ವಧು ಪರೀಕ್ಷೆ ನಡೆದಿದೆ
ಜಾತಕ ಫಲಗಳೆಲ್ಲ ಕೂಡಿ|
ಹಿರಿಯರೆಲ್ಲರೂ ಒಂದೆಡೆ ಸೇರಿ
ಕನ್ಯೆಯೋರ್ವಳ ಸಂಸಾರ ದೀಕ್ಷೆಗೆ||
ಗುಣ ಗಣಗಳನ್ನೆಲ್ಲಾ ಗಣನೆ ಮಾಡಿ
ಎರಡು ಜಾತಕಗಳ ತಾಳೆ ನೋಡಿ|
ತುಂಬು ಸೌಹಾರ್ದತೆಯಿಂದ
ಕನ್ಯೆ ಇವಳ ಮನಸ ಅರಿಯೆ
ಮೆಲು ದನಿಯಲಿ ಪ್ರಶ್ನೊತ್ತರ ಕೇಳಿ||
ವರನ ಅಕ್ಕ ಭಾವ,
ಅಣ್ಣ ಅತ್ತಿಗೆಯರೆಲ್ಲಾ ವಧುವ ನೋಡಿ|
ಹಣ್ಣು ಹೂವು ತಾಂಬೂಲ ನೀಡಿ
ಬಂಧು ಮನೆಯ ಫಲಹಾರ ಸವಿಯ ನೋಡಿ|
ವಧುವಿನ ಚಲನವಲನ ಸೂಕ್ಷ್ಮವಾಗಿ ಗಮನಿಸಿ
ಎಲ್ಲಾ ಸರಿಯಾಗಿದೆ ಎಂದು ಊಹೆ ಮಾಡಿ
ಸಂಭ್ರಮ ಸಡಗರದೆ ಓಡಾಡಿ||
ವಧುವಿನಮ್ಮ, ಅಣ್ಣ ಅತ್ತಿಗೆ
ವರನನೋಡಿ, ಒಳಗೆ ಅಂದುಕೊಂಡು
ಇಬ್ಬರದು ಒಳ್ಳೆಯ ಜೋಡಿ|
ಪೂರ್ಣ ಮನಸಲಿ ಒಪ್ಪಿಗೆ ನೀಡಿ
ಮುಂದಿನ ಆರತಿ ಹಸೆಯ ಕನಸ ಹೂಡಿ
ತುಂಬು ಹೃದಯದಿ ತಾಂಬೂಲ ಹಸ್ತಾಂತರಿಸಿ
ಬಂಧ ಸಂಬಂಧವಾಗಿ ಎಲ್ಲರೂ ವಧು ವರನ ಹರಸಿ||
*****