ನರಬಕ್ಷಕ ರಾಕ್ಷಸರು
ಬಿಳಿ ಮುಖದ ಗುಳ್ಳೆನರಿಗಳು
ಸಿಡಿಲಮರಿಗೆ ಆಹ್ವಾನಿಸಿದವು.
ಸೆರೆಮನೆಯ ಗೋಡೆಗಳು
ಸಿಡಿವಂತೆ ಮಾಡಿದರು.
ಬಂದಿಖಾನೆಯ ಬಂಧನದ
ಕತ್ತೆಲೆಯಲಿ ನೀ ಕಳೆದ
ಇಪ್ಪತ್ತಾರು ವರ್ಷಗಳು.
ಸೆರೆಮನೆಯ ಪ್ರತಿಯೊಂದು
ಕಲ್ಲುಗಳಿಗೂ ನಿನ್ನ
ನಿಟ್ಟುಸಿರಿನ ಬಿಸಿಯು ತಟ್ಟಿ
ಕೆಂಪಾಗಿವೆ ಮಂಡೇಲಾ.
ಮಾತಿಗೂ ಮೀರಿದ ನಿನ್ನ
ಸ್ನೇಹದ ಮುಗುಳು ನಗೆ
ಕೈಬೀಸಿ ಜನಸಾಗರವ
ಹತ್ತಿರಕ್ಕೆಳೆದುಕೊಂಡು
ಹೂವಿನಂತೆ ಕೈಯಾಡಿಸಿ
ಮೈದಡವಿ ಮಾನವೀಯತೆಯನು
ಬಿಗಿದಪ್ಪಿದೆ ಮಂಡೇಲಾ.
ನಿನ್ನವರ ನೋವುಗಳು
ಗಟ್ಟಿಯಾಗಿ ಹೆಪ್ಪುಗಟ್ಟಿ
ಬಾಯಿ ಬಂದಿದೆ ನೋಡು
ನೋವಿನಾಚೆಯ ಮಾತುಗಳು
ಬರಲಿರುವ ಕೆಂಪು
ಸೂರ್ಯನಿಗಾಗಿ ಕಾದಿವೆ ನೋಡು.
ಜನಸಾಗರದ ನಡುವೆ
ಭೋರ್ಗರೆದು
ಧುಮ್ಮಿಕ್ಕಿ ಹರಿವ ನಿನ್ನ
ಅಡ್ಡ ಬಂದವರು
ಚಿಂದಿಯಾದರೂ ಮಂಡೇಲಾ.
*****