ನೀನಿರುವೆ ಎಲ್ಲೋ|
ಸುಂದರ ಶಿಲ್ಪಕಲೆಯ ಗುಡಿಯಲೋ
ಈ ವನರಾಶಿ ಪ್ರಕೃತಿಯ ಮಡಿಲಲೋ|
ಶ್ರೀಮಂತರ ಸುಪ್ಪತ್ತಿಗೆಯಲೋ
ಬಟ್ಟೆ ಪೀತಾಂಬರವಿರದ
ಹರಕು ಬಟ್ಟೆಯನುಟ್ಟ
ಮುರುಕು ಮನೆಯ ತಿರುಕನಲೋ||
ಜಗಜಗಿಸುವ ವಜ್ರಖಚಿತ ಮುತ್ತುರತ್ನ
ಮುಕುಟ ಧರಿಸಿದವನಾಗಿಯೋ
ಮಣಿ ಕಂಠಮಾಲ ಚಿನ್ನದ
ಪಾದುಕೆ, ಬೆತ್ತದಾರಿಣಿಯಾಗಿಯೋ|
ಕೌಪೀನದಾರಿ, ತುಳಸೀಮಾಲಾ, ಶ್ರೀಗಂಧ
ಚೆಂದನ ಲೇಪಿತ ವಟು ಬ್ರಾಹ್ಮಣನಲ್ಲಿಯೋ||
ಲೋಕದ ಹಸಿವನೀಗಿಸೆ
ದುಡಿವ ರೈತನ ಬೆವರಹನಿಯಲ್ಲಿಯೋ|
ಚೆಂದದಾಕಳ ಕರುವ ಜಿಂಕೆಯ
ಕಣ್ಣೆಸಳ ಕಾಂತಿಯಲ್ಲಿಯೋ|
ಹೆತ್ತಮಗುವಿಗಾಗಿ ಜೀವನ ತೇಯ್ದು
ಪ್ರೀತಿಯ ಸುರಿಸುವ ತಾಯಿ ಮಮತೆಯಲ್ಲಿಯೋ|
ಕತ್ತಲೆ ತೊಳೆದು ಅಜ್ಞಾನವ
ಹೊಡೆದೋಡಿಸುವ ಜ್ಞಾನ ಜ್ಯೋತಿಯಲ್ಲಿಯೋ||
*****