ಕಾಲ್ಮುರುದು ಕೈಯಾಗ ಕೊಡತೇನ ಬೋಸೂಡಿ
ಮನಿಮುಂದ ಬಾರಽಽ ನೀವೊಂದಽಽ ||ಪಲ್ಲ||
ನನನಾಯಿ ನನಗಿರಲಿ ನಿನನಾಯಿ ನಿನಗಿರಲಿ
ಬಿದ್ದಾಡಿ ಮುಧೋಡಿ ತಿಳಿದಿಯೇನ
ಮುಧೋಳ ನಾಯಿನಾ ಜಮಖಂಡಿ ಜಂಭಾರಿ
ನಾಬ್ಹಾಳ ಹುಂಭಾರಿ ಮರತಿಯೇನ ||೧||
ನೀನೇನ ತಿಂತೀದಿ ನಾನದನ ತಿಂತೇನೆ
ಎದ್ದೋಡಿ ಅಂದರ ಬಿದ್ದಾಡತೀ
ಹುಚಮೂಳಿ ಬಿಚಬ್ಯಾಳಿ ಕಟಬಾಯಿ ಕಟಿತೇನಿ
ನಾನಂದ್ರ ಕೆಟರಂಡಿ ಎದ್ದೋಡತೀ ||೨||
ಸೀರೀಯ ಪದರಾಗ ಕಟಗೊಂಡು ಬಾಳೆಲೆಲೆ
ನನಬಾಳೆ ನಿನಗೆಲೆಲೆ ನಗಿಯಾತಕ
ಹರಕುಂಡಿ ತಿರಕುಂಡಿ ತಿಪಿಗುಂಡಿ ಕಾಣ್ಸೇನಿ
ಕಡುಜಾಣಿ ಹರದಾರಿ ಹೋಗಿಯಾತಕ ||೩||
ನೀರಂಭಿ ಕಚ್ಹೆರಕಿ ನಾರಂಭಿ ಅಂಡರಕಿ
ಎಲ್ಲಾರ ಮನಿದೋಸಿ ನೂರುತೂತ
ಆ ತೂತು ಈ ತೂತು ಹೂತೂತು ಪೂತೂತು
ನಿನಕೂಡ ಹುಡತೂತು ಆಡತೇನ ||೪||
ಕುಣಿಯಾಗ ನೀಕುಂತಿ ಗಿಣಿಯಾಗ ನಾಕುಂತೆ
ಕಣಿಹೇಳ ಗುಣಗೆಳತಿ ಕಣಿಯ ಹೇಳ
ಚಿಪ್ಪಾಡಿ ನನಗಂದಿ ತಿಪ್ಯಾಗ ನೀಕುಂತಿ
ಒಡಪ್ಹೇಳ ಕಡುಜಾಣಿ ಒಡಪ್ಹೇಳ ||೫||
*****
ಬೋಸೂಡಿ = ದೇಹಮಾಯೆ; ಗಿಣಿ=ಊರ್ಧ್ವ ಪ್ರಜ್ಞೆ (Subtle plane); ಇಡೀ ಪದ್ಯದಲ್ಲಿ ಆತ್ಮವು ದೇಹ ಪ್ರಜ್ಞೆಗೆ ಹೇಳುತ್ತದೆ.