ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…
ಅಲ್ಲವೆ ಮತ್ತೆ
ಮುಂದೆ ಹೋದರು ಕತ್ತೆ
ಹಿಂದೆ ಬಂದರು ಕತ್ತೆ
ಕತ್ತೆಯೇ
ಹಾಗೆಯೇ ಆವತ್ತು
ಅಂಥ ಕತೆ ಕೇಳಿ
ಅಂಥ ಕತೆಯೇ ಅಥವ
ದಂತ ಕತೆಯೇ
ಆಹ ! ಅವನೇ ಬಂದ
ಖದೀಮ
ಹೆಸರು ಮಾತ್ರ ಹಕೀಮ
ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…
ಕಾಲ ಕ್ರಿಸ್ತಶಕ
ಒಂದು ಸಾವಿರ ವರುಷ
ಜಾಗ ಕೈರೋ ಎಂಬ ದೇಶ
ಅವರೂ ಖಲೀಫರೇ
ಬರುತಾರೆ ಕೆಲವು ಸಲ
ಗರೀಬ ಫಕೀರನ ಹಾಗೆ
ಬರುತಾರೆ ಕೆಲವು ಸಲ
ತಳವಾರನ ವೇಷ
ಇಂಥಾ ಹೊತ್ತಿಗೆ
ಕುಂಟರ ಕುರುಡರ ಪರವೂರವರ
ಸಂತರ ಶ್ರೀಮಂತರ ನಂಬುವುದಾದರು ಹೇಗೆ !
ಮಾರನೆ ದಿನ
ಸೆರೆಮನೆಯಲಿ ಹತ್ತು ಜನ
ಹೆಚ್ಚಿದರೂ ಹೆಚ್ಚೀತು
ಐದಾರು ಹೆಣ
ಕೊಚ್ಚಿದರೂ ಕೊಚ್ಚೀತು
ಹೀಗಿತ್ತವನ
ಹೀಗಿದ್ದವನ
ಹೀಗೇ ಒಂದು ದಿನ
ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…
ನಾವು ಮಸೀದಿಯ ಮೆಟ್ಟಿಲ ಮೇಲೆ
ಸುಮ್ಮನೆ ನೋಡುತ್ತ
ಅಂಗಡಿ ಕಣಗಳು ಕೂಡ
ಅರ್ಧಕ್ಕೆ ತೆರೆಯುತ್ತ
ಇನ್ನೂ ಕೆಲವರು ಹುಕ್ಕದ ಸುತ್ತ
ಕತೆಗಳ ಹೇಳುತ್ತ
ಹತ್ತು ಜನ ಹೊಂತಗಾರರು
ಹೀಗೇ ಹಾದಿ ನಡೆದಿದ್ದಾರೆ
ಒಬ್ಬಾನೊಬ, ವ್ಯಾಪಾರಿ
ಜತೆಗೇ ಬರುವುದ
ಕಂಡಿದಾರೆ.
ತಲೆಗೇನೋ ಹೊಳೆದಂತಾಗಿ
ತಟ್ಟನೆ ತಿರುಗಿ ನಿಂತಿದ್ದಾರೆ
“ಸಲಾಂ ಖಲೀಫರ
ಅನಕಾ ದೂರ
ಬರಿಗಾಲಲ್ಲೆ ಬಂದಿದ್ದೀರ !
ಏನ ನಡೆಸೀರಿ
ವ್ಯಾಪಾರ ?”
ಎಂದರು-ಹತ್ತಿರ
ಹತ್ತಿರ ಬಂದರು, ಹತ್ತೂ ಮಂದಿ
ಸುತ್ತ ಮುತ್ತ ಯಾರಿಲ್ಲ
ಬಿಟ್ಟರೆ ಬೀದಿಯ ಹಂದಿ
ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ
“ಆಹ ! ಏನಂದಿರಿ-
ವ್ಯಾಪಾರ ?
ಅದೂ ಪರವಾಯಿಲ್ಲ!
ಇದೋ!” ಎಂದರು ಖಾವಂದರು
ಮುಷ್ಟಿ ದಿನಾರವ ತೆಗೆದು
ಅವು ಅಂಗೈ ತುಂಬಾ ಹೊಳೆದು
ಸಂಜೆಯ ಸೂರ್ಯನ ಕಿರಣ
ಹೆಕ್ಕಿದುವೊಂದನು ಬಿಡದೆ
ನೋಡದೆ ಬೇರೆ ಕಡೆ
“ಯಾರಿಗೆ ಇವು
ಯಾರಿಗೆ ಹೇಳಿ-
ಕಪ್ಪು ಸಮುದ್ರವ
ಕುಡಿದಾತನಿಗೆ
ಕೆಂಪು ಸಮುದ್ರವ
ಹಿಡಿದಾತನಿಗೆ
ಕೊನೆ ತನಕವು
ಉಳಿವಾತನಿಗೆ !”
ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ…
ಎಲ್ಲರು ಬಿದ್ದಿದ್ದರು-ಒಬ್ಬ ಮಾತ್ರವೇ
ಎದ್ದು ನಿಂತಿದ್ದ
ಅವ ಖಲೀಫರ ಸಮ್ಮುಖ
ಬಂದು ನಿಂತಿದ್ದ
“ಏನ ನೋಡತಿ, ಮಗನೇ ?
ಕೊನೆಗೂ ಗೆದ್ದವ ನೀನೇ-
ನಮ್ಮ ಕಾಲಿಗೆ ಬಿದ್ದು
ತಗೊ ನಿನ್ನ ನಿಧಿಯನು ನೀನೇ !”
ಆಮೇಲಿನ ಕತೆ
ಗೊತ್ತಿದ್ದದ್ದೇ-
ದೇವರು ದೊಡ್ಡವ ಗೆದ್ದೇ-
ನೆಂದು ಮನಸಿನ ಒಳಗೇ
ನೆತ್ತರ ಒರೆಸಿ
ಖಡ್ಗವ ಮರೆಸಿ
ನಡೆದರು ಮೊದಲಿನ ಹಾಗೇ
ಖಲೀಫ ಹಕೀಮರ ಹೊಗಳಿ
ಮನೆ ಮನೆ ಬಾಗಿಲ ಅಗಳಿ
*****