[ಸೋಬಾನ ಪದ]
ಸೋ ಅನ್ನೆ ಸೋವಣ್ಣೆ ಸೋಮಶೇಖರ ಕಣ್ಣೆ
ಸೋಮರಾಯನ ಹೆಣ್ಣೆ ಸೋಬಾನ ಸೋ ||ಸೋಽಽ ||ಪಲ್ಲ||
ಗಂಡುಳ್ಳ ಗರತೇರು ಗಿಣಿಗಡಕ ಜೋಗ್ತೇರು
ನುಸಿಗಡಕ ನಾಗ್ತೇರು ಕೂಡ್ಯಾರ ಸೋ
ಪಿರಿಪಿಸ್ಸ್ ಮಾತ್ನ್ಯಾಗ ಮಾತೀನ ತೂತ್ನ್ಯಾಗ
ಪುಸ್ಸಂತ ಪೋಣ್ಸ್ಯಾರ ಪಿಸಿನೂಲ ಸೋ ||ಸೋಽಽ ||೧||
ಪುಗ್ಗೇದ ವಾಸ್ನೆಂಗ ಪುರಪುಸ್ಸ ಹೂಸ್ನಂಗ
ಗುಸಣಾರ ಮಸಣಾರ ಮಸದಾರ ಸೋ
ಕಚ್ಹೆರಕ ಬಾಯಾಗ ನೆಗ್ಗೇಡಿ ಕಿವಿಯಾಗ
ಚಿಪ್ಪಾಡಿ ಒತ್ತೊತ್ತಿ ತುಂಬ್ಯಾರ ಸೋ ||ಸೋಽಽ ||೨||
ಬುಸರ್ಬುಳ್ಳ ಬುಸಣೇರು ದುಗ್ಗಾಣಿ ರಾಣೇರು
ವಗ್ಗರಣಿ ಎದಿಗುಂಡ ಕಾಸ್ಯಾರ ಸೋ
ಸೀಕರ್‍ಣಿ ಸೋಗ್ನ್ಯಾಗ ಮೂಗಿನ ಕೊಕ್ಣ್ಯಾಗ
ಕೆಳಕಂಡಿ ಬೆಳಕಂಡಿ ಇಣಿಕ್ಯಾರ ಸೋ ||ಸೋಽಽ ||೩||
ಹುಚನಾಯಿ ಗಂಡಗ ಹುಚರೊಟ್ಟಿ ತಿನಿಸ್ಯಾರ
ಬಿಚಮಗ್ಗಿ ಜಡಿಮಗ್ಗಿ ಕಟ್ಯಾರ ಸೋ
ಹಗಲಾಗ ಹಳೆಗಂಡ ಇರುಳಾಗ ಹೊಸಗಂಡ
ಆ ಗಂಡ ಈ ಗಂಡ ಜೋಗಂಡ ಸೋ ||ಸೋಽಽ ||೪||
ಕಂಬ್ಳ್ಯಾಗ ಕರೆಹೆಗ್ಣ ಸೀರ್‍ಯಾಗ ನರಿಲಗ್ನ
ಗೊಂಗ್ಡ್ಯಾಗ ಹೆಂಡಾವ ಕುಡದಾರ ಸೋ
ಪಂಚಗೆಣತ್ಯಾರ್ಕೂಡಿ ಮಠದಯ್ಗ ಬಸರಾಗಿ
ಗಂಡರನ ಕೌದ್ಯಾಗ ಕೊಂದಾರ ಸೋ ||ಸೋಽಽ ||೫||
*****
ಗರತೇರು=ಆತ್ಮರು: ಪಂಚಗೆಣತಿಯರು = ಪಂಚೇಂದ್ರಿಯ; ಗಂಡ= ಭೌತಿಕ ಭೋಗ; ಹೊಸಗಂಡ-ಭಗವಂತ; ಮಠದಯ್ಯ=ಭಗವಂತ; ಹೆಂಡ=ಭಗವಂತನ ನೆನಪು; ಗಂಡರು=ಕಾಮ, ಕ್ರೋಧ, ಲೋಭ ಮುಂ. ಕೌದಿ=ದೇಹದ ಕತ್ತಲೆ (Physical lgnorance)