ಶ್ರೇಷ್ಟ ಚಿಂತಕ- ಅಮೇರಿಕಾದ ವಾಲ್ಟ ವಿಟ್ಮ್ಯಾನ್ ಬದುಕು ಬವಣೆ

ಶ್ರೇಷ್ಟ ಚಿಂತಕ- ಅಮೇರಿಕಾದ ವಾಲ್ಟ ವಿಟ್ಮ್ಯಾನ್ ಬದುಕು ಬವಣೆ

ಭಾಗ-೧

ಒಬ್ಬ ಶ್ರೇಷ್ಠ ಕವಿಯಲ್ಲಿ ಅಲ್ಪ ಗುಣಗಳು ವಿರಳ. ಆತ ಗ್ರಹಿಸಿದ ಸಂಗತಿಗಳನ್ನು ಜಗತ್ತಿನ ಬದುಕಿನೊಂದಿಗೆ ಸಮೀಕರಿಸುವ, ವೈಭವೀಕರಿಸುವ ಆತನ ಅಂತಃಚಕ್ಷುವಿನಿಂದ ಆತನೊಬ್ಬ ಪ್ರವಾದಿಯಾಗಬಲ್ಲ. ಪರಿಪೂರ್ಣತೆಗೆ ಆತ ಸಾಕ್ಷಿ. ಉಳಿದವರ ತನ್ನಂತೆ ಪರಿಗಣಿಸುವುದು ಅವನಿಗೆ ಮಾತ್ರ ಸಾಧ್ಯ. ಯಾವ ನಿಯಂತ್ರಣಕ್ಕೆ ಸಿಗದ ಆತ ನಿಯಂತ್ರಣಗಳ ನಾಯಕ. ಅವ ನೈತಿಕತೆಗಳ ಅನ್ವಯದಲ್ಲಿ ತೊಡಗಿಕೊಳ್ಳುವುದಿಲ್ಲ. ಬದಲಿಗೆ ಆತ್ಮವನ್ನು ತಿಳಿಯುತ್ತಾನೆ. ಈ ಕಲೆ ಎಲ್ಲ ಕಲೆಗಳ ಮೂಲ. ಹೀಗೆಂದು ವಾಲ್ಟ ವಿಟಮ್ಯಾನ್ ತನ್ನ Leaves of Grass ಕೃತಿಯ ಮುನ್ನುಡಿಯಲ್ಲಿ ವ್ಯಾಖ್ಯಾನಿಸಿದ್ದಾನೆ.

ಈತ ಜನಿಸಿದ್ದು ಮೇ ೩೧, ೧೮೧೯ರಂದು ಉತ್ತರ ಅಮೇರಿಕಾದ ಲಾಂಗ್ ಐಲ್ಯಾಂಡ್‌ನ ವೆಸ್ಟಹಿಲ್‌ನಲ್ಲಿ. ಅಂತಹ ಅನೂಕೂಲಸ್ಥರಲ್ಲದ ಸಾಮಾನ್ಯ ಕುಟುಂಬ. ತಂದೆ ವಾಲ್ಟರ ವಿಟ್ಮ್ಯಾನ್ ಬ್ರೀಟಿಷ್, ತಾಯಿ ಲೂಸಿಯಾ ವೆಸ್ಲರ್ ವಿಟ್ಮ್ಯಾನ್ ಡಚ್ ವಂಶಸ್ಥೆ. ಈ ದಂಪತಿಗಳ ಒಂಬತ್ತು ಮಕ್ಕಳಲ್ಲಿ ಎರಡನೇಯ ಮಗುವಾಗಿ ಜನಿಸಿದ ವಾಲ್ಟ. ತಂದೆಯ ಹೆಸರು ಮತ್ತೀತನ ಹೆಸರು ಒಂದೇ ಆಗಿದ್ದ ಕಾರಣ ವಾಲ್ಟರ ತೆಗೆದು ವಾಲ್ಟ ಎಂಬ ನಿಕ್‌ನೇಮನಿಂದ ಕರೆಯಲ್ಪಟ್ಟ. ಇತನ ಹಿರಿಯಣ್ಣ ಜೆಸ್ಸಿ. ಇತರ ಮೂವರು ಸಹೋದರಿಗೆ ಆಂಡ್ರ್ಯೂ ಜಾಕ್‌ಸನ್, ಜಾರ್ಜ ವಾಷಿಂಗ್‌ಟನ್, ಥೋಮಸ್ ಜೆಪರಸನ್ ಎಂದು ದೇಶದ ಪ್ರಮುಖ ವ್ಯಕ್ತಿತ್ವಗಳ ಹೆಸರುಗಳನ್ನಿಟ್ಟು ಕುಟುಂಬ ವಿಶೇಷತೆ ಮೆರೆದಿತ್ತು. ಪ್ರಾರಂಭದಲ್ಲಿ ಲಾಂಗ್ ಐಲ್ಯಾಂಡನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ವಿಟಮ್ಯಾನ್ ಕುಟುಂಬ ಬದುಕಿನ ಹೋರಾಟಕ್ಕೆ ನಂತರ ಬಡಿಗತನ ಅವಲಂಬಿಸಬೇಕಾಯಿತು. ಮನೆಯ ಆರ್ಥಿಕ ಸಂಕಷ್ಟಗಳ ಕಾರಣ ಕುಟುಂಬದೊಂದಿಗೆ ನಾಲ್ಕನೇ ವಯಸ್ಸಿಗೆ ಹುಟ್ಟೂರು ವೆಸ್ಟಹಿಲ್‌ನಿಂದ ಬ್ರೂಕ್‌ಲಿನ್‌ಗೆ ಸ್ಥಳಾಂತರಗೊಂಡ. ಆತನ ಬಾಲ್ಯ ಅತಂತ್ರ, ನೆಮ್ಮದಿಯಿಲ್ಲದ, ಅಸಂತೋಷದ ಅನುಭವಗಳ ಮೂಟೆಯಾಗಿತ್ತು.

೧೮೨೩ರಲಿ ರಿಯಲ್ ಎಸ್ಟೇಟ್ ಉದ್ಯೋಗದಲ್ಲಿ ತೊಡಗಿಸಿಕೊಂಡ ತಂದೆ ಬ್ರೂಕ್ಲಿನ್‌ಗೆ ಕುಟುಂಬ ವಾಸ್ತವ್ಯವ ಬದಲಾಯಿಸಿದ್ದರಿಂದ ವಿಟ್‌ಮ್ಯಾನ್ ಅಲ್ಲಿ ಸರ್ಕಾರಿ ಶಾಲೆಗೆ ಸೇರಿಕೊಂಡ. ಅಮೇರಿಕಾದ ರೈತರು, ಮೀನುಗಾರರು, ನಾವಿಕರು ಇಂತಹ ಸಾಮಾನ್ಯರ ಬದುಕಿನ ಹತ್ತು ಹಲವು ನೋವು ಸಂಕಷ್ಠಗಳು ಆತನ ಕಣ್ಣೆದುರು ಜೀವಂತ ಸಾಕ್ಷಿಗಳಾದವು. ಅವರೊಂದಿಗೆ ಬ್ರೂಕ್ಲೀನ್‌ನ ಶ್ರೀಮಂತ ಜನರನ್ನೂ ಅರ್ಥಮಾಡಿಕೊಳ್ಳುತ್ತ, ಆತ ಕೆಲಸದೊಂದಿಗೆ ಅಗಾಧವಾದ ಬದುಕಿನ ಜ್ಞಾನವನ್ನು, ಅನುಭವವನ್ನು ಗಳಿಸಿದ. ಕಾವ್ಯ ಎಂಬ ಅಚ್ಚಿಗೆ ಆತ ತನ್ನ ಶ್ರೀಮಂತ ಅನುಭವಗಳ ಸಂವೇದನಾಶೀಲತೆ ಎಂಬ ಎರಕ ಹೊಯ್ದು ಗಟ್ಟಿಗೊಳಿಸಿದ. ಕವಿ ಬರೆದ ಹೊಸ ಶೈಲಿಗೆ ಮೆಚ್ಚಿ ಸಾಹಿತ್ಯ ಲೋಕ ಬರಸೆಳೆದು ತಬ್ಬಿಕೊಂಡಿತು.

ತನ್ನ ಹನ್ನೆರಡನೇಯ ವಯಸ್ಸಿಗೆ ಶಾಲಾ ಬದುಕಿಗೆ ತಿಲಾಂಜಲಿ ಇತ್ತು ಮನೆಯ ಆರ್ಥಿಕ ಭಾರಹೊರಬೇಕಾದ ಅನಿವಾರ್ಯಕ್ಕೆ ವಾಲ್ಟ ಹಿಂಜರಿಯಲಿಲ್ಲ. ವಕೀಲರಿಬ್ಬರ ಆಫೀಸಿನಲ್ಲಿ ಆಫೀಸಬಾಯ್ ಆಗಿ ಕೆಲಸಕ್ಕೆ ಸೇರಿದ. ಅಲ್ಲಿಂದ ಆತನ ದುಡಿಮೆಯ ಬದುಕು ಪ್ರಾರಂಭಗೊಂಡಿತ್ತು. ಆನಂತರ ಸ್ಯಾಮ್ಯೂಯಲ್ ಕ್ಲೇಮೆಂಟ್ಸ್ ನಡೆಸುತ್ತಿದ್ದ “The Patriot” ಪತ್ರಿಕೆಯಲ್ಲಿ ಪ್ರಿಟಿಂಗ್ ಪ್ರೆಸ್ ಹಾಗೂ ಟೈಪ್ ಸೆಟ್ಟಿಂಗ್ ಕಲಿತ. ಪೆಟ್ರಿಯಾಟ್ ಪತ್ರಿಕೆಯಿಂದ ಹೊರಬಿದ್ದ ಮೇಲೆ ಬೇರೊಂದು ಪತ್ರಿಕೆಗೆ ಕೆಲಸಕ್ಕೆ ಸೇರಿದ. ಬದುಕಿಗಾಗಿ ಕ್ಷಣಕ್ಷಣ ಹೋರಾಡುತ್ತ ಅಲ್ಲಿಂದ ಇಲ್ಲಿಗೆ ಇಲ್ಲಿಂದಲ್ಲಿಗೆ ನಡೆಸುತ್ತಿದ್ದ ಬದುಕು ದುರ್ಬರವಾಗಿತ್ತು. ಮುಂದೆ ಕೆಲವು ಕಾಲ ಶಾಲೆಗಳಲ್ಲಿ ಶಿಕ್ಷಕನಾಗಿಯೂ ಕೆಲಸ ಮಾಡಿದರೂ ಅದಾತನಿಗೆ ಸಂತೃಪ್ತಿ ನೀಡಲಿಲ್ಲ. ಹೀಗಾಗಿ ನ್ಯೂಯಾರ್ಕನ ಹಂಟಿಂಗ್‌ಟನ್ ಗೆ ಹಿಂತಿರುಗಿ The Long-Islander ಎಂಬ ಸ್ವಂತ ಪತ್ರಿಕೆ ಪ್ರಾರಂಭಿಸಿದ. ಖುದ್ದು ಪ್ರಕಾಶಕನೂ ಸಂಪಾದಕನೂ ವಿತರಕನೂ ಮನೆ ಮನೆಗೂ ಪತ್ರಿಕೆ ಹಂಚುವ ಕೆಲಸವನ್ನೂ ಮಾಡಿದರೂ ಅದು ಕೈ ಹಿಡಿಯಲಿಲ್ಲ. ಹಾಗಾಗಿ ಅದನ್ನು ನಿರ್ವಹಿಸಲು ಸಾದ್ಯವಾಗದೇ ಹತ್ತೇ ತಿಂಗಳಿಗೆ ಮಾರಿದ.

೧೯ನೇ ಶತಮಾನದಲ್ಲಿ ರೋಮ್ಯಾಂಟಿಸಂ ಮತ್ತು ಟ್ರಾನ್ಸೆಂಡೆಟಲಿಸಂ ಈ ಎರಡು ಶ್ರೇಷ್ಠ ಸಂಪ್ರದಾಯಗಳ ಪ್ರಭಾವದಿಂದ ಪ್ರೇರಿತನಾಗಿದ್ದ ಕವಿ ವಾಲ್ಟ ವಿಟ್ಮ್ಯಾನ್. ರಿಯಾಲಿಸಂ ದೃಷ್ಟಿಕೋನದ ವಿಟ್ಮ್ಯಾನ್ ಅಮೇರಿಕಾದ ಪ್ರತಿಭಾವಂತ ಪ್ರಭಾವಿ ಕವಿ. ಪ್ರೀವರ್ಸ ಕವಿತೆಗಳ ಜನಕನೆಂದೆ ಪ್ರಸಿದ್ಧನಾಗಿದ್ದ. ಅಷ್ಟೇ ಅಲ್ಲದೇ ಆತನ ಕೃತಿ ಮುಕ್ತ ಲೈಂಗಿಕತೆಯ ಪ್ರತಿಪಾದನೆಯಿಂದ ಅಶ್ಲೀಲತೆಗೆ ಪ್ರಸಿದ್ಧವಾಗಿತ್ತು.

ಜರ್ನಲಿಸಂ ಜೊತೆಜೊತೆಗೆ ಕಾವ್ಯ ಕನ್ನಿಕೆಯ ಸಹವಾಸ ಬಯಸಿದ ವಾಲ್ಟ ತನ್ನ Leaves of Grass ಕವನ ಸಂಕಲನ ಪ್ರಕಟಿಸುತ್ತಲೇ ಸಾಹಿತ್ಯ ಲೋಕ ಆತನತ್ತ ಕಣ್ಣರಳಿಸಿ ನೋಡತೊಡಗಿತು. ಇಂಗ್ಲೀಷ ಸಾಹಿತ್ಯದಲ್ಲೇ ಮೈಲಿಗಲ್ಲು ಎಂದು ಕರೆಸಿಕೊಂಡ Leaves of Grass ೯ ಮುದ್ರಣಗಳನ್ನು ಕಂಡ ಅಪರೂಪದ ಸಂಕಲನ. ಹಲವರ ಪ್ರಶಂಸೆಗೆ ಕೆಲವರ ಕೆಂಗಣ್ಣಿಗೆ ಈ ಕೃತಿ ಗುರಿಯಾಗಿತ್ತು. ಮೊತ್ತಮೊದಲು ಕೃತಿಗೆ ಪ್ರಕಾಶಕರು ಸಿಗದೇ ಲೋಕಲ್ ಪ್ರಿಂಟಿಂಗ್ ಪ್ರೇಸ್‌ನಿಂದ ಪ್ರಕಟಿಸಿ ೭೯೫ಪ್ರತಿಗಳ ಹೊರತಂದ ವಾಲ್ಟನಿಗೆ ಮೊದಮೊದಲು ಯಾವ ಮನ್ನಣೆಯೂ ಸಿಗಲಿಲ್ಲ. ಆದರೆ ರಾಲ್ಫ ವಾಲ್ಡೋ ಎಮರಸನ್ ಈ ಕೃತಿಯ ಕುರಿತು ಮೆಚ್ಚಿ ಐದು ಪುಟಗಳ ಪ್ರತ ಬರೆಯುತ್ತಲೂ ತನ್ನ ಗೆಳೆಯರೊಡನೆ ಅದರ ಸಾಹಿತ್ಯಿಕ ಮೌಲ್ಯಗಳ ಪ್ರಶಂಸಿಸುತ್ತಲೂ ಕೃತಿ ಒಮ್ಮಿಂದೊಮ್ಮೆ ಪ್ರಸಿದ್ದಿ ಪಡೆದುಕೊಂಡಿತು. ಆದರೆ ಕವಿತೆಗಳಲ್ಲಿಯ ಅರ್ಥ ಪದ ಬಳಕೆ ಅಶ್ಲೀಲವೆಂದು ಕೆಲವು ವಿಮರ್ಶಕರು ಕಟುವಾಗಿ ಟೀಕಿಸಿದರು. ಹಾಗಾಗಿ ಅವರ ಉರಿಗಣ್ಣಿಗೆ ವಸ್ತುವಾಗಬೇಕಾಯಿತು. ಆದರೆ ಈ ಕೃತಿಯೇ ಆತನಿಗೆ ಸಾಹಿತ್ಯ ಲೋಕದಲ್ಲಿ ಅಪರೂಪದ ಸ್ಥಾನವನ್ನು ಗಟ್ಟಿಗೊಳಿಸಿತು.

ಅದು ಅಮೇರಿಕನ್ ಸಿವಿಲ್ ವಾರ ಸಮಯ. ಸಹೋದರ ಜಾರ್ಜ ಯೂನಿಯನ್ ಸೈನ್ಯ ಸೇರಿದ್ದು ಯುದ್ಧದ ಭೀಕರತೆಗಳನ್ನು ವರ್ಣಿಸಿ ವಾಲ್ಟಗೆ ಪತ್ರ ಬರೆಯುತ್ತಿದ್ದ. ಅದೇ ಸಮಯದಲ್ಲಿ ಸಹೋದರ ಲೆಪ್ಟನೆಂಟ್ ಜಾರ್ಜ ಯುದ್ಧದಲ್ಲಿ ಗಾಯಗೊಂಡ ಸುದ್ದಿ ತಿಳಿದು ಅವನನ್ನು ಹುಡುಕಿ ಹೊರಟ. ದಾರಿಯುದ್ದಕ್ಕೂ ಯುಧ್ಧದ ಭೀಕರ ದೃಶ್ಯಗಳು, ನಷ್ಟ, ಕೈಕಾಲು ಕತ್ತರಿಸಿದ ಗಾಯಾಳುಗಳು ಹೀಗೆ ನರಕದ ಸ್ಥಿತಯೇ ಅಲ್ಲಿತ್ತು. ಅವೆಲ್ಲವೂ ಸೂಕ್ಷ್ಮ ಮನಸ್ಸಿನ ವಾಲ್ಟ ಮೇಲೆ ಪ್ರಭಾವ ಬೀರಿದ್ದವು. ಮುಂದೆ ವಾಷಿಂಗ್ ಟನ್ ಸೇರಿದ ವಾಲ್ಟ ಅಲ್ಲಿ ಆರ್ಮಿ ಆಫಿಸಿನಲ್ಲಿ ಪಾರ್ಟಟೈಮ್ ನೌಕರಿಗೆ ಸೇರಿದ. ಜೊತೆಗೆ ಕೆಲಸವಿಲ್ಲದ ಸಮಯದಲ್ಲಿ ಯುದ್ಧ ಗಾಯಾಳುಗಳ ಶುಷ್ರೂಷಕನಾಗಿ ಸ್ವಮನಸ್ಸಿನಿಂದ ಕೆಲಸಮಾಡುತ್ತಿದ್ದ. ಇವೆಲ್ಲ ಅನುಭವಗಳ ತನ್ನ ಕೃತಿ Memoranda During the War ದಲ್ಲಿ ಬರೆಯುತ್ತಾನೆ.

ವಿಟ್ಮ್ಯಾನ್ ಬದುಕಲ್ಲಿ ಕೌಟಂಬಿಕ ಜೀವನದ ರಸವಿರಲಿಲ್ಲ. ತಂದೆಯ ಸಾವು, ಸಹೋದರ ಜಾರ್ಜ ಶತ್ರು ಸೈನ್ಯ ಸೆರೆಗೆ ಹಾಕಿತು. ಇನ್ನೊಬ್ಬ ಸಹೋದರ ಜಾಕ್ ಸನ್ ಕ್ಯಾನ್ಸರಗೆ ಬಲಿಯಾದ ಹಿರಿಯಣ್ಣ ಜೆಸ್ಸಿ ಮತಿಗೆಟ್ಟ ಕಾರಣ ಮಾನಸಿಕ ರೋಗಿಗಳ ಆಸ್ಪತ್ರೆ ಸೇರಿದ. ಇದರೊಂದಿಗೆ ತಾಯಿಯ ಅನಾರೊಗ್ಯ ಹೀಗೆ ಹಲವು ತಲ್ಲಣಗಳ ದಾರಿಯನ್ನು ಸವೆಯುತ್ತಾ ಬದುಕಿದ ವಿಟ್ಮ್ಯಾನ್‌ನ ಜೀವನ ಪ್ರೀತಿ ಕಳೆದುಕೊಂಡಿರಲಿಲ್ಲ. ಆತನ ಇನ್ನೊಂದು ಬಹುಪ್ರಸಿದ್ಧ ಕವನ ಸಂಕಲನ Drum-Taps ಪ್ರಕಟಿಸಿದ.

ಆತನ ಜೀವನದ ವಿರೋಧಾಭಾಸವೆಂದರೆ ಆತನ ಲೈಂಗಿಕ ಜೀವನ. ಆತನೊಬ್ಬ ಸಲಿಂಗಕಾಮಿ ಎಂಬ ವಿಚಾರದಿಂದ ಚರ್ಚೆಗೆ ಕಾರಣವಾಗಿದ್ದು. ಆತ ಹಲವು ಪುರುಷ ಹಾಗೂ ಬಾಲಕರೊಂದಿಗೆ ತೀವ್ರವಾಧ ಸಂಬಂಧಗಳ ಹೊಂದಿದ್ದ. ಪೀಟರ ಡೊಯ್ಲೆ ಎಂಬ ಬಸ್ ಕಂಡೆಕ್ಟರನೊಂದಿಗೆ ಅತ್ಯಂತ ನಿಕಟವರ್ತಿಯಾಗಿದ್ದು ಆತನೊಂದಿಗೆ ಹಲವು ವರ್ಷ ವಾಸಿಸುತ್ತಿದ್ದ. ಅದರೊಂದಿಗೆ ಬಿಲ್ ಡಕೆಟ್ ಎಂಬ ಯುವಕನೊಂದಿಗೆ ಕೂಡಾ ತೀರಾ ಅತ್ಮೀಯನಾಗಿದ್ದ. ಹಾಗೆಂದು ಆತನಿಗೆ ಸ್ತ್ರೀಯರೊಂದಿಗೆ ಸಂಬಂಧಗಳಿರಲಿಲ್ಲವೆಂದಲ್ಲ. ನ್ಯೂಯಾರ್ಕ ನಟಿ ಎಲನ್ ಗ್ರೇಯೊಂದಿಗೆ ಸ್ನೇಹವಿರುವುದಾಗಿ ಹೇಳಿಕೊಂಡಿದ್ದ. ಸುಮಾರು ೩೦ ವರ್ಷ ಪ್ರಾಯದವರೆಗೂ ಮದ್ಯ ಸೇವಿಸದ ವಾಲ್ಟ ತದನಂತರ ಕುಡಿದರೆ ಹೆಚ್ಚು ಸಶಕ್ತವಾಗಿ ಬರೆಯಬಲ್ಲಷ್ಟು ಚಟ ಬೆಳೆಸಿಕೊಂಡಿದ್ದ.

ಸೂರ್ಯಸ್ನಾನ ಹಾಗೂ ನಗ್ನವಾಗಿ ಈಜುವುದನ್ನು ಬಹಳವಾಗಿ ಇಷ್ಟ ಪಡುತ್ತಿದ್ದ ವಿಟ್ಮ್ಯಾನ್ ತನ್ನ ಕೃತಿಯಲ್ಲಿ ಅವುಗಳ ಆದ್ಯತೆಯನ್ನು ವಿವರಿಸುತ್ತಾನೆ. ನಮ್ಮ ಆಧುನಿಕತೆಯ ಡಂಭ ಬದುಕಿನಲ್ಲಿ ಎಲ್ಲವೂ ಮುಚ್ಚಿ ಮಾಡುವ ಪ್ರವೃತ್ತಿಗೆ ಸೆಡ್ಡು ಹೊಡೆದು ಆತ ಪ್ರತಿಪಾದಿಸುವ ತತ್ವ. ನಿಸರ್ಗ ನಗ್ನ. ಹಾಗಾಗಿ ನಾನು ನಗ್ನ. ನಗ್ನತೆಯ ಬಗೆಗಿನ ನಮ್ಮ ಅಸಬ್ಯತೆಯ ಕಲ್ಪನೆ ನಮ್ಮ ಆಧುನಿಕತೆಯ ಅಸಭ್ಯತೆ ಎಂದಿದ್ದಾನೆ.
ಅಮೇರಿಕಾದ ಪ್ರಥಮ “Poet of Democracy” ಎಂದೇ ಪ್ರಸಿದ್ಧನಾದ ವಿಟ್ಮ್ಯಾನ್ ಬಗ್ಗೆ ಆತನ ಬ್ರಿಟಿಷ್ ಗೆಳೆಯ Mary Smith Whitall Costelloe ಹೀಗೆ ಹೇಳುತ್ತಾನೆ. “You cannot really understand America without Walt Whitman, without Leaves of Grass…. He has expressed that civilization, `up to date’, as he would say, and no student of the philosophy of history can do without him.” ಶ್ರೇಷ್ಠ ಅನುಭಾವಿ ಚಿಂತಕನಾಗಿದ್ದ ವಾಲ್ಟ ವಿಟ್ಮ್ಯಾನ್ ಮಾರ್ಚ ೨೬, ೧೮೯೨ರಲ್ಲಿ ಇಹಲೋಕ ತ್ಯಜಿಸಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಸಿಗೆ
Next post ಕಟ್ಟಿದವರು

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…