ಮದುವೆಗೆ ಮುಂಚೆ ಉರಿಮೀಸೆ
ಉದ್ಯೋಗದಲ್ಲಿ ಅಡ್ಡಮೀಸೆ ಅರ್ಥಾತ್ ಒಂಭತ್ತು ಕಾಲು ಮೀಸೆ
ಮದುವೆಯಾದ ಮೇಲೆ ಯಾಕೊ ಇಳಿಮೀಸೆ
ಮಕ್ಕಳಾದ ಮೇಲೆ ಯಾಕೊ ಅದೂ ಕೂಡ ಇಲ್ಲ
ಜೊತೆಗೆ ತಲೆ ಕೂಡ ಬೋಳು
ಬಾಯ್ಬಿಟ್ಟರೆ ಅಲ್ಲಿ ಗೋಳು
ಅಂತೂ ಬಾಳು ಹಾಳು – ಇದು
ಯಾವ ಪುರುಷಾರ್ಥಕೆ ಹೇಳು?
ಪ್ರೇಮವೇ ಇದರ ಮೂಲ
ತಪ್ಪಿತು ಅಲ್ಲೇ ತಾಳ
ಹತ್ತದೇ ಗೌರಿ ಶಂಕರ
ಪ್ರಪಾತದಲ್ಲಿ ಹರಹರ
ತಿಳಿದವರು ಹೇಳಿದ್ದರೂ ಕೂಡ
ಯಾಕೊ ಏನೊ
ಇಳಿಜಾರಿನಲೆ ನಮ್ಮ ಓಟ!
ಬಿದ್ದಿದ್ದಂತೂ ಆಗಿದೆ;
ನಡೆವವ ಎಡವಿದ ಹಾಗೆ
ಮೇಲಕ್ಕೆ ಏಳಲೆಬೇಕು
ಯಾವುದೂ ಅಸಾಧ್ಯವಲ್ಲ
ಹಿಂದಿನ ಕತೆಯ ಬಿಟ್ಟು ಬಿಡು
ಅದು ಭೂತ ನಿಜ ಭೂತ
ಹೆಜ್ಜೆ ಇಟ್ಟರೆ ಮುಂದೆ
ನಿನ್ನದೆ ಭವಿತವ್ಯ
ಅದೆ ದಿವ್ಯ ಭವ್ಯ
*****