ಆಗಮನ
ಬಾಲ್ತಸ್ಹಾರ್ ! ಬಾಲ್ತಸ್ಹಾರ್ !
ಬೇಸಿಗೆಯ ಸೂಟಿಯಲ್ವೆ ನಿನಗೆ-
ಕೊಲರಾಡೋ ರಾಂಚಿನಲ್ಲಿ
ಅಷ್ಟು ದಿನ ಇದ್ದು ಹೋಗು
ಪಕ್ಕದಲ್ಲೆ ನದಿ
ಅದರ ಸುತ್ತ ಬಯಲು
ಕುದುರೆ ಮೇಲೆ ಏರಿ
ಎಲ್ಲಿ ಬೇಕೋ ಅಲ್ಲಿಗೆ
ಊರಾಚೆ ಸೇರುವಂಥ
ಶನಿವಾರ ಸಂತೆಗೂ
ಅದರಂಚಿಗಿರುವಂಥ
ಆಳವಾದ ಕಣವೆಗೂ
ಮನೆ ಸ್ವಲ್ಪ ಹಳತು-ನಿಜ,
ಆದರೂ ದೊಡ್ಡದು
**
ಮನೆ ನಿಜಕ್ಕೂ ದೂಡ್ಡದೇ-ಡೇನಿಯಲ್
ಒಬ್ಬನೇ ಆ ಮನೆಯ-
ಲ್ಲಿದ್ದುದು.
ಆತನೂ ನಾ ಬಂದ ಕೆಲವು ದಿನಗ-
ಳಲ್ಲೆ ಏನೊ ತುರ್ತು ಕೆಲಸ-
ವೆಂದು
ಹೊರಟು ಹೋದ ನಗರಕ್ಕೆ-
ಅಂಗಳದ ಕೊನೆಯಲ್ಲೆ ಕೆಲಸದವರ
ಮನೆಯಿತ್ತು.
ಅಲ್ಲಿ ಗುಥ್ರಿಯೆಂಬ ವ್ಯಕ್ತಿ-ಅವನ
ಮಗನು ಮಗಳು
ವಾಸ-ಅವರ
ಹೆಸರೇನೆಂದು ಕೊನೇವರೆಗೂ
ನನಗಂತೂ ತಿಳಿಯ-
ಲಿಲ್ಲ. ಮಾತು
ಕೂಡ ಹೆಚ್ಚಿಲ್ಲ. ಓದು ಬರಹ ಮೊದಲೆ
ಇಲ್ಲ. ಯಾವ ಧರ್ಮ
ಯಾವ ಮತ ?
ರಕ್ತದಂತೆ ನಂಬಿಕೆಗಳೂ
ಬೆರೆತಂತೆ ತೋರಿದುವು. ಪಂಪಾಸ್ ಬಗ್ಗೆ
ಕೇಳಿದ್ದೆ.
ಪುಸ್ತಕದಲ್ಲೂ ಓದಿದ್ದೆ. ನೋಡಿರ್‍ಲಿಲ್ಲ
ಇದುವರೆವಿಗೂ. ಕಣ್ಣು ಹರಿವ
ದೂರಕ್ಕೂ
ಬಯಲುಭೂಮಿ ಉದ್ದಕ್ಕೂ
ಸಮುದ್ರ ಗಟ್ಟಿಯಾದಲ್ಲಿ, ಬಹುಶಃ
ಹೀಗೇ ಇದೀತು !
ಮೇವಿಗೆಂದೆ ಬೆಳೆದಂಥ
ಆಲ್ಫಾಲ್ಫಾ ಹುಲ್ಲು-ರಾತ್ರಿಯಾದರೆ ಅಡಗುತಿತ್ತು
ಎಲ್ಲಾ ಸೊಲ್ಲೂ.
**
ಬಾಲ್ತಸ್ಹಾರ್ ! ಬಾಲ್ತಸ್ಹಾರ್ !
ಬಾಲ್ತಸ್ಹಾರ್ ! ಇಸ್ಫನೋಸ್ಹಾ !
ಬಹಳ ಸೆಕೆಯ ದಿನಗಳವು
ಅಲ್ಲವೇ ?
ಪಂಪಾಸಿನ ಬಿಸಿಗಾಳಿ
ಬೀಸಿತು ಮನೆಯೊಳಗೂ
ಎದ್ದು ನೀನು ಕದ ತೆರೆದು
ನೋಡಿದಿ ಮನೆ ಹೊರಗೆ
ಎಲ್ಲವೂ ಬಟ್ಟ ಬಯಲು
ನೋಡೋದಕ್ಕೂ ಏನಿದೆ ?
ಕೆಲಸದವರ ಮನೆಯ
ಒಂಟಿ ಬೆಳಕೂ ಆರಿದೆ.
**
ಬಹಳ ಸೆಕೆಯ ದಿನಗಳೇ
ನಿದ್ದೆ ಮಾಡಲಾರದೆಯೆ
ಒಳ ಹೊರ
ನಡೆಯುತ್ತಿದ್ದೆ.
ಇದ್ದಕ್ಕಿದ್ದ ಹಾಗೆ
ದೂರದ ದಿಗಂತವೇ
ಅತಿ ಸಮೀಪ
ಬಂದಂತೆ
ಬಿರುಗಾಳಿ ಮೋಡ
ಗುಡುಗು ಮಿಂಚು
ಸೇರಿಕೊಂಡ
ಅಚಾನಕ ಮಳೆ
ರಾತ್ರಿಯಿಡೀ ಸುರಿಯಿತು
ಬೆಳಗ್ಗೆದ್ದು ನೋಡಿದರೆ
ಎಲ್ಲೆಲ್ಲೂ
ಪ್ರಳಯವೇ !
ಕೆಲಸದವರ ಮನೆಯ
ಛಾವಣಿಯೇ ಇಲ್ಲ !
ಚಳಿಗೆ ಗಡಗಡ ನಡುಗುತ್ತ
ನಿಂತಿದ್ದರು ಮೂವರೂ !
ಪ್ರವಚನ
ಬಾಲ್ತಸ್ಹಾರ್ ! ಬಾಲ್ತಸ್ಹಾರ್!
ಬಾಲ್ತಸ್ಹಾರ್ ಇಸ್ಪನೋಸ್ಹಾ!
ಗುಥ್ರಿಗಳ ಜತೆಯಲ್ಲ, ಬಾಲ್ತಸ್ಹಾರ್
ಇಸ್ಪನೋಸ್ಹಾ
ಕರೆಗೆ ಹೊಡೆದು ತರುತ್ತಾನೆ
ಜಾನುವಾರು ಹಲವ
ತರಲಾಗದೆ ಬಿಡಬೇಕಾಗುತ್ತದೆ
ನೆರೆನೀರಿಗೆ ಕೆಲವ
ಸಂಜೆಯಾದ ಹಾಗೆ ನೀರು
ಇಳಿದರೂ ಇಳಿತ
ಕುಳಿತಲ್ಲೇ ಕೇಳುತಿತ್ತು
ಇನ್ನೂ ನದಿ ಮೊರೆತ
ಗುಥ್ರಿಗಳು-ಅವರ ಏನು ಮಾಡೋಣ ?
ಅವರ ಗುಡಿಸಲು ಹೋಯ್ತು
ಮನೆಯೊಳಗೆ ಅವರಿಗೊಂದು
ಕೊಠಡಿಯ ಬಿಟ್ಟುದಾಯ್ತು
ಉರಿಯೋ ಕಂದೀಲಿಗು ಬಂದಂತೆ
ಎಂದಿಲ್ಲದ ಬೇಸರ
ಇರಲಾರದೆ ಆರಲಾರದೆ
ಅದೂ ಒಂದು ತರ
ಇಂಥಲ್ಲಿ ಬಾಲ್ತಸ್ಹಾರ್
ಮನೆಯೆಲ್ಲ ಹುಡುಕಿ ಹುಡುಕಿ
ತೆಗೆಯುತ್ತಾನೆ ಒಂದು ಗ್ರಂಥ
ಅದರ ಧೂಳು ಕೊಡವಿ
ನೋಡಿದರೆ ಬೈಬಲು
ತಾನು ಕಡೆಗಣಸಿದಂಥ !
**
ಬಾಲ್ತಸ್ಹಾರ್ ! ಬಾಲ್ತಸ್ಹಾರ್ !
ಬಾಲ್ತಸ್ಹಾರ್ ಇಸ್ಪನೋಸ್ಹಾ !
ಗೊತ್ತಿತ್ತೇನು ನಿನಗೆ-
ಅವರಿಗೆಷ್ಟು ಅರ್ಥವಾಯ್ತು
ಎಷ್ಟು ಆಗಲಿಲ್ಲ-
ಮಬ್ಬುಗತ್ತಲ ಬೆಕ್ಕು
ಅರ್ಧ ಕಣ್ಣು ತೆರೆದು
ನಿನ್ನ ಹಿಂದೆ ನೋಡುತಿತ್ತು
ಅಷ್ಟೂ ಹೊತ್ತು
ಮಾರನೆಯ ದಿನ
ಮತ್ತದೇ ಕಥೆ !
ಸಂತ ಮಾರ್ಕ ಹೇಳಿದ್ದು
ಗುಥ್ರಿಯವರು ಬಯಸಿದ್ದು
ಮತ್ತೆ ಮತ್ತೆ ಅದೇ !
ನಿನಗೋ ಆವೇಶ
ಗಡ್ಡವೂ ಬೆಳೆದಿತ್ತು
ಕುಳಿತವ ಎದ್ದು ನಿಂತಿ
ಕಣ್ಣನೋಟ ಎಲ್ಲೊ ಕಂತಿ
ಯುಗಾಂತರದ ಸದ್ದುಗಳ
ಕೇಳುವಂತೆ ಇದ್ದಿ
**
ಅದು ಯಾವುದು ? ಅದು ಯಾವುದು ?
ಹೊಡೆವ ಸುತ್ತಿಗೆಯದು
ಹಡಗವ ಮಾಡುವುದು
ಅದ ನೀರಿಗೆ ಇಳಿಸುವುದು
ಯಾವುದ ಹುಡುಕಿ ಹೂರಟಿದೆ
ಭೂಮಧ್ಯ ಸಮುದ್ರದಲ್ಲಿ ?
ಇಲ್ಲ-ಸದ್ದು ಯಾರೊ
ನಡೆಯುವುದು
ಈ ಕಡೆಗೇ
ಬರುವುದು
ಎಚ್ಚರಾಗಿ ನೋಡಿದರೆ
ಬೆತ್ತಲಾಗಿ ನಿಂತಿದ್ದಾಳೆ
ಕನ್ಯೆಯಾಗಿ ನನಗೋಸ್ಕರ
ಇಷ್ಟು ದಿನ-ರಾತ್ರಿಯೂ
**
ಬಾಲ್ತಸ್ಹಾರ್ ! ಬಾಲ್ತಸ್ಹಾರ್ !
ಬಾಲ್ತಸ್ಹಾರ್ ಇಸ್ಪನೋಸ್ಹಾ
ಬೆಳಗೆದ್ದು ನೋಡುತ್ತಾನೆ
ಯಾರೂ ಯಾರೂ ಇಲ್ಲ-
ಆದರೂ ಹಾಸಿಗೆಯ
ಆ ಒತ್ತು ಇನ್ನೂ ಇತ್ತು
ದಿಂಬಿಗೊಂದು ಕೂದಲೆಳೆ
ಸಿಕ್ಕಿಕೊಂಡು ಬಿದ್ದಿತ್ತು
ಎಲ್ಲವ ಮರೆಯಲೆಂದು
ತೆರೆದು ನಿಂತ-ಆ
ಶುಕ್ರವಾರದ ಸಂತ
ನಿರ್ಗಮನ
ವಾರ ಕಳೆದು ವಾರ
ಅಂದು ಶುಕ್ರವಾರ
ಮುಂಜಾನೆಯ ತಂಗಾಳಿ
ಪಾಂಪಾಸಿನಿಂದ
ಆಲ್ಫಾಲ್ಫಾ ಹುಲ್ಲುಗಳಲಿ
ನೀಲಿ ನೇರಳೆ ಹೂವುಗಳು
ಮನೆಯೊಳಗೆ ನಿಲ್ಲಲಾರದೆ
ಹೊರಬಂದು ನೋಡಿದರೆ
ಗುಥ್ರಿ ಕಾದು ನಿಂತಿದ್ದಾನೆ
ಇಷ್ಟೊಂದು ಮುಂಜಾನೆ !
“ಸ್ವಾಮೀ,
ಪಾಪಿಗಳಿಗೆ ಗತಿಯೇನು ?”
“ಪಾಪಿಗಳಿಗೆ ಗತಿಯೇ ? ನರಕ !
ನರಕವೇ !”
-ಅಲ್ಲದೆ ಮತ್ತಿನ್ನೇನು ?
“ನರಕ ? ಸ್ವಲ್ಪ
ವಿವರವಾಗಿ ಹೇಳಿ ಅಯ್ಯ”
“ಭಾಳ ಕೆಟ ಜಾಗ…”
-ಕುದಿವ ಎಣ್ಣೆ ಕಡಾಯಿ
ಇತ್ಯಾದಿ ಇತ್ಯಾದಿ
“ರೊಮಾನರು-ಅವರೂ
ಹೋದರೆ ಅಲ್ಲಿಗೆ ?”
“ಇಲ್ಲಿಲ್ಲ! ಅವರನೆಲ್ಲ ಯೇಸು
ಕ್ಷಮಿಸಿ ಬಿಟ್ಟ!”
-ಆತ ದೊಡ್ಡವ
**
ಆ ದಿನ ಇಡೀ ದಿನ
ಗುಥ್ರಿ ಮತ್ತು ಮಕ್ಕಳು
ನನ್ನ ಜತೆಗೇ ಇದ್ದರು
ಬೇಕಾದರು ಬೇಡಾದರು
ಹಿಂದೆ ವಂದೆ ಸುಳಿಯುತ್ತ
ನನ್ನದೊಂದು ಮಾತಿಗೆ
ಕಾಯುವ ಹಾಗೆ ಕಾಣುತ್ತ
ಎಂದಿನಂತೆ ಅಂದೂ
ಸೂರ್ಯ ಮುಳುಗುವ ಹೊತ್ತು
ಕೊಲರಾಡೋ ರಾಂಚಿನಲ್ಲಿ
ರಾತ್ರಿಯಾಗುವುದಿತ್ತು
ಯಾಕೆ ಹಾಗೆ ನೋಡುತ್ತಾರೆ ?
ಆವರಿಗೇನು ಬೇಕಾಗಿದೆ ?
ಕೈ ಹಿಡಿದು ಕರೆಯುತ್ತಾರೆ
ತಮ್ಮ ಮುರಿದ ಮನೆಗೆ
ಹಾದಿಯಲ್ಲಿ ಮೂವರೂ
ಕಾಲಿಗಡ್ಡ ಬೀಳುತ್ತಾರೆ
ಗುಥ್ರಿ ಹುಡುಗಿ ಮಾತ್ರವೇ
ಗೋಳೋ ಎಂದು ಅಳುತ್ತಾಳೆ
**
ಬಾಲ್ತಸ್ಹಾರ್ ! ಬಾಲ್ತಸ್ಹಾರ್ !
ಬಾಲ್ತಸ್ಹಾರ್ ಇಸ್ಪನೋಸ್ಹಾ
ನಡೆದಷ್ಟು ಇನ್ನಿಲ್ಲ !
ಕೊನೆ ಘಟ್ಟವೂ ಬಂತಲ್ಲ !
ಆಮೇಲವರು
ಬಯ್ಯುತ್ತಲೂ
ಮುಖದ ಮೇಲೆ
ಉಗಿಯುತ್ತಲೂ
ಮುರಿದು ಬಿದ್ದ ಮನೆಯೊಳಕ್ಕೆ
ಬಲವಂತ ತಳ್ಳುವರು
ಏನಿದೆ ?
ತೊಲೆಯಿಂದ ಮಾಡಿದಂಥ
ದೊಡ್ಡದೊಂದು ಶಿಲುಬೆ
ಅಲ್ಲಿ ಮುಂದೆ ತೂಗಲಿರುವ
ತನ್ನ ದೇಹದೆಲುಬೆ
ಈಗಾಗಲೆ ಅವರು
ಹಿಡಕೊಂಡಿರುವರು !
*****