ಎಷ್ಟೋ ವರ್ಷಗಳು ಕಳೆದವು. ಶಿವದಾಸನು ಮೃತ್ಯು ಶಯ್ಯೆಯಲ್ಲಿ ಪವಡಿಸಿದ್ದನು. ಅವಸಾನ ಕಾಲಕ್ಕೆ ಅವನು ಗುಲಾಮ ಆಲಿಯನ್ನು ಕರೆಸಿಕೊಂಡು ಮಾಯೆಯ ಕೈಯನ್ನು ಅವನ ಕೈಯಲ್ಲಿತ್ತು, ಗದ್ಗದ ಕಂಠದಿಂದ ಏನೋ ಹೇಳಬೇಕೆಂದನು; ಆದರೆ ಅಷ್ಟರಲ್ಲಿ ಅವನ ವಾಣಿಯೇ ಕುಂಠಿತವಾಗಲು, ಸಾಶನಯನದಿಂದ ಅವರೀರ್ವವರ ಕಡೆಗೆ ನೋಡಹತ್ತಿದನು.
ಸಹೃದಯನಾದ ಗುಲಾಮ ಆಲಿಗೆ ಭ್ರಾತೃಸಮಾನನಾದ ಶಿವದಾಸನ ಆಂತರ್ಭಾವ ತಿಳಿದು ಬಂದಿತು. ಆಗ ಅವನು :- “ಬ್ರಾಹ್ಮಣಶ್ರೇಷ್ಠಾ, ಮಾಯೆಯ ಮಾಯೆಯನ್ನು ಪರಿತ್ಯಜಿಸಿ, ಇಷ್ಟದೇವತೆಯನ್ನು ಸ್ಮರಿಸುವವನಾಗು. ಮಾಯೆಯು ಈಗ ಮನುಷ್ಯಳಾಗಿ ಉಳಿದಿರುವದಿಲ್ಲ. ಅವಳು ನನ್ನ ಪರಮ ದೇವತೆಯಾಗಿರುತ್ತಾಳೆ. ನಾನು ಅವಳನ್ನು ರಕ್ಷಣೆಮಾಡುವೆನೆನ್ನುವದಕ್ಕಿಂತ, ಅವಳೇ ನನ್ನಂಥ ಸಾವಿರಾರು ಗುಲಾಮರನ್ನು ರಕ್ಷಿಸಲು ಸಮರ್ಥಳಾಗಿರುತ್ತಾಳೆ.”
ಮುಸಲ್ಮಾನನ ಈ ವಚನಗಳನ್ನು ಕೇಳಿ, ಶಿವದಾಸನ ಅಂತರಂಗ ದೊಳಗಿನ ಮಾಯೆಯ ವಿಷಯದ ವಾಯುಯು ಕಡಿಯಲು, ಅವನ ಕಣ್ಣೊಳಗಿಂದ ಮಾಯಾಮುಕ್ತಿ ಪ್ರದವಾದ ಆನಂದಬಾಷ್ಪಗಳು ಸುರಿದವು. ಪರ ಕ್ಷಣದಲ್ಲಿಯೇ ಶಿವದಾಸನ ಇಹ ಪರ್ಯವಸಾನವಾಯಿತು. ಶಿವದಾಸನು ಉಲ್ಲಸಿತ ಮೊಗದಿಂದ ಪ್ರಾವಣ ಮಾಡುವಾಗ ಗುಲಾಮ ಆಲಿಯು ಗದ್ದದ ಕಂಠದಿಂದ:- “ಬಾಹ್ಮಣಶ್ರೇಷ್ಠರೇ, ನಡೆಯಿರಿ – ನಡೆಯುರಿನ್ನು ಸ್ವರ್ಗಕ್ಕೆ, ಪರಕ್ಷಣದಲ್ಲಿ ಸ್ವರ್ಗಸುಖಗಳಲ್ಲಿ ನಿರತರಾಗುವ ನೀವು, ನಿಮ್ಮೀ ಗುಲಾಮನನ್ನು ಶೀಘ್ರವಾಗಿ ನಿಮ್ಮೆಡೆಗೆ ಬರಮಾಡಿಕೊಳ್ಳಲಿಕ್ಕೆ ಮರಯಬೇಡಿರಿ” ಎಂದು ಪ್ರಾರ್ಥಿಸಿದನು.
*****