ಪ್ರಿಯ ಸಖಿ,
ಬಸ್ಸಿನ ಪ್ರಯಾಣದಲ್ಲೊಮ್ಮೆ ಕಾಲೇಜು ಯುವತಿಯೊಬ್ಬಳು ಜೊತೆಯಾದಳು. ಏನೇನೋ ಕಾಡು ಹರಟೆ ಹೊಡೆಯುತ್ತಾ ದಾರಿ ಸವೆಸುತ್ತಿರಲು, ಇದ್ದಕ್ಕಿದ್ದಂತೆ ಆ ಯುವತಿ ಕೂತ ಸೀಟಿನಲ್ಲೆ ಮಿಸುಕಾಡಲಾರಂಭಿಸಿದಳು. ಹಿಂದೆ ಮುಂದೆ, ಅಕ್ಕಪಕ್ಕಕ್ಕೆ ಜರುಗುತ್ತಾ ಹೇಗೆ ಕುಳಿತರೂ ಸಮಾಧಾನವಿಲ್ಲವೆಂಬಂತೆ ಗಲಿಬಿಲಿಯಲ್ಲಿದ್ದಳು. ನಿಧಾನಕ್ಕೆ ಕಣ್ಣು ಹಾಯಿಸಿದವಳಿಗೆ ಹಿಂದಿನ ಸೀಟಿನ ಯುವಕನೊಬ್ಬನ ಕಾಲ್ಚಳಕಕ್ಕೆ ಇವಳು ಹೀಗೆ ಒದ್ದಾಡುತ್ತಿದ್ದಾಳೆ ಎಂಬುದರಿವಾಯ್ತು. ‘ಆ ಹುಡುಗಂಗೆ ಕಾಲು ತೆಗೆಯೋದಕ್ಕೆ ಹೇಳಿ’ ಎಂದೆ. ಪಕ್ಕದವಳಿಗೆ. ಅದಕ್ಕವಳು ‘ಹೇಗೆ ಹೇಳೋದು ಅವನೇನಾದ್ರೂ ಒರಟಾಗಿ ಉತ್ತರ ಕೊಟ್ರೆ?’ ಎಂದಳು.
‘ಕೊಡ್ಲಿ ನಮಗೇನು ಬಾಯಿಲ್ಲವಾ ನಾವೂ ಮಾತಾಡಿದ್ರಾಯ್ತು’ ಎಂದೆ. ‘ಜನರೆದುರಿಗೆ ನಂಗೆ ಅವಮಾನ ಆಗುತ್ತೆ’ ಎಂದಳು ಹಿಂಜರಿಯುತ್ತಾ. ನಾನು ಅವಕ್ಕಾದೆ. ಅಲ್ಲ ಅವಮಾನವಾಗುವುದು ಇವಳಿಗಾ? ಅವನಿಗಾ? ಅವಳ ಒದ್ದಾಟ ನೋಡಲಾರದೇ ಕೊನೆಗೆ ನಾನೇ ಎದ್ದುನಿಂತು ‘ಸೀಟಿನಿಂದ ಕಾಲು ತೆಗೀರಿ ತೊಂದರೆ ಆಗುತ್ತೆ’ ಎಂದೆ. ಬಸ್ಸಿನಲ್ಲಿದ್ದ ಅನೇಕರ ಗಮನ ಆ ಕಡೆ ಬಿತ್ತು. ನಾಚಿದ ಯುವಕ ತಟ್ಟನೆ ಕಾಲ್ತೆಗೆದ. ಮುಂದೆ ಪ್ರಯಾಣದುದ್ದಕ್ಕೂ ಅನೇಕ ಪ್ರಜ್ಞಾವಂತರ ಚುಚ್ಚುನೋಟಗಳನ್ನು ಅವನು ಎದುರಿಸಬೇಕಾಯ್ತು!
ಸಖಿ, ಇಲ್ಲಿ ನನ್ನ ಕಾಳಜಿ ಇರುವುದು ಅವನ ಬಗೆಗಲ್ಲಾ. ಅವನು ಇದರಿಂದ ಪಾಠ ಕಲಿತನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ …….. ಆ ಯುವತಿಯ ಸ್ವಾನುಕಂಪದ ಬಗೆಗೆ ನನಗೆ ತೀವ್ರ ಬೇಸರವಾಯ್ತು. ಇಷ್ಟು ಸಣ್ಣ ಕಿರುಕುಳವನ್ನೇ ಎದುರಿಸಲಾಗದವಳು ನಾಳೆ ಅಕಸ್ಮಾತ್ ದೊಡ್ಡ ಶೋಷಣೆ, ದೌರ್ಜನ್ಯ ಎದುರಾದರೆ ಹೇಗೆ ಎದುರಿಸಿಯಾಳು?
ಇದು ಮಹಿಳಾ ಸಬಲೀಕರಣ ವರ್ಷ. ಅವರು ಹೀಗೆಂದುಕೊಂಡರೆ, ಇವರು ಹಾಗೆಂದುಕೊಂಡರೆ ಎಂಬ ಸ್ವಯಂ ಕಲ್ಪಿತ ಭ್ರಮಾಲೋಕದಲ್ಲಿ ತೇಲುತ್ತಾ ವಾಸ್ತವ ವನ್ನೆದುರಿಸಲು ಹಿಂಜರಿಯುವ ಇಂತಹಾ ಸ್ತ್ರೀಯರು ಸಬಲರಾಗುವುದು ಯಾವಾಗ? ಇದು ನನ್ನ ಕರ್ಮ. ಇದನ್ನು ನಾನು ಹೇಗಾದರೂ ಸರಿ ಅನುಭವಿಸಲೇಬೇಕು ಎಂಬ ಕಣ್ಪಟ್ಟಿಯನ್ನು ಕಟ್ಟಿಕೊಂಡು ಅಂಧರಾಗಿರುವ ಮಹಿಳೆಯರು, ಈ ತಮ್ಮ ಕೀಳರಿಮೆಯಿಂದ ಮೊದಲು ಹೊರಬರಬೇಕು. ಯಾರೋ ಬಂದು ನನ್ನನ್ನು ಉದ್ಧಾರ ಮಾಡುವರೆಂದು ಕಾಯದೇ ತನಗೊದಗುವ ಎಲ್ಲಾ ಸಣ್ಣ, ದೊಡ್ಡ ಆಪತ್ತುಗಳನ್ನು ಸ್ವತಹ ತಾನೇ ಎದುರಿಸಲು ಸಿದ್ಧರಾಗಬೇಕು! ಆಗಷ್ಟೇ ಹೆಣ್ಣು ಸಬಲೆಯಾಗುವತ್ತ ಒಂದು ಹೆಜ್ಜೆ ಇರಿಸಿದಂತಾಗುತ್ತದೆ.
ಬೆನ್ನಿಗೆ ಬಿದ್ದ ಶಿಲುಬೆಯನ್ನು ಹೊರುವುದೂ ಅದನ್ನು ತುಂಡರಿಸಿ ಕಿತ್ತೂಗೆಯುವುದು ಎರಡೂ ನಮ್ಮ ಕೈಯಲ್ಲೇ ಇರುವುದಿಲ್ಲವೇ ಸಖಿ?
*****