ಉದಯಾಚಲದಲಿ ಮೂಡಿದ ಸೂರ್ಯ
ಹಿಡಿದನು ಕನ್ನಡ ಬಾವುಟವ
ಹಾರಿದ ಹಕ್ಕಿಗಳೆಲ್ಲವು ಮೊರೆದವು
ಕನ್ನಡ ನಾಡ ಗೀತವ ||
ಓಡುವ ನದಿಗಳು ಕಲಕಲ ರವದಲಿ
ನಲಿಸಲಿ ಕರುನಾಡ
ಹೆಜ್ಜೆಯ ಹಾಕಿದ ಪಚ್ಚನೆ ಪಯಿರು
ಮೆರೆಸಲಿ ಸಿರಿನಾಡ
ಪಡುವಣ ತೀರದ ಸಹ್ಯಾದ್ರಿಯ ಸಿರಿ
ಸ್ಫೂರ್ತಿಯ ಸೆಲೆಯಾಗಿ
ಉಳಿಸಲಿ ಬೆಳೆಸಲಿ ಕನ್ನಡ ಸತ್ವವ
ಚಿರನೂತನವಾಗಿ
ಸುರಿಯಲಿ ಎಲ್ಲೂ ಕನ್ನಡದಾ ಮಳೆ
ಸ್ವಾತಿಯ ಮುತ್ತಾಗಿ
ತೊನೆಯಲಿ ಎಲ್ಲೆಡೆ ಭ್ರಾತೃತ್ವದ ಬೆಳೆ
ಉಸಿರು ಉಸಿರಾಗಿ
ಮೊಳಗಲಿ ಎಲ್ಲೆಡೆ ಕನ್ನಡ ಸ್ವರಗಳು
ಸರಿಗಮ ಪದವಾಗಿ
ಬೆಳೆಯಲಿ ಸರ್ವರ ಹೃದಯ ತೋಟದಲಿ
ತರು ಲತೆ ಒಂದಾಗಿ
ಏರಲಿ ಮುಗಿಲಿಂದಾಚೆಗೆ ಹಾರಲಿ
ಕನ್ನಡ ಬಾವುಟವು
ಸೂರ್ಯನ ಮೀರಿದ ಗ್ರಹತಾರೆಗಳು
ಸೂಸಲಿ ಸ್ವಾಗತವು
ಕನ್ನಡ ಕನ್ನಡ ಐಸಿರಿಗನ್ನಡ
ಎಂದೂ ಚೇತನವು
ಕನ್ನಡ ನುಡಿಯಲಿ ತೇಲಿದ ಜೀವಿಯ
ಬದುಕು ಪಾವನವು
ಕಸ್ತೂರಿಯಲಿ ಮೈತಳೆದ ಸಿರಿ
ನಮ್ಮೀ ಕನ್ನಡವು
ಬಿಟ್ಟರೆ ಬಾಯಿ ಕವಿತೆಯು ಅಲ್ಲಿ
ಎಂಥಾ ಸೋಜಿಗವು
ಸುಂದರ ಕನ್ನಡ ನಾಡನು ಹೊತ್ತ
ಭೂಮಿ ಸಾರ್ಥಕವು
ಇಂತಹ ನಾಡನು ನೋಡದ ಮಂದಿಯ
ಜನ್ಮ ನಿರರ್ಥಕವು
*****