ಹಚ್ಚಿಟ್ಟ ಹಣತೆ ಆರಿ ಹೋಗುವುದು
ಗಾಳಿಯ ಸೋಂಕಿಗೆ
ಉಸಿರಿನ ಉಫ್‌ಗೆ
ನೀರೆಯರ ಸೀರೆಯಂಚಿನ ಸ್ಪರ್ಶಕೆ
ದಾರಿದೀಪವಾಗುವ ಹಮ್ಮನು
ಬಿಟ್ಟು ಬಯಲಾದಾಗ
ನಾನು ಉರಿದು ಬೂದಿಯಾಗುತ್ತೇನೆ
‘ಹಚ್ಚೇವು ಕನ್ನಡದ ದೀಪ’
ಎಂಬ ಹಾಡನ್ನು ಕೇಳುತ್ತ
ಕ್ಷಣದಷ್ಟು ತಮದ ಅಲೆಯನು
ಸರಿಸಿ ಬಾರಿದಿಸಿತು ಅಲೆಯನು
ನನ್ನ ಒಳಗಿನ ಉರಿ
ನನ್ನ ದುರ್ಗತಿಗೆ ಮೊರೆಯಿಡುತ್ತದೆ
ಅಲ್ಪ ಅಸ್ಮಿತೆಯ ಚಿತ್ವವನು
ಕಣ್ಣೆದುರು ತಂದಿಡುವಾಗ
ನೋವು ಭಯವಾಗುತ್ತದೆ.
ಅವನ ಮಧುರ ಮಿಲನದ
ಬಯಕೆ ಹೊತ್ತು ಉರಿದು
ಬೆಳಕ ತೋರುವ ಭ್ರಮೆ
ನಿರಸನವಾಗುತ್ತದೆ.
ನನ್ನ ಆರಿಹೋಗುವಿಕೆಯೆ
ಒಂದು ದುರಂತ!
ನಾನು ಆಶೆ ಉತ್ಸಾಹಗಳ ಪುಂಜ
ಪ್ರೇಮಿಗಳ ಮಿಲನದ
ಜ್ಞಾನದಾಹಗಳ ಸಂಕೇತ..
ಮನೆ-ಮನ ಬಾಗಿಲ ದಂಡೆಯಲಿ
ದೇಗುಲದ ದೇವರ ಅಂಗಳದಲಿ
ಉತ್ಸವದ ದೀಪಗಳ ಸಾಲಿನಲಿ
ಸೊಗಸಾಗಿ ಅಂದವಾಗಿ ಮಿಣುಕುತ್ತ
ಗುಂಪಿನ ಬೆಳಕಿನಲಿ ಪಯಣಿಗರ
ಪಥ ದರ್ಶನ ಮಾಡುತ್ತೇನೆಂಬ
ಹೆಮ್ಮೆಯ ಹೊತ್ತು ಇಂಬಿಟ್ಟು
ಹೊಸೆದ ಮನಸುಗಳ
ನಂಬಿಸಿ, ಹುರಿದುಂಬಿಸಿ
ಜೀವಂತವಾಗಿರುವಾಗ
ಎದುರಾಗುವ ಮಂಡೆಲರ ತೊಡಕು
ಕಂಪನ ಹುಚ್ಚಿಸಿ
ಆರುವ ಭಯವನ್ನೆ ಹುಟ್ಟಿಸುತ್ತದಲ್ಲ!
ಎಂದಿನವರೆಗೆ ನಿಮ್ಮ ಮನೆಯ ಬೆಳಗಲಿ?
ನಿಮ್ಮಾಶೆಗಳಿಗೆ ಬಲವಾಗಿ, ಫಲವಾಗಿ
ಎಷ್ಟು ಉರಿಯಲಿ….
ನಾನು ಪಮದಲ್ಲೊಂದು
ಮಿಣುಕುಹುಳ
ಕ್ಷಣಭಂಗುರ ನನ್ನ ಅಸ್ಮಿತೆ
ಆದರೆ ನಾನೊಂದು ಅನಲ ಕಣ
ಅನುಕೂಲ ಪವನ ಬಲದಿಂದ
ಆಕಾಶಕ್ಕೆ ಹಾರಿ, ಅಂಬರವನು ಸುಡಬಲ್ಲೆ
ಪ್ರಿಯೆಯ ಪ್ರೇಮ ಕತೆಗೆ
ನಾಂದಿಯಾಗಿಯೂ, ಮುಳುವಾಗಬಲ್ಲೆ
ಕಣ ಒಂದೆ ಸಾಕು
ಮನೆ ಸುಡಲು, ಮನ ಸುಡಲು
ಸುಂದರ ಕನಕತುಲ್ಯ
ಬೆಳಕಿನಿಂದ ನಾವೆಲ್ಲರ ಮನ
ಸೂರೆಗೊಂಡರೂ
ಭಯಂಕರ ಬೆಂಕಿಯ ಉಂಡೆ,
ಸುಡುವ ಕಾರ್ಯದ ನಾನು
ಯಾರಿಗೂ ದಾರಿದೀಪವಾಗಲಾರೆನು
ನಿಮ್ಮ ವಿಶ್ವಾಸಕ್ಕೆ ಪ್ರೇಮಕೆ
ಪಾತ್ರನಲ್ಲ……!
*****