ನೂರೆಂಟು ತಾಪತ್ರಯಗಳ ತಂಗಳು ವಾಸನೆ
ವಾಕರಿಕೆ ವಾಂತಿ
ಹಸಿರ ಹೊಂಗೆಯಲ್ಲಿ ಕೆನ್ನಾಲಿಗೆ ಕತ್ತಿ.
ಚಿತ್ತದಲ್ಲಿ ಚಿತ್ತವಿಟ್ಟು ಬರೆಯುತ್ತ ಬಂದ ಬಾಳ ಬುಕ್ಕಿನಲ್ಲಿ
ಹೊತ್ತೇರುವ ಹೊತ್ತಿಗೇ ಅಲ್ಲಲ್ಲಿ ಚಿತ್ತು;
ಪುಸ್ತಕದ ಪಿನ್ನು ಕಳಚಿ ಹಾಳೆಗಳು ಚೂರುಚೂರು.
ಪೂರ್ಣತೆಯ ಫಲಕ್ಕೆ ಕನಸುತ್ತ ಕುಳಿತಿದ್ದಾಗ
ಹಲಸಿನ ಹಣ್ಣು ದೊಪ್ಪೆಂದು ಬಿತ್ತು;
ಭಗ್ನತೊಳೆ ಚಲ್ಲಾಪಿಲ್ಲಿ ಅಲ್ಲಿ ನೂರಾರು
ಸುಧೆ ಬಯಸಿದ್ದ ಎದೆಯಲ್ಲಿ ಸ್ಕ್ರೂಕೊರೆತ
ಸುತ್ತಿ ಸುತ್ತೇಳುವ ಉಂಗುರುಂಗುರ ಸಿಬರು; ರಕ್ತದೊರೆತ.
ಮಲಗಿದ್ದವನ ಮೈಯ ಮೇಲೆತ್ತಿ ಬಿಟ್ಟಂತೆ
ಮಾಂತ್ರಿಕನ ಮಂತ್ರದಂಡ
ಒಳಗೆಲ್ಲ ಏರಿಳಿತ ಹೊರಗೆಲ್ಲ ಕಡಿತ
ಹುಣ್ಣಿಮೆಯ ಸಾಗರ ಇಡೀ ಬ್ರಹ್ಮಾಂಡ.
*****