್ರತಾಪಸೇನ ನಮ್ಮನ್ನು ಉಪೇಕ್ಷಿಸಿರಬಹುದು. ಆದರೆ ಕುರುಸಾಮ್ರಾಜ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡಲಾರ ಎಂದು ನನಗನ್ನಿಸುತ್ತದೆ. ಅವನಿಗೆ ಗಂಡು ಸಂತಾನವಿಲ್ಲದ ಕಾರಣ ಆತನ ಕುವರಿಯರನ್ನು ವಿವಾಹವಾಗುವವ ಮುಂದಿನ ಕಾಶೀರಾಜನಾಗುತ್ತಾನೆ. ವಿಚಿತ್ರವೀರ್ಯ ಪಣವನ್ನು ಗೆದ್ದರೆ ಕುರುಸಾಮ್ರಾಜ್ಯ ಕಾಶಿಯವರೆಗೆ ವಿಸ್ತರಿಸಲ್ಪಡುತ್ತದೆ. ಪವಿತ್ರವಾದ ಪ್ರಯಾಗ ಮತ್ತು ಕಾಶೀಕ್ಷೇತ್ರಗಳು ಹಸ್ತಿನಾವತಿಯ ಆಡಳಿತಕ್ಕೆ ಒಳಪಡುತ್ತವೆ. ಹಸ್ತಿನಾವತಿಗೆ ಭಾವುಕ ಮಹತ್ತ್ವ ಲಭ್ಯವಾಗುತ್ತದೆ. ಲಕ್ಷಾಂತರ ಭಕ್ತರಿಂದಾಗಿ ಹಸ್ತಿನಾವತಿಯ ಬೊಕ್ಕಸ ತುಂಬಿ ತುಳುಕುತ್ತದೆ. ಸ್ವಯಂವರಕ್ಕೆ ಆಮಂತ್ರಣದ ಅಗತ್ಯವೇನಿದೆ? ವಿಚಿತ್ರವೀರ್ಯ ಸ್ವಯಂವರಕ್ಕೆ ಹೋಗಿ ಕಾಶೀರಾಜನ ಪುತ್ರಿಯರನ್ನು ಗೆದ್ದು ತಂದರೆ ನಮ್ಮ ತಳಮಳ ದೂರವಾಗುತ್ತದೆ.”

ರಾಜಮಾತೆ ಸತ್ಯವತಿ ಅವನತ ಮುಖಿಯಾದಳು: “ಅವನು, ನನ್ನ ಹಿರಿಯ ಮಗ ಚಿತ್ರಾಂಗದ ಬದುಕಿರುತ್ತಿದ್ದರೆ ನಾನು ಯೋಚಿಸಬೇಕಾದರ ಪ್ರಮೇಯವಿರುತ್ತಿರಲಿಲ್ಲ ಮಗೂ. ಅವನಾದರೆ ಆರ್ಯಾವರ್ತದ ರಾಜರುಗಳನ್ನು ಸೋಲಿಸಿ ಕಾಶೀರಾಜಕುವರಿಯರನ್ನು ಹಸ್ತಿನಾವತಿಯ ಸೊಸೆಯರನ್ನಾಗಿ ಮಾಡಿಬಿಡುತ್ತಿದ್ದ. ವಿಚಿತ್ರವೀರ್ಯ ಅಷ್ಟು ಸಮರ್ಥನಲ್ಲದ ಕಾರಣ ನಾನು ನಿನ್ನಲ್ಲಿಗೆ ಬರಬೇಕಾಯಿತು. ಕಾಶಿಯ ಸುತ್ತಮುತ್ತ ಇರುವ ಕೋಸಲ, ಮಿಥಿಲೆ, ಮಗಧ, ಪಾಂಚಾಲ ದೇಶಗಳ ಅರಸರು ಮಹಾಬಲಿಷ್ಠರಂತೆ. ಅವರನ್ನೆಲ್ಲಾ ಗೆಲ್ಲುವ ಶಕ್ತಿ ವಿಚಿತ್ರವೀರ್ಯನಿಗಿಲ್ಲ ಮಗೂ. ರಾಜಪ್ರತಿನಿಧಿಯಾಗಿ ನೀನು ಸ್ವಯಂವರ ಮಂಟಪಕ್ಕೆ ಹೋಗಿ ಕಾಶೀರಾಜಕುಮಾರಿಯರನ್ನು ವಿಚಿತ್ರವೀರ್ಯನಿಗಾಗಿ ಗೆದ್ದು ತರಬೇಕು. ಪ್ರತಾಪಸೇನನ ಸೊಕ್ಕನ್ನು ಮುರಿದು, ಹಸ್ತಿನಾವತಿಯನ್ನು ಉಪೇಕ್ಷಿಸಿದರೆ ಏನಾಗುತ್ತದೆಂಬುದನ್ನು ತೋರಿಸಿಕೊಡಬೇಕು.”

ಭೀಷ್ಮರು ಸ್ವಲ್ಪ ಹೊತ್ತು ಯೋಚಿಸಿ ಹೇಳಿದರು: “ರಾಜಮಾತೆ, ಇಲ್ಲೊಂದು ಧರ್ಮ ಸೂಕ್ಷ್ಮದ ಪ್ರಶ್ನೆಯಿದೆ. ಕಾಶೀ ರಾಜಕುವರಿಯರನ್ನು ಗೆದ್ದು ತರುವುದು ದೊಡ್ಡ ಸಂಗತಿಯೇನಲ್ಲ. ಆದರೆ ವಿಕ್ರಮವೇ ಪಣವಾಗಿರುವಾಗ ತನ್ನ ಶೌರ್ಯವನ್ನು ಪಣಕ್ಕೊಡ್ಡದ ವಿಚಿತ್ರವೀರ್ಯ ಅವರನ್ನು ವಿವಾಹವಾಗುವುದು ಧರ್ಮವಾಗುತ್ತದೆಯೆ? ಕುರು ಚಕ್ರಾಧಿಪತ್ಯ ಅಧರ್ಮಪಥದಲ್ಲಿ ಮುಂದುವರಿಯುತ್ತಿದೆಯೆಂದು ನಾಳೆ ಆರ್ಯಾವರ್ತದ ರಾಜ ಮಹಾರಾಜರುಗಳು ಆಡಿಕೊಳ್ಳಲಾರರೆ?”

ರಾಜಮಾತೆ ಸತ್ಯವತಿಯ ಹಣೆಯಲ್ಲಿ ನೆರಿಗೆಗಳು ಮೂಡಿ ಮಾಯವಾದವು. ಖಚಿತವಾದ ಸ್ವರದಲ್ಲಿ ಅವಳೆಂದಳು: “ಮಗೂ, ನೀನು ಹಸ್ತಿನಾವತಿಯ ಸಿಂಹಾಸನದ ರಕ್ಷಕ. ಕಾಶೀರಾಜನ ಉಪೇಕ್ಷಯಿಂದಾಗಿ ಸಿಂಹಾಸನ ಅಲುಗಾಡತೊಡಗಿದೆ. ಈಗ ನಾನು ಸೂಚಿಸಿದ್ದು ಸಿಂಹಾಸನ ರಕ್ಷಣೆಯ ಮಾರ್ಗೋಪಾಯವನ್ನು. ಹಾಗಂದುಕೊಂಡರೆ ನೀನು ಸ್ವಯಂವರ ಮಂಪಟಕ್ಕೆ ಹೋಗಿ ಅರಗುವರಿಯನ್ನು ವಿಚಿತ್ರವೀರ್ಯನಿಗಾಗಿ ಗೆದ್ದು ತರುವುದು ಅಧರ್ಮವಾಗುವುದಿಲ್ಲ. ಇನ್ನೂ ನಿನ್ನ ಮನದಲ್ಲಿ ಸಂಶಯಗಳಿದ್ದರೆ ಇದನ್ನು ರಾಜಮಾತೆಯ ಆದೇಶವೆಂದು ಭಾವಿಸಿಕೋ. ಯಾವ ಆಯಾಮದಿಂದ ನೋಡಿದರೂ ನಿನ್ನದು ತಪ್ಪು ಕೃತ್ಯವಾಗಲು ಸಾಧ್ಯವಿಲ್ಲ.”

ರಾಜಮಾತೆಯ ಖಚಿತವಾದ ಅಭಿಪ್ರಾಯ ಭೀಷ್ಮರಲ್ಲಿ ಮೆಚ್ಚುಗೆಯ ಭಾವವನ್ನು ಮೂಡಿಸಿತು. ಮಹಾ‌ಋಷಿ ಪರಾಶರರಿಂದ ಜ್ಞಾನವರ್ಧನೆ ಮಾಡಿಕೊಂಡವಳಿಗೆ ಸಾಮಯಿಕ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತಿದೆ. ಇನ್ನು ಧರ್ಮಾಧರ್ಮಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ.

ಭೀಷ್ಮರು ತಲೆಬಾಗಿ ವಂದಿಸಿ ಹೇಳಿದರು: “ರಾಜಮಾತೆಯ ಆದೇಶವನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇದೋ ನಾನು ಹೊರಟೆ. ರಾಜಕುವರಿಯರನ್ನು ಸ್ವಾಗತಿಸುವ ಸಿದ್ಧತೆಗಳಾಗಲಿ. ವಿವಾಹ ಮಹೋತ್ಸವಕ್ಕೆ ಹಸ್ತಿನಾವತಿ ಅಣಿಗೊಳ್ಳಲಿ.”
*****

ಹಸ್ತಿನಾವತಿಯಿಂದ ಕಾಶಿಗೆ ಮೂರು ದಿನಗಳ ಪಯಣ. ಪ್ರತಿ ಪಟ್ಟಣದಲ್ಲೂ ಸವಾರಿಗೆಂದೇ ಕುದುರೆಗಳನ್ನು ಒದಗಿಸುವ ಲಾಯಾಧಿಕಾರಿಗಳಿದ್ದುದರಿಂದ ಪ್ರಯಾಣ ಸಲೀಸಾಯಿತು. ಒಂದು ದಿನದ ಸವಾರಿಗೆ ಕುದುರೆಯೊಂದಕ್ಕೆ ಐದು ಹೊನ್ನು ನೀಡಿದರಾಯಿತು. ಪಟ್ಟಣಗಳಲ್ಲಿ ಛತ್ರಗಳಿರುವುದರಿಂದ ಭೀಷ್ಮರಿಗೆ ವಸತಿಯ ಸಮಸ್ಯೆ ಎದುರಾಗಲಿಲ್ಲ.

ಮೊದಲ ರಾತ್ರಿ ಪುಟ್ಟ ಪಟ್ಟಣ ಲೋಹಿತನಗರಿಯಲ್ಲಿ ತಂಗಿ ವಿಶ್ರಾಂತಿ ಪಡೆದು ಹಸ್ತಿನಾವತಿಯ ರಥದ ಕುದುರೆಗಳನ್ನು ಅಲ್ಲಿನ ಲಾಯಾಧಿಕಾರಿಯ ವಶಕ್ಕೆ ಬಿಟ್ಟು, ಅಲ್ಲಿಂದ ಬೇರೆ ಕುದುರೆಗಳನ್ನು ಕಟ್ಟಿ ರಥ ಹೊರಟಾಗ ಸೂರ್ಯೋದಯವಾಗಿತ್ತು. ಅಂದು ಅಯೋಧ್ಯೆಯಲ್ಲಿ ರಾತ್ರೆ ಕಳೆಯಬೇಕಾಯಿತು. ಸೂರ್ಯವಂಶದ ರಾಮಚಂದ್ರ ಮರ್ಯಾದಾ ಪುರುಷೋತ್ತಮನಾಗಿ ಅಯೋಧ್ಯೆಗೆ ಹೆಸರು ತಂದುಕೊಟ್ಟಿದ್ದ. ಅವನು ಪಿತೃವಾಕ್ಯ ಪರಿಪಾಲನೆಗಾಗಿ ವನವಾಸ ಮಾಡಿದ್ದ. ಭೀಷ್ಮರು ತಮ್ಮನ್ನು ಅವನೊಡನೆ ಹೋಲಿಸಿಕೊಂಡರು. ಚಂದ್ರವಂಶೀಯರೇನು ಕಮ್ಮಿ? ನಾನು ತಂದೆಗಾಗಿ ಇಲ್ಲಿಯವರೆಗೂ ಬ್ರಹ್ಮಚಾರಿಯಾಗಿಯೇ ಬದುಕಲಿಲ್ಲವೇ? ಈಗ ತಮ್ಮನಿಗಾಗಿ, ಬ್ರಹ್ಮಚಾರಿ ಯಾದರೂ ಸ್ವಯಂವರ ಮಂಟಪಕ್ಕೆ ತೆರಳಿ ಶೌರ್ಯ ಪ್ರದರ್ಶನ ಮಾಡುವುದಿಲ್ಲವೆ? ಹಾಗೆ ನೋಡಿದರೆ ಸೂರ್ಯವಂಶೀಯ ರಾಮಚಂದ್ರನಿಗಿಂತ ಚಂದ್ರವಂಶೀಯ ಭೀಷ್ಮನ ತ್ಯಾಗವೇ ದೊಡ್ಡದು. ಹಾಗಂತ ಇತಿಹಾಸ ಗುರುತಿಸದಿದ್ದರೂ ಚಿಂತಿಲ್ಲ. ಸದ್ಯಕ್ಕಂತೂ ಚಂದ್ರವಂಶೀಯರದೇ ಮೇಲುಗೈಯಾದಂತಾಗಿದೆ.

ನಿಶ್ಚಿಂತೆಯಿಂದ ನಿದ್ದೆಮುಗಿಸಿ, ಮರುದಿನ ಪ್ರಾತಃಕಾಲ ರಥಕ್ಕೆ ಅಯೋಧ್ಯೆಯ ಕುದುರೆಗಳನ್ನು ಹೂಡಿ ಭೀಷ್ಮರು ಕಾಶಿಯತ್ತ ಪಯಣ ಮುಂದುವರಿಸಿದರು. ಅಲ್ಲಲ್ಲಿ ದಣಿವಾರಿಸಿ ಕೊಂಡು ಕಾಶೀ ರಾಜಕುವರಿಯರ ಸ್ವಯಂವರ ಮಂಟಪಕ್ಕೆ ಮುಟ್ಟುವಾಗ ಸೂರ್ಯಾಸ್ತಕ್ಕೆ ಇನ್ನೂ ಸಾಕಷ್ಟು ಹೊತ್ತು ಇತ್ತು.

ಭೀಷ್ಮರ ಪ್ರವೇಶದಿಂದ ಸ್ವಯಂವರ ಮಂಟಪದ ವಾತಾವರಣವೇ ಬದಲಾಗಿ ಹೋಯಿತು. ವಿವಾಹ ಮಂಟಪದಲ್ಲಿ ಬ್ರಹ್ಮಚಾರಿಗೇನು ಕೆಲಸ? ಎಲ್ಲರ ಮುಖದ ಮೇಲೆ ಅಚ್ಚೊತ್ತಿದ್ದುದು ಅದೊಂದೇ ಪ್ರಶ್ನೆ. ಭೀಷ್ಮರು ಕಾಶೀರಾಜನನ್ನು ನೋಡಿದರು. ಪ್ರತಾಪಸೇನ ಸಿಟ್ಟಿನಿಂದ ದುರುಗುಟ್ಟಿಕೊಂಡು ಅವರನ್ನೇ ನೋಡುತ್ತಿದ್ದ. ಅವನ ಸಮೀಪದಲ್ಲಿ ಸರ್ವಾಲಂಕಾರ ಭೂಷಿತೆಯರಾಗಿ ಮೂವರು ಅರಗುವರಿಯರು ನಿಂತಿದ್ದರು. ಬಲಶಾಲಿಯಾದ ವೀರನೊಬ್ಬ ಖಡ್ಗಹಿಡಿದು ನಿಂತಿದ್ದ. ಅವನ ಮುಖದಲ್ಲಿ ಬಳಲಿಕೆಯಿತ್ತು. ಆಗತಾನೇ ಆತ ಯಾರಲ್ಲೋ ಯುದ್ಧ ಮಾಡಿ ಗೆದ್ದಿರಬೇಕು. ಅವನು ಪಣವನ್ನೇ ಗೆದ್ದಿರಬಹುದೆ? ಈ ಮೂವರು ಅರಗುವರಿಯರ ಪತಿಯಾಗುವ ಅರ್ಹತೆ ಗಳಿಸಿರಬಹುದೆ? ಯಾರೂ ಮಾತಾಡುತ್ತಿಲ್ಲ. ಸ್ಮಶಾನಮೌನ. ಯಾರಲ್ಲಿ ಕೇಳುವುದು? ಇಷ್ಟಕ್ಕೂ ಅವನಾರು?

ಸಮಯ ಬರಿದೆ ಸರಿದು ಹೋಗುತ್ತಿರುವುದನ್ನು ಗಮನಿಸಿ ಭೀಷ್ಮರು ಉದ್ಛೋಷಿಸಿದರು: “ನಾನು ಆಚಾರ್ಯ ಭೀಷ್ಮ. ಹಸ್ತಿನಾವತಿಯ ಸಿಂಹಾಸನದ ಪರವಾಗಿ ಇಲ್ಲಿಗೆ ಬಂದವನು. ಈ ರಾಜಕುವರಿಯರನ್ನು ಹಸ್ತಿನಾವತಿಗೆ ಒಯ್ಯುತ್ತಿದ್ದೇನೆ. ಬಲವಿರುವವರು ಬಿಡಿಸಿಕೊಳ್ಳಬಹುದು. ಕಾಶೀರಾಜಕುವರಿಯರೇ, ಏರಿರೆನ್ನಯ ರಥವ.”

ಮಾತು ಮುಗಿಯುವ ಮೊದಲೇ ಕೈಯಲ್ಲಿ ಖಡ್ಗ ಹಿಡಿದಿದ್ದ ಆ ವೀರ ಮುಂದಕ್ಕೆ ಬಂದ: “ನಾನು ಸೌಭ ದೊರೆ ಸಾಲ್ವಭೂಪತಿ. ಇಲ್ಲಿರುವವರನ್ನೆಲ್ಲಾ ಗೆದ್ದವನು. ಪಣಗೆದ್ದು ಕಾಶೀರಾಜಕುವರಿಯರ ಪತಿಯಾಗುವ ಅರ್ಹತೆ ಗಳಿಸಿದ್ದೇನೆ. ನನ್ನನ್ನು ಸೋಲಿಸದ ಹೊರತು ಇವರನ್ನು ರಥಕ್ಕೆ ಹತ್ತಿಸುವ ಅಧಿಕಾರ ನಿನಗೆ ಲಭ್ಯವಾಗುವುದಿಲ್ಲ.”

ಆ ಕ್ಷಣಕ್ಕೆ ಭೀಷ್ಮರಿಗೆ ಸಾಲ್ವಭೂಪತಿಯ ಮಾತುಗಳು ಇಷ್ಟವಾದವು. ಈ ಮೂರ್ಖ ಪ್ರತಾಪಸೇನ ದಸ್ಯು ಎಂಬ ಕಾರಣಕ್ಕೆ ಆಮಂತ್ರಣ ನೀಡದೆ ಅಪಮಾನಿಸಿದ ಸಾಲ್ವಭೂಪತಿ ಪಣವನ್ನು ಗೆದ್ದಿದ್ದಾನೆ. ಈಗ ಹಸ್ತಿನಾವತಿಯ ಪರವಾಗಿ ನಾನು ಬಂದಿದ್ದೇನೆ. ಪ್ರತಾಪಸೇನನ ಯೋಜನೆಗಳು ಮಣ್ಣುಮುಕ್ಕಿವೆ. ಅವನ ಮುಖದಲ್ಲಿ ಮುಖ ಭಂಗಿತನಾದವನೊಬ್ಬನ ಸಮಸ್ತ ಲಕ್ಷಣಗಳು ಕಾಣಿಸುತ್ತಿವೆ.

ಸಾಲ್ವಭೂಪತಿ ಆರ್ಯಾವರ್ತದ ಮಹಾವಿಕ್ರಮಿಗಳಲ್ಲೊಬ್ಬ. ಆದರೂ ಅವನನ್ನು ಸೋಲಿಸಲು ಭೀಷ್ಮರಿಗೆ ಹೆಚ್ಚು ವೇಳೆ ಬೇಕಾಗಲಿಲ್ಲ. ಸಾಲ್ವಭೂಪತಿ ಶಸ್ತ್ರವಿಹೀನನಾಗಿ ತಲೆತಗ್ಗಿಸಿ ನಿಂತ. ಅವನ ಯೋಜನೆಗಳನ್ನು ಬುಡಮೇಲು ಮಾಡಬೇಕೆಂದು ಭೀಷ್ಮರು ಬಯಸಿರಲಿಲ್ಲ. ಸಂದರ್ಭ ಹಾಗೆ ಕೂಡಿ ಬಂತು. ಅವನ ಬಗ್ಗೆ ಅನುಕಂಪ ಮೂಡಿದರೂ ಅವರೇನೂ ಮಾಡುವಂತಿರಲಿಲ್ಲ. ಪರಾಭವ ಹೊಂದಿದ ಸಾಲ್ವಭೂಪತಿ ದೀನತೆಯಿಂದ ಒಮ್ಮೆ ರಾಜಕುವರಿಯರನ್ನು ನೋಡಿದ. ಅವರು ಭೀಷ್ಮರ ರಥವೇರತೊಡಗಿದ್ದನ್ನು ಕಂಡು ಕನಲಿ ಕಾಲಿನಿಂದ ನೆಲವನ್ನೊಮ್ಮೆ ಒದ್ದು ಸ್ವಯಂವರ ಮಂಟಪದಿಂದ ಹೊರನಡೆದ.

ಪ್ರತಾಪಸೇನನ ಮುಖ ಬಣ್ಣಗೆಟ್ಟಿತ್ತು. ಭೀಷ್ಮರು ಅವನ ಬಳಿಗೆ ಹೋಗಿ ಕೆಣಕಿದರು: “ಕಾಶೀಭೂಪತಿಗೆ ಕುರುಚಕ್ರಾಧಿಪತ್ಯದ ನೆನಪಾಗಲಿಲ್ಲ ಅಲ್ಲವೆ? ನಿನ್ನ ಪುತ್ರಿಯರು ಹಸ್ತಿನಾವತಿಯ ಸೊಸೆಯಗಿಬಿಟ್ಟರು. ಇನ್ನು ಹಸ್ತಿನಾವತಿಯನ್ನು ಬೇಕೆಂದರೂ ಮರೆಯಲು ನಿನ್ನಿಂದ ಸಾಧ್ಯವಿಲ್ಲ.”

ಪ್ರತಾಪಸೇನ ಬಿಟ್ಟುಕೊಡಲಿಲ್ಲ: “ಆಚಾರ್ಯರು ಯಾವುದೇ ಸ್ವಯಂವರಗಳಿಗೆ ಹೋಗುವವರಲ್ಲವೆಂಬುದು ಪ್ರತೀತಿ. ಆಚಾರ್ಯರೇ ನನ್ನ ಅಳಿಯನಾಗುತ್ತಿರುವುದು ಕಾಶಿಯ ಸೌಭಾಗ್ಯ.”

ಭೀಷ್ಮರು ಒಂದು ಕ್ಷಣ ಯೋಚಿಸಿದರು. ವಿಚಿತ್ರವೀರ್ಯನಿಗಾಗಿ ರಾಜಕುವರಿಯರನ್ನು ಒಯ್ಯುತ್ತಿದ್ದೇನೆಂದು ಹೇಳಿಬಿಡಲೆ? ಹೇಳಿದರೆ ಧರ್ಮಸೂಕ್ಷ್ಮದ ಪ್ರಶ್ನೆಗಳನ್ನು ಇವನು ಎತ್ತದಿರುವುದಿಲ್ಲ. ಸ್ವಯಂವರ ಮಂಟಪದಲ್ಲಿ ಅಲ್ಲಲ್ಲಿ ಪುರೋಹಿತರುಗಳು ಕಾಣಿಸುತ್ತಿದ್ದಾರೆ. ಕಾಶೀರಾಜನ ಮಾತಿಗೆ ಯಾವುದೇ ಉತ್ತರ ಕೊಟ್ಟರೂ ಇವರೆಲ್ಲಾ ವಾದಕ್ಕಿಳಿಯುತ್ತಾರೆ. ವಾದ ಬೆಳೆದರೆ ಇದಮಿತ್ಥಂ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗುವುದಿಲ್ಲ. ಶಾಸ್ತ್ರ ಶಠತ್ವದಿಂದ ಇವರು ಯಾವ್ಯಾವುದೋ ಶಾಸ್ತ್ರಗಳನ್ನು ಉಲ್ಲೇಖಿಸಿ ಮರುಮಾತಿಲ್ಲದಂತೆ ಮಾಡಿಬಿಡುತ್ತಾರೆ. ಹಸ್ತಿನಾವತಿಯ ಪುರೋಹಿತರುಗಳೇ ದೊಡ್ಡ ತಲೆನೋವು ತಂದು ಹಾಕುವವರು. ಹೇಳಿ ಕೇಳಿ ಇದು ಅನ್ಯ ದೇಶ. ಹಸ್ತಿನಾವತಿಯ ನಡವಳಿಕೆ ನ್ಯಾಯಬದ್ಧವೇ ಆದರೂ ಕಾಶಿಯ ಪುರೋಹಿತರು ಅದರ ಪರವಾಗಿ ವಾದಿಸಲು ಸಾಧ್ಯವಿಲ್ಲ. ಬೇಡ. ಈ ತಲೆನೋವೇ ಬೇಡ.

ಅಷ್ಟು ಹೊತ್ತಿಗೆ ಕಾಶೀರಾಜನ ಸೇವಕರು ರಾಜಕುವರಿಯರ ಮೂರು ಪೆಟ್ಟಿಗೆಗಳನ್ನು ತಂದು ರಥದಲ್ಲಿ ಜೋಡಿಸಿಟ್ಟರು. ರಥ ಹೊರಡುವ ಮುನ್ನ ಭೀಷ್ಮರೆಂದರು : “ಪ್ರತಾಪಸೇನ ಮಹಾರಾಜಾ, ನಿನ್ನ ಕುವರಿಯರು ಹಸ್ತಿನಾವತಿಯ ರಾಣಿಯರಾಗುತ್ತಾರೆ. ನೀನು ಹಸ್ತಿನಾವತಿಗೆ ಹೆಣ್ಣುಕೊಟ್ಟ ಮಾವನಾಗುತ್ತೀಯೇ. ಮಹಾರಾಣಿಯೊಡನೆ ಯಾವಾಗ ಬೇಕಾದರೂ ನೀನು ಬಂದು ನಿನ್ನ ಅಳಿಯನನ್ನು, ಕುವರಿಯರನ್ನು ನೋಡಿಕೊಂಡು ಹೋಗಬಹುದು. ಆದರೆ ಈ ಕ್ಷಣದಿಂದ ನಿನ್ನ ಕಾಶೀರಾಜ್ಯ ಕುರುಸಾಮ್ರಾಜ್ಯದ ಒಂದು ಭಾಗವಾಗಿ ಹೋಗಿದೆಯೆನ್ನುವುದನ್ನು ಮಾತ್ರ ಮರೆಯಬೇಡ.

ಕಾಶೀರಾಜ ಗೊಣಗಿಕೊಂಡದ್ದೇನೆಂಬುದು ಭೀಷ್ಮರಿಗೆ ಅರ್ಥವಾಗಲಿಲ್ಲ. ರಥ ಹಸ್ತಿನಾವತಿ ಯತ್ತ ಚಲಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಣಿಗ್ರಹಣ
Next post ಯಾರ ಪ್ರತಿಭೆಗೆ ಸ್ಫೂರ್ತಿ ಚಿತ್ರಸ್ಥ ರೂಪಸಿಯೊ,

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…