ಏನ ಬೇಡಲಿ ನಿನ್ನ ಪ್ರಾಣದಾತನೆ ತಂದೆ
ಮೂಜಗವನಾಡಿಸುವ ವಿಶ್ವದಾ ತಂದೆ || ಪ ||
ಈ ಜಗದಿ ಜೀವಿಸುವ ಸೌಭಾಗ್ಯ ಮೊದಲಾಗಿ
ಸಾಜದಲಿ ನನಗಿತ್ತೆ ಮನುಜತೆಯ ದೇವಾ
ಉತ್ತುಂಗ ಬೆಟ್ಟ ಇದೆ ನಗುತಿರುವ ಸೃಷ್ಟಿ ಇದೆ
ನರ್ತಿಸುತ ಹರಿಯುತಿದೆ ಆನಂದ ಭಾವ || ೧ ||
ನಿನ್ನ ಕರುಣೆಯ ರೂಪ ತಳೆದಂತೆ ಮಳೆ ಬಹುದು
ಬರಡಾದ ಭೂದೇವಿ ಹಿಗ್ಗುವಳು ನಲಿದು
ಸೂರ್‍ಯ ಚಂದ್ರರ ಬಿಸುಪು ತಂಪುಗಳ ಕಣ್ಣೋಟ
ನಮ್ಮನ್ನು ಕಾಯುತಿರೆ ಬೇಡಲೇನೆಂದು || ೨ ||
ಕಣ್ಣು ಕಾಣಿಸದಂತೆ ಮಾಡುವ ಸಿರಿ ಬೇಡ
ನಿನ್ನ ನೆನೆಯುವ ಭಕುತಿ ಸಿರಿಯೊಂದೆ ಸಾಕು
ಎಂಥ ಕಷ್ಟವೆ ಬರಲಿ ಎಂಥ ಸುಖವೇ ಇರಲಿ
ನನ್ನನ್ನು ಮಗುವಂತೆ ನೀ ಕಾಯುತಿರಲು || ೩ ||
*****