ಒಡಲಿನಾಗೆ ಸಿಡಿಲು ಕುಂತು
ಕೂಗು ಹಾಕಿತು.
ನೆತ್ತರಾಗೆ ತತ್ತಿಯಿಟ್ಟು
ತೇಲಿಬಿಟ್ಟಿತು.
ಕೆಂಡದುಂಡೆಯಂಥ ತತ್ತಿ
ಕನಸು ಕಟ್ಟಿತು-
ಅದು ಬಿರುಕು ಬಿಟ್ಟಿತು,
ನೆತ್ತರಲ್ಲಿ ತತ್ತಿಯೊಡೆದು ಬಂದುಬಿಟ್ಟವು-
ಮರಿಗಳು ಬಂದುಬಿಟ್ಟವು.
ಮೌನದಾಗೆ ಮೈಯ ತಿಂದು ಮಾತಾಡಿದವು-
ಮರಿಗಳು ಮಾತಾಡಿದವು.
ಉರಿವ ಒಡಲಿನೊಳಗಿನಿಂದ
ಸೀಳಿಕೊಂಡು ಬಂದವು.
ಹೊರಗೆ ಬೀದಿಬೀದಿಯಲ್ಲಿ
ಧಗಧಗನೆ ಉರಿದವು.
ಮಲಗಿ ಮುಲುಕುತಿದ್ದ ಮಣ್ಣು
ಕೆಂಗಣ್ಣ ತೆರೆಯಿತು
ಘಾಸಿಗೊಂಡ ಗಿಡಗಳು
ಬಾಯಿಲ್ಲದ ಮರಗಳು
ದಟ್ಟಯಿಸುವ ದನಿಯಾಗಿ
ಮುಗಿಲಮಟ್ಟ ನಿಂತವು
ಮನಸಿನೊಳಗೆ ಇಳಿದವು
ಬೆಂಕಿಯಾಗಿ ಬೆಳೆದವು.
*****