ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ
ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ ||
ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ
ಗಗನದಾಳಕೇರಿ ಚಿಕ್ಕೆಗಳಲಿ ಹುಡುಕಲೆ
ಸಸ್ಯ ಜೀವರಾಶಿಗಳಲಿ ಎಣಿಸಿ ಗುಣಿಸಲೆ
ಜ್ಞಾನ ಸಾಗರದಲೀಜಿ ಹರವ ನೋಡಲೆ || ೧ ||
ಗಾನದೆಳೆಯ ಹಿಡಿದು ನಾದಲೋಕ ಸೇರಲೆ
ಮೌನವಾಗಿ ಕುಳಿತು ಧ್ಯಾನ ತಪವ ಗೈಯಲೆ
ವರ್ಣರೇಖೆ ನ್ಯಾಸಗಳಲಿ ಕೆದಕಿ ಕಾಣಲೆ
ಲಕ್ಷ್ಮಿಯೊಡನೆ ನೂರು ದಾರಿಗಳಲಿ ಕುಣಿಯಲೆ || ೨ ||
ಕರ್ಮದೊಡನೆ ಮುಳುಗಿ ಜಗವ ಮರೆತು ದುಡಿಯಲೆ
ಹೃದಯ ಹೂವುಗಳನು ಹೊಕ್ಕು ಪ್ರೇಮ ಕುಡಿಯಲೆ
ಕಠಿಣಕಲ್ಲ ಕೆಣಕಿ ಒಳಗೆ ಮೂರ್ತಿ ನೋಡಲೆ
ಎಲ್ಲ ಬಿಟ್ಟು ಅಡವಿ ಸೇರಿ ಬೆಡಗ ಬೆದಕಲೆ || ೩ ||
ಭಿಕ್ಷೆಯಿಂದ ಲಕ್ಷ ಲಕ್ಷ ಮನೆಯ ತಿರಿಯಲೆ
ಬೋಧೆಯಿಂದ ಕಲಿತು ಕಲಿಸಿ ಕಲೆತು ಹೋಗಲೆ
ಶೋಧದಿಂದ ತಿಣುಕಿ ಇಣುಕಿ ಸತ್ಯವರಸಲೆ
ಬಾಧೆ ಪಡುವ ಜೀವಿಗಳಿಗೆ ತಂಪನೆರಚಲೆ || ೪ ||
ಎಷ್ಟೊ ತಿಂದು ಎಷ್ಟೋ ಕುಡಿದು ಹಸಿವು ತೀರದು
ನಿನ್ನ ಕಾಣದಂತೆ ಎಲ್ಲ ಪೂರ್ಣವಾಗದು
ಪ್ರಭುವಿನೊಡನೆ ಸರಸವಾಡುತಿರುವೆ ಮರೆಯೊಳು
ಎಷ್ಟು ಕರೆಯಲಿ ತಾಯಿ ಕಂದ ಕೊರಳೊಳು ||೫||
*****