ಕೋಟಿ ಜನ ಒರಲುವರು
ನರಳುವರು, ತೆರಳುವರು
ಅವರ ಬದುಕಿನ ತಾಣ
ಅರೆಸತ್ತು ಉಳಿದ ಪ್ರಾಣ
ನಮ್ಮ ಭಾಷೆಯಲಿ ಹಟಮೆಂಟು
ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು….
ಹುಟ್ಟು-ಸಾವು
ಯೌವನದ ಕಾವು
ಮುದಿಯಾದ ನೋವು
ಗಳ ಸೆಳತ….ಅಲೆತಕದು ಠಾವು…..
ಅಲ್ಲಿಹುದು ಜನನ-ಮರಣದ ನಂಟು
ನಮ್ಮ ಭಾಷೆಯಲದು ಹಟಮೆಂಟು
* * * *
ಒಂದು ದಿನ ಬಂತು ಮಳೆ
ಅದರ ಹಿಂದೆ ಹೊಳೆ
ಮಳೆ ಒಳಗು-ಹೊರಗೂ
ಹೊಳೆಗೆಲ್ಲ ಕೊಚ್ಚಿ ಹೋಗುವವರೆಗೂ
ಗುಡುಗು ಮಿಂಚಿನ ಸೆಳೆತ
ಗಾಳಿ-ಗೋಳಿನ ಹೊಡೆತ
ಬಿದಿರು ಮಳೆ ದೀಪದಲೆ ಎಲ್ಲುಂಟು?
ನಮ್ಮ ಭಾಷೆಯಲದು ಹಟಮೆಂಟು
* * * *
ಚಳಿ ಬಂತು…. ಚಳಿ
ಇಲ್ಲ ಕಂಬಳಿ
ಒಲೆ ಇಹುದು ಬಳಿ
ಅದಕ್ಕಿಲ್ಲ ಎಲಿ
ನಡುಕ……ಕಂಪನ
ಹೃದಯ ಸ್ಥಂಬನ
ಎಳೆಜೀವ ಒಣ…….ಒಣ…
ಬಾಳೆಲ್ಲ ಬಣ ಬಣ
ಚಳಿಗೆ ಸಾವಿನ ಗಂಟು
ಮನೆಯಲ್ಲ ಅದು ಹಟಮೆಂಟು!
ಬಿಸಿಲು….ಬೆವರು
ಬೇಗೆ…ದಗೆ, ಹೊಗೆ.
ಕಾದು ಉರಿವ ನೆಲ……ಇಲ್ಲ ನೀರು
ಇದರೊಳಗು ಬಿಸಿಯುಸಿರು
ಬಿಡುವ ಬಗೆ!
ಪತ್ರದ ಛತ್ರ….
ಬರಿ ಮೈ…..ಇಲ್ಲ ವಸ್ತ್ರ
ಹಾಸಿಗೆ ನೆಲ, ಹೊದಿಕೆ ಇಬ್ಬನಿ ಜಲ
ಬಡತನ ಅವರ ಕೊಲ್ಲುವ ಅಸ್ತ್ರ
ಅನ್ನ ಎನುತ ಹಲುಬುವರು
ಬಡಕಲು ಕಾಯ
ಇರುವನಕ ಬದುಕುವ ಧ್ಯೇಯ
ಬಲವಿಲ್ಲ ಕೈಕಾಲು, ಮೈಗೆ
ನಡೆದಂತೆ ದಾರಿಯಲಿ ಹೊಯ್ಗೆ….
ಇದರೊಳಗು ನೆಲನಮ್ಮ
ಸಿಲುಕಿಹುದು ಹುಲಿಯ ಬಾಯ್ಗೆ
ಮನವಿಡಿ, ತನುಕೊಡಿ, ರಕ್ತ ನೀಡಿ
ರಕ್ಷಣೆಯ ಹೊರೆ ನಿಮ್ಮ ಕೈಗೆ
ಎಂದಿಂತು ಸ್ವರ ಎತ್ತಿ, ಕರ ಎತ್ತಿ
ಅರಚುವರು ಶ್ವೇತಮತಿಗಳು……ನಾಯಕರು
ಕಾಲ ಓಟಿನ ಬಂತು
ಕಾರು ಇತ್ತಲೂ ಬಂತು
“ನಿಮ್ಮ ಹಿತ ನಮ್ಮ ಮತ
ನಿಮಗೆಂದೆ, ನಿಮ್ಮ ಸುಖಕೆಂದೆ
ಹಿಡಿದಿಹೆವು ಇಂದು ವ್ರತ
ಇರಲೇಳಿ ನಮಗೊಂದು ನಿಮ್ಮ ಮತ…..
ಓಟು ಮುಗಿಯಲು
ವ್ರತವೂ ಮುಗಿವುದು
ಅವರಲ್ಲೆ, ಅವರು ವ್ಯರ್ಥ
ಪುಸಿವರು…ಅದಕಿಲ್ಲ ಮಿತ
ಇದು ವಿಧಿಯ ಕಾಂಪ್ಲಿಮೆಂಟು
ಮನೆಯಲ್ಲ ಅದು ಹಟಮೆಂಟು
*****