ಹಾಡು ನೂರು ಹಾಡಿ ಬಂದವು
ತಾವೆ ಬಂದವು ಹೋದವು
ನಾನು ಯಾರೊ ಬೆಂಡು ಬಡಿಗಿ
ಯಾಕೆ ಏನೊ ನಿಂದವು ||೧||
ಅವನೆ ಋಷಿಯು ರಸದ ಕವಿಯು
ನಾನು ಗೊಲ್ಲರ ಗೊಲ್ಲನು
ಅವನೆ ವೇದದ ವೇದ ನಾದನು
ನಾನು ಇಲ್ಲರ ಇಲ್ಲನು ||೨||
ಅವನೆ ಬಲ್ಲನು ಎಲ್ಲ ಭಿಲ್ಲನು
ನಾನು ಬಂಡಿಯ ಕಲ್ಲನು
ಗಾನ ಗಂಗಾ ಗಂಡ ಅವನು
ನಾನು ಸೀರೆಯ ಒಗೆವನು ||೩||
ಎಚ್ಚರೆಚ್ಚರ ಹುಚ್ಚು ಹುಂಬನೆ
ಕರ್ತೃ ಅವ ಗುರುಸಿದ್ಧನು
ನಾನು ಗುರುಗುರು ನಿದ್ರೆ ಸಿದ್ಧನು
ಅವನೆ ಬುದ್ಧರ ಬುದ್ಧನು ||೪||
*****