ಪರಂಪರಾನು ಕಾಲದಿಂದಲೂ ಪಶುಗಳನ್ನು ಪವಿತ್ರವೆಂದು ಪೂಜಿಸುತ್ತೇವೆ. ಪಶುಗಳ ಅಸ್ತಿತ್ವ ಇಲ್ಲದಿದ್ದರೆ ಮನ್ಯುಷನ ಬದುಕು ನಿಸಾರವಾಗುತ್ತಿತ್ತು. ಗೊಬ್ಬರ, ಹಾಲು, ಬೆಣ್ಣೆ, ತುಪ್ಪ, ಮಜ್ಜಿಗೆಯಂತಹ ಪದಾರ್ಥಗಳಲ್ಲಿ ಮನುಷ್ಯನ ಪೌಷ್ಠಿಕ ಆಹಾರದ ಅವಿಭಾಜ್ಯ ಅಂಗಗಳಾಗಿರುವುದು ಐತಿಹಾಸಿಕ ಸತ್ಯ. ಹೀಗಾಗಿ ಇವುಗಳನ್ನು ರೋಗರುಜೀನಗಳಿಲ್ಲದಂತೆ ಸಂರಕ್ಷಿಸಿ ಅದರಿಂದಾಗುವ ಪ್ರಯೋಜನವನ್ನು ಪಡೆಯಬಹುದು. ಇವು ಮೂಕ ಪ್ರಾಣಿಗಳಾಗಿದ್ದರಿಂದ ನೋವು ಕಷ್ಟಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ನಾವೇ ಈ ದನಗಳ ಶಕ್ತಿವರ್ಧನೆಗೆ ಅಗತ್ಯವಾದ ಪೂರಕವಾದ ಆಹಾರವನ್ನು ಹಾಕಬೇಕಿದೆ.
ಇತ್ತೀಚಿನ ವಿದ್ಯಮಾನದಲ್ಲಿ ಹಾಲು ಸಮೃದ್ಧಿಯಾಗಿ ಕೊಡಲಿ, ಎಂಬ ಕಾರಣಕ್ಕಾಗಿ ನಾವು ಅಂಗಡಿಯಲ್ಲಿ ದೊರೆಯುವ ಸಿದ್ದಪಶು ಆಹಾರಗಳನ್ನೇ ತಿನ್ನಿಸುತ್ತೇವೆ. ಹಾಲಿನ ಹೆಚ್ಚಳಕ್ಕಾಗಿ ‘ಯುರಿಯೂ’ವನ್ನೂ ಮಿಶ್ರ ಮಾಡಲಾಗುತ್ತದೆ. ಶೇ. ಒಂದರಷ್ಟು ಮಿಶ್ರಮಾಡುತ್ತೇವೆಂದು ಆಹಾರ ತಯಾರಕರು ಹೇಳಿದರೆ ಪಶುವೈದ್ಯರು ಶೇ. ೩೦ ರಷ್ಟು ಮಿಶ್ರಣವಾಗುತ್ತದೆಂದು ಹೇಳುತ್ತಾರೆ. ಈ ಶೇ. ೩ ರಷ್ಟಿನ ಯೂರಿಯಾದ ಜತೆಗೆ ಕೆಲವು ಸಲ ಮರಳು, ಮಣ್ಣುಗಳು ಮಿಶ್ರವಾಗುತ್ತದೆಂದು ಹೇಳುತ್ತಾರೆ. ಇಂಥಹ ಯೂರಿಯಾ, ಮರಳು, ಮಣ್ಣು ಮಿಶ್ರಿತ ಆಹಾರವನ್ನು ಸೇವಿಸುವ ದನಗಳು ಹಾಲನ್ನೇನೋ ಹೆಚ್ಚು ಕೊಡಬಹುದು. ಆದರೆ ಇದೇ ಆಹಾರ ಪಶುಗಳಿಗೆ ವಿಷವಾಗಿ ಪರಿಣಮಿಸುತ್ತದೆ, ಎಂಬ ಸತ್ಯ ಬಹಳ ಜನಕ್ಕೆ ತಿಳಿಯದು. ಚಿನ್ನದ ಮೊಟ್ಟೆಯನ್ನಿಡುವ ಕೋಳಿಯ ಹೊಟ್ಟೆಯನ್ನೇ ಸೀಳಿದ ಸ್ವಾರ್ಥದ ಕಥೆ ನೆನಪಾಗುತ್ತದೆ. ನಮ್ಮ ಸ್ವಾರ್ಥದ ದೆಸೆಯಿಂದಾಗಿ ಇಂಥಹ ಆಹಾರಗಳನ್ನು ನಾವು ದನಗಳಿಗೆ ಕೊಡುತ್ತ ಹೋದರೆ ಗರ್ಭ ಕಟ್ಟುವಲ್ಲಿ ವಿಫಲವಾಗುವುದು, ಬೆದೆಗೆ ಸರಿಯಾಗಿ ಬಾರದಿರುವುದು, ಗರ್ಭಪಾತ ಸಮಸ್ಯೆಯುಂಟಾಗುವುದು, ಚರ್ಮ ರೋಗಗಳು ಬರುವುದು, ಜೀರ್ಣಕ್ರಿಯೆಗೆ ಸಂಬಂಧಪಟ್ಟ ಕಾಯಿಲೆಗಳು ಬರುವುದು. ಮುಂತಾದ ರೋಗಗಳು ಪ್ರಾರಂಭವಾಗುತ್ತವೆ. ಹಾಲು ಹೆಚ್ಚು ಕೊಡುತ್ತದೆಂಬ ಕಾರಣಕ್ಕೆ ಈ ಹಾಲನ್ನು ಕೊಡುವ ಪಶುವಿಗೆ ವಿಷಯುಕ್ತ ಆಹಾರವನ್ನುಣಿಸಿ ಅಪ್ರತ್ಯಕ್ಷವಾಗಿ ಇವುಗಳ ನಾಶಕ್ಕೆ ನಾವೇ ಕಾರಣರಾದಂತಾಗುವುದಿಲ್ಲವೆ? ಯೋಚಿಸಬೇಕು.
ನಮ್ಮ ದೇಶಿ ಪದ್ದತಿಯಲ್ಲಿಯೇ ಅಧಿಕ ಹಾಲನ್ನು ಕೊಟ್ಟು ಆರೋಗ್ಯಕ್ಕೆ ಹೆಚ್ಚು ಪುಷ್ಠಿ ನೀಡುವ ಪಶು ಆಹಾರಗಳನ್ನು ನಾವೇ ತಯಾರಿಸಿಕೊಳ್ಳಬಹುದು. ರಾಗಿ, ಜೋಳ, ಹುರುಳಿ, ಅಕ್ಕಿತೌಡು, ಗೋಧಿಬೂಸಾ, ಹತ್ತಿ ಹಿಂಡಿ, ಸೇಂಗಾ ಹಿಂಡಿ, ಹೀಗೆ ಅನೇಕ ತೆರನಾಗಿ ನಮ್ಮ ಸಸ್ಯಮೂಲದಿಂದಲೇ ತಯಾರಿಸಲ್ಪಟ್ಟ ದೇಶಿ ಸಂಸ್ಕೃತಿಯ ಆಹಾರಗಳನ್ನು ನಾವು ದನಗಳಿಗೆ (ಪಶುಗಳಿಗೆ) ಕೊಟ್ಟರೆ ದೈಹಿಕವಾಗಿ ದಷ್ಟ- ಪುಷ್ಟವಾಗುವುದರ ಜತೆಗೆ ಸಮೃದ್ಧಿಯಾಗಿ ಹಾಲನ್ನು ಕರಿಯುತ್ತವೆ. ಇದೆಲ್ಲ ಎಲ್ಲಿಯ ಗೊಡವೆ, ಎಂದು ಅಂಗಡಿಗಳಲ್ಲಿ ಸಿಗುವ ವಿದೇಶಿ ಮೂಲ ಸಂಸ್ಕಾರಣೆಯ ಆಹಾರವನ್ನು ತಂದು ತಿನ್ನಿಸಿದರೆ, ನಾವೇ ದನಗಳಿಗೆ ಕೈಯಾರೆ ವಿಷಉಣಿಸಿದಂತಾಗುತ್ತದೆ. ದೇಶಿ ಪದ್ದತಿಯ ಪಶು ಆಹಾರಗಳಲ್ಲಿರುವ ಜೀವಸತ್ವಗಳ ಬಗೆಗೆ ನಮ್ಮ ಕೃಷಿಕರು, ಧನಿಕರು ಸಾಕುವವರು ಚಿಂತಿಸಬೇಗಿದೆಯಲ್ಲವೆ?
*****