ಜುಲೇಖಳ ಪ್ರೀತಿ
ಸಂತೆಯಿಂದ ಯೂಸುಫನ
ಕೊಂಡು ತಂದ ದಿನದಿಂದ
ಜುಲೇಖ ಅವನ ಪ್ರೀತಿಯಲ್ಲಿ
ನಾವು ಅವಳ ರೀತಿಯಲ್ಲಿ
ಅವನೆದುರು ನಿಲ್ಲುತ್ತಲು
ಸುಮ್ಮನೇ ಸುಮ್ಮನೇ
ಅವನ ಮಾತಿಗೆಳೆಯುತ್ತಲು
ಸುಮ್ಮನೇ ಸುಮ್ಮನೇ
ಹೊಸ ಬಟ್ಟೆ ಕೊಡಿಸುತ್ತಲು
ಸುಮ್ಮನೇ ಸುಮ್ಮನೇ
ಹಾಲು ಹಣ್ಣು ಕಳಿಸುತ್ತಲು
ಸುಮ್ಮನೇ ಸುಮ್ಮನೇ
ಅವನ ಕುರಿತು ಕೇಳುತ್ತಲು
ಸುಮ್ಮನೇ ಸುಮ್ಮನೇ
ಜುಲೇಖ ಅವನ ಪ್ರೀತಿಯಲ್ಲಿ
ನಾವು ಅವಳ…
ಹೆಸರ ಹಿಡಿದು
ಕೂಗುವವಳು
ಮಾತು ಮರೆತು
ನಿಲ್ಲುವವಳು
ಅವನ ಬಟ್ಟ
ಕಣ್ಣುಗಳಲಿ
ತನ್ನ ಬಿಂಬ
ನಾಟುವವಳು
ಸಕಲ ಕಟ್ಟು
ಪಾಡುಗಳ
ಒಳಹೊರಗೆ
ದಾಟುವ
ಜುಲೇಖ ಅವನ ಪ್ರೀತಿಯಲ್ಲಿ
ನಾವು ಅವಳ…
ಅವನ ಕಾಣದಿದ್ದ ದಿನ
ಇವಳ ದುಃಖಕೆಣೆಯೆ
ಕಂಡರೂ ಅವ ಮಾತ್ರ
ಎದ್ದು ಹೋಗಿ ಬಿಡುವನೆ!
ಅಲ್ಲ-
ಎಂಥ ನಲ್ಲ! ಎಂಥ ನಲ್ಲ!
ಇಂಥವ ಇನ್ನೊಬ್ಬನಿಲ್ಲ!
ಜುಲೇಖ ಅವನ ಪ್ರೀತಿಯಲ್ಲಿ
ನಾವು ಅವಳ…
ಸುಮ್ಮನಿರೆಂದರೆ
ಇದ್ದಾನೇ?
ಇಡೀ ದಿನವು
ದುಡಿವವನೇ
ಯಾರೇನೆ ಅಂದರೂ
ಮುಗುಳು ನಗೆ
ನಗುವವನೆ
ಇತ್ತ ಇವಳು
ಮರುಗುವವಳೆ
ದಿನ ದಿನವು
ಕೊರಗುವವಳೆ
ಜುಲೇಖ ಅವನ ಪ್ರೀತಿಯಲ್ಲಿ
ನಾವು ಅವಳ…
ಮೆಂಫಿಸಿನ ಮಹಿಳೆಯರು
ಮಂಫಿಸಿನ ಮಹಿಳೆಯರು
ಬೆನ್ನ ಹಿಂದೆ ನಗುವರು
ಕತೆ ಕಟ್ಟಿ ತಮ್ಮೊಳಗೇ
ಆಡಿಕೊಂಡು ತಿರುಗುವರು
ಹೇಳು ಯೂಸುಫ್ ಹೇಳು !
ಇದು ಸರಿಯೆ?
ನಾನರಿಯೆ
ನನ್ನ ಪಾಡು
ನಿನಗೆ ತರವೆ?
ಹೀಬ್ರೂ ಹುಡುಗನ ಬೆನ್ನು ಹತ್ತಿ
ನಾ ಓಡುತಿರುವುದಂತೆ!
ನನಗೆ ಬರೀ ಮರುಳಂತೆ!
ರಾತ್ರಿ ನಿದ್ದೆಯಿಲ್ಲವಂತೆ!
ದೈವ ಧರ್ಮ ಎಲ್ಲವ
ತೊರೆದು ಬಿಟ್ಟಿರುವನಂತೆ!
ನಾಚುಗೆಯನು ಹಾಸುಗೆಯನು
ಒಟ್ಟಿಗೆಯೆ ಕೊಟ್ಟೆನಂತೆ!
ಹೇಳು ಯೂಸುಫ್ ಹೇಳು!
ನನ್ನ ನೀ ಕಂಡೊಡನೆ
ಮುಖ ತಿರುಗಿಸಿ ನಿಲುವಿಯಂತೆ
ಕೆಲಸವಿರಲಿ ಇಲ್ಲದಿರಲಿ
ಕೆಲಸ ತುಂಬ ಇರುವಂತೆ
ಸಂತೆಗೆಂದು ಹೋದವನು
ಸಂಜೆಯಾದರೂ ಮುರಳದೆ
ಮರಳಿದರೂ ನನ್ನೆದುರು
ಬಾರದೆಯೆ ಬಾರದೆಯೆ
ಕಂಡರೂ ಕಣ್ಣಿನಲಿ
ನೋಡದೆಯೆ ನೋಡದೆಯೆ
ನನ್ನ ಈ ಅವಸ್ಥೆ ನೋಡಿ
ನಗುವಿಯೇ ನಗುವಿಯೇ
ಹೇಳು ಯೂಸುಫ್ ಹೇಳು!
ಕುದುರೆ ಮೇಲೆ ಕೇಡು
ಆಹಾ ! ಕುದುರೆ !
ಅರಬ್ಬೀ ಕುದುರೆ !
ಅದನ್ನೇರಿ ಯೂಸುಫ
ಪೇಟೆಗೆ ಹೋದನೆಂದರೆ
ಕಿಟಕಿಯ ತೆರೆದಿರಿಸಿ
ಜುಲೇಖ ಕಾದು ಕೂಡುವಳು
ಅವನ ಹಾದಿ ಕಾಯುತ್ತ
ಊಟವಿಲ್ಲ ತಿಂಡಿಯಿಲ್ಲ
ಯೂಸುಫ ಬರಬೇಕಲ್ಲ!
ಹೊತ್ತೇರಿ ಹೊತ್ತಿಳಿದು
ದೀಪ ಹಚ್ಚುವ ಸಮಯ
ಆಹಾ ! ಕುದುರೆ !
ಅರಬ್ಬೀ ಕುದುರೆ !
ಅದರ ಸದ್ದು ನಮಗೆ ಗೊತ್ತು
ಅಂಗಳಕ್ಕೆ ಧಾವಿಸುವಳು
ಅವನೋ ನಿಧಾನ
ಕೆಳಕ್ಕೆ ಜಿಗಿದು ಕಡಿವಾಣ
ಕಳಚುತಾನೆ ಕುದುರೆಯ
ಬೆನ್ನ ಮೆಲ್ಲ ಸವರುತಾನೆ
ಈ ಕಡೆಗೆ ನೋಡಲಾರ
ಇವಳ ಮುಖದ ಅವಗುಂಠನ
ಗಾಳಿಯಲ್ಲಿ ಸರಿದರೂ
ಕಣ್ಣುಗಳೇ ತಿವಿದರೂ !
ಆಹಾ ! ಕುದುರೆ !
ಅರಬ್ಬೀ ಕುದುರೆ !
ತನ್ನ ಮೈಯ ಅತ್ತರ
ತುಟಿಗಳಲಿ ನಗುವೇನು ?
ಇವನು ಕಾಣುವ ಕನಸೇನು ?
ಯಾರಿಗೂ ಹೇಳದೆಯೆ
ಕತ್ತಲ ದಾರಿ ಹಿಡಿದು
ಬಂದಿದ್ದಾಳೆ ಜುಲೇಖ-
ಪಕ್ಕದಲೆ ಇದ್ದಾಳೆ
ಇವನ ಪಕ್ಕ
ಮಲಗಿ ಬಿಡಲೆ ?
ಇವನಿಗೊಂದು
ಮುತ್ತು ಕೊಡಲೆ ?
– ಹೀಗೆಂದು ಜುಲೇಖ
ಇರಲಾರದೆ ಬರಲಾರದೆ
ತನ್ನ ಮೈಯ ಅತ್ತರ
ಬಿಟ್ಟು ಅವನ ಹತ್ತಿರ
ಜುಲೇಖ ಅವನ ಪ್ರೀತಿಯಲ್ಲಿ
ನಾವು ಆವಳ…
ಯೂಸುಫನ ಕನಸು
ದಿಕ್ಕುಗುರಿಯಿಲ್ಲ
ಅಂಥ ಮರುಭೂಮಿ
ದಿಬ್ಬದ ಮೇಲೆ ದಿಬ್ಬ
ಎಬ್ಬಿಸುವ ಗಾಳಿ
ರಾತ್ರಿ ಹೂವುಗಳು ಬಿರಿವ ಹೂತ್ತು-ನೀ
ಹೊರಟಿರುವುದೆಲ್ಲಿಗೆ ?
ಇಷ್ಟು ನಕ್ಷತ್ರಗಳಲ್ಲಿ
ಯಾವುದು ನನಗೆ ?
ತಾಳೆ ಮರಗಳೂ ನೀರ ಕೊಳಗಳೂ
ಎಷ್ಟೋ ಆಚೆಗುಳಿದು
ಬಾನ ಬೆಳಕಿನಲ್ಲೇ
ಇಷ್ಟೂ ದೂರ ಬಂದು
ನನ್ನ ಜತೆ ಜತೆ ನಡೆದವಳೇ
ಇದೋ ಇಲ್ಲ ನಿಂತೆ
ನನ್ನ ಸುತ್ತಲೂ ನೆರಯಿತಲ್ಲ ಇ-
ಷ್ಟೊಂದು ಸಂತೆ…
ದಾವತ್
ಕ್ಚಗೆ ಬಂದಿರುವ ತುತ್ತು ಬಾಯಿಗೆ
ಬಾರದಿರುವುದೇ ಎಂದು
ಮೆಂಫಿಸಿನ ಮಹಿಳೆಯರು
ಒಂದು ಕೈಯಲ್ಲಿ ಹಣ್ಣು
ಇನ್ನೊಂದು ಕೈಯಲಿ ಚಾಕು
ಹಿಡಿದು ಕೂತಿರುವರು
ಯೂಸುಫ ಬರಲಿ ಎಂದು
ಅಂದು ವಜೀರರ ಮಡದಿ ಜುಲೇಖ
ಮೆಂಫಿಸಿನ ಮಹಿಳೆಯರ ಕರೆದು
ಔತಣ ಕೊಡಿಸಿದ ದಿವಸ
ಪರ್ಶಿಯಾ, ಮೊರಾಕ್ಕೊ ಹಾಗೂ
ಐಗುಪ್ತ ದೇಶಗಳ
ಭಕ್ಷ್ಯ ವಿಶೇಷ
ಸಕಲರ ಗ್ರಾಸ
ಬೆಳ್ಳಿ ಬಟ್ಟೆಯ ಹೊದೆಸಿ ಮೇಜಿನಲಿ
ವಜ್ರದ ಹಾಗೆ ಕಡೆದಿದ್ದ ಗ್ಲಾಸಿನಲಿ
ಹಲವು ಬಣ್ಣಗಳ ಶರಬತ್ತು
ಮೋಡದಂಚುಗಳ ಬೆಳಕಿನ ಥರ
ಹೊಳದಿತ್ತು-ಹಾಗೂ ಮಸ್ಕರವ ಹಚ್ಚಿದ
ಹಲವು ಜತೆ ಕಣ್ಣುಗಳು
ತುಂಬಿ ತುಳುಕುವ ಹಾಗೆ
ಆಗಷ್ಟೇ ಕೊಯ್ದು ತಂದಂಥ-ರಸಭರಿತ
ಹಣ್ಣುಗಳೂ ತಟ್ಟೆಯಲಿ-ಇಷ್ಟೊಂದು ಇರುವಾಗ
ಆರಿಸುವುದೇ ಕಷ್ಟ!
ಅತ್ತರಿನ ಜೊತೆಗೆ ಸಂಗೀತವೂ ಸೇರಿ
ಮಾದಕತೆ ಹೆಚ್ಚುವುದು
ಮದಿರೆಗೂ ಆ ಅಂಥ
ಮುಸ್ಸಂಜೆಯ ಸಮಯ
ಎಲ್ಲದಕೂ ತಾನೆ ಖುದ್ದಾಗಿ ಜುಲೇಖ
ಗಮನ ಕೊಟ್ಟಿದ್ದಾಳೆ-ಆಚೀಚೆ ಅವಳೇ
ಸುಳಿದಾಡುತಿದ್ದಾಳೆ
ಎಲ್ಲರ ವಿಚಾರಿಸುತ-ಆದ್ದರಿಂದಲೆ ಅವಳ
ಮುಖದಲ್ಲಿ ಸುಸ್ತು.
ಸುಸ್ತಾದ ಚೆಲುವೆಯರು-ನೋಡಲು
ಇನ್ನಷ್ಟು ಚೆಲುವೆಯರು.
ಮೆಂಫಿಸಿನ ಮಹಿಳೆಯರು ತುಂಬಾ ಮೆಚ್ಚಿ
ಒಬ್ಬರಲ್ಲೊಬ್ಬರು ಮನಬಿಚ್ಚಿ
ಮಾತಾಡಿಕೊಂಡರು-
ಇವಳಂಥ ಚೆಲುವೆ ಈ ಪಟ್ಟಣದಲಿ ಬೇರೆ ಇಲ್ಲ
ಈಕೆಯೊಲಿದವನ ನೋಡಬೇಕಲ್ಲ
“ಜುಲೇಖ ! ಕರೆಸವನ !
ನಾವು ನೋಡಲೇಬೇಕು ನಿನ್ನವನ !”
“ಆತ ಬರುವನಕ ನೀನಿತ್ತ ಈ ಹಣ್ಣ
ಕತ್ತರಿಸೆವು ನಾವು-ಖಂಡಿತ
ಅದು ನಮ್ಮ ಕೈಯಲ್ಲೆ ಇರುವುದು.
ಸಂಜೆ ಸೂರ್ಯನ ಬೆಳಕಿಗಿದರ ಚಿನ್ನದ ಬಣ್ಣ
ನಮ್ಮ ಮೋರೆಗೆ ಬರಲಿ !
ಯೂಸುಫ ಬಂದಾಗ
ಆದು ಹಾಗೆಯೆ ಇರಲಿ !”
ಮೊದಲು ಸೇವಕಿಯ ಕಲಿಸಿ ಸಂದೇಶ:
“ಹಸಿರೆಲೆ ಮರದಂತೆ ಬನ್ನಿ ಯೂಸುಫರೆ
ಪಟ್ಟಣದ ಯುವತಿಯರು ಕಾಯುತಿದ್ದಾರೆ
ನೀವೆ ಮೆಟ್ಟುವ ನೆಲವ ಚುಂಬಿಸಲು ತಯಾರು
ನಮ್ಮ ನೋಟವೆ ನಿಮಗೆ ರತ್ನಗಂಬಳಿಯಾಗಿ
ಬರುವುದಾದರೆ ನೇರ
ಬಂದುಬಿಡಿ ಎದೆಗೇ !”
ಬರಲಿಲ್ಲ ಯೂಸುಫ-ನಂತರ ಜುಲೇಖ
ಖುದ್ದಾಗಿ ತಾನೇ ವಸತಿಗೆ ಹೋಗಿ :
“ಯಾಕಿಷ್ಟು ಹಟ, ಯೂಸುಫ್ ?
ಬಹಳ ಹಿಂದೆಯೇ ನನ್ನ ಕನಸಿನಲಿ ನೀ ಬಂದಿ
ಇದು ಮಾತ್ರ ಸತ್ಯ-
ಇಬ್ಬರಿಗೂ ಗೊತ್ತು
ಈ ಕೋಪದ ಗುಟ್ಟು.”
ಅವನೋ ಅವಳ ಸೇವಕ ನಿಜ-ಆ
ಕಾನಾನದ ಯಹೂದಿ ಯುವಕ
ಅವನ ಮನಸಿನೊಳಗೇನಿತ್ತು?
ಇದ್ದಂತೆಯೆ ಎದ್ದು ಬರುತ್ತಾನೆ
ಅವಳು ಪ್ರತ್ಯೇಕ ತಂದ ಉಡುಪುಗಳ ತ್ಯಜಿಸಿ
ಚಪ್ಪಲಿ ಕೂಡ ಅದಲು ಬದಲಾದ್ದು
ಲಕ್ಷ್ಯದಲಿಲ್ಲ!
ಇತ್ತ ಮೆಂಫಿಸಿನ ಮಹಿಳೆಯರ ಹೃದಯ
ಒಂದು ಕ್ಷಣ ನಿಂತು ಚಿತ್ತ ಮಾತ್ರವೇ
ಸುತ್ತುತಿದೆ ಸುತ್ತ
ಇವ ನಗುತಿದ್ದಾನೆ. ಇಲ್ಲ, ಇವರ
ಒಂದೊಂದು ಕೈಯೂ ಕತ್ತರಿಸಲೆಂದು ಕಿತ್ತಳೆಯ
ಕತ್ತರಿಸುತಿತ್ತು-
ಕಿತ್ತಳೆಯನಲ್ಲ, ಕೈಯ.
ಬೆರಳ ಲೇಖನಿ ಮಾಡಿ ಒಬ್ಬಾಕೆ
ಹುಡುಕುತಿದ್ದಾಳೆ ತನ್ನ ಮೋಹಕ್ಕೆ
ತಕ್ಕಂಥ ಅಕ್ಷರಗಳ
ಕೆತ್ತುತಿದ್ದಾಳೆ ಇನ್ನೊಬ್ಬಾಕೆ ಅಂಗೈಯೊಳಗೆ
ಎಷ್ಟೋ ಕಾಲದ ಕಳಗೆ
ಕಡಲಲ್ಲಿ ಮುಳುಗಿ
ತಳ ಕಚ್ಚಿದ ಹಡಗ
ಹೆಪ್ಪುಗಟ್ಟಿದ ರಕ್ತ ರೇಖೆಗಳ
ನೆರೆಯಿಳಿದ ನದೀ ದಂಡೆಗಳ
ಮೂಡಿಸಿದೆ ಸ್ಪಷ್ಟ
ಅತ್ತ ಜಾರದ ಹಾಗೆ, ಇತ್ತ ಜಾರುವ ಹಾಗೆ
ಯೂಸುಫನ ಕೈ ಹಿಡಿಯುವ ಕಷ್ಟ-
ಜುಲೇಖ ಅವನ ಪ್ರೀತಿಯಲ್ಲಿ
ನಾವು ಅವಳ…
*****