ಮಗಳು: ಅಪ್ಪ ಅಪ್ಪ ಸ್ಕೂಲಿಗೆ ನಾನೆ
ಫಸ್ಟು ಕಣಪ್ಪ
ಬೇಕಿದ್ದರೆ ನೀ ಪ್ರಶ್ನೆ ಕೇಳು
ಉತ್ತರಿಸುವೆನಪ್ಪ
ನಾ ಉತ್ತರಿಸುವೆನಪ್ಪ
ನೀ ಪ್ರಶ್ನೆ ಕೇಳಪ್ಪ \\ಪಲ್ಲವಿ\\
ತಂದೆ: ಹಾಗೋ? (ಮಾತಿನ ಶೈಲಿಯಲ್ಲಿ)
ಕೋಳಿಯು ಮೊಟ್ಟೆ ಇಡುತ್ತೆ ಯಾಕೆ
ಹೇಳುವೆ ಏನಮ್ಮ?
ಮಗಳು: ಹಾಕಿದರೆ ಅದು ಒಡೆದ್ಹೋಗುತ್ತೆ
ಅದಕ್ಕೆ ಇಡುತ್ತೆ ಅಪ್ಪ
ತಂ: ಗಣೇಶನ ಕತೆಯಿಂದ ನೀನು
ತಿಳಿದೆ ಏನಮ್ಮ?
ಮ: ಸ್ನಾನದ ಕೋಣೆಗೆ ಬಾಗಿಲು ಇರುವುದು
ಅಗತ್ಯ ಇದೆಯಪ್ಪ
ಮಗಳು: ಅಪ್ಪ ಅಪ್ಪ ಸ್ಕೂಲಿಗೆ ನಾನೆ
ಫಸ್ಟು ಕಣಪ್ಪ
ಅದಕ್ಕೆ ಇನ್ನು ಪ್ರಶ್ನೆ ಕೇಳು
ಉತ್ತರಿಸುವೆನಪ್ಪ
ನಾ ಉತ್ತರಿಸುವೆನಪ್ಪ
ನೀ ಪ್ರಶ್ನೆ ಕೇಳಪ್ಪ \\೧\\
ತಂ: ಸರಿ. ಹಾಗಿದ್ರೆ . . . . (ಮಾತಿನ ಶೈಲಿಯಲ್ಲಿ)
ಮಗಳೆ, ಸಾರು ಸಪ್ಪೆಯಾದರೆ
ಹಾಕುವೆ ಏನಮ್ಮ?
ಮ: ಸಾರು ಸಪ್ಪೆಯಾದರೆ ಉಪ್ಪಿಗೆ
ಕೈ ಹಾಕುವೆನಪ್ಪ
ತಂ: ಅಕ್ಬರನು ಸಿಂಹಾಸನ ಏರಿ
ಏನು ಮಾಡಿದನು?
ಮ: ಮಾಡುವುದೇನು? ತಕ್ಷಣ ಅಲ್ಲಿ
ಕುಳಿತುಕೊಂಡನು
ಮ: ಅಪ್ಪ ಅಪ್ಪ ಇನ್ನು ಯಾವುದೆ
ಪ್ರಶ್ನೆ ಕೇಳಪ್ಪ
ಉತ್ತರ ಹೇಳುವ ನನಗಿಲ್ಲದ ಶ್ರಮ
ನಿನಗೆ ಯಾಕಪ್ಪ?
ತಂ: ಮಗಳೆ ಮಗಳೆ ನಿಜಕ್ಕು ನೀನೆ
ಬಹಳ ಬುದ್ಧಿವಂತೆ
ಥಟ್ಟಂತ ಉತ್ತರಿಸುವ ನಿನಗೆ
ಸಾಟಿ ಇಲ್ಲವಂತೆ- ಯಾರೂ
ಸಾಟಿ ಇಲ್ಲವಂತೆ! \\೨\\
*****