ಋಷಿಗಳ ಮನದಾಗೆ ಓಂಕಾರ ಹರದಂಗೆ
ಬೆಸಲಾಗಿ ನಡೆದಾವೆ ತುಂತುಂಬಿ ಮೋಡ
ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ
ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ ||
ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ
ಎಳೆನಗೆ ಚಿಗತಂಗ ನಗತಾದ ಹುಲ್ಲು
ಹಗಲೆಲ್ಲ ಗಾಳೆಪ್ಪ ಗೋಳಿಸಿ ಹೋಗ್ಯಾನೆ
ಮೌನಗೌರಿ ಆಗ್ಯಾದೆ ಸೃಷ್ಟಿ ಸೊಲ್ಲು || ೨ ||
ಏನೇನೂ ಭಾವ ಹರದಾಡತಾವೆ
ನಾನೇನ ಬಲ್ಲೆನಮ್ಮ
ಧ್ಯಾನಾದಿ ನೀನು ಕುಳಿತಾಗ ನಾನು
ನನ್ನನ್ನೆ ಮರೆವೆನಮ್ಮಾ || ೩ ||
ಇದು ಬರೀ ಶಾಂತಿ ಇಲ್ಲಿಲ್ಲ ಗುಲ್ಲು
ಸೊಲ್ಲೆಲ್ಲ ಮೌನದಲ್ಲೆ
ಕದಡಿರುವ ನೀರು ತಿಳಿಯಾಗಿ ನಿಂತು
ಆಕಾಶ ಹೃದಯದಲ್ಲೆ || ೪ ||
ನಿನ್ನಿಂದ ದೂರ ಬಲುದೂರ ಹೋದೆ
ಪಡಬಾರದಂಥ ಕಷ್ಟ
ತಾಯನ್ನು ತೊರೆದು ಗಿಳಿಮರಿಯು ಬೀಳೆ
ನಾಯಿನರಿಗದುವೆ ಇಷ್ಟ || ೫ ||
ಬಹುದಿನಕೆ ನಿನ್ನ ಮೊಗನೋಡುವಂಥ
ಸಿಗಲಾರದಂಥ ಸೊಗವು
ಎಂದಾದರೊಮ್ಮೆ ಸಿಕ್ಕಾಗ ಎದೆಯು
ಅಳುವೆಲ್ಲ ಹರಿವ ನಗುವು || ೬ ||
ಒಂಟಿತನ ಸಾಕು ಅದು ನರಕ ಸಮವು
ನಾನಾದೆ ಕೊಳೆತ ಹುಳುವು
ನೀನೇಕೆ ನನ್ನ ಕೈಹಿಡಿಯದಂತೆ
ದೂಡುತಿಹೆ ತುಂಬಲಳುವು || ೭ ||
ನಿನ್ನನ್ನು ಬಿಟ್ಟು ನಾ ಬರಿಯ ನೆರಳು
ಒಳಹೊರಗೆ ಕಪ್ಪು ಕಪ್ಪೆ
ಏನಿದ್ದರೇನು ಪ್ರಾಣವೇ ಇರದೆ
ಕಸವಾಗಿ ಅಳಿವ ಸೊಪ್ಪೆ || ೮ ||
ಬಿಡಬೇಡ ನನ್ನ ನಾನಿನ್ನ ಹಸುವು
ಪಶುವಾಗದಂತೆ ಸಲಹು
ಏರಿಳುವುಗಳಲಿ ತೊಳಲುತ್ತೆ ಸೋತೆ
ಇದೆ ಎದೆಯ ಆಳದುಲುಹು || ೯ ||
*****