ನಮ್ಮೂರ ಕೇರಿಯಲಿ ಯಾರೂ
ಹಸನಾದ ಬದುಕು ಕಂಡವರಿಲ್ಲ
ಮನುಷ್ಯರ ತರ ಬದುಕಿದವರಿಲ್ಲ
ಇಲ್ಲಿ ಹುಟ್ಟಿದವರು…
ಒಂದು ಹಿಡಿ ಅನ್ನಕ್ಕಾಗಿ
ಬೊಗಸೆ ನೀರಿಗಾಗಿ
ಬಾಯಿತೆರೆದು ಕೈಮಾಡಿ
ಕಾಯುತ್ತಾ ನಿಲ್ಲುವರು.
ಬೈಗುಳಗಳೊಂದಿಗೆ….
ಮುಂಜಾನೆ ಮನೆಗೂಡಿಸಿ
ಅವರ ಮನೆಯಂಗಳ ಹಸನಗೊಳಿಸುತ
ಹೊಲಸಲಿ ಹರಕಲುಗಳಾಗಿಹರು
ಎತ್ತಿಕೊಟ್ಟ, ಅನ್ನ, ನೀರು…
ಹೊಟ್ಟೆ ಹಸಿವು ತುಂಬಿದ
ತೃಪ್ತಿಯಲಿ, ಅತೃಪ್ತ ಬದುಕಲಿವರು
ಒಡೆದ ಕನಸು ಮನಸಲಿ ಬಾಳುತಿಹರು
ತಮ್ಮನ್ನು ಹಡೆದ
ಅಪ್ಪ ಅವ್ವಂದಿರನ್ನೆ
ಅಸ್ಪೃಶ್ಯತೆಯಲಿ ಕಾಣುತಲಿವರು
ತಾವೇ ಅಸ್ಪೃಶ್ಯರಾಗಿಹರು
ಈ ಕೇರಿಯಲಿ ಬದುಕುವ
ಆಶೆ ಯಾರಿಗೂ ಇಲ್ಲ…
ಬದುಕುತ್ತಿದ್ದಾರೆ ಇದ್ದು…
ಸತ್ತಹಾಗೆ ಯಾರ ತಪ್ಪಿಗಾಗಿ?
ಪ್ರಶ್ನೆ ಪ್ರಶ್ನೆಯಾಗಿಯೇ ಇದೆ….
***