ಹಾಸಿಗೆ ಹಾಸಿದೆ ನೆಲದಾಗೆ ಅದು
ಹಾಸದ ತಳವಿಲ್ಲ ಜಗದಾಗೆ || ಪ ||
ಹಸುಗೂಸು ಉರುಳಾಡಿ ಕೈಮೈಯಿ ತಿಕ್ಕಾಡಿ
ಹೇಸಿಗೆ ಮಾಡಿದ್ದು ಹಾಸಿಗೆ
ಹಸನಾಗಿ ಹಾಸಿದ್ದ ಗಸಬಸ ಕೆಡಿಸ್ಯಾಡಿ
ರಸದಲ್ಲಿ ಉರುಳಿದ್ದು ಹಾಸಿಗೆ || ೧ ||
ಕಾಮದ ಕಲ್ಪನೆ ಏನೇನೂ ಇರದಾಗ
ಮಾನವ ಮುಚ್ಚಿದ್ದು ಹಾಸಿಗೆ
ಹಡೆದಂಥ ಹಡೆದವ್ವ ಅಳುಗೂಸು ಮೊದಲಾಗಿ
ಸಲಹಿತ್ತು ಜೋಲಿಯ ಹಾಸಿಗೆ || ೨ ||
ಮನೆಯೊಳಗೆ ಮನೆಹೊರಗೆ ಮಾರುದ್ದ ಹಾಸಿಗಿ
ನಿದ್ದೆಯ ಮಬ್ಬಿಗೆ ದಾರಿಯೆ ಹಾಸಿಗೆ
ರೋಗವು ಬಂದರೆ ಬೀಳಲು ಹಾಸಿಗೆ
ಬೀಗರಿಗಾತಿಥ್ಯ ಹಾಸಿಗೆ || ೩ ||
ಪ್ರಿಯನ ವಿಯೋಗದಿ ಪ್ರಿಯೆ ದೂರ ಇರುವಾಗ
ಉರಿಯಾಗಿ ಸುಡುತ್ತಿತ್ತು ಹಾಸಿಗೆ
ಅಂತಿಂಥ ಕಣ್ಣೆಲ್ಲ ಮೈಮೇಲೆ ಹರಿದಾಡಿ
ಮೈಬಿಸಿಯ ಇಳಿಸಿದ್ದು ಹಾಸಿಗೆ || ೪ ||
ಈ ಲೋಕ ಬೇಡಾಗಿ ಆ ಲೋಕ ಬೇಕೆಂದು
ತಪಿಸಲು ಚರ್ಮದ ಹಾಸಿಗೆ
ಎಲ್ಲಾವ ಬಿಟ್ಟಿನ್ನು ಸನ್ನೇಸಿಯಾದಾಗ
ಭೂತಾಯಿ ಆದಾಳು ಹಾಸಿಗೆ || ೫ ||
*****