ಕಿರಿ ಕಿರಿ
ಮನಸ್ಸಿನ ಒಳಗೆ ಹೊರಗೆ
ಪರೀಕ್ಷಾ ಭವನದಲಿ ಕೂತ ವಿದ್ಯಾರ್ಥಿಯ
ತಲೆಯಲ್ಲಿ….
ತಲೆಯ ಮೇಲೆ ಫೋನಿನ ಕಿರ್ ಕಿರಿ
ಆಫೀಸಿನಲ್ಲಿ ಮೇಲಾಧಿಕಾರಿಗಳ
ಅವರಿಗೆ ಕಂಪನಿಯ ಲಾಭ ಹಾನಿಗಳ
ಓದು ರೂಮಿನಲಿ
ಓದುವ ಹುಡುಗರ…ಹುಡುಗಿಯರ
‘ಮೇಲಂಕಲಿಯಾ ಎಂದರೇನು ಸಾರ್’
ಅಯ್ಯೋ ಪೆದ್ದೆ. ಎಷ್ಟು ಸಾರಿ ವಿವರಿಸಲಿ?
ಸ್ವಲ್ಪ ಓದ ಬಿಡಿ (ಅದನ್ನು ತಿಳಿದು ನೀವು ಮಾಡುವುದೇನು)
ಮನೆಯಲ್ಲಿ ಓದಲಾಗುವುದಿಲ್ಲ
ಹೆಂಡತಿಯ ಕಿರಿ ಕಿರಿ
ಮಕ್ಕಳ ಕಿರಿ ಕಿರಿ
ಪಕ್ಕದ ಮನೆಯ ಹೆಣ್ಮಕ್ಕಳ ಕಿರಿ ಕಿರಿ
ಆಕೆ ಫರೀದಾ – ಅಡಿಗಡಿಗೆ ಬರುತ್ತಾಳೆ
ನನ್ನ ಓದುವ ಟೇಬಲಿಗೆ ಒರಗುತ್ತಾಳೆ
ಬುದ್ಧಿ ಮನಸ್ಸಿಗೆ
ಓದಲಾಗುವುದಿಲ್ಲ
ಥತ್, ಹರೆಯದ ಹುಡುಗಿ
ತಲೆಯಷ್ಟು ದಪ್ಪ ಎದೆ
ಕಿರಿ ಕಿರಿ ಎಲ್ಲಾ ಕಡೆ
ನೆತ್ತಿಯ ಕುಕ್ಕಿ ‘ಕವಿ ಸಮಯ’ದ ಬಗ್ಗೆ
ವಿಚಾರ ಮಾಡ ತೊಡಗಿದಾಗ
ಮತ್ತೆ ಕಿರ್ರ್…..
‘ತಗೊಳ್ಳಿ, ಈ ಮಗುವನ್ನ
ನನಗೆ ಒಳಗೆ ಕೆಲಸ ಇದೆ….
(ನಿನಗೆ ಕೆಲಸ ಇಲ್ಲದಿದ್ದುದು ಯಾವಾಗ)’
ಓದಿ ನೀವು ಮಾಡಿದ್ದೇನು?
‘ಮಾಡಿದ್ದೇನು’
ಮೂರು ಕಾಸಿನ ಬೆಲೆಯ ಶಿಕ್ಷಣ ವೃತ್ತಿ
ಅಲ್ಲಿ ಪ್ರಿಂಸಿಪಾಲನ,
ಸಂಚಾಲಕರ ಕಿರುಕುಳ
‘ನಿನ್ನೆ ಪಿರೇಡ್ ಬಂಕ್ ಮಾಡಿದಿ?
ವಿದ್ಯಾರ್ಥಿಗಳ ಕಂಪ್ಲೇಂಟ್ ಬಂದಿದೆ….’
ಮಾಡಿದ್ದು ಅರ್ಥವಾಯಿತೆ ಅವರಿಗೆ?
ಕಿರಾಣಿ ಅಂಗಡಿಯಲ್ಲಿ
ರೇಶನಿಗೆ ನಿಂತಾಗ ಹಿಂದು-ಮುಂದಿನವರ
ಗಲಾಟೆ, ಕಿರಿಕಿರಿ
‘ಅಕ್ಕಿಯಿದೆ, ಗೋದಿಯಿಲ್ಲ’
ಆದರದು (ಮನುಷ್ಯರು ತಿನ್ನುವಂಥಾದ್ದಲ್ಲ)
‘ಗೋದಿಯಿದೆ, ಸಕ್ಕರೆ ಇಲ್ಲ’ – (ಸ್ನ್ಯಾಮಿನೊಳಗಿದೆ ಎಲ್ಲ.)
ಅವನ ಮುಖಕ್ಕೆ ಹೊಡೆದಷ್ಟು ಸಿಟ್ಟು
ಒಮ್ಮೆಲೆ ಆತಂಕಿ ಆಗಿ ಬಿಡಲೆ
ಆಗ ಮೈ ಒರಸಿ ಮಾತಿಗೆ ನಿಂತ
‘ಅವಳ’ ಮದಮತ್ತ ಶರೀರದ ರೂಪ-ಅತಿ-ಸಮೀಪ.
ಮತ್ತೆ ಕಿರಿ ಕಿರಿ
ಸಿಟ್ಟಿನ ವಿಚಾರವೂ ಹೋಯಿತು.
ಬದುಕಿನುದ್ದಕೂ
ಮೈ-ಮನಗಳನ್ನು ಆವರಿಸಿ ನಿಂತ
ಕಿರುಕುಳ ಚಿರ ಅನಂತ.
*****