ಬಂತು ಶ್ರಾವಣ
ಎಂತು ಬದುಕುವಳೊ
ನಲ್ಲೆ ಜೀವ ಉಳಿಸಿ
ಎಂದು ಹಪಹಪಿಸಿ
ಮೈಗೆ ಮನಸ್ಸಿಗೆ ಯಾತನೆಯ ಬರಿಸಿ
ಬರಿದೆ ಕೊರಗದಿರು, ಸೊರಗದಿರು ನಲ್ಲ
ತುಂತುರು ಮಳೆಯ ತುಷಾರಕ್ಕೆ
ತಂಗಾಳಿಯ ಅಲೆ ಬಂದು ಸಿಲುಕಿದಾಗ
ನನ್ನ ಹೃದಯದ ಎಳೆ ಎಳೆದಂತಾಗಿ
ಯಕ್ಷ, ನಿನ್ನ ನೆನಪಿನ ಸುಳಿ ಏಳುವುದು
ಮೊದಲ ದಿವಸಗಳ, ರಾತ್ರಿಗಳ, ಕ್ಷಣಗಳ
ಅನುಭವದ ಸ್ವರ್ಗಸುಖ
ಎಂತು ಬರುವುದೊ ಮತ್ತೊಮ್ಮೆ
ಎಂದು ನನ್ನ ಜೀವವೂ ತುಡಿಯುವುದು
ಮಿಡಿಯುವುದು….
ಹಿಂದಿನಂತಲ್ಲ.
ಇಂದು ಬರಗಾಲವಿಲ್ಲ
ಈ ಸಲ ನಭವೇ ಕಳಚಿ ಬಿದ್ದಿದೆ
ಮೇಘ ಮಿತ್ರ ನಮ್ಮ ವಿರಹ ವಾರ್ತೆಯನು
ಹೊತ್ತು
ದುಃಖ ಭಾರವ ತಾಳಲಾರದೆ
ಬಾಂದಳದಿಂದ ಬಿದ್ದು
ಎಲ್ಲಡೆಯಲ್ಲು ನೆರೆಯನು ಬರಿಸಿದ್ದಾನೆ
ಹಸು-ಹಟ್ಟಿ ಬೆಳೆ-ಮಳೆ ಜನ ವಸತಿ-
ಗಳನೆಲ್ಲ ಹೊಚ್ಚಳಿಸಿ
ನಮ್ಮ ಮಂತ್ರಿಗಳನ್ನು ಮತ್ತೊಮ್ಮೆ
ವಿಮಾನ ವೀಕ್ಷಣಕೆ ಭರವಸೆಗಳ ಭಾಷಣಕೆ
ತೊಡಗಿಸಿದ್ದಾನೆ.
ಆದರೂ
ಪ್ರೇಮಿಗಳಿಬ್ಬರನು
ಜಾತಿ ನೀತಿಯ ಸಂಪತ್ತಿನ ಸವಾಲು ಹಾಕಿ
ಅಗಲಿಪುದೆ ಸುಖ ಈಜಗಕೆ
ಮೊನ್ನೆ…. ಕೇಳಿದೆಯಲ್ಲ
ಪ್ರಖರ ಪ್ರೇಮಿಗಳೀರ್ವರು
ಒಂದೆ ಉರುಳಿಗೆ ತಮ್ಮ ಕೊರಳನ್ನು ಬಿಗಿದು
ಅಪ್ಪಿಕೊಂಡೇ ಇಹದ ಜಂಜಡದಿಂದ
ರಿಕ್ತರಾದುದ, ಮುಕ್ತರಾದುದ… ಕೇಳಿದೆಯಲ್ಲ
ದೂರವಾಣಿಯಲಿ ನನ್ನ ಮನದಳಲುಗಳ
ಕೂರವಾಗಿಹ ಗತಿವಿಧಿಯ
ದೂರಿ ಹೇಳುವ ಮನಸಾದರೂ
ದೂರವಾಣಿಯ ತಾರೊತ್ತಿ
ದೂರುಗಳ ಸೆರೆಹಿಡಿದ
ಚೋರರ ಭಯವಾಗಿ
ನಿನ್ನ ರಾಜಪದವಿಯನೆ ಕಸಿದು
ದುರ್ಗತಿಗೆಸೆದು
ಪದಚ್ಯುತಿಗೊಳಿಸಿ ಅಳಿಸಿ
ನಿನ್ನವರನ್ನೆ ನಿನ್ನ ವಿರುದ್ಧ ಮಸೆದು
ಸತ್ತೆಯನೆ ಬದಲಿಸುವರೆಂಬ
ಅಳಕು ಬಂತು ಸುತ್ತಿ…
ಅಂಚೆ ವಿಧೇಯಕ
ಕಾಯಿದೆಯಾಗುವ ಮುನ್ನ
ನನ್ನ ದುಗುಡದ ವಿಸ್ತಾರವನ್ನ
ಎಕ್ಕಣಿಸಿ
ಆಷಾಡದ ಪ್ರಥಮ ದಿವಸಗಳ
ಸವಿನೆನಪು ರಸನಿಮಿಷಗಳ
ಲೆಕ್ಕಣಿಸಿ
ಕಳಿಸುವೆನು ನಿನಗೊಂದು
ಪ್ರಣಯ ಪತ್ರವ ಚಿನ್ನ
ಅದಕೆಂದೆ ಮಿಲನದ
ಬಯಕೆಯುತ್ಸವದಿ ಕೊಡೆ ಬಿಡಿಸಿ
ಬದುಕಿರುವೆ ಶ್ರಾವಣದಲು
ಜೀವ ಉಳಿಸಿ.
*****