ಚೆಲುವಿನ ಗುಲಾಬಿ ಎಂದೂ ತೀರದಿರಲೆಂದೆ
ಸುಂದರ ತಳಿಗಳೆಲ್ಲ ವೃದ್ದಿಸಲಿ ಎನ್ನುವುದು,
ಹಣ್ಣಾದದ್ದೆಲ್ಲವೂ ಮಣ್ಣಿಗುರುಳುವ ಮುಂಚೆ
ನೆನಪನುಳಿಸಲು ತನ್ನ ಕುಡಿಯನ್ನು ಪಡೆಯುವುದು.
ನೀನೊ ನಿನ್ನದೆ ಕಣ್ಣಕಾಂತಿಯಲಿ ಬಂಧಿತ,
ನಿನ್ನ ಚೆಲುವಿನ ಉರಿಗೆ ಆತ್ಮತೈಲವ ಎರೆವೆ,
ಸಮೃದ್ಧಿ ಇರುವ ಕಡೆ ಕ್ಷಾಮವನು ತೆರೆಯುತ್ತ
ನಿನಗೆ ನೀನೆ ಕ್ರೂರಶತ್ರುವಾಗುತ್ತಿರುವೆ.
ಇಳೆಯ ಹೊಸ ಆಭರಣ ನೀನು, ನಿನ್ನೀ ಅಂದ
ಸಿರಿವಸಂತದ ಸನ್ನೆ, ನಿನ್ನ ಸತ್ವವನೆಲ್ಲ
ಮೊಗ್ಗಿನೊಳಗೇ ಹುಗಿಯಬೇಡ ಜಿಪುಣತೆಯಿಂದ,
ಎಳೆಜುಗ್ಗ ವ್ಯರ್ಥಗೊಳಿಸದಿರು ಚೆಲುವನ್ನೆಲ್ಲ,
ಮರುಗು ಲೋಕಕ್ಕೆ, ಇಲ್ಲವೆ ಹೊಟ್ಟೆಬಾಕನೇ,
ಭಕ್ಷಿಸುವೆ ಜಗದ ಪಾಲನ್ನೆ ನೀ ನಿನ್ನನೇ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 1
From fairest creatures we desire increase…