‘ಸಿಡಿಲು’ ಎಂದಾಕ್ಷಣ ಯಾರಿಗೆ ತಾನೆ ಹೆದರಿಕೆ ಇಲ್ಲ. ಇದರ ಅಬ್ಬರ, ಶಬ್ದ ಬೆಂಕಿಯ ವೇಗಗಳನ್ನು ಕಂಡರೆ ಪ್ರಾಣಭಯ ಪಡುವವರೇ ಹೆಚ್ಚು. ಈಗಾಗಲೇ ಸಹಸ್ರಾರು ಜನ ಸತ್ತಿರುವ, ನೂರಾರು ಕಟ್ಟಡಗಳು ನೆಲಕ್ಕುರುಳಿರುವ, ಅಸಂಖ್ಯಾತ ಮರಗಳು ಸೀಳಿಕೊಂಡಿರುವ ಉದಾಹರಣೆಗಳಿವೆ, ಮಳೆಗಾಲ ಬಂತೆಂದರೆ ಸಿಡಿಲು-ಮಿಂಚುಗಳ ಅರ್ಭಟ ಹೆಚ್ಚಾಗುತ್ತದೆ.
ವಿದ್ಯುತ್ ಕಣಗಳ ಸಮೂಹವು ವೇಗದಿಂದ ಅಪ್ಪಳಿಸುವುದಕ್ಕೆ ನಾವು ‘ಸಿಡಿಲು’ ಎನ್ನುತ್ತೇವೆ. ಈ ಸಿಡಿಲಿನಿಂದ ಉತ್ಪತ್ತಿಯಾಗುವ ಶಕ್ತಿ ಸು.೧೦೦ ಕೋಟಿ ವೊಲ್ಟೇಜ್ ನಷ್ಟಿರುತ್ತದೆ ಎಂದರೆ ನಂಬಲಿಕ್ಕಾಗುವುದೇ ಇಲ್ಲ. ಸಿಡಿಲಿನಿಂದ ಉದ್ಭವಿಸುವ ಮಿಂಚುಗಳು ೩೦೦ ಅಡಿಗಳಿಂದ ನಾಲ್ಕು ಮೈಲಿ ದೂರದವರೆಗೂ ಪ್ರವಹಿಸುತ್ತವೆ. ಇವುಗಳ ಉಷ್ಣತೆ ೩೦,೦೦೦ ಡಿಗ್ರಿ ಸೆಂಟಿಗ್ರೇಡ್ ವರೆಗೂ ಇರುತ್ತದೆ. ಇದು ಸೂರ್ಯಕಿರಣಗಳ ಉಷ್ಣತೆಗಿಂತಲೂ ೫ ಪಟ್ಟು ಅಧಿಕವಾಗಿರುತ್ತದೆ. ಭೂಮಿಯ ಮೇಲೆ ನಿರಂತರವಾಗಿ ಎಲ್ಲೋ ಒಂದು ಕಡೆ ಸಿಡಿಲು ಬೀಳುತ್ತಲೇ ಇರುತ್ತದೆ. ಸೆಕೆಂಡಿಗೆ ೫೦ ರವರೆಗೂ ಬೀಳುವುದು ಸಾಮಾನ್ಯ. ಇವುಗಳಿಂದ ಭವನಗಳು ಕುಸಿಯದಿರಲು ಮಿಂಚು ಸಂವಾಹಕಗಳನ್ನು ಬಳಸುತ್ತಾರೆ. ಇವುಗಳ ಮೂಲಕ ಸಿಡಿಲು ಪ್ರವಹಿಸಿ ಅಪಾಯವಿಲ್ಲದೇ ಭೂಮಿಯೊಳಗೆ ಸಿಡಿಲು ನುಸುಳುತ್ತದೆ. ರೇಡಿಯೋಗಳು, ಟ್ಟಾನ್ಸಿಸ್ಟರ್‌ಗಳು, ಆಂಟೇನಾಗಳು ಈ ಸಿಡಿಲುಗಳನ್ನು ಆಕರ್ಷಿಸುತ್ತವೆ. ಪ್ರಪಂಚದಲ್ಲಿಯೇ ಹೆಚ್ಚಾಗಿ ದಕ್ಷಿಣ ಆಫ್ರಿಕಾದಲ್ಲಿಯೇ ಸಿಡಿಲಿನ ಅಬ್ಬರ ಹೆಚ್ಚಾಗಿರುತ್ತದೆಂದು ಸಿಡಿಲಿನ ಬಗೆಗೆ ಸಂಶೋಧನೆ ನಡಿಸಿದ ವಿಜ್ಞಾನಿಗಳು ಹೇಳುತ್ತಾರೆ.
*****