ಎಷ್ಟೋ ಸಲ ನಿಮಗನ್ನಿಸಬಹುದು
ಇದು ಮೋಸ, ಇದು ಅನ್ಯಾಯ ಎಂದು.
ಅದು ಏಕೆ ಹಾಗೆ? ಎಂದು ಕೇಳುವಂತಿಲ್ಲ
ಏಕೆಂದರೆ… ನಾವು ಬಾಯಿಲ್ಲದವರು.
ನಮ್ಮ ಮಗುವಿಗೆ ಶಾಲೆಗೆ ಸೀಟು ಸಿಗಲಿಲ್ಲ
ಇಂಟರ್‌ವ್ಯೂನಲ್ಲಿ ಮಗು ಪಾಸಾಯಿತಲ್ಲ?
ವಂತಿಕೆ ಕೊಡುವೆವೆಂದರೂ ಸೀಟೇಕೆ ಇಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
ಶೇಕಡ ತೊಂಭತ್ತು ಬಂದರೂ ಮೆಡಿಕಲ್
ಸೀಟು ಸಿಗಲೇ ಇಲ್ಲ… ಅವನಿಗೇಕೆ
ಶೇಕಡ ನಲವತ್ತಕ್ಕೇ ಸಿಕ್ಕಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
ಅಭಿನಂದನೆಗಳು. ನಿಮಗೆ ನೌಕರಿ ಸಿಕ್ಕಿತು!
ಹರಿಯಾಣದ ‘ಕುಗ್ರಾಮ್’ ನಲ್ಲಿ ಕೂಡಲೆ ಸೇರಿ.
ಅರೆ! ಅವರಿಗೆ ಹೇಗೆ ತಮ್ಮೂರಿಗೇ ಆಯಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
ಸ್ಕೂಟರ್ ಬೇಕೇ? ಬುಕ್ ಮಾಡಿ ಹೋಗಿ
ಹತ್ತೇ ವರ್ಷಗಳಲ್ಲಿ ಸ್ಕೂಟರ್ ನಿಮ್ಮದೇ!
ಕೆಲವರಿಗೆ ಕೂಡಲೇ ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
ಭಾನುವಾರ ಸಂಜೆ ಸಿನಿಮಾ ನೋಡಲೇ ಬೇಕು.
ವಿಪರೀತ ಗದ್ದಲ. ಖಂಡಿತ ಟಿಕೆಟ್ ಸಿಗದು.
ಬ್ಲ್ಯಾಕಲ್ಲಾದರೆ ಬೇಕಾದಷ್ಟು ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
ಸೈಟು, ಸಿಮೆಂಟು, ಲೈಸೆನ್ಸು, ತೆರಿಗೆ
ಇನ್ನೂ ಎಷ್ಟೋ ವಿಷಯಗಳಲ್ಲಿ
ರಾಜಾರೋಷ ಅನ್ಯಾಯ ನಡೀತಿದೆಯಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
*****
೧೧-೦೭-೧೯೮೪